ಶಿಶುಗಳ ಆರೈಕೆ ಮತ್ತು ಶಿಕ್ಷಣ ಕ್ರಾಂತಿ
ಭಾಗ 5
ಮಗು ಐದು ವರ್ಷವಾಗುವ ತನಕ ತಾಯಿಯ ಆರೈಕೆಯಲ್ಲಿ ಬೆಳೆಯಬೇಕು. ಮಕ್ಕಳಿಗೆ ಚಿಕ್ಕಂದಿನಲ್ಲಿ ಪ್ರಖ್ಯಾತ ಗುಣಶಾಲಿಗಳಾದ ವ್ಯಕ್ತಿಗಳ ಕಥೆಯನ್ನು ಚಿತ್ರಗಳ ಮೂಲಕ ತಿಳಿಸಬೇಕು. ಶುದ್ಧ ಆಹಾರ, ಶುದ್ಧ ವಸ್ತ್ರಗಳನ್ನು ಒದಗಿಸಬೇಕು. ಮಕ್ಕಳು ಶುದ್ಧವಾದ ಒಳ್ಳೆಯ ಶಬ್ದಗಳನ್ನು ಉಚ್ಚರಿಸುವಂತೆ ಪ್ರೇರೇಪಿಸಬೇಕು. ತಾಯಿಯ ಶಬ್ದೋಚ್ಚಾರದ ಶುದ್ಧತೆ, ಮಗುವು ಬೆಳೆಯುವ ಪರಿಸರ ಮಗುವಿನ ಮಾನಸಿಕ ಬೆಳವಣಿಗೆಗೆ ಮುಖ್ಯವಾಗುತ್ತದೆ. ಗುರುಗಳು ತಾಯಂದಿರಿಗೆ ಮಕ್ಕಳ ಜೀವನದ ಬಹು ಮುಖ್ಯ ಬೆಳವಣಿಗೆಯ ಈ ಸಮಯವನ್ನು ಅರ್ಥಮಾಡಿಕೊಂಡು ಅವರ ಮುಂದಿನ ಜೀವನವನ್ನು ರೂಪಿಸುವ ಹೊಣೆಗಾರಿಕೆಯನ್ನು ವಿವರಿಸುತ್ತಿದ್ದರು. ಮಕ್ಕಳನ್ನು ತಾಯಿ ಹಾಲಿನಿಂದ ವಂಚಿಸಬಾರದೆಂದು ಹೇಳುತ್ತಿದ್ದರು. ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಹಾಲಿನ ಪಾತ್ರ ಬಹುಮುಖ್ಯ ಎನ್ನುವುದು ಗುರುಗಳ ಹೇಳಿಕೆ. ಆರು ತಿಂಗಳ ತನಕ ಮಗುವಿಗೆ ಅನ್ನವನ್ನು ಕೊಡಬಾರದು ಎನ್ನುವುದು ಗುರುಗಳ ಉಪದೇಶ.
ಗುರುಗಳ ಸಮಯದಲ್ಲಿ ಅವರ್ಣರಿಗೆ ಮತ್ತು ಉಳಿದ ಶೋಷಿತರಿಗೆ ಸುಂದರ ಮತ್ತು ಉಚ್ಚಾರಕ್ಕೆ ಸುಲಭವಾದ ಹೆಸರುಗಳನ್ನಿಡುವುದು ನಿಷಿದ್ಧವಾಗಿತ್ತು. ಮಕ್ಕಳನ್ನು ಕರೆಯಲು ಸುಲಭವಾಗುವಂತೆ, ಕೇಳಲು ಇಂಪಾಗುವಂತೆ ಮತ್ತು ಸಣ್ಣ ಹೆಸರುಗಳನ್ನು ಶುಭದಿನ, ಶುಭ ನಕ್ಷತ್ರದಲ್ಲಿ ಇಡಬೇಕೆಂದು ಗುರು ಹೇಳುತ್ತಿದ್ದರು. ಚಿಕ್ಕ ಮಕ್ಕಳನ್ನು ಪರಿಶುದ್ಧವಾದ, ಸುಂದರವಾದ ಗಾಳಿಬೆಳಕು ಸಾಕಷ್ಟಿರುವ ಕೋಣೆಯಲ್ಲಿ ಮಡಿಯಾದ ಮತ್ತು ನುಣುಪಾದ ಬಟ್ಟೆಗಳಲ್ಲಿ ಮಲಗಿಸಬೇಕು. ಮಕ್ಕಳನ್ನು ಆಕರ್ಷಿಸಬಲ್ಲ ಆಟಿಕೆಗಳು ಅಲ್ಲಿರಬೇಕು. ಶಾರೀರಿಕ ಶುದ್ಧತೆ, ಮಾನಸಿಕ, ಧಾರ್ಮಿಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಮಕ್ಕಳನ್ನು ಬೆಳೆಸಬೇಕು.
ತಾಯಿಗೆ ಗೌರವಾನ್ವಿತ ಹಾಗೂ ಉತ್ತಮ ಸ್ಥಾನ ಕೊಡಬೇಕು. ಆಕೆ ಕೂಡಾ ಮಾನಸಿಕ ಮತ್ತು ಶಾರೀರಿಕ ಆರೋಗ್ಯವಂತಳಾಗಿರುವುದು ಮಕ್ಕಳ ಬೆಳವಣಿಗೆಯಲ್ಲಿ ಮುಖ್ಯವಾಗುತ್ತದೆ. ತಾಯಿಯಾದವಳು ಕರುಣೆಯುಳ್ಳವಳೂ, ಸಂತೋಷಚಿತ್ತಳೂ, ವಿನಮ್ರಳೂ ಆಗಿರಬೇಕು. ಮಗುವು ಆರೋಗ್ಯವಂತವಾಗಿಯೂ ಸಂತೋಷ ಚಿತ್ತವುಳ್ಳದ್ದಾಗಿ ಒಳ್ಳೆಯ ವ್ಯಕ್ತಿಯಾಗಲು ತಾಯಿಯೇ ಮೂಲವೂ, ಪ್ರೇರಣೆಯೂ ಆಗುತ್ತಾಳೆ. ವ್ಯಕ್ತಿಯ ಮಾನಸಿಕ ಆರೋಗ್ಯವೇ ಆರೋಗ್ಯವಂತ ಸಮಾಜದ ಆಸ್ತಿ. ಐದು ವರ್ಷಗಳ ತನಕ ತಾಯಿಯೇ ಮಗುವಿನ ಸರ್ವಸ್ವವಾಗಿರುವುದರಿಂದ ತಾಯಂದಿರು ಆರೋಗ್ಯಪೂರ್ಣ ಸಮಾಜ ರಚನೆಯಲ್ಲಿ ಮುಖ್ಯ ಕರ್ತರಾಗುತ್ತಾರೆ.
ಮಕ್ಕಳ ಶಿಕ್ಷಣ ಮನೆಯಿಂದಲೇ ಆರಂಭವಾಗುವುದರಿಂದ ಹಿರಿಯರು ಮಕ್ಕಳ ಎದುರಿನಲ್ಲಿ ಅಶ್ಲೀಲ ಮಾತು, ಬೈಗುಳಗಳನ್ನು ಆಡಬಾರದು ಎಂದು ಗುರುಗಳು ಎಚ್ಚರಿಸುತ್ತಿದ್ದರು. ಅಂತೆಯೇ ತಂದೆ ತಾಯಿಯರ ನಡೆ ನುಡಿಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ. ಆ ಕಾರಣ ಮಕ್ಕಳೊಡನೆ ಜಾಗ್ರತೆಯಾಗಿ ವರ್ತಿಸಬೇಕೆಂದು ಉಪದೇಶಿಸುತ್ತಿದ್ದರು. ಮಗುವು ಚಿಕ್ಕಂದಿನಲ್ಲಿ ಕಲಿತದ್ದು ಅದರ ಸುಪ್ತಬುದ್ಧಿಯಲ್ಲಿದ್ದು, ಭವಿಷ್ಯದಲ್ಲಿ ವ್ಯಕ್ತಿ ನಿರ್ಮಾಣದಲ್ಲಿ ಅದು ಪ್ರಧಾನ ಪಾತ್ರವಹಿಸುತ್ತದೆ. ಐದನೆಯ ವರ್ಷ ಮಕ್ಕಳ ಶಿಕ್ಷಣದ ಆರಂಭಕ್ಕೆ ಸರಿಯಾದ ಸಮಯವಾಗುತ್ತದೆ. ಎನ್ನುವುದು ಗುರುಗಳ ಉಪದೇಶ.
ಶೈಕ್ಷಣಿಕ ಕ್ರಾಂತಿ
ಯಾವುದೇ ಸಮಾಜವು ಹಳೆಯ ಅನಗತ್ಯ ಜಾಡ್ಯಗಳನ್ನು ಬಿಟ್ಟು ಕೊಡಲು ಮತ್ತು ಹೊಸತನವನ್ನು ರೂಢಿಸಿಕೊಳ್ಳಲು ಶಿಕ್ಷಣವೇ ಏಕಮಾತ್ರ ಮಾಧ್ಯಮ ಎನ್ನುವುದು ನಾರಾಯಣ ಗುರುಗಳ ಖಚಿತ ಅಭಿಪ್ರಾಯವಾಗಿತ್ತು, ಸರ್ವರಿಗೂ ಶಿಕ್ಷಣ ಬೇಕೆಂಬ ನೆಲೆಯಲ್ಲಿ ಅವರು ಶಿವಗಿರಿಯಲ್ಲಿ ವಿದ್ಯೆಗೆ ಅಧಿದೇವತೆಯಾದ ಶಾರದಾ ದೇವಿಯನ್ನು ಪ್ರತಿಷ್ಠಾಪಿಸಿದರು. ದೇವಸ್ಥಾನಗಳ ಸುತ್ತಮುತ್ತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಕರೆಕೊಟ್ಟರು. ಅವರೇ ಕೆಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು.
ಶೋಷಣೆಗೆ ಬಲಿಯಾಗಿ ನಿಕೃಷ್ಟ ಮತ್ತು ಅಸ್ವಸ್ಥ ಸ್ಥಿತಿಗೆ ಮುಟ್ಟಿದ್ದೇವೆ ಎನ್ನುವ ವ್ಯಕ್ತಿಗತ ಅನುಭವ ಆಗುವ ತನಕ ಶೋಷಿತ ಸಮುದಾಯದ ಸುಧಾರಣೆ ಕಷ್ಟ ಸಾಧ್ಯ. ಪ್ರತಿಯೊಬ್ಬನಿಗೂ ಅವನ ಜನ್ಮಜಾತ ಸಮುದಾಯಕ್ಕೆ/ವರ್ಗಕ್ಕೆ ಮತ್ತು ವ್ಯಕ್ತಿಗತವಾಗಿ ಅವನಿಗೆ/ಅವಳಿಗೆ ಒಟ್ಟು ಸಮಾಜದಲ್ಲಿ ಇರುವ ಸ್ಥಾನ, ಮಾನ, ಕುಂದು, ಕೊರತೆಗಳ ಬಗೆಗೆ ಹಾಗೂ ಅವು ಹಾಗೇಕೆ ಇವೆ ಎನ್ನುವ ನೈಜ ತಿಳುವಳಿಕೆ ಬಲಿಯುವ ತನಕ ಸಾಮಾಜಿಕ ಪರಿವರ್ತನೋತ್ಥಾನ ಅಸಾಧ್ಯ. ತನ್ನ ಸಮಾಜದ ಹಿರಿಮೆ-ಗರಿಮೆಗಳ, ಐತಿಹಾಸಿಕ ದಾಖಲೆಗಳ ತಿಳುವಳಿಕೆಗಳೊಂದಿಗೆ, ಅಭಿಮಾನ ಬೇಕು. ಪ್ರತಿ ವ್ಯಕ್ತಿಯೂ ಅಕ್ಷರಾನುಭವಿಯಾದಾಗ ಸಮುದಾಯಕ್ಕೆ ಶಿಕ್ಷಣದ ಅಗತ್ಯ ಏಕೆ ಬೇಕೆನ್ನುವುದರ ಅನುಭವ ವೇದ್ಯವಾಗುತ್ತದೆ. ಮೌಲ್ಯಾಧಾರಿತ ಶಿಕ್ಷಣವು ವ್ಯಕ್ತಿಗೆ ಆಂತರಿಕವಾಗಿ, ವಿಶ್ವಸನೀಯ ಬಲಪಡೆಯಲು ಮತ್ತು ಬಾಹ್ಯ ಜಗತ್ತಿನ ತಿಳುವಳಿಕೆಗಳನ್ನು ಅರಿಯಲು ಇರುವ ಏಕಮಾತ್ರ ಸಾಧನ. ಆಂತರಿಕ ತಿಳುವಳಿಕೆಯಿಂದ ಮೂಡಿಬರುವ ಆತ್ಮೀಯವಾದ ವಿಶ್ವಾಸ ಮತ್ತು ಮಾನಸಿಕ ದೃಢತೆಯೇ ವ್ಯಕ್ತಿ ವಿಕಾಸದ ಸೋಪಾನ.
ನಿರಂತರ ಬದಲಾಗುತ್ತಿರುವ ಪರಿಸರ ಮತ್ತು ಪರಿಸ್ಥಿತಿಗೆ ಸಮಾಜ ತನ್ನನ್ನು ಒಪ್ಪಿಸಿಕೊಂಡು, ತಿದ್ದಿಕೊಂಡು, ಪ್ರಗತಿಪರ ಉನ್ನತಿ ಸಾಧಿಸಲು ಆಧುನಿಕ ಶಿಕ್ಷಣದ ಅಗತ್ಯವಿದೆ. ವ್ಯಕ್ತಿ, ಕುಟುಂಬ ಮತ್ತು ಸಮಾಜದ ಬೆಳವಣಿಗೆಯ ತಳಹದಿ ಶಿಕ್ಷಣ.ಶಿಕ್ಷಣದಿಂದ ಶೂದ್ರರು ವಂಚಿತರಾದುದೇ ಅವರ ಹೀನ ಅಸ್ವಸ್ಥ ಸ್ಥಿತಿಗೆ ಕಾರಣ. ಇಂತಹ ದುಃಸ್ಥಿತಿಯಿಂದ ಈ ಸಮಾಜದ ಪುನರುತ್ಥಾನವಾಗಬೇಕಾದರೆ ಇದರಲ್ಲಿಯ ಪ್ರತಿ ಪುರುಷ ಮತ್ತು ಸ್ತ್ರೀಗೂ ಸಮಾನ ಶಿಕ್ಷಣದ ಅಗತ್ಯ ಅನಿವಾರ್ಯವಾಗಿದೆ.
ಹೆಣ್ಣು ಸುಸಂಸ್ಕೃತ, ಸುಶೀಲ, ಪ್ರಜ್ಞಾಪೂರಿತ, ಕರ್ತವ್ಯನಿಷ್ಠ, ಪರಿವರ್ತನಾಶೀಲ ವಿದ್ಯಾವಂತೆ ಆಗಬೇಕು. ಆವಾಗ ವಿವೇಕವುಳ್ಳ ಸಾಂಸ್ಕೃತಿಕ ಕೌಟುಂಬಿಕ ಹಿನ್ನೆಲೆಯುಳ್ಳ ಉತ್ತಮ ಸಮಾಜದ ನಿರ್ಮಾಣವಾಗುವುದು. ಹೀಗಾದಾಗ ಮಾತ್ರ ಆಧುನಿಕ ಸಾಮಾಜಿಕ ಪುನರುತ್ಥಾನ ಹಾಗೂ ಪ್ರಗತಿಯ ಸಾಧ್ಯತೆಯಾಗುವುದು. ತಾಯಿಯ ಮುದ್ದಾಟ, ಆರೈಕೆ, ಒಡನಾಟ, ನಿರ್ದೇಶನಗಳಲ್ಲಿ ಮಗುವು ತನ್ನ ಬುನಾದಿ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವುದು. ತಾಯಿಯ ಒಡನಾಟದಲ್ಲೇ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮಗುವೇ ಭವಿಷ್ಯದ ಸಮಾಜವಾಗುವುದು. ಮಗುವಿನಲ್ಲಿ ಉತ್ತಮ ಸಂಸ್ಕಾರಗಳನ್ನು ರೂಢಿಸಬೇಕಾದರೆ ತಾಯಿ ವಿದ್ಯಾವಂತೆಯೂ, ಪ್ರಜ್ಞಾವಂತೆಯೂ, ಸುಸಂಸ್ಕೃತಳೂ, ಧರ್ಮಬೀರುವೂ ಆಗಬೇಕು. ಅಂತಹ ತಾಯಂದಿರಿಂದ ಮಾತ್ರ ಉತ್ತಮ ವಿದ್ಯಾವಂತ, ಪ್ರಜ್ಞಾವಂತ ವ್ಯಕ್ತಿಗಳಿಂದ ಕೂಡಿದ ಸಮಾಜ ನಿರ್ಮಾಣ ಸಾಧ್ಯ. ಸಮಾಜದ ಅಭಿವೃದ್ಧಿಯ ಮೂಲದಲ್ಲಿ ತಾಯಿಯೇ ಪ್ರಧಾನಳಾಗಿ ಕಾರ್ಯನಿರ್ವಹಿಸುವುದರಿಂದ ಆಕೆಗೆ ಉತ್ತಮ ಶಿಕ್ಷಣ ಅನಿವಾರ್ಯತೆಯ ಅಗತ್ಯವಿದೆ. ಇದು ನಾರಾಯಣ ಗುರುಗಳ ಶಿಕ್ಷಣ ಕ್ರಾಂತಿಯ ತಳಹದಿಯಾಗಿತ್ತು.
ಸಂಸ್ಕೃತ, ಮಲಯಾಳ ಮತ್ತು ತಮಿಳು ಸಾಹಿತ್ಯಗಳಲ್ಲಿ ಪಾಂಡಿತ್ಯವುಳ್ಳವರಾಗಿದ್ದ ನಾರಾಯಣ ಗುರುಗಳು, ಚೆಂಬಳಂತಿ, ಅಂಚೆತೆಂಗುಗಳಲ್ಲಿಯ ಶಾಲೆಗಳಲ್ಲಿ ಕೆಲವು ಕಾಲ ಸಂಸ್ಕೃತ, ಮಲೆಯಾಳ ಮತ್ತು ಗಣಿತದ ಉಪಾಧ್ಯಾಯರಾಗಿ ಕೆಲಸ ಮಾಡಿದರು. ಅವಿದ್ಯೆಯೇ ಶೋಷಣೆಯ ಮೂಲ ಎನ್ನುವುದನ್ನು ಎಳವೆಯಲ್ಲಿಯೇ ತಿಳಿದುಕೊಂಡವರು. ಗುರುಗಳ ಕಾಲದಲ್ಲಿ ಈಳವರಿಗೆ ತಿರುವನಂತಪುರದ ಸರಕಾರಿ ಶಾಲೆಗಳಲ್ಲಿ ಪ್ರವೇಶವಿರಲಿಲ್ಲ. ಕ್ರೈಸ್ತ ಮಿಶನರಿಗಳ ಶಾಲೆಗಳಲ್ಲಿ ಪ್ರವೇಶ ಇದ್ದರೂ ಶುಲ್ಕವನ್ನು ತೆರಲು ಈಳವರಿಗೆ ಸಾಧ್ಯವಾಗುತ್ತಿರಲಿಲ್ಲ. ಈಳವರು ಏಕೋಪಾಧ್ಯಾಯ ಶಾಲೆಗಳಲ್ಲಿ ತಮ್ಮ ಜಾತಿಯ ಹಿರಿಯರಿಂದ ಸಾಗಿ ಬಂದ ಪರಂಪರಾಗತ ವಿದ್ಯೆಯನ್ನು ಕಲಿಯಬೇಕಿತ್ತು. ಗುರುಗಳು ಅರುವಿಪುರ ದೇವಸ್ಥಾನ ಪ್ರತಿಷ್ಠೆ ಮಾಡಿದ ತಕ್ಷಣ ಅಲ್ಲೊಂದು ಸಂಸ್ಕೃತ ಶಾಲೆಯನ್ನು ತೆರೆದರು. ಆನಂತರ ಮಲೆಯಾಳ ಶಾಲೆಯನ್ನು ಸ್ಥಾಪಿಸಿದರು. ಶಿವಗಿರಿಯಲ್ಲಿ ಇಂಗ್ಲಿಷ್, ಮಲಯಾಳ ಶಾಲೆಗಳನ್ನು ತೆರೆದರು. ಮುಂದೆ ಆಲುವ ಅದ್ವೈತಾಶ್ರಮದಲ್ಲಿ ಸ್ಥಾಪಿಸಿದ ಶಾಲೆಗಳಲ್ಲಿ ಸಂಸ್ಕೃತ ಶಾಲೆಯನ್ನು ಶಿವಗಿರಿಗೆ ಸ್ಥಳಾಂತರಿಸಿದರು. ಶಿವಗಿರಿಯಲ್ಲಿ ಮಲಯಾಳ, ಇಂಗ್ಲಿಷ್ ಸ್ಕೂಲ್‌ಗಳನ್ನು ತೆರೆದರು.
ಕೃಪೆ: ‘ಶ್ರೀ ನಾರಾಯಣ ಗುರು ವಿಜಯ ದರ್ಶನ’ ಗ್ರಂಥ