ಅರ್ಹ ವಿದ್ಯಾರ್ಥಿಗಳ 1,227 ವೈದ್ಯಕೀಯ ಸೀಟುಗಳು ಖಾಸಗಿ ಕಾಲೇಜುಗಳಿಗೆ ವಾಪಸ್
ಬೆಂಗಳೂರು, ಮಾ.3: ಬಡ ಮತ್ತು ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೊರಕಬೇಕಿದ್ದ 1,227 ವೈದ್ಯಕೀಯ ಸೀಟುಗಳು ಪ್ರತಿಷ್ಠಿತ ಮತ್ತು ರಾಜಕೀಯ ನಂಟು ಹೊಂದಿರುವ ಕುಟುಂಬ ಒಡೆತನದ ಹಾಗೂ ಟ್ರಸ್ಟ್‌ಗಳ ಹಿಡಿತದಲ್ಲಿರುವ ಖಾಸಗಿ ಕಾಲೇಜುಗಳ ಪಾಲಾಗಿದೆ.
ರಶ್ಯ ದಾಳಿಯಿಂದ ಉಕ್ರೇನ್‌ನಲ್ಲಿ ಮೃತ ಪಟ್ಟಿರುವ ಕನ್ನಡಿಗ ವೈದ್ಯಕೀಯ ವಿದ್ಯಾರ್ಥಿ ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್ ಅವರು ಅರ್ಹತೆಯಿದ್ದರೂ ರಾಜ್ಯದಲ್ಲಿ ವೈದ್ಯಕೀಯ ಸೀಟಿಗೆ ಕೋಟಿ ಕೋಟಿ ರೂ. ಕೊಡಬೇಕಾದ ಸ್ಥಿತಿ ಇದೆ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಕಳೆದ 2 ವರ್ಷಗಳಲ್ಲಿ ರಾಜ್ಯ ಸರಕಾರವು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಸೀಟುಗಳನ್ನು ವಾಪಸ್ ಮಾಡಿರುವುದು ಮುನ್ನೆಲೆಗೆ ಬಂದಿದೆ.
ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಕೇಳಿದ್ದ ಪ್ರಶ್ನೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ನೀಡಿರುವ ಉತ್ತರದಲ್ಲಿ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ 1,227 ಸೀಟುಗಳನ್ನು ಹಿಂದಿರುಗಿಸಿರುವ ಮಾಹಿತಿ ಒದಗಿಸಿದ್ದಾರೆ.
ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದ ನಂತರ ಉಳಿಯುವ ವೈದ್ಯಕೀಯ ಸೀಟುಗಳನ್ನು ವೈದ್ಯಕೀಯ ಕಾಲೇಜುಗಳಿಗೆ ಹಿಂದಿರುಗಿಸುವಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ರವಿಕುಮಾರ್ ಹಿಂದಿನ ಸರಕಾರದ ವಿರುದ್ಧ ಆರೋಪಿಸಿದ್ದರು. ಆದರೀಗ ಬಿಜೆಪಿ ಸರಕಾರದ 2 ವರ್ಷದ ಅವಧಿಯಲ್ಲಿ 27 ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ 1,227 ಸೀಟುಗಳನ್ನು ಹಿಂದಿರುಗಿಸಲಾಗಿದೆ.
2018-19ರಲ್ಲಿಯೂ ಉಳಿಕೆ ಸೀಟುಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಿಂದಿರುಗಿಸಿದ್ದನ್ನು ಸಿಒಡಿ ತನಿಖೆ ನಡೆಸಬೇಕು ಎಂದು ರವಿಕುಮಾರ್ 2019ರ ಆಗಸ್ಟ್ 14ರಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿದ್ದ ಯಡಿಯೂರಪ್ಪ ತನಿಖೆ ಕೈಗೊಂಡು ವರದಿ ಸಲ್ಲಿಸಿ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದ ರ್ಶಿಗೆ ಸೂಚಿಸಿದ್ದರು.
ಕಾಲೇಜುಗಳಿಗೆ ವಾಪಸ್ 2018-19ರ ಅವಧಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಪತ್ರ ಬರೆದಿದ್ದ ರವಿಕುಮಾರ್ ಅವರು ತನಿಖೆ ಸಂಬಂಧ ಇದುವರೆಗೂ ದನಿ ಎತ್ತದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಖಾಸಗಿ ಕಾಲೇಜುಗಳಿಗೆ ವೈದ್ಯಕೀಯ ಸೀಟು ಮರಳಿಸಿರುವುದರ ಹಿಂದೆ ಅಂದಾಜು ಒಂದು ಸಾವಿರ ಕೋಟಿ ರೂ. ವ್ಯವಹಾರ ನಡೆದಿದೆ. ಇದು ಬಿಜೆಪಿ ಸರಕಾರದಲ್ಲಿ ನಡೆದಿರುವ ಅತಿ ದೊಡ್ಡ ಹಗರಣ ಎಂದು ಹೇಳಲಾಗುತ್ತಿದೆ.
ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಸೀಟುಗಳನ್ನು ಹಿಂದಿರುಗಿಸುವ ವ್ಯವಹಾರಕ್ಕೆ ಕಡಿವಾಣ ಹಾಕಲು ಕಳೆದ 2 ವರ್ಷಗಳಲ್ಲಿ ಬಿಜೆಪಿ ಸರಕಾರವು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಸೀಟು ಹಂಚಿಕೆಯ ನಿಯಮಗಳಿಗೆ ತಿದ್ದುಪಡಿ ತರಲು ಎಲ್ಲಾ ರೀತಿಯ ಅವಕಾಶಗಳಿದ್ದರೂ ಬಿಜೆಪಿ ಸರಕಾರವು ಕೈ ಚೆಲ್ಲಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದ ನಂತರ ಉಳಿಯುವ ವೈದ್ಯಕೀಯ ಸೀಟುಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಿಂದಿರುಗಿಸುವಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವು ಬಿಜೆಪಿ ಸರಕಾರದ ಅವಧಿಯಲ್ಲಿಯೂ ಮುಂದುವರಿದಿದೆ. ಬಡ ಮತ್ತು ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದೊಂದು ಪ್ರವೇಶಕ್ಕೆ ಒಂದು ಲಕ್ಷ ರೂ. ಶುಲ್ಕವಿದೆ. ಆದರೆ ಇದೇ ಸೀಟನ್ನು ಖಾಸಗಿ ವೈದ್ಯಕೀಯ ಕಾಲೇಜುಗಳು ಅಂದಾಜು ಒಂದು ಕೋಟಿ ರೂ.ಗೆ ಬಿಕರಿ ಮಾಡಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರಕಾರ ವಾಪಸ್ ಪಡೆದು ಅರ್ಹ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಕಾರದ ಕೋಟಾದಲ್ಲಿ ಕೌನ್ಸೆಲಿಂಗ್ ಮೂಲಕ ಹಂಚಿಕೆಯ ಆಯ್ಕೆ ಮಾಡಿಕೊಡುವ ಕುರಿತು ಬಿಜೆಪಿ ಸರಕಾರ ತನ್ನ ನಿಲುವನ್ನು ವ್ಯಕ್ತಪಡಿಸಿಲ್ಲ.
2019-20 ಮತ್ತು 2020-21ನೇ ಸಾಲಿನಲ್ಲಿ ನಡೆದಿದ್ದ ವೈದ್ಯಕೀಯ ಸೀಟು ಹಂಚಿಕೆಯ ಕೌನ್ಸೆಲಿಂಗ್ ಪ್ರಕ್ರಿಯೆ ಮುಕ್ತಾಯವಾದ ನಂತರ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ, ಆದಿಚುಂಚನಗಿರಿ, ಮುರುಘಾ ಮಠ ಸೇರಿದಂತೆ ಪ್ರಭಾವಿ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ 1,227 ಸೀಟುಗಳನ್ನು ಹಿಂದಿರುಗಿಸಿರುವುದು ಸಚಿವ ಸುಧಾಕರ್ ನೀಡಿದ್ದ ಉತ್ತರದಿಂದ ತಿಳಿದು ಬಂದಿದೆ.
ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಡಾ. ಶಾಮನೂರು ಶಿವಶಂಕರಪ್ಪಅವರ ಹೆಸರಿನಲ್ಲಿರುವ ಮೆಡಿಕಲ್ ಕಾಲೇಜು, ಚಿತ್ರದುರ್ಗ ಮುರುಘಾ ಮಠ ನಡೆಸುವ ಬಸವೇಶ್ವರ ಮೆಡಿಕಲ್ ಕಾಲೇಜು, ಆದಿಚುಂಚನಗಿರಿ ಮೆಡಿಕಲ್ ಕಾಲೇಜು ಸೇರಿದಂತೆ ಹಲವು ಖಾಸಗಿ ವೈದ್ಯಕೀಯ ಕಾಲೇಜುಗಳೂ ಈ ಪಟ್ಟಿಯಲ್ಲಿವೆ.
► ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಿಂದಿರುಗಿಸಿರುವ ಪಟ್ಟಿ ಡಾ. ಬಿ.ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು -40 ಸೀಟು
► ಖ್ವಾಜಾ ಬಂದೇ ನವಾಝ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗುಲ್ಬರ್ಗಾ-31
► ಎಂವಿಜೆ ಮೆಡಿಕಲ್ ಕಾಲೇಜು ರೀಸರ್ಚ್ ಆಸ್ಪತ್ರೆ ಚನ್ನಸಂದ್ರ, ಬೆಂಗಳೂರು-59
► ವೈದೇಹಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರೀಸರ್ಚ್ ಸೆಂಟರ್ ಬೆಂಗಳೂರು-59
► ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಮಂಗಳೂರು-39
► ಶ್ರೀ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಚಿತ್ರದುರ್ಗ-21
► ಆದಿಚುಂಚನಗಿರಿ ಇನ್‌ಸ್ಟಿಟ್ಯೂಟ್ ಮೆಡಿಕಲ್ ಸೈನ್ಸಸ್ ಬೆಳ್ಳೂರು, ಮಂಡ್ಯ-27
► ಅಲ್. ಅಮೀನ್ ಮೆಡಿಕಲ್ ಕಾಲೇಜು, ವಿಜಯಪುರ-25
► ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜು ರೀಸರ್ಚ್ ಸೆಂಟರ್, ಬಾಗಲಕೋಟೆ-80
► ಎಸ್‌ಡಿಎಂ ಕಾಲೇಜು ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ಆಸ್ಪತ್ರೆ, ಧಾರವಾಡ-14
► ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜು, ಕಲ್ಬುರ್ಗಿ-60
► ನವೋದಯ ಮೆಡಿಕಲ್ ಕಾಲೇಜು, ರಾಯಚೂರು-60
► ವೆಂಕಟರಮಣ ಗೌಡ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ, ದಕ್ಷಿಣ ಕನ್ನಡ-27
► ಜಗದ್ಗುರು ಮುರಘಾರಾಜೇಂದ್ರ ಮೆಡಿಕಲ್ ಕಾಲೇಜು, (ಜೆಜೆಎಂ) ದಾವಣಗೆರೆ-98
► ಶಾಮನೂರು ಶಿವಶಂಕರಪ್ಪ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಸ್ ದಾವಣಗೆರೆ-60
► ಸಪ್ತಗಿರಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಬೆಂಗಳೂರು - 59
► ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ರೀಸರ್ಚ್ ಸೆಂಟರ್, ಮಂಗಳೂರು - 58
► ಸುಬ್ಬಯ್ಯ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಶಿವಮೊಗ್ಗ-59
► ಬಿಜಿಎಸ್ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಕೆಂಗೇರಿ, ಬೆಂಗಳೂರು-22
► ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ರೀಸರ್ಚ್ ಆಸ್ಪತ್ರೆ ತುಮಕೂರು-55
► ದಿ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ರೀಸರ್ಚ್ ಕೇಂದ್ರ, ಬೆಂಗಳೂರು-52
► ಆಕಾಶ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರೀಸರ್ಚ್ ಸೆಂಟರ್, ಬೆಂಗಳೂರು-60
► ಕಣಚೂರು ಇನ್‌ಸ್ಟಿಟ್ಯೂಟ್ ಅಫ್ ಮೆಡಿಕಲ್ ಸೈನ್ಸ್ ರೀಸರ್ಚ್ ಸೆಂಟರ್, ಮಂಗಳೂರು-59
► ಈಸ್ಟ್ ಪಾಯಿಂಟ್ ಕಾಲೇಜು ಆಫ್ ಮೆಡಿಕಲ್ ಸೈನ್ಸಸ್ ರೀಸರ್ಚ್ ಸೆಂಟರ್, ಬೆಂಗಳೂರು-58
► ಡಾ.ಚಂದ್ರಮ್ಮ ದಯಾನಂದ ಸಾಗರ್ ಇನ್‌ಸ್ಟಿಟ್ಯೂಟ್ ಅಫ್ ಮೆಡಿಕಲ್ ಎಜುಕೇಷನ್, ರಾಮನಗರ-23
2019-20ನೇ ಸಾಲಿನ ವೈದ್ಯಕೀಯ ಸೀಟುಗಳು ಹಂಚಿಕೆಯಾಗದೆ ಮಾಪ್‌ಅಪ್ ರೌಂಡ್ ಸುತ್ತಿನ ನಂತರ ಇತರ ಕೋಟಾದಡಿ ಒಟ್ಟು 530 ಸೀಟುಗಳು ಬಾಕಿ ಉಳಿದಿರುತ್ತವೆ. 2020-21ನೇ ಸಾಲಿನ ವೈದ್ಯಕೀಯ ಸೀಟುಗಳು ಹಂಚಿಕೆಯಾಗದೆ ಮಾಪ್ ಅಪ್ ರೌಂಡ್ ಸುತ್ತಿನ ನಂತರ ಇತರ ಕೋಟಾದಡಿ ಒಟ್ಟು 697 ಸೀಟುಗಳು ಬಾಕಿ ಉಳಿದಿರುವುದು ಸಚಿವ ಸುಧಾಕರ್ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.
2019-20 ಮತ್ತು 2020-21ನೇ ಶೈಕ್ಷಣಿಕ ವರ್ಷದಲ್ಲಿ 1,227 ಸರಕಾರಿ ಕೋಟಾದ ವೈದ್ಯಕೀಯ ಸೀಟುಗಳನ್ನು ಖಾಸಗಿಯವರಿಗೆ ಹಿಂದಿರುಗಿಸಿರುವುದು ಮತ್ತು 2021-22ರ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಸಂಸ್ಥೆಗಳಿಂದ ಸರಕಾರ ವಾಪಸ್ ಪಡೆದು ಅರ್ಹ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಕಾರದ ಕೋಟಾದಲ್ಲಿ ಕೌನ್ಸೆಲಿಂಗ್ ಮೂಲಕ ಹಂಚಿಕೆಯ ಆಯ್ಕೆ ಮಾಡಿಕೊಡುವ ಕುರಿತು ಕೇಳಿದ್ದ ಪ್ರಶ್ನೆಗೆ ಸಚಿವ ಸುಧಾಕರ್ ಅವರು ಯಾವುದೇ ಉತ್ತರವನ್ನೂ ನೀಡಿಲ್ಲ.
ಎಂಬಿಬಿಎಸ್ ಸೀಟ್‌ಗೆ ಕನಿಷ್ಠ 1 ಕೋಟಿ ರೂ.ಯಿಂದ ಗರಿಷ್ಠ 1.60 ಕೋಟಿ ಇದೆ. ಸ್ನಾತಕೋತ್ತರ ತರಗತಿಯ ಒಂದು ಸೀಟ್‌ಗೆ ಗರಿಷ್ಠ 3 ಕೋಟಿ ಕನಿಷ್ಠ 2 ಕೋಟಿ ರೂ.ಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳು ವಸೂಲು ಮಾಡುತ್ತವೆ ಎಂಬ ಆರೋಪಗಳು ಹಿಂದಿನಿಂದಲೂ ಕೇಳಿ ಬರುತ್ತಿವೆ. ಅಲ್ಲದೆ ಸರಕಾರ ಹಿಂದಿರುಗಿಸಿರುವ ಸೀಟುಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳು ದುಬಾರಿ ದರಕ್ಕೆ ಬಿಕರಿ ಮಾಡುತ್ತವೆ ಎಂಬ ಆಪಾದನೆಯೂ ಇದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಸೀಟು ಹಂಚಿಕೆ ಮಾಡಲಾಗುತ್ತದೆ. ಈ ಖಾಸಗಿ ಕಾಲೇಜುಗಳು ವಿಧಿಸಿರುವ ಶುಲ್ಕ ಭರಿಸಲು ಶಕ್ತರಾಗದ ವಿದ್ಯಾರ್ಥಿಗಳು ಆ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದಿಲ್ಲ. ಹೀಗಾಗಿ ಸರಕಾರಿ ಸೀಟುಗಳು ಅಲ್ಲಿಯೇ ಉಳಿಯುತ್ತವೆ. ಆ ನಂತರ ಈ ಸೀಟುಗಳನ್ನು ಕೋಟ್ಯಂತರ ರುಪಾಯಿಗೆ ಅನ್ಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಮತ್ತು ಆರ್ಥಿಕವಾಗಿ ಶಕ್ತರಾಗಿರುವ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತದೆ ಎನ್ನಲಾಗಿದೆ.