ಕೊಂಕಣ ರೈಲಿನಲ್ಲಿ ಮೊಬೈಲ್ ಕಳವು : ಇಬ್ಬರ ಬಂಧನ

Update: 2022-02-27 17:04 GMT

ಉಡುಪಿ, ಫೆ.27: ಕೊಂಕಣ ರೈಲಿನಲ್ಲಿ ಮೊಬೈಲ್‌ ಗಳನ್ನು ಕಳವು ಮಾಡುತಿದ್ದ ಬಿಹಾರದ ಇಬ್ಬರು ಆರೋಪಿಗಳನ್ನು ಉಡುಪಿ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಪಡೆಯ ಸಿಬ್ಬಂದಿ ಬಂಧಿಸಿದ್ದಾರೆ. ಅವರಿಂದ ಸುಮಾರು 58,000 ರೂ. ಮೌಲ್ಯದ ಐದು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಬಿಹಾರ ರಾಜ್ಯದ ಹಾರಾದೀಯಾ ಜಿಲ್ಲೆಯ ಚಾಕಾಯ್‌ನ ಶಹಬುದ್ದೀನ್ (26) ಹಾಗೂ ತನ್ವೀರ್ ಆಲಂ(25) ಎಂದು ಗುರುತಿಸಲಾಗಿದೆ.

ಈಗಾಗಲೇ ಬಂದಿರುವ ಮಾಹಿತಿಯಂತೆ ಇಂದ್ರಾಳಿಯ ರೈಲ್ವೆ ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ಓಡಾಡುತಿದ್ದ ಇಬ್ಬರನ್ನು ರೈಲ್ವೆ ಪೊಲೀಸ್ ಶ್ರೀಕಾಂತ್ ಹಾಗೂ ಕರುಣಾಕರ ಪೂಜಾರಿ ಅವರು ವಶಕ್ಕೆ ಪಡೆದು ಕಚೇರಿಗೆ ಕರೆತಂದು ವಿಚಾರಿಸಿದಾಗ ಅವರ ಬಳಿ ಐದು ಮೊಬೈಲ್‌ಗಳು ಪತ್ತೆಯಾದವು.

ವಿಚಾರಣೆಯ ವೇಳೆ ಈ ಐದೂ ಮೊಬೈಲ್‌ಗಳನ್ನು ಕಳೆದ ಹತ್ತು ದಿನಗಳಲ್ಲಿ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರಿಂದ ಎಗರಿಸಿದ್ದಾಗಿ ಅವರು ತಿಳಿಸಿದರು. ರೈಲಿನಲ್ಲಿ ಸೀಟಿನ ಮೇಲಿಟ್ಟ ಹಾಗೂ ಚಾರ್ಜ್‌ಗೆ ಇಟ್ಟಿದ್ದ ಮೊಬೈಲ್‌ಗಳನ್ನು ಇವರು ಕಳವು ಮಾಡುತಿದ್ದರೆನ್ನಲಾಗಿದೆ. ಈ ಬಗ್ಗೆ ನವಿಮುಂಬೈ ಪನ್ವೇಲ್‌ನ ಪಿಂಟೋ ಪೌಲ್ ಎಂಬವರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು.

ಇದೀಗ ರೈಲ್ವೆ ಪೊಲೀಸರು ಇಬ್ಬರು ಬಂಧಿತರನ್ನು ಹೆಚ್ಚಿನ ವಿಚಾರಣೆಗಾಗಿ ಮಣಿಪಾಲ ಪೊಲೀಸರಿಗೆ ಒಪ್ಪಿಸಿ ದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News