ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರು: ಮಾನವ ಹಕ್ಕುಗಳ ಆಯೋಗದ ವರದಿಯಿಂದ ಬಹಿರಂಗ

Update: 2022-01-29 03:11 GMT

ಬೆಂಗಳೂರು, ಜ.28: ಸರಕಾರಿ ನೌಕರರು ಅದರಲ್ಲೂ ವಿಶೇಷವಾಗಿ ಪೊಲೀಸ್ ಸಿಬ್ಬಂದಿ ಕೆಲವೊಮ್ಮೆ ಶಿಕ್ಷೆಗೆ ಒಳಪಡಿಸಬೇಕಾಗಿರುವ ಅಪರಾಧಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸದೆ ನಿರ್ಲಕ್ಷ ವಹಿಸುತ್ತಿದ್ದಾರೆ ಎಂಬ ಗಂಭೀರವಾದ ಸಂಗತಿಯನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ವರದಿಯು ಬಹಿರಂಗಗೊಳಿಸಿದೆ.

ರಾಜ್ಯದಲ್ಲಿ ಮಹಿಳೆ, ಮಕ್ಕಳು ಮತ್ತು ಬಂಧನದಲ್ಲಿರುವ ವ್ಯಕ್ತಿಗಳ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ 2019-20ನೇ ಸಾಲಿನ ವಾರ್ಷಿಕ ವರದಿಯು ಹೊರಗೆಡವಿದೆ. ಈ ವರದಿ ವಿಧಾನಸಭೆ ಅಧಿವೇಶನಕ್ಕೆ ಶೀಘ್ರದಲ್ಲಿಯೇ ಮಂಡನೆಯಾಗಲಿದೆ. ವರದಿಯ ಪ್ರತಿ ‘the-file.in’ಗೆ ಲಭ್ಯವಾಗಿದೆ.

2017-18ರಿಂದ 2019-20ರವರೆಗಿನ ಮೂರು ವರ್ಷಗಳಲ್ಲಿ ಒಟ್ಟು 16,778 ದೂರುಗಳು ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಕೆಯಾಗಿವೆ. 2017-18ರಲ್ಲಿ 6,561, 2018-19ರಲ್ಲಿ 5,658, 2019-20ರಲ್ಲಿ4,559 ದೂರುಗಳನ್ನು ಮಾನವ ಹಕ್ಕುಗಳ ಆಯೋಗವು ಸ್ವೀಕರಿಸಿರುವುದು ವರದಿಯಿಂದ ಗೊತ್ತಾಗಿದೆ.

ಆಯೋಗದ ತನಿಖಾ ವಿಭಾಗವು 2019ರ ಎಪ್ರಿಲ್ 1ರಿಂದ 2020ರ ಮಾರ್ಚ್ 31ರವರೆಗೆ ಒಟ್ಟು 74 ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿದೆ. ಇದೇ ಅವಧಿಯಲ್ಲಿ 237 ಪ್ರಕರಣಗಳು ದಾಖಲಾಗಿವೆ. ಅಪ್ರಾಪ್ತ ವಯಸ್ಕ ಮಕ್ಕಳ ಮೇಲಿನ ಅತ್ಯಾಚಾರ, ಸಾರ್ವಜನಿಕ ಅಥವಾ ಖಾಸಗಿ ಸೇವೆಗಳಲ್ಲಿ ಲೈಂಗಿಕ ಕಿರುಕುಳ, ಜೀತ ಪದ್ಧತಿ, ಅಪ್ರಾಪ್ತ ವಯಸ್ಕ ಮಕ್ಕಳ ಕಳ್ಳ ಸಾಗಣೆ, ಬಾಲಕಾರ್ಮಿಕರು, ಬಾಲ್ಯ ವಿವಾಹ, ರಾಜ್ಯದ ಬಂದಿಖಾನೆಗಳಲ್ಲಿ ಲಭ್ಯವಿರುವ ಮೂಲಭೂತ ಮತ್ತು ಇತರ ಸೌಲಭ್ಯಗಳು, ಲೈಂಗಿಕ ಕಾರ್ಯಕರ್ತರು, ಕುಡಿಯುವ ನೀರು ಸರಬರಾಜು ಒಳಗೊಂಡಂತೆ ಮೂಲಭೂತ ನಾಗರಿಕ ಸೌಕರ್ಯಗಳು, ಕೆಲವು ಪ್ರದೇಶಗಳ ನಿವಾಸಿಗಳಿಗೆ ಕಲುಷಿತ ನೀರಿನ ಸರಬರಾಜು ಸಂಬಂಧ ಆಯೋಗವು ಸ್ವಯಂ ಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

 ಮಹಿಳೆ, ಮಕ್ಕಳು ಮತ್ತು ಬಂಧನದಲ್ಲಿರುವ ವ್ಯಕ್ತಿಗಳ ಮೇಲಿನ ಮಾನವ ಹಕ್ಕುಗಳ ಉಲ್ಲಂಘನೆಗಳು ತೀವ್ರವಾಗಿ ಹೆಚ್ಚುತ್ತಿರುವ ಬಗ್ಗೆ ಕಳವಳವಿದೆ. ಸರಕಾರಿ ನೌಕರರು ವಿಶೇಷವಾಗಿ ಪೊಲೀಸ್ ಸಿಬ್ಬಂದಿ ಕೆಲವೊಮ್ಮೆ ಶಿಕ್ಷೆಗೆ ಒಳಪಡಿಸಬೇಕಾಗಿರುವ ಅಪರಾಧಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸದೇ ನಿರ್ಲಕ್ಷ ವಹಿಸುತ್ತಿರುವುದು ಗಂಭೀರವಾದ ವಿಷಯವಾಗಿದೆ. ಈ ಬಗ್ಗೆ ಪರಿಣಾಮಕಾರಿ ಮತ್ತು ಫಲಕಾರಿ ಪರಿಹಾರದ ಒಂದು ಆಲೋಚನೆಯು ಅಗತ್ಯವಿದೆ. ಸಮಾಜದಲ್ಲಿ ಶಾಂತಿಯುತ ಜೀವನಕ್ಕೆ ಭಂಗ ತರುವಂತಹ ವ್ಯಕ್ತಿಗಳ ವಿರುದ್ಧ ಹಾಗೂ ಇಂತಹ ತಪ್ಪುಗಳನ್ನು ಬೆಂಬಲಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಕೂಡಾ ಅವಶ್ಯವಾಗಿದೆ ಎಂದು ಆಯೋಗವು ತನ್ನ ವರದಿಯಲ್ಲಿ ವಿವರಿಸಿದೆ.

2019ರ ಮಾರ್ಚ್ 31ರ ಅಂತ್ಯಕ್ಕೆ ಆಯೋಗದಲ್ಲಿ ರಾಜ್ಯದ ಜಿಲ್ಲೆಗಳಲ್ಲಿ 4,145 ದೂರುಗಳು ವಿಚಾರಣೆಗೆ ಬಾಕಿ ಇದ್ದವು. 2019-20ನೇ ಸಾಲಿನಲ್ಲಿ 4,559ದೂರುಗಳು ಆಯೋಗಕ್ಕೆ ಸಲ್ಲಿಕೆಯಾಗಿದ್ದವು. ಒಟ್ಟಾರೆಯಾಗಿ 8,704 ದೂರುಗಳಿದ್ದವು. ಇದರಲ್ಲಿ 3,280 ಸಾಮಾನ್ಯ, ಸ್ವಯಂ ಪ್ರೇರಿತವಾಗಿ 865 ದೂರುಗಳು 2019ರಲ್ಲಿ ಬಾಕಿ ಇದ್ದವು. 2019-20ರಲ್ಲಿ ಸಾಮಾನ್ಯ 4,545 ದೂರು ಮತ್ತು 14 ದೂರುಗಳನ್ನು ಆಯೋಗವು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿತ್ತು.

ಈ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲಿ 2019ರ ಮಾರ್ಚ್ 31ರ ಅಂತ್ಯಕ್ಕೆ 1,801 ದೂರುಗಳು ಬಾಕಿ ಇದ್ದರೆ ಇದೇ ಅವಧಿಯಲ್ಲಿ 1,534 ದೂರುಗಳು ದಾಖಲಾಗಿದ್ದವು. ಒಟ್ಟು 3,335 ದೂರುಗಳ ಪೈಕಿ 2,741 ದೂರುಗಳು ವಿಲೇವಾರಿ ಆಗಿದ್ದರೆ 2020ರ ಮಾರ್ಚ್ 31ರ ಅಂತ್ಯಕ್ಕೆ 594 ದೂರುಗಳು ಬಾಕಿ ಇದ್ದವು.

ಮಡಿಕೇರಿಯಲ್ಲಿ 703, ಶಿವಮೊಗ್ಗದಲ್ಲಿ 492, ದಕ್ಷಿಣ ಕನ್ನಡದಲ್ಲಿ 86, ದಾವಣಗೆರೆಯಲ್ಲಿ 233, ಧಾರವಾಡದಲ್ಲಿ 216, ಬೆಳಗಾವಿಯಲ್ಲಿ 240, ಬಳ್ಳಾರಿಯಲ್ಲಿ 201, ರಾಮನಗರದಲ್ಲಿ 256 ದೂರುಗಳು ಆಯೋಗಕ್ಕೆ ಸಲ್ಲಿಕೆಯಾಗಿದ್ದವು ಎಂಬುದು ವರದಿಯಿಂದ ಗೊತ್ತಾಗಿದೆ.

ಮಾನವ ಹಕ್ಕುಗಳ ಆಯೋಗ, ಮತ್ತಿತರ ಆಯೋಗಗಳು ಇಂದಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕೇವಲ ಆಲಂಕಾರಿಕ ಸಂಸ್ಥೆಗಳು ಎಂಬಂತೆ ಕಾಣುತ್ತಿವೆ. ಏಕೆಂದರೆ ಪ್ರತಿವರ್ಷವೂ ಸಹ ಈ ತರಹದ ಮಾನವ ಹಕ್ಕುಗಳ ಉಲ್ಲಂಘನೆಗಳು ಹೆಚ್ಚಾಗಿವೆ ಎಂಬ ವರದಿ ಕಾಣುತ್ತದೆಯೇ ವಿನಃ ಕಡಿಮೆಯಾಗಿದೆ ಎಂಬುದು ಕಾಣುವುದಿಲ್ಲ. ಇದರ ಅರ್ಥವೇನೆಂದರೆ ಈ ಆಯೋಗಗಳ ವೈಫಲ್ಯತೆಗೆ ಕನ್ನಡಿ ಹಿಡಿದಂತಾಗಿದೆ. ಈ ವೈಫಲ್ಯತೆಗೆ ಮುಖ್ಯ ಕಾರಣ ರಾಜ್ಯದ ಎಲ್ಲಾ ಇಲಾಖೆಗಳಲ್ಲಿಯೂ ರಾಜಕಾರಣಿಗಳ ಅವ್ಯಾಹತ ಹಸ್ತಕ್ಷೇಪ, ಅದರಲ್ಲೂ ಪೊಲೀಸ್ ಇಲಾಖೆಯಲ್ಲಿನ ಎಲ್ಲಾ ಮಟ್ಟಗಳಲ್ಲಿಯೂ ಬೃಹತ್ ಹಸ್ತಕ್ಷೇಪ ಹಾಗೂ ತಮ್ಮ ಸ್ವಾರ್ಥಕ್ಕಾಗಿ ಇಲಾಖೆಯ ದುರುಪಯೋಗ. ಪೊಲೀಸ್ ಮತ್ತು ಇತರ ಇಲಾಖೆಯ ಉನ್ನತ ಅಧಿಕಾರಿಗಳು ಯಾವಾಗ ರಾಜಕಾರಣಿಗಳ ಮುಂದೆ ತಲೆಬಾಗದೆ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಾರೆಯೊ ಅಂದು ಈ ಆಯೋಗಗಳ ಶಿಫಾರಸುಗಳು ಬಲಿಷ್ಠವಾಗುವವು ಎನ್ನುತ್ತಾರೆ ಜನಾಧಿಕಾರ ಸಂಘರ್ಷ ಪರಿಷತ್ನ ಸಹ ಅಧ್ಯಕ್ಷ ಆದರ್ಶ ಐಯ್ಯರ್.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News