'ಬೈಂದೂರು, ಕಾರ್ಕಳ, ಹೆಬ್ರಿ, ಕಾಪು ವ್ಯಾಪ್ತಿಯಲ್ಲಿ 1611ಕೋಟಿ ರೂ.ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರುಯೋಜನೆ ಜಾರಿ'

Update: 2022-01-26 12:42 GMT

ಉಡುಪಿ, ಜ.26: ಜಿಲ್ಲೆಯ ಬೈಂದೂರು, ಕಾರ್ಕಳ, ಹೆಬ್ರಿ ಹಾಗೂ ಕಾಪು ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 1611 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಜಾರಿಗೊಳ್ಳಲಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.

ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧೀ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೂತನವಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡು ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು ಧ್ವಜಾರೋಹಣ ನೆರವೇರಿಸಿ, ಮಹಾತ್ಮ ಗಾಂಧೀ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದರು.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ 396 ಕೋಟಿ ರೂ.ಮೊತ್ತದ ಕಾಮಗಾರಿ ಟೆಂಡರ್ ಹಂತದಲ್ಲಿ ದ್ದರೆ, ಕಾರ್ಕಳ, ಹೆಬ್ರಿ ಹಾಗೂ ಕಾಪು ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಒಟ್ಟು 1215 ಕೋಟಿ ರೂ. ಮೊತ್ತದ ಕಾಮಗಾರಿಯ ಪ್ರಾಥಮಿಕ ಯೋಜನೆ ವರದಿಯ ಪ್ರಸ್ತಾಪವನ್ನು ಸರಕಾರದ ಮಂಜೂರಾತಿಗೆ ಸಲ್ಲಿಸಲಾಗಿದೆ ಎಂದರು.

ಈ ಆರ್ಥಿಕ ವರ್ಷದಲ್ಲಿ 48 ಹೆಚ್ಚುವರಿ ಮಕ್ಕಳ ಐಸಿಯುನೊಂದಿಗೆ ಉಡುಪಿ ಜಿಲ್ಲಾಸ್ಪತ್ರೆ, ಕುಂದಾಪುರ ಮತ್ತು ಕಾರ್ಕಳದ ತಾಲೂಕು ಆಸ್ಪತ್ರೆಗಳನ್ನು ನವೀಕರಿಸಲು ಯೋಜಿಸಿದ್ದು, ನಿರ್ಮಿತಿ ಕೇಂದ್ರ ವಿವಿಧ ಸಂಸ್ಥೆಗಳ ತಮ್ಮ ಸಿಎಸ್‌ಆರ್ ನಿಧಿಯಿಂದ ನೀಡಿರುವ ದೇಣಿಗೆಯಿಂದ ಕಾಮಗಾರಿಯನ್ನು ಪ್ರಾರಂಭಿಸಿದೆ. ಅಲ್ಲದೇ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಕೇಂದ್ರ ಸರಕಾರ ಹಾಗೂ ವಿವಿಧ ಟ್ರಸ್ಟ್ ಹಾಗೂ ಸಂಸ್ಥೆಗಳ ಸಹಯೋಗದಲ್ಲಿ ಆರು ಪಿಎಸ್‌ಎ ಆಕ್ಸಿಜನ್ ಪ್ಲಾಂಟ್‌ಗಳನ್ನು ಹೊಂದಲಾಗಿದೆ ಎಂದು ಸಚಿವ ಅಂಗಾರ ತಿಳಿಸಿದರು.

ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ: ಈ ಕಾರ್ಯಕ್ರಮದಡಿ ರೈತರ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನ ಒದಗಿಸಲಾಗುತ್ತಿದೆ.ಜಿಲ್ಲೆಯಲ್ಲಿ ಇದುವರೆಗೆ 15,775 ವಿದ್ಯಾರ್ಥಿಗಳಿಗೆ 3.80 ಕೊೀಟಿ ರೂ.ಶಿಷ್ಯವೇತನ ವಿತರಿಸಲಾಗಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಲಾನಯನ ಅಭಿವೃದ್ಧಿ ಕಾರ್ಯಕ್ರಮವನ್ನು ಬ್ರಹ್ಮಾವರ, ಕುಂದಾಪುರ ಹಾಗೂ ಕಾರ್ಕಳ ತಾಲೂಕಿನ ಒಟ್ಟು 12,553 ಹೆಕ್ಟೇರ್ ಪ್ರದೇಶದಲ್ಲಿ ಅಳವಡಿಸಲು ಯೋಜನೆ ರೂಪಿಸಿದ್ದು, ಮುಂದಿನ ಐದು ವರ್ಷಗಳ ಕಾಲ 42 ಕಿರು ಜಲಾನಯನಗಳಲ್ಲಿ ಒಟ್ಟು 27.61 ಕೋಟಿರೂ.ಗಳ ಯೋಜನಾ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ ಎಂದರು.

ಯಕ್ಷ ರಂಗಾಯಣ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಾಕ‰ಳದ ಕೋಟಿ ಚೆನ್ನಯ ಥೀಂ ಪಾರ್ಕ್‌ನ ಜಾಗದಲ್ಲಿ ಕರ್ನಾಟಕದ ಆರನೇ ರಂಗಾಯಣ ‘ಯಕ್ಷ ರಂಗಾಯಣ’ವನ್ನು ಸ್ಥಾಪಿಸಲು ಸರಕಾರ ಈಗಾಗಲೇ ಆದೇಶ ಹೊರಡಿಸಿದೆ. ಅಲ್ಲದೇ ಕೋವಿಡ್‌ನಿಂದಾಗಿ ಸಂಕಷ್ಟದಲ್ಲಿದ್ದ ಜಿಲ್ಲೆಯ ಒಟ್ಟು 681 ಸಾಹಿತಿ-ಕಲಾವಿದರಿಗೆ ತಲಾ 3,000ರೂ.ನಂತೆ ಒಟ್ಟು 20.43ಲಕ್ಷ ರೂ.ಗಳನ್ನು ಸಂಬಂಧಿತರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗಿದೆ ಎಂದು ವಿವರಿಸಿದರು.

ಪ್ರವಾಸೋದ್ಯಮ: ಜಿಲ್ಲೆಯನ್ನು ಪ್ರವಾಸೋದ್ಯಮದ ಬಹುಮುಖ್ಯ ತಾಣವಾಗಿ ರೂಪಿಸಲು ಸರಕಾರ ವಿಶೇಷ ಮುತುವರ್ಜಿ ವಹಿಸುತ್ತಿದೆ. ಪ್ರವಾಸಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಒಟ್ಟು 57 ಹೋಮ್‌ಸ್ಟೇ ಗಳಿಗೆ ಅನುಮೋದನೆ ನೀಡಲಾಗಿದೆ. ತ್ರಾಸಿ-ಮರವಂತೆ ಹಾಗೂ ಸೋಮೇಶ್ವರ ಪಡುವರಿ ಬೀಚ್-ಒತ್ತಿನೆಣೆ ಕಡಲ ತೀರದ ಅಭಿವೃದ್ಧಿಗೆ ಕ್ರಮವಾಗಿ 10 ಮತ್ತು 15 ಕೋಟಿ ರೂ.ಮಂಜೂರು ಮಾಡಲಾಗಿದೆ. ಮಲ್ಪೆಯ ಸೈಂಟ್ ಮೇರೀಸ್ ದ್ವೀಪದ ಬಳಿ ಫೆರ್ರಿ ಜಟ್ಟಿ ನಿರ್ಮಾಣಕ್ಕೆ 4.20 ಕೋಟಿ ರೂ. ಮಂಜೂರಾಗಿದೆ. ಒಟ್ಟಾರೆಯಾಗಿ ಪ್ರವಾಸೋದ್ಯಮ ಇಲಾಖೆಯಿಂದ ಒಟ್ಟು 28 ಹೊಸ ಕಾಮಗಾರಿಗಳಿಗೆ 44.10 ಕೋಟಿ ರೂ.ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಂಗಾರ ತಿಳಿಸಿದರು.

ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿಕಲಚೇತನ ಮಕ್ಕಳಾದ ಶ್ರೀಕೃಷ್ಣ ಮತ್ತು ಅರ್ಚನಾ ಅವರನ್ನು ಸನ್ಮಾನಿ ಸಲಾಯಿತು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿಗಳನ್ನು ಸಾಧಕ ಕೃಷಿಕರಿಗೆ ನೀಡಿ ಗೌರವಿಸಲಾಯಿತು. ಕಾರ್ಮಿಕ ಇಲಾಖೆಯ ಆಶಾದೀಪ ಯೋಜನೆಯಡಿ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.

ಸಮಾರಂಭದಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಕರಾವಳಿ ಕಾವಲು ಪಡೆಯ ಎಸ್ಪಿ ಅಂಶುಕುಮಾರ್, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್, ಕರಾವಳಿ ಕಾವಲು ಪಡೆ, ಅಗ್ನಿಶಾಮಕ, ಗೃಹರಕ್ಷಕ, ಅಬಕಾರಿ, ಅರಣ್ಯ ಮತ್ತು ವಿವಿಧ ಕಾಲೇಜುಗಳ ಎನ್‌ಸಿಸಿ ತಂಡ ಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕೋವಿಡ್-19 ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಯೂಟ್ಯೂಬ್ ಮತ್ತು ಸ್ಥಳೀಯ ಕೇಬಲ್ ಟಿವಿಯಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಷನ್ ಕುಮಾರ್ ಶೆಟ್ಟಿ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲೆಯ ಶೇ.98.40 ಮಂದಿಗೆ ಕೋವಿಡ್ ಲಸಿಕೆ

ಜಿಲ್ಲೆಯಲ್ಲಿ ಮೊದಲಿನಿಂದಲೂ ಕೋವಿಡ್‌ನಲ್ಲಿ ರಾಜ್ಯ ಮತ್ತು ದೇಶದ ಸರಾಸರಿಗಿಂತ ಹೆಚ್ಚಿನ ಸಂಖ್ಯೆಯ ಪರೀಕ್ಷೆಯನ್ನು ನಡೆಸಲಾ ಗುತ್ತಿದೆ. ಇದು ರಾಜ್ಯಕ್ಕಿಂತ ಎರಡು ಹಾಗೂ ರಾಷ್ಟ್ರೀಯ ಸರಾಸರಿಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದ ಸಚಿವ ಅಂಗಾರ, ಜಿಲ್ಲೆಯಲ್ಲಿ ಕಳೆದ ಏಳು ದಿನಗಳಿಂದ ಪಾಸಿಟಿವಿ ಪ್ರಮಾಣ ಶೇ.18 ಆಗಿದೆ. ಸದ್ಯ 6959 ಸಕ್ರಿಯ ಪ್ರಕರಣಗಳಿದ್ದು, 174 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಸದ್ಯ 18 ವರ್ಷ ಮೇಲ್ಪಟ್ಟ ಶೇ.98.40 (9,83,051) ಮಂದಿಗೆ ಇದುವರೆಗೆ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ. ಹಾಗೂ ಇವರಲ್ಲಿ 8,65,243 (ಶೇ.86.6) ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15-18 ವರ್ಷ ವಯಸ್ಸಿನ ಮಕ್ಕಳಲ್ಲಿ 46,657 (ಶೇ.87.12) ಮಂದಿಗೆ ಈಗಾಗಲೇ ಮೊದಲ ಡೋಸ್ ಕೋವಲ್ಯಾಕ್ಸಿನ್ ಲಸಿಕೆ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News