ಕುಡಿಯುವ ನೀರು ಯೋಜನೆ ಕಾಮಗಾರಿ: ನಿಗದಿಯಾಗದ ಏಕರೂಪ ದರ

Update: 2022-02-15 03:07 GMT

ಬೆಂಗಳೂರು, ಫೆ.14: ಜಲಜೀವನ್ ಮಿಷನ್ ಯೋಜನೆಯಡಿ 2024ರೊಳಗಾಗಿ ಎಲ್ಲಾ ಗ್ರಾಮೀಣ ಜನವಸತಿಗಳಿಗೆ ನಳ ನೀರು ಸಂಪರ್ಕದ ಮುಖಾಂ ತರ ಕನಿಷ್ಠ 55 ಎಲ್ಪಿಸಿಡಿಯ ನಿಗದಿತ ಗುಣಮಟ್ಟ (ಬಿಐಎಸ್ 10500) ನೀರನ್ನು ಉದ್ದೇಶಿಸಿ ಕೈಗೆತ್ತಿ ಕೊಳ್ಳಲಾಗಿರುವ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ಇನ್ನೂ ಏಕರೂಪ ದರಪಟ್ಟಿ ನಿಗದಿಯಾಗಿಲ್ಲ.

ಏಕರೂಪ ದರ ಪಟ್ಟಿ ಕಾರ್ಯರೂಪಕ್ಕೆ ಬಾರದೇ ಇರುವ ಕಾರಣ ಕಾಮಗಾರಿ ನಡೆಸಲು ಬೇಕಾಗಿರುವ ಸಿಮೆಂಟ್, ಉಕ್ಕು ಮತ್ತು ಪೈಪ್‌ಗಳ ಖರೀದಿ ದರದ ಅಂದಾಜು ವೆಚ್ಚದಲ್ಲಿ ಕೋಟ್ಯಂತರ ರೂಪಾಯಿ ಏರಿಕೆ ಆಗುತ್ತಿರುವುದು ಆರ್ಥಿಕವಾಗಿ ಹೆಚ್ಚಿನ ಪರಿಣಾಮ ಗಳಿಗೆ ಕಾರಣವಾಗಿದೆ ಎಂಬುದು ಇದೀಗ ಬಹಿರಂಗ ವಾಗಿದೆ.

ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದ ಎಂಟು ಜಿಲ್ಲೆಗಳ 6,358 ಜನವಸತಿಗಳಿಗೆ ನಳ್ಳಿ ಮೂಲಕ ಕುಡಿಯುವ ನೀರು ಪೂರೈಸಲು 4,400.66 ಕೋಟಿ ರೂ.ಮೊತ್ತಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದ ಬೆನ್ನಲ್ಲೇ ಇದೇ ಯೋಜನೆಯಡಿ ಕಾಮಗಾರಿ ನಡೆಸಲು ಸಿಮೆಂಟ್, ಸ್ಟೀಲ್, ಪೈಪ್‌ಗಳ ಖರೀದಿಗೆ ಏಕರೂಪ ದರಪಟ್ಟಿ ನಿಗದಿಪಡಿಸದಿರುವುದು ಮುನ್ನೆಲೆಗೆ ಬಂದಿದೆ.

ಹಾಸನ ಜಿಲ್ಲೆಯ ಅರಕಲಗೂಡು, ಹೊಳೆ ನರಸೀಪುರ, ಬೇಲೂರು, ಆಲೂರು, ಚನ್ನರಾಯ ಪಟ್ಟಣ ಮತ್ತು ಹಾಸನ ತಾಲೂಕುಗಳ 2,396 ಗ್ರಾಮಗಳಿಗೆ ಒಟ್ಟು 1,475 ಕೋಟಿ ರೂ. ವೆಚ್ಚದಲ್ಲಿ ನೀರು ಪೂರೈ ಸುವ ಐದು ಕಾಮಗಾರಿಗಳ ಅಂದಾಜು ಪಟ್ಟಿಗೆ ಸಂಪುಟವು ಈಗಾಗಲೇ ಅನು ಮೋದನೆ ನೀಡಿದೆ.

ಈ ಪೈಕಿ ಹಾಸನ ಜಿಲ್ಲೆಯ ಆಲೂರು, ಬೇಲೂರು, ಹಾಸನ ಮತ್ತು ಸಕಲೇಶಪುರ ತಾಲೂಕು ವ್ಯಾಪ್ತಿಯ 1,477 ಗ್ರಾಮೀಣ ಜನ ವಸತಿ ಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಂದಾಜು ವೆಚ್ಚದಲ್ಲಿ ಗಣನೀಯ ಏರಿಕೆ ಆಗುತ್ತಿದೆ ಎಂಬ ಸಂಗತಿಯನ್ನು ಆರ್ಥಿಕ ಇಲಾಖೆಯ ಮುಂದೆ ಆಡಳಿತ ಇಲಾಖೆಯು ತಿಳಿಸಿದೆ. ಈ ಸಂಬಂಧ ಆರ್ಥಿಕ ಇಲಾಖೆಯ ಟಿಪ್ಪಣಿ ಹಾಳೆಗಳು ‘The-File’ಗೆ ಲಭ್ಯವಾಗಿದೆ.

2020-21ನೇ ಸಾಲಿಗೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಆಲೂರು, ಬೇಲೂರು, ಹಾಸನ ಮತ್ತು ಸಕಲೇಶಪುರ ತಾಲೂಕುಗಳ ಗ್ರಾಮೀಣ ಜನವಸತಿಗಳಿಗೆ ಹೇಮಾವತಿ ಮೂಲದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಂಬಂಧ 2021ರ ಆಗಸ್ಟ್ 18ರಂದು ನಡೆದಿದ್ದ ಎಸ್‌ಎಲ್‌ಎಸ್‌ಎಸ್ಸಿ ಸಭೆಯಲ್ಲಿ ಒಟ್ಟು 503.00 ಕೋಟಿ ರೂ.ಗೆ ಅನು ಮೋದನೆ ದೊರೆತಿತ್ತು.

717.66 ಕೋಟಿ ರೂ.ಗಳ ಪ್ರಾಥ ಮಿಕ ಯೋಜನಾ ವರದಿ (ಪಿಎಸ್‌ಆರ್)ಗೆ 2021ರ ಡಿಸೆಂಬರ್ 9ರಂದು ರಾಜ್ಯ ತಾಂತ್ರಿಕ ಸಮಿತಿಯು ತಾತ್ವಿಕ ಅನುಮೋದನೆ ನೀಡಿತ್ತು. ಇದಾದ ನಂತರ ನಡೆದ 4ನೇ ಅಪೆಕ್ಸ್ ಸಮಿತಿಯ ಸಭೆಯಲ್ಲಿ 19,617.54 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ಪ್ರಸ್ತಾವಕ್ಕೆ ತಾತ್ವಿಕ ಒಪ್ಪಿಗೆಯೂ ದೊರೆತಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ‘ರಾಜ್ಯಾದ್ಯಂತ ಏಕರೂಪ ಪಟ್ಟಿಯು ಕಾರ್ಯರೂಪಕ್ಕೆ ಬಾರದಿದ್ದರಿಂದ ಸಿಮೆಂಟ್, ಸ್ಟೀಲ್ ಮತ್ತು ಪೈಪ್‌ಗಳಿಗೆ ಇಲಾಖೆಯಿಂದ ದರಗಳನ್ನು ನಿಗದಿಪಡಿಸಲಾಗುತ್ತಿದೆ. ಹೀಗಾಗಿ ಪ್ರಾಥಮಿಕ ಯೋಜನಾ ವರದಿ (ಪಿಎಸ್‌ಆರ್) ಮೊತ್ತವು 805.60 ಕೋಟಿ ರೂ.ಗೆ ಪರಿಷ್ಕೃತ ವಾಗಿರುತ್ತದೆ. ಪಿಎಸ್‌ಆರ್ ಮೊತ್ತದಲ್ಲಿ ದರ ಹೊಂದಾಣಿಕೆಯಲ್ಲಿ ಮಾರ್ಪಾಟುಗಳನ್ನು ಮಾಡಿದ ನಂತರ 810.00 ಕೋಟಿ ರೂ.ಗೆ ಅನುಷ್ಠಾನ ಗೊಳಿಸಲು ಕೋರಲಾಗಿದೆ ಎಂದು ಸಚಿವ ಸಂಪುಟದ ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

ಯೋಜನಾ ವೆಚ್ಚ 810.00 ಕೋಟಿ ರೂ.ಗಳಲ್ಲಿ ಜಲ್ ಜೀವನ್ ಮಿಷನ್ ಅಡಿ 357.58 ಕೋ.ರೂ. ಮತ್ತು ಯೋಜನೆಯ 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಸೇರಿದಂತೆ ರಾಜ್ಯ ಸರಕಾರದಿಂದ 452.42 ಕೋಟಿ ರೂ. ಬಳಕೆ ಮಾಡಿಕೊಳ್ಳಲು ಆಡಳಿತ ಇಲಾಖೆಯು ಪ್ರಸ್ತಾಪಿಸಿತ್ತು.

ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದ ಎಂಟು ಜಿಲ್ಲೆಗಳ 6,358 ಜನವಸತಿಗಳಿಗೆ ನಳ್ಳಿ ಮೂಲಕ ಕುಡಿಯುವ ನೀರು ಪೂರೈಸಲು 4,400.66 ಕೋಟಿ ರೂ. ವೆಚ್ಚದಲ್ಲಿ 17 ಕಾಮಗಾರಿ ಗಳನ್ನು ಕೈಗೊಳ್ಳುವ ಪ್ರಸ್ತಾವಕ್ಕೆ ಸಂಪುಟ ಸಭೆಯು ಇತ್ತೀಚೆಗಷ್ಟೇ ಮಂಜೂರಾತಿ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಪಾಲುದಾರಿಕೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ರಾಜ್ಯ ಸರಕಾರದ ಪಾಲು ಮತ್ತು ಫಲಾನುಭವಿಗಳ ವಂತಿಕೆಯನ್ನು ರಾಜ್ಯ ಸರಕಾರವೇ ಭರಿಸಲಿದೆ. ಇದಕ್ಕಾಗಿ ವಿಶ್ವ ಬ್ಯಾಂಕ್‌ನಿಂದ 4,500 ಕೋಟಿ ರೂ. ಸಾಲ ಪಡೆದು ಬಳಸಿಕೊಳ್ಳಲಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದನ್ನು ಸ್ಮರಿಸಬಹುದು.

ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ ಮತ್ತು ಕಾಪು ತಾಲೂಕಿನ 1,904 ಜನವಸತಿಗಳಿಗೆ ನೀರು ಪೂರೈಸುವ 1,215 ಕೋಟಿ ರೂ. ವೆಚ್ಚದ ಕಾಮಗಾರಿ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊಳಲ್ಕೆರೆ ಪಟ್ಟಣ ಮತ್ತು ಇತರ 21 ಗ್ರಾಮೀಣ ಜನವಸತಿಗಳಿಗೆ ಕುಡಿಯುವ ನೀರು ಒದಗಿಸುವ 367.65 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸಂಪುಟ ಒಪ್ಪಿಗೆ ನೀಡಿತ್ತು.

ರಾಮನಗರ ಜಿಲ್ಲೆಯ 1,041 ಜನವಸತಿಗಳಿಗೆ 825 ಕೋಟಿ ವೆಚ್ಚದಲ್ಲಿ ನೀರು ಒದಗಿಸುವ ಎರಡು ಕಾಮಗಾರಿಗಳಿಗೂ ಮಂಜೂರಾತಿ ನೀಡಿದೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ 61 ಜನವಸತಿಗಳಿಗೆ ನೀರು ಪೂರೈಸುವ 131.21 ಕೋಟಿ ರೂ. ವೆಚ್ಚದ ಕಾುಗಾರಿ, ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಶಿವಮೊಗ್ಗ ತಾಲೂಕಿನ 349 ಜನವಸತಿಗಳಿಗೆ ನೀರು ಒದಗಿಸುವ 104.73 ಕೋಟಿ ರೂ. ವೆಚ್ಚದ ಕಾಮಗಾರಿ, ಚಿಕ್ಕಬಳ್ಳಾಪುರ ಜಿಲ್ಲೆಯ 41 ಜನವಸತಿಗಳಿಗೆ 28.30 ಕೋಟಿ ರೂ. ವೆಚ್ಚದ ಎರಡು ಕಾಮಗಾರಿಗಳು ಹಾಗೂ ಉತ್ತರ ಕನ್ನಡ ಜಿಲ್ಲೆ ಅಂಕೋಲಾ, ಕಾರವಾರ ಮತ್ತು ಕುಮಟಾ ತಾಲ್ಲೂಕಿನ 349 ಜನವಸತಿಗಳಿಗೆ ನೀರು ಪೂರೈಸುವ 253.77 ಕೋಟಿ ರೂ. ವೆಚ್ಚದ ಮೂರು ಕಾಮಗಾರಿಗಳಿಗೂ ಒಪ್ಪಿಗೆ ದೊರಕಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News