100ನೇ ಟೆಸ್ಟ್ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ, ಸ್ಮರಣಿಕೆ ನೀಡಿದ ರಾಹುಲ್ ದ್ರಾವಿಡ್

Update: 2022-03-04 14:52 GMT
photo: BCCI

ಮೊಹಾಲಿ: ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 100 ಟೆಸ್ಟ್ ಪಂದ್ಯಗಳನ್ನು ಆಡಿದ 12 ನೇ ಭಾರತೀಯ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾದರು.

"ಕಠಿಣ ಅಂತರ್ ರಾಷ್ಟ್ರೀಯ ವೇಳಾಪಟ್ಟಿಯ ಮೂಲಕ ಎಲ್ಲಾ ಮೂರು ಪ್ರಕಾರದ ಕ್ರಿಕೆಟ್ ನಲ್ಲಿ  ಆಡಿದ ಹೊರತಾಗಿಯೂ ಮೈಲಿಗಲ್ಲನ್ನು ಸಾಧಿಸಬಹುದು ಎಂಬ ಅಂಶದಿಂದ "ಮುಂದಿನ ಪೀಳಿಗೆ" ಸ್ಫೂರ್ತಿ ಪಡೆಯಬೇಕೆಂದು ನಾನು ಬಯಸುತ್ತೇನೆ''ಎಂದು ಶುಕ್ರವಾರ ಕೊಹ್ಲಿ ಹೇಳಿದ್ದಾರೆ.

ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧಶುಕ್ರವಾರ ಆರಂಭವಾದ  ಮೊದಲ ಪಂದ್ಯದಲ್ಲಿ 100 ನೇ ಟೆಸ್ಟ್ ಪಂದ್ಯದ ಸ್ಮರಣಾರ್ಥವಾಗಿ ಭಾರತೀಯ ಕ್ರಿಕೆಟ್‌ನ ಸೂಪರ್‌ಸ್ಟಾರ್ ಕೊಹ್ಲಿ ಅವರನ್ನು ಬಿಸಿಸಿಐ ಸನ್ಮಾನಿಸಿತು. ಕೊಹ್ಲಿ ತಮ್ಮ 100ನೇ ಪಂದ್ಯದಲ್ಲಿ 76 ಎಸೆತಗಳಲ್ಲಿ 5 ಬೌಂಡರಿ ಸಹಿತ 45 ರನ್ ಗಳಿಸಿ ಸ್ಪಿನ್ನರ್ ಲಸಿತ್ ಎಂಬುಲ್ಡೇನಿಯಾಗೆ ವಿಕೆಟ್ ಒಪ್ಪಿಸಿದರು.

ಬಯೋ-ಬಬಲ್ ನಿರ್ಬಂಧಗಳಿಂದಾಗಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಕೊಹ್ಲಿಗೆ ಕ್ಯಾಪ್ ಹಾಗೂ  ಹೊಳೆಯುವ ಸ್ಮರಣಿಕೆಯನ್ನು ನೀಡಿದರು.

ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮೈದಾನಕ್ಕೆ ಬಂದಿದ್ದರು. ಅವರ ಸಹೋದರ ವಿಕಾಸ್ ಕೊಹ್ಲಿ ಸ್ಟ್ಯಾಂಡ್‌ನಲ್ಲಿದ್ದರು.

ಬಿಸಿಸಿಐನಿಂದ ಅಧ್ಯಕ್ಷ ಸೌರವ್ ಗಂಗುಲಿ, ಕಾರ್ಯದರ್ಶಿ ಜಯ್ ಶಾ, ಖಜಾಂಚಿ ಅರುಣ್ ಧುಮಾಲ್ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಉಪಸ್ಥಿತರಿದ್ದರು.

ಸುನೀಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕರ್, ಕಪಿಲ್ ದೇವ್, ಸಚಿನ್ ತೆಂಡುಲ್ಕರ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸೌರವ್ ಗಂಗುಲಿ, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಹಾಗೂ  ಇಶಾಂತ್ ಶರ್ಮಾ ಅವರು ಈಗಾಗಲೇ ದೇಶಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಈ ಪಟ್ಟಿಗೆ ಕೊಹ್ಲಿ ಸೇರಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News