ರಾಜ್ಯ ನಾಡದೋಣಿಗಳಿಗೆ 3,540 ಕಿ.ಲೀ. ಸೀಮೆಎಣ್ಣೆ ಬಿಡುಗಡೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Update: 2022-01-24 15:07 GMT

ಉಡುಪಿ, ಜ.24: ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಆಗ್ರಹಕ್ಕೆ ಮಣಿದಿರುವ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಇಂದು ಕರ್ನಾಟಕ ಸರಕಾರಕ್ಕೆ 2021-22ನೇ ಸಾಲಿನ 3540 ಕಿ.ಲೀ.(35.40ಲಕ್ಷ ಲೀ.) ಸಬ್ಸಿಡಿ ಸೀಮೆಎಣ್ಣೆಯನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿರುವ ನಾಡದೋಣಿ ಮೀನುಗಾರಿಕೆಗೆ ಹಂಚಿಕೆಯಾಗಿದ್ದ ಸೀಮೆ ಎಣ್ಣೆ ಸಕಾಲದಲ್ಲಿ ಸಿಗುತ್ತಿಲ್ಲ, ಈ ಕುರಿತು ಕೇಂದ್ರ ಸರಕಾರದ ಗಮನ ಸೆಳೆದು ಹಂಚಿಕೆಯಾಗಿರುವ ಸೀಮೆಎಣ್ಣೆಯನ್ನು ತ್ವರಿತವಾಗಿ ಬಿಡುಗಡೆ ಗೊಳಿಸಬೇಕು ಎಂದು ಉಡುಪಿಯ ಮೀನುಗಾರರ ಒಕ್ಕೂಟ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿತ್ತು.

2021-22ನೇ ಸಾಲಿಗೆ ರಾಜ್ಯಕ್ಕೆ ಒಟ್ಟು 12,195ಕಿ.ಲೀ. ಸೀಮೆಎಣ್ಣೆ ಬಿಡುಗಡೆಯಾಗಬೇಕಿತ್ತು. ಕೇಂದ್ರ ಸರಕಾರ ಕೇವಲ 7,080 ಕೆಎಲ್ ಸಹಾಯಧನ ರಹಿತ ಸೀಮೆಎಣ್ಣೆ ಬಿಡುಗಡೆ ಮಾಡಿದೆ ಇದು ನವೆಂಬರ್‌ವರೆಗೆ ಮೀನುಗಾರ ರಿಗೆ ಹಂಚಿಕೆಯಾಗಿದೆ. ಡಿಸಂಬರ್‌ನಿಂದ ಮುಂದಿನ ಮಾರ್ಚ್ ವರೆಗೆ ಕೇಂದ್ರ ಸರಕಾರದಿಂದ 5,115ಕಿ.ಲೀ. ಬಿಡುಗಡೆಯಾಗಬೇಕಿದ್ದು ಈವರೆಗೆ ಬಿಡುಗಡೆ ಯಾಗಿಲ್ಲ. ಇದರಿಂದ ನಮಗೆ ತೀವ್ರ ತೊಂದರೆಯಾಗಿದೆ ಎಂದು ಒಕ್ಕೂಟ ಇತ್ತೀಚೆಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿತ್ತು.

ರಾಜ್ಯದಲ್ಲಿ 10,100 ಕ್ಕೂ ಅಧಿಕ ನಾಡದೋಣಿಗಳಿದ್ದು, 60,000 ಕ್ಕಿಂತಲೂ ಹೆಚ್ಚಿನ ಮೀನುಗಾರರ ಜೀವನಾಧಾರವಾಗಿದೆ, ಕೇಂದ್ರ ಸರಕಾರ ನೀಡುವ ಸೀಮೆ ಎಣ್ಣೆಯ ಮೇಲೆ ಈ ನಾಡ ದೋಣಿ ಮೀನುಗಾರಿಕೆಯು ಅವಲಂಬಿತವಾಗಿದೆ ಎಂದು ಒಕ್ಕೂಟದ ಪದಾದಿಕಾರಿಗಳು ಸ್ಥಳೀಯ ಸಂಸದೆ ಹಾಗೂ ಕೇಂದ್ರ ಸಚಿವೆಯಾಗಿರುವ ಶೋಭಾರಿಗೆ ಮನವಿ ಮಾಡಿದ್ದರು.

ಕೇಂದ್ರ ಕೃಷಿ ರಾಜ್ಯ ಸಚಿವರ ಮನವಿಯನ್ನು ಪುರಸ್ಕರಿಸಿದ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಇಂದು ಕರ್ನಾಟಕ ಸರ್ಕಾರಕ್ಕೆ 2021-22ನೇ ಪಾಲಿನ 3540ಕಿ.ಲೀ. (35.40 ಲಕ್ಷ ಲೀಟರ್) ಸೀಮೆಎಣ್ಣೆಯನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಇದೀಗ ಕೇಂದ್ರ ಸರಕಾರದಿಂದ ಬಿಡುಗಡೆಯಾಗಿರುವ ಸೀಮೆ ಎಣ್ಣೆಯನ್ನು ಮೀನುಗಾರಿಕಾ ಉದ್ದೇಶಕ್ಕೆ ರಾಜ್ಯದ ವಿತರಣಾ ವ್ಯವಸ್ಥೆಯು ವಿತರಿಸಲಿ ರುವುದಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕರಾವಳಿಯ ಮೀನುಗಾರರ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸಿ, ನಾಡ ದೋಣಿ ಮೀನುಗಾರಿಕೆಗೆ ಅಗತ್ಯವಿರುವ ಸೀಮೆ ಎಣ್ಣೆಯನ್ನು ಬಿಡುಗಡೆ ಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪೆಟ್ರೋಲಿಯಂ ಸಚಿವರಿೆ ಸಂಸದೆ ಕೃತಜ್ಞತೆ ಸಲ್ಲಿಸಿದ್ದಾರೆ.

4,514 ದೋಣಿಗಳಿಗೆ ಮಾತ್ರ ಸೀಮೆಎಣ್ಣೆ

ಕರ್ನಾಟಕ ರಾಜ್ಯ ಕರಾವಳಿ ಜಿಲ್ಲೆಗಳಲ್ಲಿ ಪ್ರಸ್ತುತ ಸುಮಾರು 10,100ಕ್ಕಿಂತಲೂ ಅಧಿಕ ನಾಡದೋಣಿಗಳು ಇಂಜಿನ್‌ಗಳನ್ನು ಹೊಂದಿವೆ. ಆದರೆ ಸರಕಾರ ಈಗಲೂ 2013ರ ಆದೇಶದಂತೆ ಕೇವಲ 4514 ದೋಣಿಗಳಿಗೆ ಮಾತ್ರ ತಲಾ 300ಲೀ.ನಂತೆ ಕರಾವಳಿಯ ಮೂರು ಜಿಲ್ಲೆಗಳ ನಾಡದೋಣಿ ಮೀನುಗಾರರಿಗೆ ಸಹಾಯಧನ ರಹಿತ ಸೀಮೆಎಣ್ಣೆ ನೀಡುತ್ತಿದೆ ಎಂದು ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಆನಂದ ಖಾರ್ವಿ ಉಪ್ಪಂದ ಇತ್ತೀಚೆಗೆ ತಿಳಿಸಿದ್ದರು.

10,100 ದೋಣಿಗಳಿಗೆ ತಲಾ 300ಲೀ.ನಂತೆ ಒಟ್ಟು 30,300 ಕಿ.ಲೀ. ಸೀಮೆಎಣ್ಣೆ ಅಗತ್ಯವಿದೆ. ಆದರೆ ಈಗ ತಿಂಗಳಿಗೆ 1,355ಕಿ.ಮೀ.ನಂತೆ ನೀಡಲಾಗುತ್ತಿದ್ದು, ಇದನ್ನು ಎಲ್ಲಾ ದೋಣಿಗಳೊಳಗೆ ಹಂಚಿಕೆ ಮಾಡಿ ಬಳಸಲಾ ಗುತ್ತಿದೆ. ರಾಜ್ಯದ ಒಟ್ಟು 60ಸಾವಿರಕ್ಕೂ ಅಧಿಕ ಮೀನುಗಾರರು ಈ ನಾಡ ದೋಣಿಯನ್ನೇ ನಂಬಿ ಬದುಕು ಸಾಗಿಸುತಿದ್ದಾರೆ ಎಂದು ಆನಂದ ಖಾರ್ವಿ ತಿಳಿಸಿದ್ದರು.

10,100 ದೋಣಿಗಳಿಗೆ ತಲಾ 300ಲೀ.ನಂತೆ ಒಟ್ಟು 30,300 ಕಿ.ಲೀ. ಸೀಮೆಎಣ್ಣೆ ಅಗತ್ಯವಿದೆ. ಆದರೆ ಈಗ ತಿಂಗಳಿಗೆ 1,355ಕಿ.ಮೀ.ನಂತೆ ನೀಡಲಾಗುತ್ತಿದ್ದು, ಇದನ್ನು ಎಲ್ಲಾ ದೋಣಿಗಳೊಳಗೆ ಹಂಚಿಕೆ ಮಾಡಿ ಬಳಸಲಾ ಗುತ್ತಿದೆ. ರಾಜ್ಯದ ಒಟ್ಟು 60ಸಾವಿರಕ್ಕೂ ಅಧಿಕ ಮೀನುಗಾರರು ಈ ನಾಡ ದೋಣಿಯನ್ನೇ ನಂಬಿ ಬದುಕು ಸಾಗಿಸುತಿದ್ದಾರೆ ಎಂದು ಆನಂದ ಖಾರ್ವಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News