ಸರಕಾರದ ಅನುದಾನ ಯಾರಿಗೆ ಎಷ್ಟೆಷ್ಟು?
ಗಂಭೀರ ಗಮನ ಬೇಡುವ/ಕಾರ್ಯಕ್ರಮದ ಅವಶ್ಯಕತೆ ಇರುವ ವಿಷಯಗಳ ಬಗ್ಗೆ ಭಾಜಪ ಸರಕಾರದ ಅನುದಾನ ಸೂಚಿ ನೋಡಿ:
ಬಜೆಟ್ ಕ್ರಮಾಂಕ 102. 400 ಸರಕಾರಿ ಉರ್ದು ಶಾಲೆಗಳಲ್ಲಿ ಉರ್ದು ಜೊತೆಗೆ ಇಂಗ್ಲಿಷ್ ಮಾಧ್ಯಮವನ್ನು 20-21ರ ಸಾಲಿನಲ್ಲಿ ಆರಂಭಿಸಲು ರೂ. ಒಂದು ಕೋಟಿ ಅನುದಾನ. (ಪ್ರತೀ ಶಾಲೆಗೆ ಎಷ್ಟು ಅನುದಾನ ಬರುತ್ತದೆ ಗೊತ್ತೇ? ತಲಾ 25 ಸಾವಿರ!!!)
ಬ.ಕ್ರ. 31 ಕೃಷಿ ಉತ್ಪನ್ನಗಳ ಬೆಲೆ ಕುಸಿತದ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರಗಳ ಮೂಲಕ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಕೇಂದ್ರಸರಕಾರದ ಅನುದಾನ ಬಿಡುಗಡೆ ವಿಳಂಬವಾದಾಗ ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಲು ಅನುವಾಗುವಂತೆ ಸ್ಥಾಪಿಸಲಾಗಿರುವ ಆವರ್ತ ನಿಧಿಯ ಮೊತ್ತವನ್ನು ಅವಶ್ಯಕತೆಗೆ ಅನುಗುಣವಾಗಿ ನಮ್ಮ ಸರಕಾರದ ಅವಧಿಯಲ್ಲಿ 2000 ಕೋಟಿ ರೂ.ಗಳವರೆಗೆ ಹೆಚ್ಚಿಸಲಾಗುವುದು. (ಆಯವ್ಯಯ 2020-21)
(ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ.)
ಕೇಂದ್ರ ಸರಕಾರವೇ ಈ ಬಾರಿ ಮಾರುಕಟ್ಟೆ ಮಧ್ಯಪ್ರವೇಶದ ನಿಧಿಯನ್ನು ಕೇವಲ ರೂ.1,500 ಕೋಟಿಗಿಳಿಸಿದೆ!! ಇನ್ನು ರಾಜ್ಯಕ್ಕೆ ಕೇಂದ್ರದ ಸಹಾಯ ಸಿಗುವುದು ಅಷ್ಟರಲ್ಲೇ ಇದೆ. ಈಗಾಗಲೇ ರಾಜ್ಯದ ರಾಗಿ, ಸೂರ್ಯಕಾಂತಿ ಇತ್ಯಾದಿ ಉತ್ಪನ್ನಗಳು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಗೆ ಮಾರಾಟವಾಗುತ್ತಿದ್ದು ಸರಕಾರದ ಮಧ್ಯಪ್ರವೇಶ ಅನುದಾನದ ಕೊರತೆಯಿಂದಾಗಿ ಅಸಾಧ್ಯವೇ ಸರಿ. ಇದು ಆಕಸ್ಮಿಕ ಅಲ್ಲ. ಉದ್ದೇಶಪೂರ್ವಕ. ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಹಾಗೂ ಟಿ.ಎ.ಪಿ.ಸಿ.ಎಂ.ಎಸ್.ಗಳು, ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಶೇಖರಣೆ ಮಾಡಿ ಇದರ ಮೇಲೆ ಮಾರುಕಟ್ಟೆ ಬೆಲೆಯ ಶೇ.60ರಷ್ಟು ಅಡಮಾನ ಸಾಲವನ್ನು ಶೇ.11ರ ಬಡ್ಡಿ ದರದಲ್ಲಿ ವಿತರಿಸುತ್ತಿವೆ. ಸದರಿ ಸಾಲಗಳ ಮೇಲೆ ಗರಿಷ್ಠ ಆರು ತಿಂಗಳ ಅವಧಿಗೆ ಶೇ.4ರ ಬಡ್ಡಿ ಸಹಾಯಧನವನ್ನು ರಾಜ್ಯ ಸರಕಾರವು ನೀಡಲು ಐದು ಕೋಟಿ ರೂ.ಗಳನ್ನು ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ. ಈ ಮೊತ್ತ ಕೇವಲ ರೂ. 250ಕೋಟಿ ಮೌಲ್ಯದ ಅಡಮಾನ ಸಾಲಕ್ಕೆ ಸಾಕಾಗುತ್ತದೆ. ಅರ್ಥಾತ್ ಸಾವಿರಾರು ಕೋಟಿ ಮೌಲ್ಯ ಕೃಷಿ ಉತ್ಪನ್ನವನ್ನು ರೈತರು ಶೇ.11ರ ಬಡ್ಡಿ ತೆತ್ತು ಅಡಮಾನ ಸಾಲ ಪಡೆಯಬೇಕಾಗಿದೆ. ಸರಕಾರ ಕನಿಷ್ಠ 2 ಸಾವಿರ ಕೋಟಿಯ ಅಡಮಾನ ಸಾಲದ ಬಡ್ಡಿಯನ್ನು ಮನ್ನಾ ಮಾಡಿದರೂ ಸಾಕು. ಅದಕ್ಕೆ ತಗಲುವ ಮೊತ್ತ ಕೇವಲ ರೂ. 100 ಕೋಟಿ.
‘‘ಸುಸ್ಥಿರ ಅಭಿವೃದ್ಧಿ ಗುರಿ 2030ರನ್ವಯ ತಾಯಂದಿರ ಮರಣ ಪ್ರಮಾಣವನ್ನು 70ಕ್ಕಿಂತಲೂ ಕಡಿಮೆಗೆ ಹಾಗೂ ಶಿಶು ಮರಣ ಪ್ರಮಾಣವನ್ನು 10ಕ್ಕಿಂತಲೂ ಕಡಿಮೆಗೆ ಇಳಿಸಬೇಕಾಗಿದ್ದು, ರಾಜ್ಯದಲ್ಲಿ ಈ ಮರಣ ಪ್ರಮಾಣ ಅನುಕ್ರಮವಾಗಿ 92 ಮತ್ತು 23ರಷ್ಟಿದೆ. ಈ ಗುರಿ ತಲುಪಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ನಮ್ಮ ಸರಕಾರ ಬದ್ಧವಾಗಿದೆ.’’
ಸಾಕಲ್ಲ! ಒಂದು ಘನ ಹೇಳಿಕೆ! ಇದನ್ನು ಸಾಧಿಸಲು ವಿಶೇಷ ಅಭಿಯಾನ; ಅದಕ್ಕೆ ಅನುದಾನ ಇತ್ಯಾದಿ ಯಾವ ಪ್ರಸ್ತಾಪವೂ ಇಲ್ಲ!
ಬ.ಕ್ರ. 146. ರಾಜ್ಯದಲ್ಲಿನ ಬಡ, ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಅಭ್ಯುದಯಕ್ಕೆ ನಮ್ಮ ಸರಕಾರ ಒತ್ತು ನೀಡಿದೆ. ಈ ಸಮುದಾಯಗಳ ವಿದ್ಯಾರ್ಥಿಗಳು, ಯುವಜನರ ಶಿಕ್ಷಣ ಹಾಗೂ ಸ್ವಾವಲಂಬನೆಗೆ ಬೆಂಬಲ ನೀಡಲು ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಮರಾಠಾ ಅಭಿವೃದ್ಧಿ ನಿಗಮ, ಕಾಡುಗೊಲ್ಲರ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಹಾಗೂ ಸವಿತಾ ಸಮಾಜ ಅಭಿವೃದ್ಧಿ ನಿಗಮಗಳಿಗೆ ಒಟ್ಟಾರೆ 500 ಕೋಟಿ ರೂ.ಗಳ ಅನುದಾನವನ್ನು ಪ್ರಸಕ್ತ ಸಾಲಿನಲ್ಲಿ ಒದಗಿಸಲಾಗಿದೆ.
ಈ ದಿಕ್ಕೆಟ್ಟ ಅಂಚಿನ ಸಮುದಾಯಗಳಿಗೆ ಒಟ್ಟಾರೆ ರೂ.500 ಕೋಟಿ!!
ಅದೇ ರಾಜ್ಯದ ಮೂರು ಬಲಾಢ್ಯ ಜಾತಿಗಳನ್ನು ಸಂಪ್ರೀತಿಗೊಳಿಸಲು ನೀಡಿದ ಅನುದಾನ ನೋಡಿ!
ಬ.ಕ್ರ.147. ವೀರಶೈವ ಲಿಂಗಾಯತ್ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಒಂದು ಹೊಸ ನಿಗಮವನ್ನು ಈಗಾಗಲೇ ಸ್ಥಾಪಿಸಲಾಗಿದೆ. ಇದಕ್ಕೆ 500 ಕೋಟಿ ರೂ.ಗಳ ಅನುದಾನ ನಿಗದಿಪಡಿಸಿದ್ದು, ಇದರಲ್ಲಿ ಈಗಾಗಲೇ 100 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ.
ಬ.ಕ್ರ.148. ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಒಂದು ಹೊಸ ನಿಗಮವನ್ನು ಸ್ಥಾಪಿಸಲಾಗುವುದು. ನಿಗಮದ ಚಟುವಟಿಕೆಗಳಿಗೆ 500 ಕೋಟಿ ರೂ. ವೆಚ್ಚ ಮಾಡಲು ಯೋಜಿಸಲಾಗಿದೆ.
ಬ.ಕ್ರ. 149. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ 50 ಕೋಟಿ ರೂ.ಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
***
ಇನ್ನಷ್ಟು..
ಕರ್ನಾಟಕ ಆರ್ಥಿಕ ಸಮೀಕ್ಷೆ 20-21ರ ಪ್ರಕಾರ 20-21ರ ಸಾಲಿನಲ್ಲಿ ಕರ್ನಾಟಕ ಸರಕಾರವು ಮುಂಗಾರಿನಲ್ಲಿ ರೂ. 89 ಕೋಟಿ, ಹಿಂಗಾರಿನಲ್ಲಿ ರೂ. 47 ಕೋಟಿಗಳಷ್ಟು ಮೌಲ್ಯದ ಬೀಜಗಳಿಗೆ ಸಬ್ಸಿಡಿ ನೀಡಿದೆ! ಇದು ಕರ್ನಾಟಕದ ರೈತರು ಬಳಸುವ ಬೀಜಗಳ ಪ್ರಮಾಣದ ಕಾಲು ಭಾಗವೂ ಆಗುವುದಿಲ್ಲ.
ಕರ್ನಾಟಕ ಆರ್ಥಿಕ ಸಮೀಕ್ಷೆಯ ಕೆಲವು ಶಿಫಾರಸುಗಳು:
* ಅಕ್ಕಿ ಮತ್ತಿತರ ಧಾನ್ಯಗಳ ಉತ್ಪಾದಕತೆಯನ್ನು ಈಗಿರುವ (2018-19) ಹೆಕ್ಟೇರೊಂದಕ್ಕೆ 1731ರಿಂದ 5033 ಕೆಜಿಗೆ ಏರಿಸಲು ಕ್ರಮ ಕೈಗೊಳ್ಳಬೇಕು. ತೀವ್ರ ಅಂತರ್ಜಲ ಸೂರೆಯಾಗಿರುವ 45 ತಾಲೂಕುಗಳಲ್ಲಿ ಸಿರಿ ಧಾನ್ಯಗಳನ್ನು ಪ್ರೋತ್ಸಾಹಿಸಬೇಕು. * 2019ರ ಪ್ರಕಾರ ಮಹಿಳೆ ಮತ್ತು ಮಕ್ಕಳಲ್ಲಿರುವ ರಕ್ತಹೀನತೆಯ ಪ್ರಮಾಣ ಶೇ. 45.4, ಶೇ. 34.7 ಇದನ್ನು ಶೂನ್ಯಕ್ಕಿಳಿಸಲು ಕ್ರಮ ಕೈಗೊಳ್ಳಬೇಕು.
* ಶಿಶು ಮರಣದ ಪ್ರಮಾಣ ಈಗಿರುವ ಸಾವಿರ ಜನನಕ್ಕೆ 24 ಇದ್ದು, ಅದನ್ನು ಹತ್ತಕ್ಕಿಳಿಸಬೇಕು. * ಹಾಗೆಯೇ, ತಾಯಂದಿರ ಮರಣ ಪ್ರಮಾಣ ಈಗ ಲಕ್ಷ ಜನನಕ್ಕೆ 97 ಇದ್ದು ಅದನ್ನು 50ಕ್ಕೆ ಇಳಿಸಬೇಕು.
* ಐದು ವರ್ಷದ ಒಳಗಿನ ಮಕ್ಕಳ ಮರಣ ಪ್ರಮಾಣ ಈಗ ಸಾವಿರ ಜನನಕ್ಕೆ 32 ಇದ್ದು ಅದನ್ನು 25ಕ್ಕೆ ಇಳಿಸಬೇಕು
* ಹತ್ತು ಸಾವಿರ ಜನಸಂಖ್ಯೆಗೆ ಈಗಿರುವ ವೈದ್ಯರು, ನರ್ಸ್, ಸೂಲಗಿತ್ತಿಯರ ಸಂಖ್ಯೆ 72ರಿಂದ 88ಕ್ಕೆ ಏರಿಸಬೇಕು.
* ಸೆಕೆಂಡರಿ ಶಿಕ್ಷಣದ ಹಂತದಲ್ಲಿ ಡ್ರಾಪ್‌ಔಟ್ ಪ್ರಮಾಣ 2019ರಲ್ಲಿ ಶೇ. 26.18 ಇದ್ದು ಅದನ್ನು ಶೂನ್ಯಕ್ಕಿಳಿಸಬೇಕು * ಮಹಿಳೆಯರ ಹೆಸರಿನಲ್ಲಿ ಜಮೀನು ಒಡೆತನ ಈಗ ಅಂದರೆ 2019ರಲ್ಲಿ 1.2 ಇದ್ದು ಅದನ್ನು ಶೇ. 50ಕ್ಕೆ ಏರಿಸಬೇಕು * 2019ರಲ್ಲಿ ಇರುವ ನಿರುದ್ಯೋಗದ ದರ ಶೇ. 4.8 ಅದನ್ನು ಶೇ. 1ಕ್ಕೆ ಇಳಿಸಬೇಕು. ಈ ಶಿಪಾರಸುಗಳನ್ನು ಸರಕಾರ ಗಂಭೀರವಾಗಿ ತಗೆದುಕೊಂಡು ಬಜೆಟ್‌ನಲ್ಲಿ ಸಾಕಷ್ಟು ಅನುದಾನ ನೀಡಿರುವ ಒಂದೇ ಒಂದು ಕಾರ್ಯಕ್ರಮ ಇಲ್ಲ!