ಸರಳ ವಿವಾಹಕ್ಕೆ ಕರೆ
ಭಾಗ 4
ನಾರಾಯಣ ಗುರು ವಿವಾಹ ಪದ್ಧತಿಯನ್ನು ಸರಳಗೊಳಿಸಿದರು. ಮದುವೆಯ ದುಂದು ವೆಚ್ಚದ ಆಡಂಭರಗಳನ್ನು ಬಿಟ್ಟು, ಸರಳ ಧಾರ್ಮಿಕ ವಿಧಿ ಮತ್ತು ವಿಧಾನಗಳಿಂದ ಆಚರಿಸಲು ಕರೆ ಕೊಟ್ಟರು.
‘‘1905ರ ಅಕ್ಟೋಬರ್ 15ರ ಆದಿತ್ಯವಾರ ಕ್ವಿಲೋನ್‌ನ ಪರವೂರಿನಲ್ಲಿ ನಾರಾಯಣ ಗುರುಗಳ ಸಭಾಧ್ಯಕ್ಷತೆಯಲ್ಲಿ ಈಳವರ ಮಹಾಸಭೆ ನಡೆಯಿತು. ಈಳವರು ವಿವಾಹದಲ್ಲಿ ಅನುಸರಿಸುತ್ತಿದ್ದ ಕೆಲವು ಅವೈಜ್ಞಾನಿಕ, ಅಸಹ್ಯಕರ ಸಂಪ್ರದಾಯಗಳನ್ನು ತೆಗೆದು ಹಾಕಬೇಕೆಂದು ಕರೆ ನೀಡಲಾಯಿತು. ಹಳೆಯ ಕಾಲದ ಅಪವ್ಯಯಕ್ಕೆ ಎಡೆಗೊಡುವ ವಿವಾಹ ಕ್ರಮಗಳನ್ನು ತಪ್ಪಿಸಿ, ಕಡಿಮೆ ಖರ್ಚಿನಲ್ಲಿ, ಸಂಸ್ಕೃತ ಮಂತ್ರಗಳ ಪಠಣದೊಂದಿಗೆ, ಅಗ್ನಿ ಸಾಕ್ಷಿಯಾಗಿ ವರಿಸುವ ಸಾತ್ವಿಕ ಸಂಪ್ರದಾಯವನ್ನು ಈಳವರಲ್ಲಿ ಪ್ರಚುರ ಪಡಿಸಲಾಯಿತು’’.
ಶ್ರೀಮಂತರು ಮಾತ್ರವಲ್ಲದೆ ಬಡವರಲ್ಲೂ ಮದುವೆಗೆ ಖರ್ಚುವೆಚ್ಚಗಳು ಅತಿಯಾಗಿದ್ದವು. ಬಡವರು ತಮ್ಮ ಅದ್ದೂರಿಯ ಮದುವೆಯಿಂದಾಗಿ ಸಾಲಗಾರರಾಗುವುದು ಸರ್ವೇ ಸಾಮಾನ್ಯವಾಗಿತ್ತು. ಮದುವೆಯನ್ನು ಸರಳ ರೀತಿಯಲ್ಲಿ ಮಾಡಲು ಧಾರ್ಮಿಕ ಸೂತ್ರಗಳನ್ನು ತಿಳಿಸಿದರು.
ಕೇವಲ ಹಿರಿಯರೇ ತಮ್ಮ ಒಪ್ಪಿಗೆಯ ಮೇಲೆ ಮದುವೆ ನಿರ್ಧಾರ ಮಾಡಬಾರದು ಎನ್ನುವುದು ಗುರುಗಳ ಸ್ಪಷ್ಟ ಅಭಿಮತವಾಗಿತ್ತು. ಹಾಗೆ ಆದಲ್ಲಿ ದಾಂಪತ್ಯದಲ್ಲಿ ವಿರಸ ಮತ್ತು ಕುಟಂಬದ ಶಾಂತಿಗೆ ಭಂಗ ಬರುವ ಪ್ರಸಂಗಗಳು ಹಲವಾರು ಇರುತ್ತಿದ್ದವು. ಒತ್ತಾಯದ ಮದುವೆ ದಂಪತಿಗಳಿಗೂ, ಕುಟುಂಬಕ್ಕೂ, ಸಮಾಜಕ್ಕೂ ಹಿತಕಾರಿ ಅಲ್ಲ, ಆದ ಕಾರಣ ಮದುವೆಗೆ ಮೊದಲು ವಧು-ವರರು ಪರಸ್ಪರ ಅರಿತುಕೊಳ್ಳಲು ಅವಕಾಶ ಮಾಡಿಕೊಡಬೇಕು. ವಧು- ವರ ಇಬ್ಬರಿಗೂ ಅನ್ನೋನ್ಯ, ಪರಸ್ಪರ ಸದಭಿಪ್ರಾಯ ಮತ್ತು ಇಚ್ಛೆ ಇದ್ದಲ್ಲಿ ಮಾತ್ರ ಅವರ ಮದುವೆಯನ್ನು ನಿಶ್ಚಿತಗೊಳಿಸಬೇಕು. ಹಿರಿಯರು ಕೇವಲ ತಮ್ಮ ಅಭಿಪ್ರಾಯವನ್ನೇ ಮದುವೆ ಆಗುವ ಮಕ್ಕಳ ಮೇಲೆ ಹೇರಬಾರದು. ಮದುವೆ ಸಂಪನ್ನವಾಗುವ ಸ್ಥಳವನ್ನು ಎರಡೂ ಕಡೆಯವರು ಸೇರಿ ಒಂದು ತಿಂಗಳ ಮೊದಲೇ ನಿಶ್ಚಿತಗೊಳಿಸಬೇಕು.
ವರದಕ್ಷಿಣೆ ಕೊಡುವುದು ಮತ್ತು ಪಡೆಯುವುದು ಎರಡೂ ನಿಷೇಧ. ವರದಕ್ಷಿಣೆ ಪಡೆಯುವ ಅಥವಾ ಕೊಡುವ ಮೂಲಕ ತಮ್ಮ ಸಂತತಿಯನ್ನು ಕೊಡುಕೊಳ್ಳುವ ವ್ಯಾಪಾರ ಮಾಡಿದಂತೆ. ಈ ವ್ಯಾಪಾರದ ಮೂಲಕ ತಮ್ಮ ಮಕ್ಕಳ ಮೇಲಿನ ಮಾತೃತ್ವ ಮತ್ತು ಪಿತೃತ್ವದ ಗೌರವ ಮತ್ತು ಅಧಿಕಾರವನ್ನು ಕಳೆದುಕೊಳ್ಳುತ್ತೀರಿ. ಆದ್ದರಿಂದ ವರದಕ್ಷಿಣೆಯ ವ್ಯಾಪಾರವನ್ನು ನಿಲ್ಲಿಸಿರಿ ಎಂದು ಕರೆ ಕೊಟ್ಟರು. ಹೀಗೆ ಆದೇಶಿಸಿದ ಗುರುಗಳು ವರದಕ್ಷಿಣೆಯನ್ನು ಖಡಾಖಂಡಿತವಾಗಿ ವಿರೋಧಿಸಿದರು. ಮದುವೆಯಲ್ಲಿ ದುಂದು ವೆಚ್ಚ ಮಾಡುವ ಹಣ ಇದ್ದರೆ ಮತ್ತು ವಧು-ವರರಿಗೆ ಬಳುವಳಿಯನ್ನು ಕೊಡಲಪೇಕ್ಷಿಸುವವರು ವಧು-ವರರ ಒಟ್ಟು ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಡಬಹುದು. ಅದು ಮುಂದಿನ ದಾಂಪತ್ಯ ಜೀವನದಲ್ಲಿ ಅಗತ್ಯಬಿದ್ದಲ್ಲಿ ಅವರಿಗೆ ಸಹಾಯವಾಗಬಹುದು ಎಂದು ಬೋಧಿಸಿದರು.
- ಮದುವೆಯಲ್ಲಿ ಹತ್ತಕ್ಕಿಂತ ಹೆಚ್ಚು ಜನರ ಉಪಸ್ಥಿತಿ ಬೇಕಾಗಿಲ್ಲ. ವಧು-ವರ, ಮತ್ತವರ ತಾಯಿ ತಂದೆಯವರು, ವಧು ವರರ ಒಬ್ಬೊಬ್ಬರು ಹಿತೈಷಿಗಳು, ಒಬ್ಬ ಪೂಜಾರಿ, ಸಮಾಜದ ಒಬ್ಬ ಗಣ್ಯ ವ್ಯಕ್ತಿ, ಇಷ್ಟು ಜನರಿದ್ದರೆ ಸಾಕಾಗುತ್ತದೆ. ಮಠ, ವಿದ್ಯಾನಿಲಯ, ದೇವಾಲಯ ಮೊದಲಾದ ಪವಿತ್ರ ಸ್ಥಾನಗಳಲ್ಲಿ ವಿವಾಹ ಸಂಪನ್ನವಾಗಬೇಕು. ವಿವಾಹ ಸಂಪನ್ನವಾದುದಕ್ಕೆ ದೃಢೀಕರಣ ಪತ್ರ ಅವಶ್ಯ ಇರತಕ್ಕದ್ದು.
ಸಿಂಗಾರಗೊಂಡ ವಧು-ವರರು ಪವಿತ್ರ ಮಂಟಪದಲ್ಲಿ ಅಷ್ಟ ಮಂಗಳಗಳಿಂದ ಕೂಡಿದ ಪ್ರಜ್ವಲಿಸುವ ಜ್ಯೋತಿಯನ್ನು ಪ್ರದಕ್ಷಿಣಾಪೂರ್ವಕ ಸಾಕ್ಷಿಯಾಗಿಸಿಕೊಂಡು, ಪುರೋಹಿತರು ವಿವಾಹ ಮಂತ್ರವನ್ನು ಪಠಿಸಬೇಕು. ಮಂಗಳ ವಾದ್ಯಗಳು ಇರಬೇಕು. ನಿಶ್ಚಿತ ಶುಭ ಗಳಿಗೆಯಲ್ಲಿ ವಧು-ವರರು ಹೂಹಾರಗಳನ್ನು ಬದಲಿಸಿಕೊಳ್ಳುವುದರ ಮೂಲಕ ವಿವಾಹ ಸಂಪನ್ನವಾಗಬೇಕು. ವಧುವಿಗೆ ಮಂಗಳ ಸೂತ್ರಧಾರಣೆಯನ್ನು ಮಾಡಬಹುದು. ಈ ಸಮಯದಲ್ಲಿ ನವದಂಪತಿಗಳ ಭಾವಿ ಜೀವನವು ಮಂಗಳಕರವಾಗಲೆಂದು ಪುರೋ ಹಿತರ ಮುಖಾಂತರ ಲಲಿತ ಕೀರ್ತನೆಗಳನ್ನು ಮಾಡಿಸಬಹುದು. ಮದುವೆ ಗಾಗಿ ಗುರುಗಳು ಮಂತ್ರವನ್ನು ರಚಿಸಿಕೊಟ್ಟರು. ಈ ರೀತಿಯಲ್ಲಿ ಸರಳ ವಿವಾಹ ನಡೆಯಬೇಕೆಂದು ಗುರುಗಳು ಆದೇಶಿಸಿದರು. ಈ ವಿವಾಹ ಪದ್ಧತಿಯು ಬಹುಬೇಗನೆ ಸಮಾಜದಲ್ಲಿ ಸ್ವೀಕೃತವಾಗಿ ಬೆಳೆಯಿತು.
ಕುಷ್ಟರೋಗಿಗಳು, ಕ್ಷಯರೋಗಿಗಳು, ಅಸ್ತಮ ರೋಗಿಗಳು, ಹೃದಯ ಸಂಬಂಧದ ರೋಗಿಗಳು ಮದುವೆ ಆಗಬಾರದು. ಇಂತಹ ದಂಪತಿಗಳಿಂದ ಆರೋಗ್ಯಕರ ಮಕ್ಕಳು ಹುಟ್ಟುವ ಸಂಭವ ಕಡಿಮೆ. ಆರ್ಥಿಕವಾಗಿ ಪರಾವಲಂಬಿಗಳಾಗಿ ಕಷ್ಟದಲ್ಲಿರುವವರು (ಹೆಂಡತಿ ಮಕ್ಕಳನ್ನು ಸಾಕಲು ಅಸಮರ್ಥರಾದವರು) ಮದುವೆ ಆಗಬಾರದು. ಮದುವೆಗೆ ಮೊದಲು ಅಂತವರು ಆರ್ಥಿಕ ಸ್ವಾವಲಂಬನೆ ಸಾಧಿಸಿ ಆನಂತರ ಮದುವೆ ಆಗಬೇಕು ಎಂದು ಗುರುಗಳ ಹೇಳಿಕೆ ಆಗಿತ್ತು. ಸತಿ-ಪತಿಗಳ ಅನಾರೋಗ್ಯಗಳು ಕುಟುಂಬಗಳು ಒಡೆಯಲು ಕಾರಣವಾಗುವ ಸಾಧ್ಯತೆ ಇರುವುದರಿಂದ ಮದುವೆಗೆ ಮೊದಲು ದೈಹಿಕ ತಪಾಸಣೆಯನ್ನು ವಧು-ವರರು ಮಾಡಿಕೊಳ್ಳುವುದು ಉತ್ತಮವೆನ್ನುವುದು ಗುರುಗಳ ಉಪದೇಶವಾಗಿತ್ತು. ದೈಹಿಕವಾಗಿ ಮತ್ತು ಮಾನಸಿಕವಾಗಿ ವಧು-ವರರು ಒಬ್ಬರಿಗೊಬ್ಬರು ಸರಿ ಹೊಂದುತ್ತಾರೆಯೇ ಎನ್ನುವುದು ನಿಶ್ಚಯ ಆದ ಮೇಲೆಯೇ ಮದುವೆ ಆಗಬೇಕು ಎನ್ನುವುದು ಅವರ ಆದೇಶ. ಸತಿ ಪತಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಹಕರಿಸಿ ಬಾಳಬೇಕು. 1927ರಲ್ಲಿ ಜರ್ಮನಿಯ ಕ್ರೈಸ್ತ ಹುಡುಗಿಯೊಂದಿಗೆ ಕೆ.ಸಿ. ಕರುಣಾಕರನ್ ಎನ್ನುವ ಈಳವ ಹುಡುಗನ ಅಂತರ್‌ಧರ್ಮ ವಿವಾಹವು ಗುರುಗಳ ಸಮ್ಮುಖದಲ್ಲಿ ನಡೆಯಿತು. ಜರ್ಮನಿಗೆ ಉಚ್ಚ ವಿದ್ಯಾಭ್ಯಾಸಕ್ಕೆ ಹೋಗಿದ್ದ ಕರುಣಾಕರನ್ ಅಲ್ಲಿ ಕ್ರೈಸ್ತ ಹುಡುಗಿಯೊಬ್ಬಳನ್ನು ಪ್ರೇಮಿಸಿದ. ಅವರಿಬ್ಬರೂ ಮದುವೆ ಆಗ ಬಯಸಿದರು. ಆಕೆ ಕರುಣಾಕರನನ್ನು ಅನುಸರಿಸಿ ಕೇರಳಕ್ಕೆ ಬಂದಳು. ಕರುಣಾಕರನ್‌ನ ಮನೆಯವರು ಮತ್ತು ಈಳವರು ಈ ಮದುವೆಗೆ ಒಪ್ಪಿಗೆ ಕೊಡಲಿಲ್ಲ. ಮನೆಯಲ್ಲಿ ಆತಂಕದ ಸ್ಥಿತಿ ಉಂಟಾಯಿತು. ವಿಷಯ ವಿಕೋಪಕ್ಕೆ ಹೋಯಿತು. ಆ ಸಮಯದಲ್ಲಿ ಗುರುಗಳು ಶಿವಗಿರಿಯಲ್ಲಿದ್ದರು. ಸಮಸ್ಯೆಯನ್ನು ಗುರುಗಳ ಸಮ್ಮುಖಕ್ಕೆ ತರಲಾಯಿತು. ಗುರುಗಳು ಕರುಣಾಕರನ್‌ನ ತಂದೆ, ತಾಯಿ ಮತ್ತು ಬಂಧುಗಳನ್ನು ಊರ ಪ್ರಮುಖರನ್ನು ಶಿವಗಿರಿಗೆ ಕರೆಸಿ ಮಾತಾಡಿದರು. ನಿಮ್ಮ ಹುಡುಗನನ್ನು ಬಹುದೂರದ ದೇಶದಿಂದ ಅನುಸರಿಸಿ ಬಂದ ಕನೈಯನ್ನು ಅವನು ಮದುವೆ ಆಗುವುದೇ ಸೂಕ್ತ. ಈ ಮದುವೆ ಆಗುವುದರಲ್ಲಿ ಯಾವುದೇ ತೊಂದರೆ ಇಲ್ಲ ಎಂದರು ಗುರುಗಳು. ಹೀಗೆ ಕೆಲವು ಕ್ರೈಸ್ತರನ್ನು ಹುಡುಗಿಯ ಕಡೆಯವರಾಗಿ ಮದುವೆಗೆ ಆಮಂತ್ರಿಸಲಾಯಿತು. ಶಿವಗಿರಿಯಲ್ಲಿ ಗುರುಸಮ್ಮುಖದಲ್ಲೇ ಮದುವೆ ಆಯಿತು. ಮದುವೆ ನಂತರ ಕ್ರೈಸ್ತರ ಸಂಪ್ರದಾಯದಂತೆ ಹುಡುಗಿಯ ಕಡೆಯವರೆನ್ನಲಾದ ಕ್ರೈಸ್ತನೊಬ್ಬನಿಗೆ ಈ ಮದುವೆಯ ಬಗೆಗೆ ಮಾತಾಡಲು ಅನುವು ಮಾಡಲಾಯಿತು. ಅಂತೂ ಸುಸಾಂಗವಾಗಿ ಈ ಮದುವೆ ನಡೆಯಿತು. ಈ ಸಂದರ್ಭದಲ್ಲಿ ಅಂತರ್ಜಾತಿ ಅಥವಾ ಅಂತರ್‌ಧರ್ಮ ಮದುವೆ ಯಾವುದೇ ಸಮಾಜ ಅಥವಾ ಸಮುದಾಯಕ್ಕೆ ಅನಿವಾರ್ಯ ಅಲ್ಲ ಎಂದರು.
ಬಾಲ್ಯ ವಿವಾಹ ಸಾಮಾಜಿಕ ಪಿಡುಗು ಎಂದ ಗುರುಗಳು ಅದರ ನಿಷೇಧಕ್ಕೆ ಕರೆ ಕೊಟ್ಟರು. ಹಾಗೆಯೇ ನಾಯರರಲ್ಲಿ ಪಾಂಡವಾಚಾರ ಎನ್ನುವ ಬಹು ಪತಿತ್ವವನ್ನು ಖಂಡಿಸಿದರು. ಬಹುಪತಿತ್ವ ಮತ್ತು ಬಹುಪತ್ನಿತ್ವ ಹಾಗೂ ಬಾಲ್ಯ ವಿವಾಹಗಳು ಆರೋಗ್ಯಕರ ಸಮಾಜಕ್ಕೆ ಮಾರಕವಾದುದೆಂದು ಅವುಗಳನ್ನು ನಿಷೇಧಿಸಲು ಕರೆ ಕೊಟ್ಟರು. ಸಾಂಸಾರಿಕ ಅಗತ್ಯ ಕಂಡುಬಂದಲ್ಲಿ ಮಾತ್ರ ಮರು ಮದುವೆ ಮಾಡಬೇಕೆಂದು ಉಪದೇಶಿಸಿದರು. ವಿಧವೆಯರ ವಿವಾಹ ಅಥವಾ ಪರಿತ್ಯಕ್ತರ ಮರುವಿವಾಹದ ಸಮಯದಲ್ಲಿ ವಧುವಿಗೆ ಮೊದಲಿನ ಪತಿಯ ಆಭೂಷಣಗಳನ್ನು ತೊಡಿಸುವುದು ಉಚಿತವಲ್ಲ. ತ್ಯಜಿಸಲ್ಪಟ್ಟ ಅಥವಾ ತೀರಿ ಹೋದ ಪತಿಯ ನೆನಪುಗಳನ್ನು ತರುವ ಆ ವಸ್ತುಗಳು ಹೊಸ ದಾಂಪತ್ಯದಲ್ಲಿ ಕ್ಷೇಶಕ್ಕೆ ಕಾರಣಗಳಾಗುವ ಸಂಭವವಿದೆ. ಹೀಗೆ ಗುರುಗಳು ವಿವಾಹ ಪದ್ಧತಿಯಲ್ಲಿ ಕ್ರಾಂತಿಕಾರಿ ಚಳವಳಿಯನ್ನು ಮಾಡಿ ಯಶಸ್ವಿಯಾದರು.
‘‘ವಿವಾಹ ಕ್ರಮದಲ್ಲಿ ಸೂಚಿಸಿರುವ ಬದಲಾವಣೆಗಳನ್ನು ಕೇವಲ ವಿದ್ಯಾವಂತ ವರ್ಗದವರು ಮಾತ್ರ ಆಚರಣೆಗೆ ತಂದಿದ್ದಾರೆ. ಇನ್ನೂ ಅನೇಕ ಕಡೆ ಹಳೆಯ ದುಷ್ಟ ಸಂಪ್ರದಾಯಗಳು ಮುಂದುವರಿಯುತ್ತಲೇ ಇವೆ. ...ಮೇಲ್ಕಂಡ ಆಚಾರ ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆಯೇ ಎಂಬುವುದನ್ನು ಪರೀಕ್ಷಿಸಲು ನಾರಾಯಣ ಗುರುಗಳು ಅನೇಕ ಮದುವೆಗಳಿಗೆ ಹಠಾತ್ ಭೇಟಿ ನೀಡುತ್ತಿದ್ದರು. ಇತರರ ಒತ್ತಾಯದಿಂದಲೋ ಅಥವಾ ತಮ್ಮದೇ ಆದ ತಪ್ಪು ಕಲ್ಪನೆಗಳಿಂದಲೋ ಹಳೆಯ ದುಷ್ಟ ಸಂಪ್ರದಾಯಗಳನ್ನು ಆಚರಿಸುತ್ತಿದ್ದರೆ, ನಾರಾಯಣ ಗುರುಗಳು ಸ್ನೇಹಪೂರ್ವಕವಾದ ಒತ್ತಾಯದಿಂದ ಆ ಪದ್ಧತಿಗಳನ್ನು ಕೈ ಬಿಡುವಂತೆ ಅವರ ಮನವೊಲಿಸುತ್ತಿದ್ದರು’’
ಶ್ರೀನಾರಾಯಣ ಗುರುಗಳ ಅನುಯಾಯಿಗಳು ಎಂದು ಹೇಳಿಕೊಳ್ಳುವ ಕರಾವಳಿಯ ಬಿಲ್ಲವರು ಬಹು ಅದ್ದೂರಿಯ ಮದುವೆಗಳಲ್ಲಿಯೇ ಆಸಕ್ತರಾಗಿದ್ದಾರೆ. ಬಿಲ್ಲವರಲ್ಲಿ ಮದುವೆಗೆ ಮೊದಲ ರಾತ್ರಿ ವಧು-ವರರಿಗೆ ಅವರವರ ಮನೆಯಲ್ಲಿ ಮದ್ರಂಗಿಯಿಂದ ಸಿಂಗರಿಸುವುದು ಇತ್ತೀಚಿನ ಶತಮಾನದ ಸಂಪ್ರದಾಯವಾಗಿದೆ.
ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದ ಇದು ಇತ್ತೀಚೆಗೆ ಸಾರ್ವಜನಿಕವಾಗಿದೆ. ಶುಭ ಕಾರ್ಯ ನಡೆಯುವ ಮನೆಯಲ್ಲಿ ಮಾಂಸಾಹಾರದೊಂದಿಗೆ ಬಿಯರ್, ಸರಾಯಿಗಳ ಯತೇಷ್ಟ ಔತಣ. ಊರವರೆಲ್ಲರ ನಿದ್ರೆಗೆಡಿಸುವಂತಹ ಮೈಕಾಸುರನ ಅಬ್ಬರದ ಗಲಾಟೆಯೊಂದಿಗೆ ಕುಡಿತದ ಅಮಲಿನಲ್ಲಿ ಬ್ರೇಕ್ ಡ್ಯಾನ್ಸ್‌ಗಳು. ಊರ ಪುಂಡಪೋಕರಿಗಳು ಔತಣಕ್ಕಾಗಿ ಆಗಮನ, ಮಧ್ಯರಾತ್ರಿಯ ತನಕ ನಿದ್ದೆಗೆಟ್ಟು ಮದುವೆ ಮಂಟಪದಲ್ಲಿ ತೂಕಡಿಸುವ ವಧು ವರರು. ಮದುವೆಯಂತ ಶುಭಕಾರ್ಯ ನಡೆಯುವ ಮನೆಗಳಲ್ಲಿ ಇದರ ಅಗತ್ಯ ಇದೆಯೇ ಎಂದು ಪ್ರಾಜ್ಞ ಬಿಲ್ಲವರು ಯೋಚಿಸಬೇಕಾಗಿದೆ. ಅಂತೆಯೇ ವರದಕ್ಷಿಣೆ ಪಡಕೊಂಡು ತಮ್ಮ ಸಂತಾನಗಳ ವ್ಯಾಪಾರ ಮಾಡುವವರು ಗುರುಗಳ ಮಾತನ್ನು ಸ್ಮರಿಸಿಕೊಳ್ಳಬೇಕಾಗಿದೆ.
ಕೃಪೆ: ‘ಶ್ರೀ ನಾರಾಯಣ ಗುರು ವಿಜಯ ದರ್ಶನ’ ಗ್ರಂಥ