ವಸತಿ ಸೌಕರ್ಯಗಳುಳ್ಳ ಶಾಲೆಗಳ ಸ್ಥಾಪನೆ

Update: 2022-02-03 07:25 GMT

ಭಾಗ 7

ವಸತಿ ಸೌಕರ್ಯವುಳ್ಳ ಶಾಲೆಗಳ ಸ್ಥಾಪನೆ ಮಾಡಿದ್ದು, ಮತ್ತು ಅಂತಹ ಶಾಲೆಗಳಿಗೆ ಆದ್ಯತೆ ಕೊಟ್ಟದ್ದು ನಾರಾಯಣ ಗುರುಗಳು ಶಿಕ್ಷಣ ರಂಗದಲ್ಲಿ ಮಾಡಿದ ಪರಿವರ್ತನಾಶೀಲ ಮಹಾ ಕ್ರಾಂತಿಯ ಮಹತ್ವದ ಹೆಜ್ಜೆಯಾಗಿತ್ತು. ಆಲುವ ಮತ್ತು ವರ್ಕಳದಲ್ಲಿ ವಸತಿ ಸೌಕರ್ಯವುಳ್ಳ ಶಾಲೆಗಳನ್ನು ತೆರೆದರು. ಪ್ರಾಯಶಃ ರಾಮನ್ ಪಿಳ್ಳೆ ಅವರಲ್ಲಿ ವಿದ್ಯಾಭ್ಯಾಸ ಮಾಡುವಾಗ ವರಣಪಳ್ಳಿ ಈಳವ ಮನೆತನದವರು ಈಳವ ವಿದ್ಯಾರ್ಥಿಗಳಿಗೆ ಊಟ, ವಸತಿ ಸೌಕರ್ಯಗಳನ್ನು, ಧರ್ಮಾರ್ಥವಾಗಿ ಒದಗಿಸುತ್ತಿದ್ದುದರ ಅನುಕರಣೆಯೇ ಅವರಿಗೆ ಇಂತಹ ಯೋಜನೆಗೆ ಪ್ರೇರಣೆ ಆಗಿರಬಹುದು. ಈ ಶಾಲೆಗಳಲ್ಲಿ ಎಲ್ಲ ಜಾತಿ, ಧರ್ಮ, ಪಂಗಡಗಳ ವಿದ್ಯಾರ್ಥಿಗಳು ಇರುತ್ತಿದ್ದರು. ಇಂತಹ ಶಿಕ್ಷಣ ವ್ಯವಸ್ಥೆಯಿಂದ ಜಾತಿ ಭೇದಗಳ ತಾರತಮ್ಯಗಳು ಕಡಿಮೆ ಆಗುತ್ತವೆ ಎಂದು ಗುರುಗಳು ನಂಬಿದ್ದರು.

ಅವರು ದೇವಸ್ಥಾನಕ್ಕಿಂತ ಶಿಕ್ಷಣದ ವ್ಯವಸ್ಥೆಗೆ ಹೆಚ್ಚು ಪ್ರಾಶಸ್ತ್ಯವನ್ನು ಕೊಟ್ಟರು. ದೇವಸ್ಥಾನಗಳನ್ನೇ ಮಾಧ್ಯಮವಾಗಿ ಮಾಡಿಕೊಂಡು ಶಾಲೆಗಳನ್ನು ತೆರೆಯಲು ಆಜ್ಞೆ ಮತ್ತು ಅನುವು ಮಾಡುತ್ತಿದ್ದರು. ನಾರಾಯಣ ಗುರುಗಳ ದೇವಸ್ಥಾನಗಳ ಪ್ರಮುಖ ಉದ್ದೇಶಗಳು ಶಿಕ್ಷಣ, ಸಮಾಜೋತ್ಥಾನ ಮತ್ತು ಸಾಮಾಜಿಕ ಸಮಾನತೆಗಳನ್ನು ಸಾಧಿಸುವುದೇ ಆಗಿತ್ತು. ದೇವಸ್ಥಾನವನ್ನು ಕಟ್ಟಿದಾಗ ಅದರ ಮುಖಾಂತರ ಶಾಲೆಯನ್ನು ತೆರೆಯಲು ಮತ್ತು ಅದಕ್ಕೆ ಅನುಕೂಲಗಳನ್ನು ಕಲ್ಪಿಸಿಕೊಳ್ಳಲು ಸುಲಭವಾಗುತ್ತಿತ್ತು. ಅವರು ಪ್ರತಿಷ್ಠಾಪಿಸಿದ ಬಹುತೇಕ ಎಲ್ಲ ದೇವಸ್ಥಾನಗಳು ಆಧುನಿಕ ಶಿಕ್ಷಣದ ವ್ಯವಸ್ಥೆಗಳುಳ್ಳ ಶಾಲೆಗಳನ್ನು ಹೊಂದಿರುವುದನ್ನು ಗಮನಿಸಿದಾಗ ಶಿಕ್ಷಣದ ಬಗೆಗೆ ಅವರ ನಿಲುವು, ಒಲುವು ಸ್ಪಷ್ಟವಾಗುವುದು.

1903ರಲ್ಲಿ ಎಸ್‌ಎನ್‌ಡಿಪಿಯ ಸಂಘಟನೆ ಆದ ಮೇಲೆ ಆ ಸಂಘಟನೆ ಮತ್ತು ದೇವಸ್ಥಾನಗಳು ಅಭಿನ್ನವಾಗಿ ಶಿಕ್ಷಣ ಮತ್ತು ಸಾಮಾಜಿಕ ಪರಿವರ್ತನೆಯ ಕೆಲಸವನ್ನು ಮಾಡಲಾರಂಭಿಸಿದವು. ದೇವಸ್ಥಾನಗಳು ಗುರುಗಳಿಂದ ಪ್ರತಿಷ್ಠಾಪಿತವಾಗಿ ಅವರ ಹೆಸರಿನಲ್ಲೇ ನೋಂದಣಿ ಮಾಡುತ್ತಿದ್ದರು. ಅಂತೆಯೇ ಎಸ್‌ಎನ್‌ಡಿಪಿಯ ಸ್ಥಿರಾಧ್ಯಕ್ಷರು ಗುರುಗಳೇ ಆಗಿದ್ದರು. ಆದ್ದರಿಂದ ಇವೆರಡರ ಕಾರ್ಯಪ್ರಣಾಳಿಗಳು ಅಭಿನ್ನವಾಗಿದ್ದುದರಿಂದ ಶೈಕ್ಷಣಿಕ, ನೈತಿಕ, ಶುಚಿತ್ವ, ಸಾಂಸ್ಕೃತಿಕ, ಧಾರ್ಮಿಕ, ಔದ್ಯೋಗಿಕ ಮುಂತಾದ ಸಮಗ್ರ ಸಾಮಾಜಿಕ ಪರಿವರ್ತನೆ ಮತ್ತು ಸಮಾಜೋತ್ಥಾನದ ಕೆಲಸಕ್ಕೆ ಸುಲಭವಾಗುತ್ತಿತ್ತು. ಆ ಸಂಘಟನೆಯ ಮೂಲಕವೇ ಶಿಕ್ಷಣಕ್ಕೆ ಸಂಬಂಧಪಟ್ಟ ಸಂದೇಶಗಳನ್ನು ಕೊಡುತ್ತಿದ್ದರು. ಅವರ ಸಂದೇಶಗಳನ್ನು ವಿವೇಕೋದಯ, ಮಿತವಾದಿ, ಧರ್ಮಪತ್ರಿಕೆ, ದೇಶಾಭಿಮಾನಿ, ಕೇರಳ ಕೌಮುದಿ ಮುಂತಾದ ಪತ್ರಿಕೆಗಳು ಮನೆ ಮನೆಗಳಿಗೆ ಹೊತ್ತೊಯ್ಯುತ್ತಿದ್ದವು. ಒಮ್ಮೆ ಶಿಕ್ಷಣದ ಬಗೆಗೆ ಈ ರೀತಿಯ ಸಂದೇಶವನ್ನು ಕೊಟ್ಟರು.

‘‘ಅವರ್ಣರಲ್ಲಿ ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದವರು ಬಹಳ ಕಡಿಮೆ. ಕೆಲವು ವರ್ಷಗಳಿಂದೀಚೆಗೆ ವಿದ್ಯಾಭ್ಯಾಸಕ್ಕಾಗಿ ಜನರಲ್ಲಿ ಆತುರತೆ ಉಂಟಾಗಿರುವುದೇನೋ ನಿಜ. ಯಾವುದೇ ಜಾತಿಯ ಅಭಿವೃದ್ಧಿಗೂ ವಿದ್ಯಾಭ್ಯಾಸವೇ ಕಾರಣವಾಗಿರುವುದರಿಂದ ಅದರ ಪ್ರಚಾರವನ್ನು ಮಾಡಬೇಕು. ಪ್ರೌಢ ವಿದ್ಯಾಭ್ಯಾಸವನ್ನು ಪಡೆಯಲಿಕ್ಕೆ ಎಲ್ಲರಿಗೂ ಧನ ಸಹಾಯವಿಲ್ಲ. ಸಾಧಾರಣವಾಗಿ ಐಶ್ವರ್ಯವಂತರೆಲ್ಲಾ, ವಿದ್ಯಾಕಾಂಕ್ಷಿಗಳಾದ ಬಡ ವಿದ್ಯಾರ್ಥಿಗಳು ಹೊರಗಿನ ಪಟ್ಟಣಗಳಲ್ಲಿ ಹೋಗಿ ಅಧ್ಯಯನ ಮಾಡುವಂತೆ ಧನ ಸಹಾಯ ಮಾಡಬೇಕು. ಹೀಗೆ ಮಾಡುವುದರಿಂದ ಸಮಾಜಕ್ಕೆ ಹಿತವಾಗುವುದು. ಸಂಸ್ಕೃತಕ್ಕಿರುವ ಪ್ರಾಮುಖ್ಯತ ಮೆಲ್ಲನೆ ಕಡಿಮೆಯಾಗುತ್ತಾ ಬರುತ್ತಿದೆ. ಇಂಗ್ಲಿಷ್ ಭಾಷೆಯು ಈಗ ಬಹಳ ಮುಖ್ಯವಾಗಿರುವುದರಿಂದ ಅದರ ಕಡೆಗೆ ನಾವು ಗಮನ ಕೊಡಬೇಕು. ನಮ್ಮ ಜಾತಿಯ ಗಂಡಸರು ಮಾತ್ರವಲ್ಲ, ಹೆಂಗಸರೂ ವಿದ್ಯಾಭ್ಯಾಸವನ್ನು ಮಾಡಬೇಕು. ಇಂತಹ ವಿಷಯಗಳಲ್ಲಿ ಅವರು ಹಿಂದುಳಿಯಬಾರದು’’

‘‘ಪ್ರತಿ ಗ್ರಾಮಗಳಲ್ಲೂ, ದೇವಸ್ಥಾನಗಳಲ್ಲೂ ಸಾಹಿತ್ಯ ಸಂಘ ಮತ್ತು ವಾಚನಾಲಯಗಳು ಇರಬೇಕು. ಅವು ಜನರಿಗೆ ವಿದ್ಯೆಯ ಅಗತ್ಯತೆಯ ಪ್ರಚಾರಗಳನ್ನು ಮಾಡಬೇಕು. ಅವುಗಳಿಗಾಗಿ ಸಂಘಟನೆಗಳನ್ನು ಕಟ್ಟಿಕೊಂಡು ಅವುಗಳ ಮುಖಾಂತರ ಕೆಲಸ ಮಾಡಬಹುದು. ಹಣವಂತರು ಇದಕ್ಕೆ ದೇಣಿಗೆಯನ್ನು ಕೊಟ್ಟು ಪುರಸ್ಕರಿಸಬೇಕು’’ ಎಂದು ಗುರುಗಳು ತಿಳಿಸುತ್ತಿದ್ದರು.

ತಿರುವಾಂಕೂರು ಸಂಸ್ಥಾನದಲ್ಲಿ ಈಳವರಾದಿಯಾಗಿ ಯಾವುದೇ ಅಸ್ಪಶ್ಯರಿಗೂ ಸರಕಾರಿ ಶಾಲೆಗಳಲ್ಲಾಗಲೀ, ಸಾರ್ವಜನಿಕ ಶಾಲೆಗಳಲ್ಲಾಗಲೀ ಅಥವಾ ಖಾಸಗಿ ಶಾಲೆಗಳಲ್ಲಾಗಲಿ ಪ್ರವೇಶ ವಿರಲಿಲ್ಲ. ಆದರೆ ಸರಕಾರ ವಿದ್ಯೆಯ ಹೆಸರಿನಲ್ಲಿ ಶೂದ್ರರಿಂದಲೂ ತೆರಿಗೆಯನ್ನು ಪಡೆಯುತ್ತಿತ್ತು. ಸರಕಾರ ಶೂದ್ರಾದಿ ಅವರ್ಣರಿಂದ ಶಿಕ್ಷಣ ತೆರಿಗೆಯನ್ನು ಕಡ್ಡಾಯವಾಗಿ ಪಡೆದು ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಕೇವಲ ಸವರ್ಣರಿಗೆ ಮಾತ್ರ ಸೀಮಿತಗೊಳಿಸಿತ್ತು. ಅವರ್ಣರು ತಮ್ಮದೇ ಆದ ಆಧುನಿಕ ಶಿಕ್ಷಣದ ಶಾಲೆಗಳನ್ನು ಕಟ್ಟಿಕೊಳ್ಳಲು ಕೂಡ ಸರಕಾರ ಅನುಮತಿ ಕೊಡುತ್ತಿರಲಿಲ್ಲ. ಶೋಷಿತ ಜನಾಂಗ ವಿದ್ಯಾವಂತರಾಗುವುದನ್ನು ಮೇಲ್ವರ್ಗದ ಹಿಂದೂಗಳು ಮತ್ತು ಅವರ ಸರಕಾರ ಸಹಿಸುತ್ತಿರಲಿಲ್ಲ.

ಎಲ್ಲೊ ಕೆಲವು ಅವರ್ಣ ಬಾಲಕರಿಗೆ ಸರಕಾರಿ ಶಾಲೆಗಳಲ್ಲಿ ಅಥವಾ ಗುರುಕುಲಗಳಲ್ಲಿ ಪ್ರವೇಶ ಸಿಕ್ಕಿದ್ದರೂ, ಅವರು ಸವರ್ಣರಿಂದ ದೂರದಲ್ಲಿ ಪ್ರತ್ಯೇಕ ಕುಳಿತಿರಬೇಕಾಗಿತ್ತು. ಉಪಾಧ್ಯಾಯರಾಗಲಿ, ಸವರ್ಣ ವಿದ್ಯಾರ್ಥಿಗಳಾಗಲಿ ಅವರ ಸಮೀಪಕ್ಕೆ ಬರುವಂತಿರಲಿಲ್ಲ. ಇಂತಹ ಹೇಯವಾದ ತಿರಸ್ಕೃತ ಪರಿಸರದಲ್ಲಿ ಶೂದ್ರಾದಿ ಅವರ್ಣ ವಿದ್ಯಾರ್ಥಿಗಳು ಇರಬೇಕಾಗಿತ್ತು. ಇದು ಕೇವಲ ಕೇರಳಕ್ಕೇ ಸೀಮಿತವಾದ ವಿಷಯವಾಗಿರಲಿಲ್ಲ, ಇಡೀ ಭಾರತದಲ್ಲಿ ಇದೇ ಪರಿಸ್ಥಿತಿ ವಿದ್ಯಮಾನವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಈಳವರಿಗೆ ಸರಕಾರಿ ಶಾಲೆಗಳಲ್ಲಿಯ ಪ್ರವೇಶಕ್ಕಾಗಿ ಸಾರ್ವತ್ರಿಕವಾಗಿ ಚಳವಳಿಯನ್ನು ಮಾಡದೆ ಬೇರೆ ದಾರಿಯೇ ಉಳಿದಿರಲಿಲ್ಲ. ಸವರ್ಣರ ದೇವಸ್ಥಾನಗಳ ಪ್ರವೇಶಕ್ಕೆ ಚಳವಳಿ ಮಾಡದ ಗುರುಗಳು ಶಾಲೆಗಳ ಪ್ರವೇಶಕ್ಕೆ ಚಳವಳಿಯನ್ನು ಬೆಂಬಲಿಸಲೇ ಬೇಕಾಯಿತು. ತಿರುವಾಂಕೂರಿನಲ್ಲಿ ಈ ಚಳವಳಿ ಬಿರುಸಿನಿಂದ ಸಾಗಿತು. ಕೊನೆಗೆ ಸರಕಾರ ಚಳವಳಿಕಾರರಿಗೆ ಮಣಿದು ಅಸ್ಪಶ್ಯರಿಗೂ ಸರಕಾರಿ ಶಾಲೆಗಳಲ್ಲಿ ಪ್ರವೇಶವನ್ನು ಕೊಟ್ಟಿತು.

‘‘ದೇವಸ್ಥಾನಗಳನ್ನು ಕಟ್ಟುವುದನ್ನು ಇನ್ನು ಸಾಕು ಮಾಡಿರಿ, ಬದಲಾಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಕೊಳ್ಳಿರಿ. ದೇವಸ್ಥಾನಕ್ಕೆ ಪೂಜೆಗಾಗಿ ಭಕ್ತಿಯಿಂದ ಹೂ ಹಣ್ಣುಗಳನ್ನು ಕೊಂಡೊಯ್ಯುವಂತೆ ನಿಮ್ಮ ಮಕ್ಕಳನ್ನು ಶ್ರದ್ಧಾ ಭಕ್ತಿಯಿಂದ ಶಾಲೆಯೊಳಗೆ ಕರೆದೊಯ್ದಿರಿ, ಸಂಘಟಿತರಾಗಿ ಶಕ್ತಿಯನ್ನು ಪಡೆದು ಆ ಶಕ್ತಿಯಂದಲೇ ಭವಿಷ್ಯದ ಜನಾಂಗಕ್ಕೆ ವಿದ್ಯೆಯನ್ನು ಕೊಡಿಸಿರಿ’’ ಎಂದು ಗುರುಗಳು ಸಮಾಜಕ್ಕೆ ಕರೆ ಕೊಟ್ಟರು.
ಶತಮಾನಗಳಿಂದ ಅಕ್ಷರ ಜ್ಞಾನದಿಂದ ವಂಚಿತರಾಗಿದ್ದ ಶೂದ್ರರೂ ಕೂಡ ಶಿಕ್ಷಣದ ಬಗೆಗೆ ಅಲಕ್ಷವನ್ನೇ ಹೊಂದಿದ್ದ ದಿನಗಳವು. ಅಲ್ಲದೆ ಬುದ್ಧಿವಂತ ಜನ ಹೇಳುವಂತೆ ಲಕ್ಷ್ಮೀ ಮತ್ತು ಸರಸ್ವತಿಯರು ಒಂದೆಡೆ ಇರಲಾರರು ಎಂದು ದೃಢವಾಗಿ ನಂಬಿರುವ ಅವರ್ಣರೊಂದಿಗೆ ಲಕ್ಷ್ಮೀ ಸರಸ್ವತಿಯರಿಬ್ಬರೂ ಇದ್ದಿರಲಿಲ್ಲ. ಎಲ್ಲಿ ಸರಸ್ವತಿ ವಾಸಿಸುವಳೋ ಅಲ್ಲಿಯೇ ಲಕ್ಷ್ಮೀ ನಿವಾಸವಾಗಿರುತ್ತಾಳೆ ಎನ್ನುವ ಸತ್ಯ ಶೋಷಿತರಿಗೆ ತಿಳಿದಿರಲಿಲ್ಲ. ತಮ್ಮ ಮಕ್ಕಳು ಶಾಲೆಗೆ ಹೋಗಿ ಏನಾಗಬೇಕು ಎನ್ನುವ ಉಪೇಕ್ಷೆ ಭಾವನೆಗಳನ್ನೇ ಹೊಂದಿದ್ದ ಶೂದ್ರರನ್ನು ಶಾಲೆಯ ಮೆಟ್ಟಿಲೇರಿಸುವುದೇ ಹರಸಾಹಸವಾಗಿದ್ದ ದಿನಗಳವು. ಅಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಆರ್ಥಿಕ ಮುಗ್ಗಟ್ಟು ಶೂದ್ರಾದಿ ಅವರ್ಣರನ್ನು ಕಾಡುತ್ತಿದ್ದವು.

ಮಕ್ಕಳು ಕುಟುಂಬದವರಿಗೆ ಮನೆ ಕೆಲಸ ಮತ್ತು ಹೊಲಗದ್ದೆಗಳಲ್ಲಿಯ ಕೆಲಸಗಳಿಗೆ, ಪಶುಗಳನ್ನು ಕಾಯುವ ಕೆಲಸಗಳಿಗೆ ಉಪಯೋಗವಾಗುತ್ತಿದ್ದರು. ಅಂದು ಪ್ರಚಲಿತವಿದ್ದ ಅವಿಭಕ್ತ ಮಾತೃಪ್ರಧಾನ ಅಳಿಯ ಸಂತಾನ ಕುಟುಂಬದಲ್ಲಿ ಮನೆಯಲ್ಲಿರುವ ಎಲ್ಲ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಷ್ಟವಾಗುತ್ತಿತ್ತು. ಮಕ್ಕಳು ನೇರವಾಗಿ ತಂದೆ-ತಾಯಂದಿರ ಅಧೀನದಲ್ಲಿರದ ಮನೆಯ ಯಜಮಾನನ ಮರ್ಜಿಯಲ್ಲಿರ ಬೇಕಾಗಿದ್ದ ದಿನಗಳು. ಈ ಅವಿಭಕ್ತವಾದ ದೊಡ್ಡ ಕುಟುಂಬಗಳು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿವರ್ತನೆ ಮತ್ತು ಸಮಾಜೋತ್ಥಾನದ ಬೆಳವಣಿಗೆಗಳಿಗೆ ತೊಡಕಾಗಿದ್ದವು.

ಮೌಲ್ಯಾಧಾರಿತ ಮಾನವೀಯ ಸೂಕ್ಷ್ಮ ಮನೋಭಾವ ಸಂಬಂಧಗಳ ಸಂವೇದನಶೀಲ ಭಾವನೆಗಳ ಬೆಳವಣಿಗೆಗೆ ಈ ಕುಟುಂಬ ವ್ಯವಸ್ಥೆಗಳು ಸಹಕಾರಿಗಳಾಗಿದ್ದವೆನ್ನುವುದೇನೋ ನಿಜ. ಅಶಕ್ತರು, ರೋಗಿಗಳು, ಅಂಗವಿಕಲರು, ಮುದುಕರು, ವಿಧವೆಯರಿಗೆ ಸುರಕ್ಷಿತ ಆಶ್ರಯ ತಾಣಗಳಾಗಿದ್ದವು. ಹೀಗೆ ಅನೇಕ ವಿಷಯಗಳಲ್ಲಿ ಈ ಕುಟುಂಬ ವ್ಯವಸ್ಥೆ ಬಹುಮುಖ ಪ್ರಯೋಜನಕಾರಿಯಾಗಿತ್ತು ಎನ್ನುವುದು ದಿಟವಾಗಿತ್ತು. ಆದರೆ ವ್ಯಕ್ತಿಯ ಬಹುಮುಖ ವಿಕಾಸಕ್ಕೆ ಇವು ಮಾರಕವಾಗಿದ್ದವು. ಈ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಬದಲಾವಣೆ ಆಗದೆ ಸಾಮಾಜಿಕ ಮತ್ತು ಶೈಕ್ಷಣಿಕ ಪರಿವರ್ತನೆ ಆಗುವುದು ಅಸಾಧ್ಯವಾಗಿತ್ತು. ಆದ್ದರಿಂದ ಗುರುಗಳು ಈ ಕೌಟುಂಬಿಕ ಹಿನ್ನೆಲೆಗಳನ್ನೇ ಬದಲಿಸಲು ಕರೆಕೊಟ್ಟರು.

ಕೃಪೆ: ‘ಶ್ರೀ ನಾರಾಯಣ ಗುರು ವಿಜಯ ದರ್ಶನ’ ಗ್ರಂಥ

Writer - ಬಾಬು ಶಿವ ಪೂಜಾರಿ

contributor

Editor - ಬಾಬು ಶಿವ ಪೂಜಾರಿ

contributor

Similar News