ತಾಳಿಕೆಟ್ಟು ಕಲ್ಯಾಣ ನಿಷೇಧ

Update: 2022-01-30 05:18 GMT

ಭಾಗ 3

ಅಂದು ಕೇರಳದ ನಾಯರರು, ಈಳವರು ಮೊದಲಾದ ಜನಾಂಗಗಳಲ್ಲಿ ಹುಡುಗಿಯರಿಗೆ ಹನ್ನೆರಡು ವರ್ಷ ಪ್ರಾಯದ ಒಳಗೆ ‘ತಾಳಿಕೆಟ್ಟು ಕಲ್ಯಾಣ’ (ತಾಳಿ ಕೆಟ್ಟು=ತಾಳಿ ಕಟ್ಟು) ಎನ್ನುವ ಬಹು ಖರ್ಚಿನ ಪರಂಪರಾಗತ ವಿಧಿಯನ್ನು ಮಾಡುವುದು ಕಡ್ಡಾಯವಾಗಿತ್ತು. ತಾಳಿಕೆಟ್ಟು, ಕಲ್ಯಾಣವಾಗದೆ ಕನ್ಯೆಯರಿಗೆ ಮದುವೆ ಮಾಡುವುದು ಸಂಪ್ರದಾಯ ನಿಷೇಧವಾಗಿತ್ತು.

ತಾಳಿಕೆಟ್ಟು ಕಲ್ಯಾಣ ಅದೊಂದು ಅಣಕು ಮದುವೆ. ಹುಡುಗಿಯರಿಗೆ ಹನ್ನೆರಡು ವರ್ಷ ಪ್ರಾಯ ಆಗುವುದರ ಮೊದಲು ಈ ಅಣಕು ಮದುವೆ ಮಾಡಬೇಕೆಂಬುದು ಸಾಂಪ್ರದಾಯಿಕ ವಿಧಿ, ತಾಳೆಕೆಟ್ಟು ಕಲ್ಯಾಣಕ್ಕೆ ಮುಹೂರ್ತ ಮತ್ತು ದಿನ ನಿಶ್ಚಯ ಮಾಡಿ, ಮನೆಯ ಎದುರಿನಲ್ಲಿ ಚಪ್ಪರ ಕಟ್ಟಿ, ಸಿಂಗರಿಸುತ್ತಿದ್ದರು. ಕುಟುಂಬದ ಕೆಲವು ಹುಡುಗಿಯರಿಗೆ ಸಾಮೂಹಿಕವಾಗಿ ಒಂದೇ ಚಪ್ಪರದಲ್ಲಿ ತಾಳಿಕೆಟ್ಟು ಕಲ್ಯಾಣವಾಗುವುದು ಸಾಮಾನ್ಯವಾಗಿತ್ತು. ಕೆಲವೊಮ್ಮೆ ಒಂದೇ ಚಪ್ಪರದಲ್ಲಿ ಸಾಮೂಹಿಕವಾಗಿ, ವಿಭಿನ್ನ ಕುಟುಂಬದ ಅನೇಕ ಬಾಲಿಕೆಯರಿಗೆ ತಾಳಿ ಕಟ್ಟಿಸುತ್ತಿದ್ದರು. ಈ ಕಲ್ಯಾಣಕ್ಕೆ ವಧುವಿನ ಬಂಧು ಬಳಗದವರು, ನೆಂಟರಿಷ್ಟರು, ಊರಿನ ಜನ ಸಾಮಾನ್ಯರು, ಪ್ರತಿಷ್ಠಿತರು ಆಮಂತ್ರಿತ ಅತಿಥಿಗಳಾಗಿ ನೆರೆಯುತ್ತಿದ್ದರು. ತಾಳಿಕೆಟ್ಟು ಕಲ್ಯಾಣಕ್ಕೆ ಸಿದ್ಧವಾಗಿರುವ ಬಾಲಿಕೆಯರನ್ನು ನಿಶ್ಚಿತ ಮುಹೂರ್ತದಲ್ಲಿ ಸಾಂಪ್ರದಾಯಿಕ ಉಡುಗೆಯೊಂದಿಗೆ ಕೈಯಲ್ಲಿ ವೀಳ್ಯದೆಲೆಯೊಂದಿಗೆ ಅಡಿಕೆಯನ್ನಿಡಿಸಿ, ವಾದ್ಯಘೋಷಗಳೊಂದಿಗೆ ಚಪ್ಪರಕ್ಕೆ ಕರೆದು ತರುತ್ತಿದ್ದರು. ಸಿರಿವಂತರ ಮಕ್ಕಳು ತಾಳಿಕೆಟ್ಟು ಕಲ್ಯಾಣದಲ್ಲಿ ಬಡವರ ಮಕ್ಕಳಿಗೂ ಧರ್ಮಾರ್ಥವಾಗಿ ತಾಳಿ ಕಟ್ಟಿಸುವುದೂ ಇರುತ್ತಿತ್ತು, ಬಡವರ ಮಕ್ಕಳನ್ನು ಶ್ರೀಮಂತರ ತಾಳಿಕೆಟ್ಟು ಕಲ್ಯಾಣ ಚಪ್ಪರದ ಉತ್ತರ ಭಾಗದಲ್ಲಿ ಕುಳ್ಳಿರಿಸುವುದು ಸಂಪ್ರದಾಯ. ಸಿರಿವಂತರು ಮತ್ತು ಪ್ರತಿಷ್ಠಿತರ ಮಕ್ಕಳನ್ನು ಚಪ್ಪರದ ದಕ್ಷಿಣ ಭಾಗದಲ್ಲಿ ಬಹು ವೈಭವಾದರಗಳಿಂದ ಆಸನಗಳಲ್ಲಿ ಕುಳ್ಳಿರಿಸುತ್ತಿದ್ದರು. ಈ ಬಾಲಿಕೆಯರನ್ನು ನಾನಾ ತರದ ವಸ್ತ್ರಾಭರಣಗಳಿಂದ, ಹೂಗಳಿಂದ ವಧುವಾಗಿ ಸಿಂಗರಿಸುತ್ತಿದ್ದರು.

ವರ ಮಹಾಶಯ ನಿಶ್ಚಯಿಸಲ್ಪಟ್ಟ, ಶುಭ ಗಳಿಗೆಯಲ್ಲಿ ಮಂಗಳ ವಾದ್ಯ ಘೋಷಗಳಿಂದ ಒಡಗೂಡಿ ಕುದುರೆ ಅಥವಾ ಆನೆಯ ಮೇಲೆ ಸವಾರಿಯಾಗಿ ದಿಬ್ಬಣದೊಂದಿಗೆ ಕಲ್ಯಾಣ ಮಂಟಪಕ್ಕೆ ವಿಜೃಂಭಣೆಯಿಂದ ಆಗಮಿಸುತ್ತಿದ್ದನು. ವರನ ವಸ್ತ್ರ ಬಟ್ಟೆಗಳನ್ನೂ ಕೂಡಿ ದಿಬ್ಬಣದ ಎಲ್ಲ ವ್ಯವಸ್ಥೆಯನ್ನು ವಧುವಿನ ಮನೆಯವರೇ ಮಾಡಬೇಕು. ವರನು ಮಂಟಪಕ್ಕೆ ಬರುತ್ತಿದ್ದಂತೆ ಸಿಂಗಾರಗೊಂಡ ಬಾಲಿಕೆಯರು ನಾಚಿಕೆಯಿಂದ ತಮ್ಮ ಕೈಯಲ್ಲಿದ್ದ ವೀಳ್ಯದೆಲೆಗಳಿಂದ ಮುಖಮುಚ್ಚಿಕೊಂಡು ಕುಳಿತಿರುತ್ತಿದ್ದರು. ಕೆಲವೊಮ್ಮೆ ಕಲ್ಯಾಣಕ್ಕೆ ಅನೇಕ ಕನ್ಯೆಯರಿದ್ದಾಗ ವರ ಮಹಾಶಯರು ಒಬ್ಬರಿಗಿಂತ ಹೆಚ್ಚಿರುವುದೂ ಇರುತ್ತಿತ್ತು. ಅನೇಕ ವೇಳೆ ಒಬ್ಬನೇ ವರ ಅನೇಕ ವಧುಗಳ ಕುತ್ತಿಗೆಗೆ ಚಿನ್ನದ ತಾಳಿಯನ್ನು ಕಟ್ಟಿ ಶಾಸ್ತ್ರವಿಧಿಯನ್ನು ಪೂರ್ಣಗೊಳಿಸುತ್ತಿದ್ದನು. ಬಾಡಿಗೆಯ ವರನಾಗಿರುವ ಕಾರಣ ತಾಳಿಗಳು ಹುಡುಗಿಯರ ಮನೆಯವರದ್ದೇ ಆಗಿರುತ್ತಿತ್ತು. ಬಾಡಿಗೆ ವರನಿಂದ ಕಟ್ಟಲ್ಪಟ್ಟ, ತಾಳಿ ಹುಡುಗಿಯ ಅಣಕು ಮದುವೆಯ ಸಂಕೇತವಾಗಿರುತ್ತಿತ್ತು. ತಾಳಿಕೆಟ್ಟು ಕಲ್ಯಾಣವಾದ ನಂತರ ವರನು ವಧುವಿನ ಮನೆಯಲ್ಲಿ ಸಿಂಗರಿಸಲ್ಪಟ್ಟ ಕೋಣೆಯಲ್ಲಿ ನಾಲ್ಕು ದಿನಗಳವರೆಗೆ ಮನೆ ಅಳಿಯನಂತೆ ಸಂಭ್ರಮದಿಂದ ಆತಿಥ್ಯ ಸ್ವೀಕರಿಸುತ್ತ ಇರುತ್ತಿದ್ದ.

ಆದರೆ ವಧುವಿಗೂ ಆ ವರನಿಗೂ ಯಾವುದೇ ರೀತಿಯ ದೈಹಿಕ, ಮಾನಸಿಕ, ಧಾರ್ಮಿಕ ವೈವಾಹಿಕ ಸಂಬಂಧ ಇರುತ್ತಿರಲಿಲ್ಲ. ತಾಳಿ ಕಟ್ಟಿದ ವಧುವಿನ ಮೇಲೆ ಈ ವರನಿಗೆ ಯಾವುದೇ ರೀತಿಯ ಅಧಿಕಾರವೂ ಇರುತ್ತಿರಲಿಲ್ಲ. ಈ ನಾಲ್ಕು ದಿನ ವಧುವಿನ ಮನೆಯಲ್ಲಿ ನೆಂಟರಿಷ್ಟರು, ಬಂಧು ಬಳಗಗಳು ಸೇರಿ ಬಗೆ ಬಗೆಯ ಹಾಡು, ಹಾಸ್ಯ, ನೃತ್ಯ ಮುಂತಾದ ವಿನೋದಾವಳಿಗಳನ್ನು ಮಾಡುತ್ತಿದ್ದರು. ವಧು-ವರರಿಗೆ ನಾನಾ ತರದ ಚೇಷ್ಟೆಗಳನ್ನು ಮಾಡುತ್ತಿದ್ದರು. ಈ ನಾಲ್ಕು ದಿನಗಳಲ್ಲೂ ಆಡಂಭರದ ಉತ್ಸವ, ವಿವಿಧ ಭಕ್ಷಭೋಜನಗಳು ಜರುಗುತ್ತಿದ್ದವು. ಮನೆಯಲ್ಲಿ ಸಡಗರವೋ ಸಡಗರ. ನಾಲ್ಕನೇ ದಿನದ ಕೊನೆಯಲ್ಲಿ ಕೆಲವು ವಿಧಿಗಳೊಂದಿಗೆ ವರನು ತನ್ನ ವಿಶೇಷ ವಸ್ತ್ರಾಲಂಕಾರಗಳನ್ನು ತೆಗೆದು ವಧುವಿನ ಮನೆಯವರಿಗೆ ಒಪ್ಪಿಸಬೇಕು. ಅವೆಲ್ಲವು ವಧುವಿನ ಮನೆಯವರು ಕೊಟ್ಟಿದ್ದೇ, ಆ ಮೇಲೆ ವರ ತನ್ನ ನಿತ್ಯದ ಉಡುಗೆಯೊಂದಿಗೆ ವಧುವಿನ ಮನೆಯವರಿಂದ ಉಡುಗೊರೆಯನ್ನು ಪಡೆದುಕೊಂಡು ನಿರ್ಗಮಿಸುತ್ತಿದ್ದನು. ಇದಾದ ನಂತರ ಆ ಮನೆಯೊಂದಿಗೆ ಅಥವಾ ಆ ವಧುವಿನೊಂದಿಗೆ ಅವನಿಗೆ ಯಾವುದೇ ಸಂಬಂಧವಿರುತ್ತಿರಲಿಲ್ಲ.

ತಾಳಿಕೆಟ್ಟು ಕಲ್ಯಾಣ ಎನ್ನುವ ಸಂಪ್ರದಾಯ ಒಂದು ಹುಸಿ ಮದುವೆ. ಆದರೆ ಇದರ ಪ್ರಭಾವ ಎಷ್ಟೆಂದರೆ ಈ ರೂಢಿಗತ ಈ ಸಂಪ್ರದಾಯ ಆಗದೆ ಮುಖ್ಯವಾಗಿ ಈಳವ ಮತ್ತು ನಾಯರ್ ಸಮುದಾಯಗಳ ಹೆಣ್ಣು ಮಕ್ಕಳಿಗೆ ಮದುವೆ ಮಾಡುವಂತಿರಲಿಲ್ಲ. ಮಕ್ಕಳಿಗೆ ಮದುವೆ ಮಾಡಿಸುವುದೇ ಕಷ್ಟವಾಗಿರುವಾಗ ಬಡವರಿಗೆ ಇದೊಂದು ಬಹುದೊಡ್ಡ ಹೊರೆ ಆಗಿತ್ತು. ಅನೇಕ ಬಡವರು ಸಿರಿವಂತರು ಮಾಡುವ ಈ ತಾಳೆಕೆಟ್ಟು ಕಲ್ಯಾಣದಲ್ಲಿ ತಮ್ಮ ಮಕ್ಕಳಿಗೂ ತಾಳಿ ಕಟ್ಟಿಸಿಕೊಳ್ಳುತ್ತಿದ್ದರು. ತಮ್ಮ ಮಕ್ಕಳ ಕಲ್ಯಾಣದಲ್ಲಿ ಬಡವರ ಮಕ್ಕಳಿಗೂ ತಾಳಿ ಕಟ್ಟಿಸುವುದು ತಮಗೆ ಗೌರವ ಮತ್ತು ತಮ್ಮ ಸಿರಿವಂತಿಕೆಯ ಪ್ರದರ್ಶನದ ಅವಕಾಶ ಎಂದು ಸಿರಿವಂತರು ತಿಳಿದು ಕೊಳ್ಳುತ್ತಿದ್ದರು.

ಗುರುಗಳು ಈ ತಾಳಿಕಟ್ಟು ಕಲ್ಯಾಣವು ಅಗತ್ಯವಿಲ್ಲದ ಅಂಧಶ್ರದ್ಧೆ ಎಂದರು. ಇದರಿಂದ ಸಮಾಜಕ್ಕೆ ಹಾನಿಯೇ ಅಲ್ಲದೆ ಪ್ರಯೋಜನ ಏನೂ ಇಲ್ಲದ ಕಾರಣ ಇದನ್ನು ಯಾರೂ ಆಚರಿಸಕೂಡದು ಎಂದು ಕಟ್ಟಾಜ್ಞೆ ಮಾಡಿದರು. ‘ಅರುವಿಪ್ಪುರದ ಕ್ಷೇತ್ರ ಯೋಗ’ ಸದಸ್ಯರು ಮನೆ ಮನೆಗಳಿಗೂ ಗುರುಗಳ ಈ ಸಂದೇಶ / ಆಜ್ಞೆಯನ್ನು ಮುಟ್ಟಿಸಿದರು. ಕೆಲವರು ಗುರುಗಳಿಗೆ ಹೆದರಿ, ಇನ್ನು ಕೆಲವರು ಭಕ್ತಿಯಿಂದ, ಮತ್ತೆ ಕೆಲವು ಸಾಮಾಜಿಕ ಕಳಕಳಿಯುಳ್ಳವರು ಪ್ರಜ್ಞಾ ಪೂರ್ವಕವಾಗಿ ತಾಳಿಕೆಟ್ಟು ಕಲ್ಯಾಣವನ್ನು ನಿಲ್ಲಿಸಿದರು. ಮೂಲಭೂತವಾದಿಗಳು ಕೆಲವರು ಗುರುಗಳ ಮಾತನ್ನು ಮೀರಿ ತಾಳಿಕೆಟ್ಟು ಕಲ್ಯಾಣವನ್ನು ಆಚರಿಸುವವರೂ ಇದ್ದಿದ್ದರು. ಈ ಆಚರಣೆ ನಡೆಯುವುದು ತಿಳಿದು ಬಂದರೆ ಗುರುಗಳು ಅಂತಹವರಿಗೆ ಪತ್ರ ಬರೆದು ಅದನ್ನು ನಿಲ್ಲಿಸಬೇಕೆಂದು ಕೇಳಿಕೊಳ್ಳುತ್ತಿದ್ದರು. ಕೆಲವೊಮ್ಮೆ ಗುರುಗಳು ಸ್ವತಃ ಆ ಸ್ಥಳಕ್ಕೆ ಹೋಗಿ ಜನರಿಗೆ ತಿಳಿ ಹೇಳಿ ಇದನ್ನು ನಿಲ್ಲಿಸುತ್ತಿದ್ದರು.

ನಾರಾಯಣ ಗುರುವಿನ ಬಗೆಗಿನ ‘ಆಶ್ಚರ್ಯ ಚಿಂತಂಕಳ್’ ಎನ್ನುವ ಪುಸ್ತಕದಲ್ಲಿ ಗೋಪಾಲ ತಂತ್ರಿಗಳು, ವಾಸುದೇವನ್ ಎನ್ನುವ ನಿವೃತ್ತ ನ್ಯಾಯಾಧೀಶರ ಅನುಭವವನ್ನು ಹೀಗೆ ಬರೆದಿದ್ದಾರೆ.:

‘‘ಸ್ವಾಮಿಗಳು ಕರುಂಕುಳಕ್ಕೆ ಬಂದಾಗ ಸಾಮಾನ್ಯವಾಗಿ ನಮ್ಮ ತರವಾಡು ಮನೆಯ ಪೂಜೆಯ ಕೋಣೆಯಲ್ಲಿಯೇ ಇರುತ್ತಿದ್ದರು. ನಾನು ನನ್ನ ಅಜ್ಜನೊಂದಿಗೆ ಪೂಜೆಯಲ್ಲಿ ಭಾಗವಹಿಸುತ್ತಿದ್ದೆ. ಆ ಕೋಣೆಯಲ್ಲಿ ಇರಿಸಿದ್ದ ಗುರುಗಳ ಭಾವಚಿತ್ರದ ಎದುರಿನಲ್ಲಿ ಪೂಜೆಯನ್ನು ಮಾಡುವ ಅವಕಾಶ ನನಗೆ ಸಿಗುತ್ತಿತ್ತು. ಹತ್ತಾರು ವರ್ಷಗಳಿಂದ ಅನಾಗರಿಕವಾದ ತಾಳಿಕೆಟ್ಟು ಕಲ್ಯಾಣ ಸಂಪ್ರದಾಯವು ಅಸ್ತಿತ್ವದಲ್ಲಿತ್ತು. ಅದು ಕುಲೀನ, ಗೌರವಸ್ಥ ಮನೆತನಗಳವರ ಸಿರಿ ಪ್ರದರ್ಶನದ ಸಂಕೇತವೂ ಆಗಿರುತ್ತಿತ್ತು. ಅದೊಂದು ದಿನ ನನ್ನ ತಂದೆಯ ಇಬ್ಬರು ಕಿರಿಯ ತಂಗಿಯರ ತಾಳಿಕೆಟ್ಟು ಕಲ್ಯಾಣವಿತ್ತು. ನಮ್ಮ ಹಳೆಯ ತರವಾಡು ಮನೆಯಲ್ಲಿ ಸ್ವಾಮಿಗಳು ಅನಗತ್ಯವಾದ ತಾಳಿಕೆಟ್ಟು ಕಲ್ಯಾಣವನ್ನು ಕೊನೆಗೊಳಿಸಿದ್ದರು. ಗುರುಗಳ ಶಕ್ತಿಯಿಂದಲೇ ಇದನ್ನು ನಿಲ್ಲಿಸಲು ಸಾಧ್ಯವಾಗಿತ್ತು. ಇದೊಂದು ಪ್ರಗತಿಯ ಮೈಲು ಮತ್ತು ದೃಢ ನಿರ್ಧಾರದ ಹೆಜ್ಜೆಯಾಗಿತ್ತು.’’

‘ಶ್ರೀನಾರಾಯಣ ಗುರು ಸ್ವಾಮಿಕಳ್’ ಎನ್ನುವ ಪುಸ್ತಕದಲ್ಲಿ ವರ್ಣಿತವಾದಂತೆ ತಾಳಿಕೆಟ್ಟು ಕಲ್ಯಾಣವನ್ನು ಗುರುಗಳು ನಿಲ್ಲಿಸಿದ ಪ್ರಸಂಗ ಒಂದು ಹೀಗಿದೆ:

ನೆಯಂಟಿಕಾರದ ಕರಿಂಕುಳಮ್ ಎಂಬ ಗ್ರಾಮದ ಸಿರಿವಂತ ಭೂಮಾಲಕ ಈಳವ ಒಬ್ಬರು ತನ್ನ ಏಕೈಕ ಮಗಳ ಮತ್ತು ಇತರ ಹನ್ನೆರಡು ಬಾಲೆಯರ ತಾಳಿ ಕೆಟ್ಟು ಕಲ್ಯಾಣವನ್ನು ಮಾಡಿಸಲು ನಿಶ್ಚಯಿಸಿದರು. ಬಂಧುಮಿತ್ರರೆಲ್ಲರೂ ಬಂದು ಮನೆಯ ಎದುರಿನಲ್ಲಿ ವಿಧಿವತ್ತಾಗಿ ಹಾಕಿದ್ದ ಕಲ್ಯಾಣ ಮಂಟಪದಲ್ಲಿ ಸೇರಿದ್ದರು. ವರ ಮಹಾಶಯನ ಆಗಮನವಾಗಿತ್ತು. ತಾಳಿ ಕಟ್ಟಿಸಿಕೊಳ್ಳುವ ಬಾಲೆಯರು ವಿವಿಧ ಆಭರಣಗಳಿಂದಲೂ, ರೇಷ್ಮೆಯ ವಸ್ತ್ರಗಳಿಂದಲೂ ಸಿಂಗಾರಗೊಂಡು ಸಾಲಾಗಿ ನಿಂತಿದ್ದರು. ಮಂಗಳ ವಾದ್ಯಗಳು ಮೊಳಗುತ್ತಿದ್ದವು. ಬೇರೆ ಧರ್ಮಗಳ ಮತ್ತು ಜಾತಿಯ ಜನರು ಸೇರಿದ್ದರು. ಜ್ಯೋತಿಷಿಯು ಶುಭ ಮುಹೂರ್ತವನ್ನು ಸೂಚಿಸುವ ನಿರೀಕ್ಷೆಯಲ್ಲಿ ಎಲ್ಲರೂ ಕಾತರರಾಗಿದ್ದರು. ಅಷ್ಟರಲ್ಲಿ ಕೌರವನ ಸಭೆಗೆ ಬಂದ ಕೃಷ್ಣನಂತೆ ಗುರುದೇವರು ಅಲ್ಲಿಗೆ ಬಂದರು. ಕುಳಿತವರೆಲ್ಲರೂ ಎದ್ದು ನಿಂತು ಗುರುಗಳಿಗೆ ಗೌರವಾರ್ಪಣೆ ಮಾಡಿದರು. ಗುರುಗಳು ಎಲ್ಲರಿಗೂ ಆಶೀರ್ವಾದ ಮಾಡಿದರು. ಈ ತಾಳಿಕೆಟ್ಟು ಕಲ್ಯಾಣದ ಅಗತ್ಯವಿಲ್ಲ. ಇದನ್ನು ನಿಲ್ಲಿಸಬೇಕು ಎಂದರು.

ವಿವೇಕೋದಯದಲ್ಲಿ ಈ ಪ್ರಸಂಗವನ್ನು ಹೀಗೆ ಬರೆಯಿತು. ‘‘ಮಕರಮಾಸ 5ನೆಯ ದಿನ ಮುಹೂರ್ತಕ್ಕೆ ಸರಿಯಾಗಿ ಸಮಾಜದ ಕ್ಷೇಮ ಚಿಂತಕರಾದ ಆ ಅವತಾರ ಪುರುಷರು ಅಲ್ಲಿಗೆ ಬಂದು ತಲುಪಿದರು. ನಾಯರ್, ಕ್ರೈಸ್ತ, ಮುಸ್ಲಿಂ ಗೃಹಸ್ಥರೂ ಅಲ್ಲಿ ನೆರೆದಿದ್ದರು. ಕೌರವನ ಸಭೆಗೆ ಕೃಷ್ಣ ಬಂದಂತಾಯಿತು. ಕನ್ಯೆಯ ತಂದೆಯನ್ನು ಸಮೀಪಕ್ಕೆ ಕರೆಸಿದರು. ಅವನು ಬಂದು ಗುರುದೇವರ ಕಾಲಿಗೆ ಬಿದ್ದನು. ‘ತಾಳಿ ಕಟ್ಟುವ ಈ ಪದ್ಧತಿ ಅಗತ್ಯ ಇಲ್ಲದ್ದು, ಈ ಕುರಿತು ಆಗಿಂದಾಗ ತಿಳಿಸುತ್ತಿದ್ದೇವೆ. ನೀವು ಅದನ್ನು ಗಮನಿಸಲಿಲ್ಲ. ನಿಮಗೆ ನನ್ನ ಮಾತಿನಲ್ಲಿ ವಿಶ್ವಾಸವಿದ್ದರೆ ಇದನ್ನು ಈ ಕ್ಷಣವೇ ನಿಲ್ಲಿಸಬೇಕು. ನಾನು ನಿಮ್ಮ ಹಿತಕ್ಕಾಗಿಯೇ ಹೇಳುತ್ತಿದ್ದೇನೆ’’ ಎಂದರು ಗುರುಗಳು. ಇನ್ನು ಮುಂದೆ ತನ್ನ ಕುಟುಂಬದಲ್ಲಿ ಇದು ನಡೆಯುವುದಿಲ್ಲ ಎಂದು ಭಾಷೆ ಕೊಡುತ್ತೇನೆ ಎಂದನು ಯಜಮಾನ.

‘‘ಅದಾಗದು ತಾಳಿ ಕಟ್ಟುವುದು ಅನವಶ್ಯಕ ಎಂದು ನೀನು ತಿಳಿಯುವುದಾದರೆ ಈಗಲೇ ಈ ಸಮಾರಂಭವನ್ನು ಏಕೆ ನಿಲ್ಲಿಸಬಾರದು? ಈಗಲೇ ಅದನ್ನು ಬಿಟ್ಟು ಬಿಡುವುದರಿಂದ ಏನೂ ಹಾನಿಯಾಗಲಾರದು’’ ಗುರು ಎಂದರು.

‘‘ಅತಿಥಿಗಳು ನೆರೆದಿದ್ದಾರೆ. ಬೇರೆ ಹುಡುಗಿಯ ತಂದೆ ತಾಯಂದಿರೂ, ಮಾವಂದಿರೂ ಇದ್ದಾರೆ. ಅವರೆಲ್ಲ ಒಪ್ಪುವರೋ ಇಲ್ಲವೋ ತಿಳಿಯದು’’ ಎಂದನು. ‘‘ನೀನು ಒಪ್ಪುತ್ತಿಯೋ ಅದನ್ನು ನನಗೆ ಹೇಳು, ಉಳಿದವರ ಒಪ್ಪಿಗೆಯನ್ನು ನಾನು ಕೇಳುತ್ತೇನೆ’’ ಎಂದರು ಗುರುಗಳು. ‘‘ಯಜಮಾನನು ತಾವು ಆಜ್ಞಾಪಿಸಿದಂತೆ ನಡೆಯುತ್ತೇನೆ’’ ಎಂದನು.

ಗುರುದೇವರು ಮಿಕ್ಕವರನ್ನು ಕರೆದರು. ವಿಷಯ ತಿಳಿಸಿದರು. ಎಲ್ಲರೂ ಒಪ್ಪಿದರು. ಗುರುಗಳು ಕಲ್ಯಾಣಕ್ಕೆ ಸಿದ್ಧವಾಗಿದ್ದ ಬಾಲೆಯರನ್ನು ಕರೆದು ಅವರಿಗೆ ಬಾಳೆ ಹಣ್ಣು ಮತ್ತು ಹೂವುಗಳನ್ನು ಕೊಟ್ಟು ಹರಸಿದರು. ಅಲ್ಲಿಯೇ ಇದ್ದ ಒಬ್ಬನನ್ನು ಕರೆದ ಗುರು ತಮ್ಮ ಮಾತನ್ನು ಸಭೆಗೆ ತಿಳಿಸುವಂತೆ ಹೇಳಿದರು. ‘‘ತಾಳಿ ಕೆಟ್ಟು ಪದ್ಧತಿ ನಿಲ್ಲಿಸಲಾಗಿದೆ. ಇನ್ನು ಮುಂದೆ ಯಾರೂ ಇದನ್ನು ಆಚರಿಸಬಾರದು’’ ಎಂದು ಆಜ್ಞೆ ಮಾಡಿದರು. ಸಮಾರಂಭಕ್ಕೆ ಬಂದವರೆಲ್ಲರೂ ತಯಾರಿಸಿದ್ದ ಊಟವನ್ನು ಮಾಡಿ ಹೊರಟು ಹೋದರು. ಇಲ್ಲಿಂದ ಮುಂದೆ ಈ ಪದ್ಧತಿ ಈಳವರಲ್ಲಿ ನಿಂತಿತು. ಉತ್ತರ ಮಲಬಾರಿನಲ್ಲಿ ಕೆಲವು ಸಮಯ ಮುಂದುವರಿದು ಅಲ್ಲಿಯೂ ನಿಂತಿತು. ಆನಂತರ ನಾಯರರೂ ಇದನ್ನು ನಿಲ್ಲಿಸಿದರು.

ಕೃಪೆ: ‘ಶ್ರೀ ನಾರಾಯಣ ಗುರು ವಿಜಯ ದರ್ಶನ’ ಗ್ರಂಥ

Writer - ಬಾಬು ಶಿವ ಪೂಜಾರಿ

contributor

Editor - ಬಾಬು ಶಿವ ಪೂಜಾರಿ

contributor

Similar News