ಮಾ.1: ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆ; ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರ ತೆರವು ಹೋರಾಟ ತೀವ್ರಗೊಳಿಸಲು ನಿರ್ಧಾರ

Update: 2022-02-23 14:16 GMT

ಮಂಗಳೂರು, ಫೆ.23: ಕಳೆದ ಆರು ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಸುರತ್ಕಲ್ (ಎನ್ಐಟಿಕೆ) ಟೋಲ್ ಕೇಂದ್ರವನ್ನು ಜನತೆಗೆ ನೀಡಿದ ಭರವಸೆ, ನಿರ್ಣಯಗಳ ಹೊರತಾಗಿಯು ಸಕ್ರಮಗೊಳಿಸಿ ಬಲಪ್ರಯೋಗದ ಮೂಲಕ ಮುಂದುವರಿಸುವ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಸರ್ವಾಧಿಕಾರಿ ಧೋರಣೆಯನ್ನು ಸುರತ್ಕಲ್ನಲ್ಲಿ ಬುಧವಾರ ನಡೆದ ಟೋಲ್ ಗೇಟ್ ವಿರೋಧಿ ಹೋರಾಟ ಸಭೆಯು ತೀವ್ರವಾಗಿ ಖಂಡಿಸಿತು. ಅಲ್ಲದೆ ಮಾ.1ರಂದು ಮೂಲ್ಕಿಯಲ್ಲಿ ಉಭಯ ಜಿಲ್ಲೆಗಳ ಸಮಾನ ಮನಸ್ಕ ಸಂಘಟನೆಗಳ ಮುಖಂಡರ ಸಭೆ ನಡೆಸಲು ಮತ್ತು ಆ ಸಭೆಯಲ್ಲಿ ಮುಂದಿನ ಹೋರಾಟದ ಕುರಿತು ತೀರ್ಮಾನ ಕೈಗೊಳ್ಳಲು ಸಭೆ ನಿರ್ಧರಿಸಿತು.

ಲಾರಿ ಮಾಲಕರ ಸಂಘದ ಮುಖಂಡ, ಹೋರಾಟ ಸಮಿತಿಯ ಸಹ ಸಂಚಾಲಕ ಮೂಸಬ್ಬ ಪಕ್ಷಿಕೆರೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ವಿಲೀನದ ನಿರ್ಣಯದ ಹೊರತಾಗಿಯೂ ತಾತ್ಕಾಲಿಕ ಟೋಲ್ ಕೇಂದ್ರವನ್ನು ಪೂರ್ಣಪ್ರಮಾಣದ ಟೋಲ್ ಕೇಂದ್ರವಾಗಿ ಅಧಿಕೃತಗೊಳಿಸುವ ಹೆದ್ದಾರಿ ಪ್ರಾಧಿಕಾರದ ಅಕ್ರಮ ನಡೆಯ ಕುರಿತು ಕಾನೂನು ಹೋರಾಟದ ಅವಕಾಶಗಳ ವಿವರ ನೀಡಿದರು.

ಕಾನೂನು ಹೋರಾಟಕ್ಕೆ ಬೇಕಾದ ದಾಖಲೆ ಮತ್ತು ಸಂಪನ್ಮೂಲಗಳನ್ನು ಕ್ರೋಢೀಕರಿಸಲು ವಕೀಲರುಗಳನ್ನು ಒಳಗೊಂಡ ಪ್ರತ್ಯೇಕ ತಂಡ ರಚಿಸುವುದು, ಹೆದ್ದಾರಿ ಪ್ರಾಧಿಕಾರದ ಸರ್ವಾಧಿಕಾರಿ ಧೋರಣೆಯನ್ನು ಹತ್ತಿಕ್ಕಲು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಲು ಪಾದಯಾತ್ರೆ, ಪ್ರತಿಭಟನೆ, ಜನಾಗ್ರಹ ಸಭೆಗಳು ಮುಂತಾದ ಹಲವು ಹಂತಗಳ ನಿರ್ಣಾಯಕ ಹೋರಾಟವನ್ನು ಉಭಯ ಜಿಲ್ಲೆಗಳ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸಲು ನಿರ್ಧರಿಸಿತು.

ಮಾರ್ಚ್ 1ರಂದು ಸಂಜೆ 4ಕ್ಕೆ ಮುಲ್ಕಿಯಲ್ಲಿ ಸಮಾನ ಮನಸ್ಕ ಸಂಘ ಸಂಸ್ಥೆಗಳ ಸಭೆಯನ್ನು ಆಯೋಜಿಸಲಾಗಿದೆ. ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಜಯ ಕರ್ನಾಟಕ ಸಂಘಟನೆಯ ಪ್ರಮುಖ ವೈ. ರಾಘವೇಂದ್ರ ರಾವ್, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಯುವ ಉದ್ಯಮಿ ದಿಲ್ರಾಜ್ ಆಳ್ವ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ರಘು ಎಕ್ಕಾರು, ಟ್ಯಾಕ್ಸಿಮೆನ್ ಮ್ಯಾಕ್ಸಿ ಕ್ಯಾಬ್ ಅಸೋಷಿಯೇಶನ್‌ನ ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷ ದಿನೇಶ್ ಕುಂಪಲ, ಟೋಲ್ಗೇಟ್ ವಿರೋಧಿ ಸಮಿತಿಯ ಹೆಜಮಾಡಿ ಇದರ ಮುಖಂಡ ಶೇಖರ ಹೆಜಮಾಡಿ, ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಶ್ರೀನಾಥ್ ಕುಲಾಲ್, ನಾಗರಿಕ ಸಮಿತಿ ಕುಳಾಯಿ ಇದರ ಕಾರ್ಯದರ್ಶಿ ಗಂಗಾಧರ ಬಂಜನ್, ಉದ್ಯಮಿ ರಾಜೇಶ್ ಶೆಟ್ಟಿ ಪಡ್ರೆ, ಟಿಎನ್ ರಮೇಶ್, ಸಾಮಾಜಿಕ ಕಾರ್ಯಕರ್ತ ಹರೀಶ್ ಪೇಜಾವರ, ರಾಜೇಶ್ ಪೂಜಾರಿ ಕುಳಾಯಿ, ರಶೀದ್ ಮುಕ್ಕ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News