ಬಡವರಿಗೆ ಪೂರಕವಾದ ಜನಪರ ಬಜೆಟ್ ಮಂಡನೆ: ಎಸ್‌ಡಿಪಿಐ ಆಗ್ರಹ

Update: 2022-02-11 16:20 GMT

ಉಡುಪಿ, ಫೆ.11: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೆ ಸಾಲಿನ ಬಜೆಟ್ ಮಂಡಿಸಲು ಪೂರ್ವ ತಯಾರಿ ಮಾಡಿಕೊಂಡಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಸೇರಿದಂತೆ ಬಡ ಮತ್ತು ಮದ್ಯಮ ವರ್ಗದವರಿಗೆ ಪೂರಕವಾದ ಜನಪರ ಬಜೆಟ್ ಮಂಡಿಸಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು. ಅಮೆರಿಕಾ ಮಾದರಿಯಲ್ಲಿ ರಾಜ್ಯದಲ್ಲಿ ಏರೋಸ್ಪೇಸ್ ಮತ್ತು ಏರೋನಾಟಿಕಲ್ ಸಂಶೋಧನಾ ಕೇಂದ್ರವನ್ನು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಸ್ಥಾಪಿಸಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಮಲ್ಟಿ ಸೇಷಾಲಿಟಿ ಆಸ್ಪತ್ರೆಗಳನ್ನು ಎಲ್ಲಾ ತಾಲ್ಲೂಕುಗಳಲ್ಲಿ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕನಿಷ್ಠ 10 ಸಾವಿರ ಕೋಟಿ ಬಜೆಟ್‌ನಲ್ಲಿ ಮೀಸಲಿಡಬೇಕು. ಉತ್ತರ ಕರ್ನಾಟಕದಲ್ಲಿ ಉರ್ದು ಯುನಿರ್ವಸಿಟಿ ಸ್ಥಾಪಿಸ ಬೇಕು. ಎಸ್‌ಸಿ ಎಸ್‌ಟಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಡುವ ಹಣ ವನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕಾಗಿ ಉಪಯೋಗಿಸಬಾರದು.  ಜಾತಿವಾರು ಜನಗಣತಿ ಸಮೀಕ್ಷೆ ಮಾಡಿಸಿದ ವರದಿಯನ್ನು ಬಹಿರಂಗಗೊಳಿಸ ಬೇಕು. ಸಣ್ಣ ಸಣ್ಣ ಸಮುದಾಯಗಳ ಹಿತರಕ್ಷಣೆ ಯನ್ನು ಕಾಪಾಡುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಬೇಕು.

ಮತೀಯ ಮತ್ತು ಜಾತಿ ಆಧಾರಿತ ದೌರ್ಜನ್ಯ ಕಾಯ್ದೆ ಜಾರಿಗೊಳಿಸಬೇಕು. ಮತೀಯ ದ್ವೇಷಧಾರಿತ ಗಲಭೆ ಗಳಲ್ಲಿ ನಷ್ಟ ಹೊಂದಿದವರಿಗೆ ಪರಿಹಾರ ನೀಡುವ ಸಲುವಾಗಿ ಕನಿಷ್ಠ 2 ಸಾವಿರ ಕೋಟಿ ಹಣ ಮೀಸಲಿಡಬೇಕು. ನಿರುದ್ಯೋಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಗಳನ್ನು ಭರ್ತಿ ಮಾಡಬೇಕು. ಜಿ.ಎಸ್.ಟಿ. ಪಾಲು ಪಡೆಯುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸ್ವಯಂ ಚಾಲಿತ ಹಣಕಾಸು ಪದ್ಧತಿಯನ್ನು ಜಾರಿಗೆ ತರಬೇಕು. ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ರಾಜೇಂದ್ರ ಪ್ರಸಾದ್ ಹಾಗೂ ಜಸ್ಟೀಸ್ ರಂಗನಾಥ್ ಮಿಶ್ರ ವರದಿ ಜಾರಿಗೆ ತರಬೇಕು. ಕುಟುಂಬ ಕ್ಕೊಂದು ಮನೆ ಎಂಬ ವಸತಿ ಯೋಜನೆ ರೂಪಿಸಬೇಕು. ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಜಿಲ್ಲಾ ಉಪಾಧ್ಯಕ್ಷ ಶಾಹಿದ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಲೀಲ್ ಅಹ್ಮದ್, ಉಡುಪಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಾಧಿಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News