ಸಿಆರ್‌ಝಡ್ ವ್ಯಾಪ್ತಿಯಲ್ಲಿ 2.11ಲಕ್ಷ ಮೆಟ್ರಿಕ್ ಟನ್ ಮರಳು ತೆರವು: ಸಚಿವ ಹಾಲಪ್ಪ ಆಚಾರ್

Update: 2022-01-28 14:36 GMT

ಮಣಿಪಾಲ, ಜ.28: ಉಡುಪಿ ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯ ನದಿ ಪಾತ್ರಗಳಲ್ಲಿ ಒಟ್ಟು 23 ಮರಳು ದಿಬ್ಬ ಗಳನ್ನು ಗುರುತಿಸಿದ್ದು, ಇಲ್ಲಿರುವ ಒಟ್ಟು 12.30ಲಕ್ಷ ಮೆಟ್ರಿಕ್ ಟನ್ ಮರಳನ್ನು ತೆರವುಗೊಳಿಸಲು ಕೆಸಿಝಡ್‌ಎಂಎ ಯಿಂದ ಅನುಮೋದನೆ ದೊರೆತಿದೆ ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನದ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವ ಆಚಾರ್ ಹಾಲಪ್ಪ ಬಸಪ್ಪ ತಿಳಿಸಿದ್ದಾರೆ.

ಮಣಿಪಾಲದ ಜಿಪಂ ಸಭಾಂಗಣದಲ್ಲಿ ಇಂದು ತನ್ನ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಜ.25ರವರೆಗೆ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಒಟ್ಟು 2.11 ಮೆಟ್ರಿಕ್ ಟನ್ ಮರಳನ್ನು ತೆರವುಗೊಳಿಸಲಾಗಿದೆ ಎಂದವರು ತಿಳಿಸಿದರು.

ಅದೇ ರೀತಿ ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಹರಾಜು ಮೂಲಕ ಮಂಜೂರು ಮಾಡಿರುವ ಮರಳು ಗುತ್ತಿಗೆಗಳಿಗೆ ವಾರ್ಷಿಕ ಒಟ್ಟು 78039 ಮೆ.ಟನ್ ಮರಳು ತೆರವುಗೊಳಿಸಲು ಎಸ್‌ಇಐಎಎಯಿಂದ ಅನುಮೋದನೆ ದೊರಕಿದ್ದು, ಜ.25ರವರೆಗೆ 35075 ಮೆ.ಟನ್ ಮರಳು ತೆರವುಗೊಂಡಿದೆ ಎಂದು ಸಚಿವರು ನುಡಿದರು.

ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ತೆರವುಗೊಳಿಸಲು ಒಟ್ಟು 160 ತಾತ್ಕಾಲಿಕ ಪರವಾನಿಗೆಯನ್ನು ನೀಡಲಾಗಿದೆ ಎಂದ ಅವರು 2021-22ನೇ ಸಾಲಿನಲ್ಲಿ 3600 ಲಕ್ಷ ರೂ.ರಾಜಸ್ವ ಸಂಗ್ರಹಣೆಯ ಗುರಿಯನ್ನು ನೀಡಲಾಗಿದ್ದು, ಜ.25ರವರೆಗೆ 2880 ಲಕ್ಷ ರೂ. ರಾಜಸ್ವ ಸಂಗ್ರಹಿಸಲಾಗಿದೆ ಎಂದರು.

ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸದ್ಯ 134 ಕಲ್ಲುಗಣಿ ಗುತ್ತಿಗೆ ಚಾಲ್ತಿಯಲ್ಲಿದೆ. ಅದೇ ರೀತಿ ಜಿಲ್ಲಾ ವ್ಯಾಪ್ತಿಯಲ್ಲಿ 40 ಕ್ರಷರ್ ಘಟಕಗಳು ಚಾಲ್ತಿಯಲ್ಲಿವೆ. ಬ್ರಹ್ಮಾವರ ತಾಲೂಕಿನಲ್ಲಿ ಅತ್ಯಧಿಕ 21 ಕ್ರಷರ್ ಕಾರ್ಯಾಚರಿಸುತ್ತಿವೆ. ಕಲ್ಲುಗಣಿಗಾರಿಕೆಯಲ್ಲಿ ಕಾರ್ಕಳದಲ್ಲಿ 50, ಕಾಪು ತಾಲೂಕಿನಲ್ಲಿ 29, ಬ್ರಹ್ಮಾವರ ದಲ್ಲಿ 24 ಗುತ್ತಿಗೆಗಳು ಚಾಲ್ತಿಯಲ್ಲಿವೆ ಎಂದರು.

ಶಾಲೆ ಬಿಟ್ಟ ಮಕ್ಕಳಿಲ್ಲ: ಜಿಲ್ಲೆಯಲ್ಲಿ 11-14 ವರ್ಷದ ಶಾಲೆ ಬಿಟ್ಟ ಮಕ್ಕಳಿಲ್ಲ ಎಂದು ಹೇಳಿದ ಸಚಿವರು, ಇದಕ್ಕೆ ಕೊರೋನ ಸಂದರ್ಭದಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿರುವುದು ಕಾರಣವಾಗಿರಬಹುದು ಎಂದರು. ಶಾಲಾ ಮಕ್ಕಳಿಗೆ ಮೊಟ್ಟೆಯನ್ನು ತಾಲೂಕು ಮಟ್ಟದಲ್ಲಿ ಇ-ಟೆಂಡರ್ ಮೂಲಕಸರಬರಾಜು ಮಾಡಲಾಗುತ್ತಿದೆ ಎಂದವರು ಪ್ರಶ್ನೆಯೊಂದಕ್ಕೆ ನುಡಿದರು.

ಜಿಲ್ಲೆಯಲ್ಲಿ 65,960 ಸಾಮಾನ್ಯ ಮಕ್ಕಳೂ, 725 ಅಪೌಷ್ಠಿಕ ಮಕ್ಕಳೂ, 65 ತೀವ್ರ ಅಪೌಷ್ಠಿಕ ಮಕ್ಕಳು ಇದ್ದಾರೆ ಎಂದು ಮಾಹಿತಿ ನೀಡಿದ ಸಚಿವರು, ತೀವ್ರ ಅಪೌಷ್ಠಿಕತೆ ಇರುವ ಮಕ್ಕಳನ್ನು ವಿಶೇಷ ಮುತುವರ್ಜಿಯಿಂದ ನೋಡಿಕೊಳ್ಳ ಲಾಗುತ್ತಿದೆ. ಅವರಿಗೆ ನಿಯಮಿತವಾಗಿ ಮೊಟ್ಟೆಹಾಗೂ ಹಾಲು ನೀಡಲಾಗುತ್ತಿದೆ ಎಂದರು.

ಅಪೌಷ್ಠಿಕತೆ ಇರುವ ಮಕ್ಕಳಿಗೆ ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ನೀಡಿ ಅವರನ್ನು ಅಪೌಷ್ಠಿಕತೆಯಿಂದ ಹೊರತರಲು ಕ್ರಮ ಕೈಗೊಳ್ಳುವಂತೆ ಸಂಬಂದಿತರಿಗೆ ಸೂಚನೆ ನೀಡಲಾಗಿದೆ ಎಂದರು. ಅಪೌಷ್ಠಿಕತೆಯ ಮಕ್ಕಳನ್ನು ನೋಡಿಕೊಳ್ಳಲು ಮೂರು ತಾಲೂಕು ಆಸ್ಪತ್ರೆಗಳಲ್ಲಿ ಕೇಂದ್ರವನ್ನು ತೆರೆಯಲಾಗಿದೆ. ಅಲ್ಲಿ ಅವರಿಗೆ ಒಂದು ವಾರ ಕಾಲ ವಿಶೇಷ ಚಿಕಿತ್ಸೆ ನೀಡಲಾಗುತ್ತದೆ. ವಿಶೇಷ ವೈದ್ಯಕೀಯ ಸೇವೆ ಅವರಿಗೆ ಸಿಗುತ್ತದೆ ಎಂದು ಸಿಇಓ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಆಯ್ಕೆ ಮಾನದಂಡವನ್ನು ಬದಲಾಯಿಸುವ ಬಗ್ಗೆ ಚಿಂತನೆ ನಡೆಸಾಗುತ್ತಿದೆ ಎಂದು ತಿಳಿಸಿದ ಸಚಿವರು ಬಾಲಕಿಯರ ಬಾಲಮಂದಿರ, ಶಿಶು ಅಭಿವೃದ್ಧಿ ಯೋಜನೆ ಕಾರ್ಕಳ ಹಾಗೂ ಬ್ರಹ್ಮಾವರ ಕಚೇರಿ ಕಟ್ಟಡಗಳ ಪ್ರಸ್ತಾವನೆಯನ್ನು ಶೀಘ್ರ ಮಂಜೂರು ಮಾಡಲು ಕ್ರಮವಹಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಕೆ.ರಘುಪತಿ ಭಟ್, ಬಿ.ಎಂ.ಸುಕುಮಾರ್ ಶೆಟ್ಟಿ, ಜಿಲ್ಲಾದಿಕಾರಿ ಕೂರ್ಮಾರಾವ್ ಎಂ., ಸಿಇಓ ಡಾ.ನವೀನ್ ಭಟ್ ಹಾಗೂ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News