ಬಹುಮುಖ ವ್ಯಕ್ತಿತ್ವದ ಡಾ. ಶ್ರೀನಿವಾಸಗೌಡ
ಅವರ ಮಿತ್ರಕೂಟದಲ್ಲಿ ಒಬ್ಬರಾದ ಅಗ್ರಹಾರ ಕೃಷ್ಣಮೂರ್ತಿಯವರು, ‘‘ವೈದ್ಯರಾಗಿದ್ದ ಅವರಿಗೆ ಹಲವು ಆಸಕ್ತಿಗಳಿದ್ದವು. ಸಾಹಿತ್ಯದಲ್ಲಿ ಅವರಿಗೆ ನಾಟಕ ಪ್ರಕಾರ ಅತ್ಯಂತ ಪ್ರಿಯ. ಅದರಲ್ಲೂ ಇಂಗ್ಲಿಷ್ ನಾಟಕಗಳು. ವುಡಿ ಅಲೆನ್‌ನ ನಾಟಕಗಳನ್ನು ಬಹಳವಾಗಿ ಮೆಚ್ಚಿದ್ದವರು. ಉತ್ಕೃಷ್ಟ ಹಾಸ್ಯ, ವಿಡಂಬನೆ ಬಳಸಿ ನಾಟಕಗಳನ್ನು ರಚಿಸಿದವನು ವುಡಿ ಅಲೆನ್. ಶ್ರೀನಿವಾಸಗೌಡರು ಮೂಲಭೂತವಾಗಿ ಹಾಸ್ಯಪ್ರಜ್ಞೆಯನ್ನು ಕಾಪಾಡಿಕೊಂಡು ಬಂದಂಥವರು. ವುಡಿ ಅಲೆನ್ ನಾಟಕಗಳಲ್ಲಿನ ಅನೇಕ ಸನ್ನಿವೇಶಗಳನ್ನು ಅವರು ಬಾಯಿಪಾಠದಲ್ಲಿ ಹೇಳಿಬಿಡುತ್ತಿದ್ದರು’’ ಎಂದು ನೆನಪು ಮಾಡಿಕೊಳ್ಳುತ್ತಾರೆ.
ಕೆ.ಎಂ.ಶ್ರೀನಿವಾಸಗೌಡ ಎಂದಾಕ್ಷಣ ನೆನಪಾಗುವುದು ಅವರ ಬಹುಮುಖ ವ್ಯಕ್ತಿತ್ವ. ವೈದ್ಯರಾಗಿ ವೃತ್ತಿಗೆ ಗೌರವ ತರುವಂತಹ ಸೇವೆ ಸಲ್ಲಿಸಿದ್ದರು. ಕೆಂಪೇಗೌಡ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾಗಿ ದಕ್ಷ ಆಡಳಿತಗಾರರೆಂಬ ಖ್ಯಾತಿ ಗಳಿಸಿದ್ದರು. ಆನಂತರ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯದ ಕುಲಸಚಿವ ಸ್ಥಾನ ಅಲಂಕರಿಸಿ; ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿ, ಆ ಹುದ್ದೆಯ ಘನತೆಯನ್ನು ಹೆಚ್ಚಿಸಿದ್ದರು. ಮುಂದೆ ಬರುವವರಿಗೆ ಮಾದರಿ ಹಾಕಿಕೊಟ್ಟಿದ್ದರು. ಓದಿದ, ಸೇವೆ ಸಲ್ಲಿಸಿದ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಆ ಕಾಲಕ್ಕೇ ಅಪರೂಪವೆನ್ನುವ, ಕ್ಯಾನ್ಸರ್ ರೋಗಿಗಳಿಗೆ ನೆರವಾಗುವ ಅಸ್ಥಿಮಜ್ಜೆ ನೋಂದಣಿ ಮತ್ತು ಮಾಹಿತಿ ಕೇಂದ್ರವನ್ನು ಸ್ಥಾಪಿಸಲು ತಮ್ಮೆಲ್ಲ ಶ್ರಮ ಸುರಿದಿದ್ದರು. ಪ್ರಪಂಚದಾದ್ಯಂತ ಹರಿದು ಹಂಚಿಹೋಗಿದ್ದ ಹಳೆ ವಿದ್ಯಾರ್ಥಿಗಳನ್ನೆಲ್ಲ ಸಂಪರ್ಕಿಸಿ, ಸಹಾಯ ಪಡೆದು ಸಾಕಾರಗೊಳಿಸಿದ್ದರು. ಇದು ನಿಜಕ್ಕೂ ವೈದ್ಯರಾಗಿ ವೈದ್ಯಕೀಯ ಕ್ಷೇತ್ರಕ್ಕೆ ಗೌಡರು ಕೊಟ್ಟ ಮಹತ್ವದ ಕೊಡುಗೆ.
ಇಂತಹ ಶ್ರೀನಿವಾಸಗೌಡರು ಹುಟ್ಟಿ ಬೆಳೆದದ್ದು ಬೆಂಗಳೂರು ನಗರದಲ್ಲಿ. ಹಣಕಾಸಿನ ಕೊರತೆ ಇಲ್ಲದ ವಿದ್ಯಾವಂತ ಕುಟುಂಬದಲ್ಲಿ. ನಗರದ ಎಲೀಟ್ ಪರಿಸರ ಅವರನ್ನು ಹತ್ತು ಹಲವು ಕ್ಷೇತ್ರಗಳತ್ತ ಆಸಕ್ತಿ ತಳೆಯಲು, ಅಭಿರುಚಿ ಬೆಳೆಸಿಕೊಳ್ಳಲು ಅನುಕೂಲ ಕಲ್ಪಿಸಿತು. ಗೌಡರು ಸಹಜವಾಗಿಯೇ ಸಾಹಿತ್ಯ, ಕ್ರೀಡೆ, ರಂಗಭೂಮಿಯ ಒಲವುಳ್ಳವರಾಗಿದ್ದರು. ಜೊತೆಗೆ ನಗರಜೀವನದ ಕಾಸ್ಮೋ ಕಲ್ಚರ್ ಅನ್ನು ಕರಗತ ಮಾಡಿಕೊಂಡಿದ್ದರು. ಬೆಂಗಳೂರಿನ ಹಲವು ಪ್ರತಿಷ್ಠಿತ ಕ್ಲಬ್‌ಗಳ ಸದಸ್ಯರಾಗಿದ್ದರು. ಪ್ರತಿದಿನ ಬೆಳಗ್ಗೆ ತಪ್ಪದೆ ವಾಕ್ ಮಾಡುತ್ತಿದ್ದರು. ಹಾಗೆಯೇ ಸಂಜೆ ಕೊನೆಪಕ್ಷ ಎರಡು ಕ್ಲಬ್‌ಗಳಿಗಾದರೂ ಭೇಟಿ ನೀಡುತ್ತಿದ್ದರು. ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದರು. ವೈಚಾರಿಕ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದರು. ಬದುಕಿನುದ್ದಕ್ಕೂ ಜಾತ್ಯತೀತ ನಿಲುವಿಗೆ ಬದ್ಧರಾಗಿದ್ದರು. ಅನ್ಯಾಯ ಅಕ್ರಮ ಕಂಡಾಕ್ಷಣ ಲೆಟರ್ಸ್ ಟು ಎಡಿಟರ್ ಪತ್ರಗಳನ್ನು ಬರೆದು ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದರು. ಇವೆಲ್ಲವುಗಳ ನಡುವೆಯೂ ಅಪಾರ ಜೀವನಪ್ರೀತಿಯನ್ನು ಉಳಿಸಿಕೊಂಡಿದ್ದರು. 80ರ ದಶಕದಲ್ಲಿಯೇ ಬೆಂಗಳೂರಿನಲ್ಲಿ ಇಂಗ್ಲಿಷ್ ನಾಟಕಗಳಲ್ಲಿ ನಟಿಸಿ, ನಿರ್ದೇಶನ ಮಾಡಿದ್ದ ಶ್ರೀನಿವಾಸಗೌಡರು, ‘ಬೆಂಗಳೂರು ಲಿಟಲ್ ಥಿಯೇಟರ್’ ಎಂಬ ತಂಡ ಕಟ್ಟಿದ್ದರು. ಉತ್ತಮ ಅಭಿರುಚಿಯ ನಾಟಕಗಳಿಗೆ ವೇದಿಕೆ ಕಲ್ಪಿಸಿಕೊಡುತ್ತಿದ್ದರು. ಮುಕ್ತಚರ್ಚೆಯನ್ನು ಹುಟ್ಟುಹಾಕಿ ಯುವಕರನ್ನು ಆಕರ್ಷಿಸಿ ರಂಗಭೂಮಿ ಸಂಸ್ಕೃತಿಯನ್ನು ಸಮೃದ್ಧಗೊಳಿಸಿದರು. ಗೌಡರ ಇಂಗ್ಲಿಷ್ ನಾಟಕಗಳ ಬಗೆಗಿನ ಗೀಳನ್ನು ಬಹಳ ಹತ್ತಿರದಿಂದ ಬಲ್ಲ, ಅವರ ಮಿತ್ರಕೂಟದಲ್ಲಿ ಒಬ್ಬರಾದ ಅಗ್ರಹಾರ ಕೃಷ್ಣಮೂರ್ತಿಯವರು, ‘‘ವೈದ್ಯರಾಗಿದ್ದ ಅವರಿಗೆ ಹಲವು ಆಸಕ್ತಿಗಳಿದ್ದವು. ಸಾಹಿತ್ಯದಲ್ಲಿ ಅವರಿಗೆ ನಾಟಕ ಪ್ರಕಾರ ಅತ್ಯಂತ ಪ್ರಿಯ. ಅದರಲ್ಲೂ ಇಂಗ್ಲಿಷ್ ನಾಟಕಗಳು. ವುಡಿ ಅಲೆನ್‌ನ ನಾಟಕಗಳನ್ನು ಬಹಳವಾಗಿ ಮೆಚ್ಚಿದ್ದವರು. ಉತ್ಕಷ್ಟ ಹಾಸ್ಯ, ವಿಡಂಬನೆ ಬಳಸಿ ನಾಟಕಗಳನ್ನು ರಚಿಸಿದವನು ವುಡಿ ಅಲೆನ್. ಶ್ರೀನಿವಾಸಗೌಡರು ಮೂಲಭೂತವಾಗಿ ಹಾಸ್ಯಪ್ರಜ್ಞೆಯನ್ನು ಕಾಪಾಡಿಕೊಂಡು ಬಂದಂಥವರು. ವುಡಿ ಅಲೆನ್ ನಾಟಕಗಳಲ್ಲಿನ ಅನೇಕ ಸನ್ನಿವೇಶಗಳನ್ನು ಅವರು ಬಾಯಿಪಾಠದಲ್ಲಿ ಹೇಳಿಬಿಡುತ್ತಿದ್ದರು’’ ಎಂದು ನೆನಪು ಮಾಡಿಕೊಳ್ಳುತ್ತಾರೆ.
ನನಗೆ ಶ್ರೀನಿವಾಸಗೌಡರನ್ನು ಕಂಡಾಗೆಲ್ಲ, ನಗರದಲ್ಲಿ ಹುಟ್ಟಿ ಬೆಳೆದವರು, ಇಂಗ್ಲಿಷ್ ಸಾಹಿತ್ಯ, ನಾಟಕಗಳನ್ನು ಇಷ್ಟಪಡುತ್ತಿದ್ದವರು, ಕಾಸ್ಮೋ ಕಲ್ಚರ್‌ಗೆ ಒಗ್ಗಿಹೋಗಿದ್ದವರು.. ದೇಸಿ ಲಂಕೇಶರ ಸಂಪರ್ಕಕ್ಕೆ ಬಂದದ್ದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತಿತ್ತು. ಈ ಬಗ್ಗೆ ಹಿರಿಯ ಪತ್ರಕರ್ತರಾದ ರವೀಂದ್ರ ರೇಶ್ಮೆಯವರನ್ನು ಕೇಳಿದಾಗ, ‘‘1970-80ರಲ್ಲಿ ಗ್ಯಾಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಪಿ.ಲಂಕೇಶರು, ಅದಾಗಲೇ ಕನ್ನಡ ಸಾಹಿತ್ಯಲೋಕದಲ್ಲಿ ಖ್ಯಾತಿ ಗಳಿಸಿದ್ದರು. ಆಗಾಗ ಪ್ರಜಾವಾಣಿಯಲ್ಲಿ ಅಂಕಣ ಬರೆಯುತ್ತಿದ್ದರು. ಒಂದು ಸಲ ಅವರ ಬರಹ ಪ್ರಕಟವಾಗಲಿಲ್ಲ, ಕಾರಣವೂ ತಿಳಿಯಲಿಲ್ಲ. ಸಿಟ್ಟಿಗೆದ್ದ ಲಂಕೇಶರು ತಮ್ಮದೇ ಹೆಸರಿನ ವಾರಪತ್ರಿಕೆ ಆರಂಭಿಸಿದರು. ಪತ್ರಿಕೆಯ ಉದ್ಘಾಟನಾ ಸಮಾರಂಭವನ್ನು ಬೆಂಗಳೂರಿನ ಲ್ಯಾವೆಲ್ಲೆ ರೋಡ್‌ನ ಶ್ರೀರಾಜ್ ಹೋಟೆಲ್‌ನಲ್ಲಿಟ್ಟು, ಪತ್ರಿಕೆ ಬಿಡುಗಡೆಗೆ ಪ್ರಜಾವಾಣಿಯ ಮಾಲಕರು ಮತ್ತು ಸಂಪಾದಕರಾದ ಹರಿಕುಮಾರ್‌ರನ್ನು ಆಹ್ವಾನಿಸಿದರು. ಹರಿಕುಮಾರ್ ಸ್ನೇಹಿತರಾಗಿದ್ದ ಡಾ.ಶ್ರೀನಿವಾಸಗೌಡರು ಆ ಸಮಾರಂಭಕ್ಕೆ ಆಗಮಿಸಿದ್ದರು. ಲಂಕೇಶರು ಕನ್ನಡದಲ್ಲಿ ನಾಟಕಗಳನ್ನು ಬರೆಯುತ್ತಿದ್ದರು, ಶ್ರೀನಿವಾಸಗೌಡರು ಇಂಗ್ಲಿಷ್ ನಾಟಕಗಳನ್ನು ನಿರ್ದೇಶಿಸುತ್ತಿದ್ದರು. ಈ ನಾಟಕವೇ ಅವರಿಬ್ಬರನ್ನೂ ಒಂದು ಮಾಡಿತ್ತು. ಅಂದು ಶುರುವಾದ ಅವರಿಬ್ಬರ ಸ್ನೇಹ, ಲಂಕೇಶರ ಕೊನೆಯ ದಿನದವರೆಗೂ ಮುಂದುವರಿದಿತ್ತು’’ ಎಂದರು. ಇವರಿಬ್ಬರು ಹತ್ತಿರವಾಗಲು ನಾಟಕ ನೆಪವಾದರೂ, ನಾನು ಲಂಕೇಶ್ ಪತ್ರಿಕೆಯಲ್ಲಿದ್ದಾಗ, ಅಲ್ಲಿಗೆ ಡಾ.ಗೌಡರು ಬಂದುಹೋಗುತ್ತಿದ್ದಾಗ, ಅವರಿಬ್ಬರು ಹತ್ತಿರವಾಗಲು ಅವರ ಅಭ್ಯಾಸ, ಹವ್ಯಾಸ ಮತ್ತು ಅಭಿರುಚಿಗಳು ಕಾರಣ ಎನ್ನುವುದು ನಿಧಾನವಾಗಿ ಅರ್ಥವಾಗತೊಡಗಿತು. ಲಂಕೇಶರಿಗೆ ಪ್ರತಿವಾರ ಪತ್ರಿಕೆ ರೂಪಿಸುವುದು, ಬರವಣಿಗೆ ಮುಕ್ಕಾಗದಂತೆ ನೋಡಿಕೊಳ್ಳುವುದರ ನಡುವೆಯೇ, ವಾರಕ್ಕೆರಡು ದಿನ ಕುದುರೆ ರೇಸ್‌ಗೆ ಹೋಗುವ ಅಭ್ಯಾಸವಿತ್ತು. ಹಾಗೆಯೇ ಪತ್ರಿಕೆ ಕಚೇರಿಯಲ್ಲಿಯೇ ವಾರಕ್ಕೆರಡು ದಿನ- ಬುಧವಾರ, ರವಿವಾರ- ಸ್ನೇಹಿತ(ರಾಮಚಂದ್ರ ಶರ್ಮ, ಮೈಸೂರು ಮಠ್, ಬಸವರಾಜ ಅರಸು, ಡಾ.ಗೌಡ, ಶೂದ್ರ ಶ್ರೀನಿವಾಸ್, ಅಗ್ರಹಾರ ಕೃಷ್ಣಮೂರ್ತಿ, ಪ್ರಸನ್ನ, ಎಸ್.ಎಚ್.ರೆಡ್ಡಿ, ಚಿದಾನಂದ ರಾಜಘಟ್ಟ, ಗೌರಿ, ಪ್ರಕಾಶ್ ಬೆಳವಾಡಿ, ಸತ್ಯ, ಮುಕುಂದರಾಜ್)ರೊಂದಿಗೆ ಸೇರಿ ಇಸ್ಪೀಟ್ ಆಡುವ ಖಯಾಲಿಯೂ ಇತ್ತು. ಅಷ್ಟೇ ಅಲ್ಲದೆ, ಲಂಕೇಶರಿಗೆ ಟೆನಿಸ್ ಆಟದ ಬಗ್ಗೆ ಅತಿಯಾದ ವ್ಯಾಮೋಹವಿತ್ತು. ಅದರಲ್ಲೂ ಮಹಿಳೆಯರ ಟೆನಿಸ್ ಆಟವನ್ನು, ಸ್ಟೆಫಿ ಗ್ರಾಫ್ ಮತ್ತು ಮೊನಿಕಾ ಸೆಲೆಸ್ ಪಂದ್ಯವನ್ನು ಅತ್ಯಾಸಕ್ತಿಯಿಂದ ನೋಡುತ್ತಿದ್ದರು. ಸ್ಟೆಫಿಯ ಕೋಚ್, ಟ್ರೈನರ್, ಮೆಂಟರ್ ಆಗಿ, ಟಿವಿಯ ಮುಂದೆ ಕೂತು ತಾವೇ ಆಡಿಸುತ್ತಿರುವವರಂತೆ ತಲ್ಲೀನರಾಗುತ್ತಿದ್ದರು. ರೇಸು, ಇಸ್ಪೀಟು ಮತ್ತು ಟೆನಿಸು- ಲಂಕೇಶರಷ್ಟೇ ಸಮಾನ ಆಸಕ್ತಿ ಮತ್ತು ಅಭಿರುಚಿಗಳನ್ನು ಗೌಡರೂ ಬೆಳೆಸಿಕೊಂಡಿದ್ದರು. ಈ ಮೂರೂ ಸೆಷನ್‌ಗಳಲ್ಲೂ ಲಂಕೇಶರೊಂದಿಗೆ ಪಾಲ್ಗೊಳ್ಳುತ್ತಿದ್ದರು. ಇದಾದ ನಂತರ, ಯಥಾಪ್ರಕಾರ ಸಂಜೆಯ ‘ಕೂತು ಮಾತನಾಡುವ’ ಸಂದರ್ಭದಲ್ಲಿ, ಸಾಹಿತ್ಯ, ರಾಜಕೀಯ ಕುರಿತ ವಿದ್ವತ್ಪೂರ್ಣ ಚರ್ಚೆ ಸಾಮಾನ್ಯವಾಗಿತ್ತು. ವಾದ-ವಿವಾದ-ಭಿನ್ನಾಭಿಪ್ರಾಯ-ಜಗಳ.. ಎಲ್ಲವೂ ಇತ್ತು. ಅದು ಆಧುನಿಕ ಬಸವಣ್ಣನ ಅನುಭವ ಮಂಟಪದಂತಿತ್ತು. ಅದು ಎಲ್ಲರನ್ನು ಬೆಸೆಯುತ್ತಿತ್ತು, ಬೆಳೆಸುತ್ತಿತ್ತು.
ಕುತೂಹಲಕರ ವಿಷಯವೆಂದರೆ, ಲಂಕೇಶರ ಸಹವಾಸಕ್ಕೆ, ಸನಿಹಕ್ಕೆ ಸೆಳೆಯಲ್ಪಟ್ಟವರಲ್ಲೆಲ್ಲ ಲಂಕೇಶರು ‘ಬರೆಯುವ ಸೆಲೆ’ ಹುಡುಕುತ್ತಿದ್ದರು. ಇದ್ದರೆ ಬಸಿದು ಬರೆಯುವಂತೆ ಪ್ರೇರೇಪಿಸುತ್ತಿದ್ದರು, ಪುಸ್ತಕಗಳನ್ನು ಕೊಟ್ಟು ಪ್ರೊ. ಶ್ರೀನಿವಾಸಗೌಡರಲ್ಲಿಯೂ ಗ್ರಹಿಸಿದ್ದು ಗುಡ್ಡದಷ್ಟಿತ್ತು, ಬರಹಕ್ಕಿಳಿಸುವ ತುಡಿತವೂ ಇತ್ತು. ಪತ್ರಿಕೆ ವೇದಿಕೆ ಒದಗಿಸಿಕೊಟ್ಟಿತ್ತು. ಶ್ರೀನಿವಾಸಗೌಡರು ಹೆಚ್ಚಾಗಿ ಬರೆಯುತ್ತಿದ್ದುದು ಕ್ರೀಡೆ ಕುರಿತು. ಅದಕ್ಕಿಂತ ಮುಂಚೆ, ಬಾಲಾಜಿ ಎಂಬ ವೆಟರನ್ ಕ್ರಿಕೆಟ್ ಪ್ಲೇಯರ್ ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದರು. ಅದನ್ನು ಸತ್ಯಮೂರ್ತಿ ಆನಂದೂರು ಕನ್ನಡೀಕರಿಸುತ್ತಿದ್ದರು. ದಿನಪತ್ರಿಕೆಗಳಲ್ಲಿ ಬರುತ್ತಿದ್ದ ಕ್ರೀಡಾ ಸುದ್ದಿಗಳಿಗಿಂತ ಬಾಲಾಜಿಯವರ ಬರಹ ಭಿನ್ನವಾಗಿತ್ತು. ಆದರೆ ಶ್ರೀನಿವಾಸಗೌಡರು ಸಿಕ್ಕಮೇಲೆ, ಕ್ರೀಡೆ ಎಂದಾಕ್ಷಣ ಡಾಕ್ಟರ್ ಎನ್ನುವಂತಾಗಿಹೋಯಿತು. ಕ್ರೀಡೆಯೊಂದಿಗಿದ್ದ ಅವರ ಅನುಭವವನ್ನು ಹೊಸ ನುಡಿಗಟ್ಟುಗಳನ್ನು ಬಳಸಿ, ಭಿನ್ನವಾಗಿ ಬರೆಯುತ್ತಿದ್ದರು. ಬಾಲಾಜಿಯವರದ್ದು ಒಂದು ಮಾದರಿಯಾದರೆ, ಗೌಡರದು ಮತ್ತೊಂದು ಮಾದರಿ. ಅದಕ್ಕಿಂತ ಇದು ಇನ್ನಷ್ಟು ವಿಸ್ತಾರ, ಗ್ರಹಿಕೆ ಮತ್ತು ಒಳನೋಟಗಳನ್ನು ಒಳಗೊಂಡಿರುತ್ತಿತ್ತು. ಇಬ್ಬರು ಸ್ನೇಹಿತರು ಕೂತು ಮಾತನಾಡಿದಷ್ಟು ಸರಳವಾಗಿರುತ್ತಿತ್ತು. ಆದರೆ ಅವರ ಬರವಣಿಗೆಯಲ್ಲೂ ಕೆಲವು ಪದಗಳು ಕಡ್ಲೆ ತಿನ್ನುವಾಗ ಕಲ್ಲು ಸಿಕ್ಕಿದಂತಹ ಅನುಭವವಾಗುತ್ತಿತ್ತು. ಏಕೆಂದರೆ, ಡಾ.ಗೌಡರು ಇಂಗ್ಲಿಷ್‌ನಲ್ಲಿ ಯೋಚಿಸಿ ಕನ್ನಡದಲ್ಲಿ ಬರೆಯುತ್ತಿದ್ದರು. ಇಂಗ್ಲಿಷ್ ಪದಗಳನ್ನು ಬಳಸುತ್ತಿದ್ದರು. ಕೆಂಪಗಿದ್ದರು, ಇಂಗ್ಲಿಷ್ ಮಾತನಾಡುತ್ತಿದ್ದರು, ಕೋಟು ಬೂಟು ಟೈ ಧರಿಸುತ್ತಿದ್ದರು.. ಹೀಗಾಗಿ ಗೆಳೆಯರು ‘ಇಂಗ್ಲಿಷ್ ಗೌಡ’ ಎನ್ನುತ್ತಿದ್ದರು. ಕಾಕತಾಳೀಯವೋ ಏನೋ, ‘ಚಿದಂಬರ ರಹಸ್ಯ’ ಕಾದಂಬರಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಕೂಡ ‘ಇಂಗ್ಲಿಷ್ ಗೌಡ ಎಂಬ ಪದಪ್ರಯೋಗ ಮಾಡಿದ್ದಾರೆ. ತೇಜಸ್ವಿಯವರು ಆ ಕಾದಂಬರಿ ಬರೆಯುವ ಹೊತ್ತಿಗೆ ಡಾ.ಗೌಡರು ತೇಜಸ್ವಿಯವರ ಸ್ನೇಹಿತರಾಗಿದ್ದರು. ಇವರನ್ನು ನೋಡಿಯೇ ಬರೆದರೋ ಅಥವಾ ಅವರ ತಲೆಯಲ್ಲಿ ಬೇರೆ ಇನ್ನಾರಾದರೂ ಇದ್ದರೋ ಗೊತ್ತಿಲ್ಲ!
ಲಂಕೇಶರ ದುಷ್ಟಕೂಟದ ಸದಸ್ಯರಲ್ಲಿ ಒಬ್ಬರಾಗಿದ್ದ ಡಾ.ಗೌಡರು, ರಾಜಕಾರಣದಿಂದ ಹಿಡಿದು ಎಲ್ಲದರ ಬಗ್ಗೆಯೂ ಚರ್ಚಿಸುತ್ತಿದ್ದರು. ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಆದರೆ ಮನಸ್ಸಿಗಂಟಿಸಿಕೊಳ್ಳುತ್ತಿರಲಿಲ್ಲ. ಲಂಕೇಶರು ಪ್ರಗತಿ ರಂಗ ಮಾಡಿ, ರಾಜಕೀಯದತ್ತ ಒಲವು ತೋರಿದಾಗ, ಫ್ರಂಟ್ ಲೈನ್ ಲೀಡರ್(ಲಂಕೇಶ್, ತೇಜಸ್ವಿ, ಕೆ.ರಾಮದಾಸ್, ಎಚ್.ಎಲ್.ಕೇಶವಮೂರ್ತಿ)ಗಳಲ್ಲಿ ಡಾ.ಗೌಡ ಕೂಡ ಒಬ್ಬರಾಗಿದ್ದರು. ಲಂಕೇಶರೊಂದಿಗೆ ಕರ್ನಾಟಕದಾ ದ್ಯಂತ ಪ್ರಯಾಣ ಮಾಡಿ, ಭಾಷಣ ಮಾಡಿ ಜನರಲ್ಲಿ ರಾಜಕೀಯ ತಿಳಿವಳಿಕೆ ತುಂಬಲು ಶ್ರಮಿಸಿದ್ದರು. ಹೊಸ ರಾಜಕೀಯ ಶಕೆಗೆ ಕರ್ನಾಟಕ ಪಕ್ವಗೊಂಡಿಲ್ಲ ಎನಿಸಿದಾಗ ಲಂಕೇಶರು ಕೈಬಿಟ್ಟರು, ಗೌಡರೂ ಸುಮ್ಮನಾದರು. ಹಾಗಂತ ಪ್ರಗತಿರಂಗ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆ ಇರಲಿಲ್ಲ. ವಾಸ್ತವದ ಅರಿವಿದ್ದೂ, ಒಂದಷ್ಟಾದರೂ ಜಾಗೃತಿ ಸಾಧ್ಯ ಎಂಬುದನ್ನು ಸಾರಲು ಲಂಕೇಶರ ಹೊಸ ಪ್ರಯತ್ನ ಮತ್ತು ಪ್ರಯೋಗವನ್ನು ಪ್ರಾಮಾಣಿಕವಾಗಿ ಬೆಂಬಲಿಸಿದ್ದರು. ಹಾಗೆಯೇ ಲಂಕೇಶರ ಕೆಲ ನಿಲುವು, ಧೋರಣೆಗಳು ಸರಿಯಲ್ಲ ಎನಿಸಿದರೆ, ನೇರವಾಗಿಯೇ ಹೇಳಿಬಿಡುತ್ತಿದ್ದರು. ಅಂತಹ ಒಂದು ಘಟನೆ, ಐಎಎಸ್ ಅಧಿಕಾರಿ ಬಿ.ಎ.ಹರೀಶ್ ಗೌಡರಿಗೆ ಸಂಬಂಧಿಸಿದ್ದು. ರವಿವಾರದ ಎಂದಿನ ಇಸ್ಪೀಟ್ ಟೇಬಲ್‌ನಲ್ಲಿ ಅಂದು ಲಂಕೇಶ್, ಡಾ.ಗೌಡರ ಜೊತೆಗೆ ಕವಿ ಎಲ್.ಎನ್.ಮುಕುಂದರಾಜ್ ಕೂಡ ಇದ್ದರು. ಆಗ ಮುಕುಂದರಾಜ್ ಪಿಯು ಕಾಲೇಜು ಉಪನ್ಯಾಸಕರ ಸಂಘದ ಪದಾಧಿಕಾರಿಗಳಲ್ಲೊಬ್ಬರಾಗಿದ್ದರು. ಹರೀಶ್ ಗೌಡ ಪಿಯು ಬೋರ್ಡಿನ ನಿರ್ದೇಶಕರಾಗಿದ್ದರು. ಉಪನ್ಯಾಸಕರು ಮತ್ತು ಅಧಿಕಾರಿ ನಡುವೆ ಸಣ್ಣದೊಂದು ಸಮಸ್ಯೆ ಶುರುವಾಗಿತ್ತು. ಅದು ಅವರ ಇಲಾಖೆಯ ಮಟ್ಟಿಗಿನ ಸಮಸ್ಯೆ. ಅದನ್ನು ಮುಕುಂದರಾಜ್ ಇಸ್ಪೀಟ್ ಟೇಬಲ್‌ನಲ್ಲಿ ಲೋಕಾಭಿರಾಮವಾಗಿ ಪ್ರಸ್ತಾಪಿಸಿದರು. ಐಎಎಸ್ ಅಧಿಕಾರಿಗಳ ದರ್ಪ, ದುರಹಂಕಾರ, ಭ್ರಷ್ಟಾಚಾರದ ಬಗ್ಗೆ ಸಿಟ್ಟಿದ್ದ ಲಂಕೇಶರಿಗೆ, ಆ ಅಧಿಕಾರಿಯ ಹೆಸರಿನಲ್ಲಿ ಗೌಡ ಎಂದಿದ್ದು ಅವರ ಗ್ರಹಿಕೆಯನ್ನು ಗಟ್ಟಿಗೊಳಿಸಿತ್ತು. ಕೊಂಚ ಪೂರ್ವಗ್ರಹಪೀಡಿತರಾದ ಲಂಕೇಶರು, ‘‘ಒಂದು ಲೇಖನ ಬರಕೊಡಿ’’ ಎಂದರು. ಇದನ್ನೆಲ್ಲ ನೋಡುತ್ತಿದ್ದ ಡಾ.ಗೌಡರು, ‘‘ಐ ನೋ ಹಿಮ್ ವೆರಿವೆಲ್.. ಹಿ ಈಸ್ ವೆರಿ ಸ್ಟ್ರಿಕ್ಟ್ ಆಫೀಸರ್, ಐ ಥಿಂಕ್...’’ ಎಂದು ಹೇಳಲು ಮುಂದಾದರು. ಗೌಡರ ಮಾತನ್ನು ತುಂಡರಿಸಿ, ‘‘ನೀವೇ ಒಂದು ಲೇಖನ ಬರೆದುಕೊಡಿ, ಹಾಕಣ’’ ಎಂದರು. ಟೇಬಲ್ ವಾತಾವರಣ ಬಿಗಡಾಯಿಸಿತು. ಮೆಟ್ಟಿಲು ಇಳಿದು ಬಂದ ಲಂಕೇಶ್ ಮೇಸ್ಟ್ರು, ‘‘ಏ ಬಸುರಾಜ, ಡಾಕ್ಟ್ರು ಒಂದು ಆರ್ಟಿಕಲ್ ಬರಕೊಡ್ತಾರೆ, ಕೇಳಿ ಈಸ್ಕೊ’’ ಎಂದರು. ಇಸ್ಪೀಟ್ ಸೆಷನ್ ಮುಗಿಸಿಕೊಂಡ ಬಂದ ಡಾಕ್ಟರ್‌ಗೆ ಎದುರಾಗಿ, ‘‘ಆಮೇಲೆ ಫೋನ್ ಮಾಡಲ ಸಾರ್’’ ಎಂದೆ. ‘‘ಹೂ’’ ಎಂದಷ್ಟೇ ಹೇಳಿ, ಮೊದಲೇ ಕೆಂಪಗಿದ್ದ ಗೌಡರು, ಮತ್ತಷ್ಟು ಕೆಂಪಗಾಗಿ ದುಮುಗುಡುತ್ತಾ ಮೆಟ್ಟಿಲು ಇಳಿದು ಹೋಗಿಯೇಬಿಟ್ಟರು. ಇತ್ತ ಲಂಕೇಶರಲ್ಲಿ ಆ ಅಧಿಕಾರಿಯ ಬಗ್ಗೆ ಅಸಹನೆ ಇನ್ನಷ್ಟು ಗಟ್ಟಿಗೊಳ್ಳತೊಡಗಿತು. ಸುತ್ತುವರಿದವರ ತಿದಿ ಒತ್ತುವಿಕೆ ಜ್ವಾಲೆಗೆ ಕಾರಣವಾಯಿತು. ಪರಿಣಾಮವಾಗಿ, ಕವರ್ ಪೇಜ್ ಸುದ್ದಿಯಾಯಿತು. ಮುಕುಂದರಾಜ್ ಒಬ್ಬರಲ್ಲ, ನಾಲ್ವರು ಹರೀಶ್ ಗೌಡರ ಸಂಪೂರ್ಣ ವೃತ್ತಾಂತ ಕುರಿತು ಬರೆದರು. ಮುಂದಿನವಾರವೇ ಹರೀಶ್ ಗೌಡರಿಂದ ಲೀಗಲ್ ನೋಟಿಸ್ ಇಷ್ಯೂ ಆಯಿತು. ಲಂಕೇಶರು ಕಟಕಟೆಯಲ್ಲಿ ನಿಲ್ಲುವಂತಾಯಿತು. ಕೋರ್ಟ್‌ನಿಂದ ಛೀಮಾರಿ, ದಂಡ ಎಲ್ಲವೂ ನಡೆದುಹೋಯಿತು. ಆದರೆ ಲಂಕೇಶರನ್ನು 20 ವರ್ಷಗಳಿಂದ ಬಹಳ ಹತ್ತಿರದಿಂದ ಬಲ್ಲ ಡಾ.ಗೌಡರು, ಇದಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳದೆ ಎಂದಿನಂತೆ ಪತ್ರಿಕೆ ಕಚೇರಿಗೆ ಬರುವಾಗ ಮಾರ್ಕೆಟ್ ತಾಜ್ ಹೋಟೆಲ್‌ನ ಗ್ರಿಲ್ ಚಿಕನ್, ಪ್ರಶಾಂತ್ ಹೋಟೆಲಿನ ತಲೆಮಾಂಸ, ಮರಾಠಿ ಹೋಟೆಲಿನ ಮಟನ್ ಫ್ರೈ ತಂದು ತಿಂದು, ತಿನ್ನಿಸಿ ಹೋಗುತ್ತಿದ್ದರು. ಲಂಕೇಶರಿಗೂ ತಮ್ಮ ತಪ್ಪಿನ ಅರಿವಾಯಿತು, ಅವರಿಬ್ಬರ ನಡುವಿನ ಸ್ನೇಹ ಇನ್ನಷ್ಟು ಗಟ್ಟಿಯಾಯಿತು. ಅದೇ ಸಮಯದಲ್ಲಿ ಲಂಕೇಶರು ಮಗನಿಗಾಗಿ ‘ಆಲ್ ರೌಂಡರ್’ ಎಂಬ ಕ್ರೀಡಾ ಪತ್ರಿಕೆ ಶುರುಮಾಡಿದಾಗ, ಹಳೆ ಕ್ರೀಡಾಪಟುಗಳ ಕುರಿತು ಸ್ವಾರಸ್ಯಕರ ಸರಣಿ ಲೇಖನಗಳನ್ನು ಬರೆದರು. ಡಾ.ಗೌಡರಲ್ಲಿದ್ದ ಮತ್ತೊಂದು ಮಾನವೀಯ ಗುಣವೆಂದರೆ, ಯಾರಿಗಾದರೂ ಆರೋಗ್ಯದಲ್ಲಿ ಕೊಂಚ ಏರುಪೇರಾದರೂ, ತಕ್ಷಣ ಸ್ಪಂದಿಸುತ್ತಿದ್ದರು. ನನಗೆ ಕಂಪ್ಯೂಟರ್ ಮುಂದೆ ಕೂತು ಕಣ್ಣು ಮಂಜು ಎನಿಸಿದಾಗ, ಕಿಮ್ಸ್‌ನ ಕಣ್ಣಿನ ಡಾಕ್ಟರ್ ಹಿಮಾಂಶು(ನ್ಯಾಯಮೂರ್ತಿ ಎನ್.ಡಿ.ವೆಂಕಟೇಶ್‌ರ ಪುತ್ರ)ರ ಬಳಿ ಕಳಿಸಿ, ಗ್ಲಾಸ್ ಕೊಡಿಸಿದ್ದರು. ಲಂಕೇಶರಿಗೆ ಯಾವಾಗ ಆರೋಗ್ಯ ಹದಗೆಟ್ಟರೂ, ಅವರ ಆರೈಕೆಗೆ ಕಿರಿಯ ವೈದ್ಯರನ್ನು ನೇಮಿಸುತ್ತಿದ್ದರು. ಲಂಕೇಶರ ಬಳಿಗೆ ಕಣ್ಣಿನ ಡಾ. ಹಿಮಾಂಶು ಅವರಲ್ಲದೆ ಜನರಲ್ ಚೆಕಪ್‌ಗಾಗಿ ಡಾ. ವೆಂಕಟೇಶ್, ವಾರಕ್ಕೆ ಮೂರು ಬಾರಿ ಬಂದು ಚೆಕಪ್ ಮಾಡಿ, ರೀಡಿಂಗ್ ಬರೆದಿಟ್ಟು ಹೋಗುವಂತೆ ನೋಡಿಕೊಂಡಿದ್ದರು. ಲಂಕೇಶರ ನಿಧನಾನಂತರ, ಅವರ ದುಷ್ಟಕೂಟದ ಮತ್ತೊಬ್ಬ ಸದಸ್ಯರಾದ ಬಸವರಾಜ ಅರಸು ಒಬ್ಬರೆ ಇರುವುದರಿಂದ, ಅವರ ಆರೋಗ್ಯದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು. 90ರ ದಶಕದಲ್ಲಿ ಪ್ರತಿಷ್ಠಿತ ಬೆಂಗಳೂರು ಟರ್ಫ್ ಕ್ಲಬ್ ಸದಸ್ಯರಾಗಿ, ನಿರ್ದೇಶಕರಾಗಿ, ಎರಡು ಬಾರಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕುದುರೆ ರೇಸ್‌ನ್ನೂ ಕೂಡ ಗೌಡರು ಜೂಜಿನಂತೆ ನೋಡದೆ, ಹಣ ಕಟ್ಟಿ ಆಡದೆ, ಅದೊಂದು ಕ್ರೀಡೆ ಎಂದೇ ಭಾವಿಸಿದ್ದರು. ಎಲೀಟ್ ಸರ್ಕಲ್‌ನ ಪ್ರತಿಷ್ಠೆಗಾಗಿ ಇಂಥವೆಲ್ಲ ಇರಬೇಕು ಎನ್ನುವ ಮನಸ್ಥಿತಿಯಲ್ಲಿದ್ದರು. ಆದರೆ ಆಡಳಿತದ ವಿಷಯಕ್ಕೆ ಬಂದಾಗ ಭಿನ್ನವಾಗಿಯೇ ವರ್ತಿಸುತ್ತಿದ್ದರು. ರೇಸ್ ಕ್ಲಬ್‌ನಲ್ಲಿ ಮೊದಲ ಬಾರಿಗೆ ಡಿಜಿಟಲೈಸ್ ಸಿಸ್ಟಂ ಜಾರಿಗೆ ತರುವ ಮೂಲಕ, ಎಲ್ಲರಂತಲ್ಲ ಎಂದು ಸಾಬೀತುಪಡಿಸಿದ್ದರು. ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ, 2009-10 ಅಂತ ಕಾಣುತ್ತದೆ, ಕೆಲ ಧನದಾಹಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಕುತಂತ್ರದಿಂದಾಗಿ, ಬೆಂಗಳೂರಿನ ಪ್ರತಿಷ್ಠಿತ ರೇಸ್ ಕೋರ್ಸ್‌ನ್ನು ನಗರದಿಂದ ಹೊರಹಾಕುವ, ನೆಲನುಂಗುವ ಯೋಜನೆ ಸಿದ್ಧವಾಗಿತ್ತು. ಆ ಸಂದರ್ಭದಲ್ಲಿ ರವೀಂದ್ರ ರೇಶ್ಮೆಯವರ ಸಂಪಾದಕತ್ವದಲ್ಲಿ ಬರುತ್ತಿದ್ದ ‘ವಿಕ್ರಾಂತ ಕರ್ನಾಟಕ’ದಲ್ಲಿ ಶ್ರೀನಿವಾಸಗೌಡರು ಬರೆಯುತ್ತಿದ್ದರೂ, ‘‘ನಾನೇ ಬರೆಯುವುದು ಅಷ್ಟು ಸೂಕ್ತವಲ್ಲ’’ ಎಂದು ನನ್ನ ಬಳಿ ಇಡೀ ದಿನ ಕುಳಿತು, ರೇಸ್ ಕೋರ್ಸಿನ ಒಳ-ಹೊರಗನ್ನು ವಿವರಿಸಿ ಸುದ್ದಿ ಮಾಡಲು ಹೇಳಿದ್ದರು. ನಗರದ ಹೃದಯಭಾಗದಲ್ಲಿರುವ 85 ಎಕರೆ ಭೂಮಿಯ ಮೇಲೆ ಕಣ್ಣಿಟ್ಟಿದ್ದ ಕುತಂತ್ರದ ಜೊತೆಗೆ ಆ ಜಾಗ ನಗರದ ಅಂದಕ್ಕೆ, ಸ್ವಾಸ್ಥ್ಯಕ್ಕೆ ಎಷ್ಟು ಮುಖ್ಯ ಎನ್ನುವುದರ ಕುರಿತು ವಿವರವಾದ ಕವರ್ ಸ್ಟೋರಿ ಲೇಖನ ಮಾಡಿದ್ದೆ. ಪ್ರಕಟವಾದ ಪತ್ರಿಕೆಯನ್ನು ಸರಕಾರದ ಉನ್ನತ ವ್ಯಕ್ತಿಗಳಿಗೆ ಖುದ್ದಾಗಿ ತಲುಪಿಸಿ, ಮನವರಿಕೆ ಮಾಡಿಕೊಟ್ಟಿದ್ದರು. ಶ್ರೀನಿವಾಸಗೌಡರ ಪ್ರಾಮಾಣಿಕ ಪ್ರಯತ್ನ, ಸಮಯೋಚಿತ ದಿಟ್ಟ ಕ್ರಮಗಳಿಂದಾಗಿ, ಇವತ್ತು ರೇಸ್ ಕೋರ್ಸ್ ಇದ್ದಲ್ಲಿಯೇ ಉಳಿದಿದೆ. ನಗರದ ಸ್ವಾಸ್ಥ ಮತ್ತು ಕೋಟ್ಯಂತರ ರೂಪಾಯಿಗಳ ಆಸ್ತಿ ಕಾಪಾಡಿದ ಕೀರ್ತಿ ಗೌಡರಿಗೆ ಸಲ್ಲಬೇಕಾಗಿದೆ.
ಕಳೆದ ಜೂನ್, 2021ರಲ್ಲಿ ಕ್ರಿಕೆಟರ್ ಬಿ.ವಿಜಯಕೃಷ್ಣ ನಿಧನರಾದಾಗ, ರಾಜ್ಯ ಪ್ರತಿನಿಧಿಸಿದ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವಷ್ಟು ಪ್ರತಿಭಾವಂತನಾಗಿದ್ದ ಕ್ರಿಕೆಟರ್ ಆಗಿದ್ದರೂ, ಮಾಧ್ಯಮಗಳು ಸರಿಯಾಗಿ ಸುದ್ದಿ ಮಾಡಿರಲಿಲ್ಲ. ಆ ಸಂದರ್ಭದಲ್ಲಿ ನಾನು ಡಾಕ್ಟರಿಗೆ ಫೋನ್ ಮಾಡಿದಾಗ, ‘‘ಐ ನೋ ಹಿಮ್ ವೆರಿವೆಲ್, ಅವನೊಂದಿಗೆ ನ್ಯಾಷನಲ್ ಕಾಲೇಜ್ ಗ್ರೌಂಡ್‌ನಲ್ಲಿ ಆಟ ಆಡಿದ್ದೇನೆ, ಕುಡಿದಿದ್ದೇನೆ, ಹಿ ವಾಸ್ ವೆರಿಗುಡ್ ಆಲ್‌ರೌಂಡರ್, ಬನ್ನಿ ಮಾತಾಡೋಣ’’ ಎಂದಿದ್ದರು. ‘ವಾರ್ತಾಭಾರತಿ’ಗಾಗಿ ಮಾಡಿದ ವೀಡಿಯೊ ಸಂದರ್ಶನದುದ್ದಕ್ಕೂ, ವಿಜಯಕೃಷ್ಣ ಎಂತಹ ಆಟಗಾರನಾಗಿದ್ದ ಎಂಬುದನ್ನು ಮನಮುಟ್ಟುವಂತೆ ವಿವರಿಸಿದ್ದರು. ‘‘ಅಂತಹ ಪ್ರತಿಭಾವಂತ ಇಂಡಿಯನ್ ಟೀಮಿಗೆ ಯಾಕೆ ಸೆಲೆಕ್ಟ್ ಆಗಲಿಲ್ಲ, ಜಾತಿ ಏನಾದರೂ ಅಡ್ಡ ಬಂದಿತೆ’’ ಎಂಬ ನನ್ನ ಪ್ರಶ್ನೆಗೆ, ‘‘ನೋಡಿ, ಆ ಸಂದರ್ಭದಲ್ಲಿ ಕರ್ನಾಟಕದಿಂದ ಚಂದ್ರಶೇಖರ್, ಪ್ರಸನ್ನ, ಕಿರ್ಮಾನಿ, ವಿಶ್ವನಾಥ್ ಇದ್ದರು, ಯೂಷಿಯಲಿ, ಇಂಡಿಯನ್ ಟೀಮಿನಲ್ಲಿ ಮೊದಲಿನಿಂದಲೂ ನಾರ್ಥ್‌ನವರದೇ ಅಪ್ಪರ್ ಹ್ಯಾಂಡ್, ಕರ್ನಾಟಕದಿಂದ ನಾಲ್ಕು ಜನರಿದ್ದದ್ದೇ ಹೆಚ್ಚು. ಜೊತೆಗೆ ಇನ್ನೊಂದು ಇಂಟರೆಸ್ಟಿಂಗ್ ಪಾಯಿಂಟ್ ಅಂದರೆ, ಬಿಷನ್ ಸಿಂಗ್ ಬೇಡಿ ಇದ್ದ, ವಿಜಯಕೃಷ್ಣ ಕೂಡ ಲೆಗ್ ಸ್ಪಿನ್ನರ್. ಬೇಡಿಗಿದ್ದ