ಆತ್ಮರತಿಯ ಆನಂದ
ಆತ್ಮರತಿ ಅಥವಾ Narcissistic Personality Disorder ಒಮ್ಮೆ ಹೊಕ್ಕಿಕೊಂಡಿತೆಂದರೆ ಅದರಿಂದ ಬಿಡುಗಡೆ ಇಲ್ಲ ಅಂತೇನಿಲ್ಲ. ಇದು ಅನುವಂಶೀಯವಾದ ಸಮಸ್ಯೆಯೇನಲ್ಲ. ಜೊತೆಗೆ ಇದು ಸಾಂಕ್ರಾಮಿಕವೂ ಅಲ್ಲ. ಮನೋರೋಗಗಳಲ್ಲಿ ಕೆಲವು ಸಾಂಕ್ರಾಮಿಕವಾಗುವುದಿವೆ. ಒಬ್ಬರ ವರ್ತನೆ ಮತ್ತು ನಡವಳಿಕೆ ಅಥವಾ ಬಲವಾದ ಪ್ರಭಾವಗಳು ಇನ್ನೊಬ್ಬರಿಗೂ ಅಂತಹ ವರ್ತನೆಯನ್ನು ಪ್ರೇರೇಪಿಸುವಂತಹ ಸೋಂಕು ಇರುತ್ತದೆ. ಒಬ್ಬ ದುರ್ಬಲ ಮನಸ್ಕನು ತನಗಾಗಿರುವ ಭಯ ಅಥವಾ ಇನ್ನಿತರ ನಕಾರಾತ್ಮಕ ಭಾವವನ್ನು ಪದೇಪದೇ ವ್ಯಕ್ತಪಡಿಸುತ್ತಾ ಇನ್ನೊಬ್ಬ ದುರ್ಬಲ ಮನಸ್ಕನಿಗೆ ಅದನ್ನು ಸೋಂಕಿಸಬಹುದು. ಇದು ಆ ಬಗೆಯದೂ ಅಲ್ಲ. ನಿಜ ಹೇಳಬೇಕೆಂದರೆ ನಾರ್ಸಿಸಂ ಅಥವಾ ಆತ್ಮರತಿಯರಿಮೆ ಎಲ್ಲರಲ್ಲೂ ಇದ್ದೇ ಇರುತ್ತದೆ.
ಆದರೆ ಅದು ಎಷ್ಟಿರಬೇಕೋ ಅಷ್ಟೇ ಇದ್ದರೆ ಆರೋಗ್ಯಕರ ಮನಸ್ಥಿತಿ ಎಂದೂ, ಮಿತಿಮೀರಿದರೆ ಅನಾರೋಗ್ಯಕರ ಮನಸ್ಥಿತಿ ಎಂದೂ ತಿಳಿಯಬೇಕು. ಒಬ್ಬ ವ್ಯಕ್ತಿಯ ಸಾಧಾರಣ ಬೆಳವಣಿಗೆಗೆ ಆತ್ಮರತಿಯೆಂಬುದು ಬಹಳ ಸಾಮಾನ್ಯವೂ, ಕೆಲವೊಮ್ಮೆ ಅಗತ್ಯವೂ ಆಗಿರುತ್ತದೆ, ಹಸ್ತಮೈಥುನದಂತೆ. ಸಿಗ್ಮಂಡ್ ಫ್ರಾಯ್ಡಾ ಆತ್ಮರತಿಗೆ ಕೊಡುವ ಒಂದು ಸಾಧಾರಣ ಉದಾಹರಣೆ ಏನೆಂದರೆ, ‘ಗಂಡ ಹೆಂಡತಿ ಮಗುವನ್ನು ಹೆರುವುದು’, ತಮ್ಮ ತದ್ರೂಪುಗಳನ್ನು ರೂಪಿಸುವುದು ಅಥವಾ ವಂಶ ಮುಂದುವರಿಸುವುದೂ ಕೂಡಾ ಆತ್ಮರತಿಯೇ. ಇರಬಹುದು. ಅರಿವಿಗೆಟುಕದ ಅನೇಕ ಅರಿಮೆಗಳು ನಮ್ಮಲ್ಲಿ ಅಂತರ್ಗತವಾಗಿರುತ್ತವೆ. ಹಾಗಿರುವಾಗ, ಅಯ್ಯೋ ನನಗೆ ಇಂತಹದ್ದೊಂದು ಅರಿಮೆ ಇದೆ, ಕಾಂಪ್ಲೆಕ್ಸ್ ಕಾಡುತ್ತಿದೆ ಎಂದು ರೋಗಗ್ರಸ್ತ ಮನೋಭಾವವನ್ನು ಹೊಂದುವ ಬದಲು, ‘ಇದಕ್ಕೆ ಈ ಹೆಸರಿನಿಂದ ಕರೆಯುತ್ತಾರೆ’ ಎಂಬುವ ತಿಳುವಳಿಕೆಯನ್ನು ಹೊಂದುವುದು ಮತ್ತು ಮಿತಿ ಮೀರಲು ಹಾತೊರೆವ ಅರಿಮೆಯನ್ನು ಅರಿವಿನಿಂದ ಅಂಕೆಯಲ್ಲಿಡುವುದು ಜಾಣನಾದವನ ಲಕ್ಷಣ. ಆದರೆ ಅದರ ಜೊತೆಗೆ ‘ನಾದೇವದರಿಮೆ’ ಎಂಬುದಿದೆ. ಅಂದರೆ ಗಾಡ್ ಕಾಂಪ್ಲೆಕ್ಸ್.
ಈ ಆತ್ಮರತಿಯ ಪರಾಕಾಷ್ಟೆಯನ್ನು ಈ ಗಾಡ್ ಕಾಂಪ್ಲೆಕ್ಸ್ ರೋಗದಲ್ಲಿ ಕಾಣಬಹುದು. ಬಹಳಷ್ಟು ಸರ್ವಾಧಿಕಾರಿಗಳನ್ನು ಸಂಬಂಧಗಳಲ್ಲಿ, ಮನೆಗಳಲ್ಲಿ, ಕೆಲಸ ಮಾಡುವ ಜಾಗಗಳಲ್ಲಿ, ರಾಜಕೀಯ ಪಕ್ಷಗಳಲ್ಲಿ, ದೇಶದ ಆಡಳಿತ ಯಂತ್ರಗಳಲ್ಲಿ ಕಾಣುತ್ತೀರಿ. ಅವರು ಅವರ ಕರ್ತವ್ಯವನ್ನು ಮಾಡಿದರೂ ನಿರ್ಲಜ್ಜೆಯಿಂದ ತಾವು ಏನೋ ಮಹಾನ್ ಸಾಧಿಸಿದವರಂತೆ ಬಿಂಬಿಸಿಕೊಳ್ಳುತ್ತಾರೆ. ಅವರು ಸದಾ ಬಯಸುವುದು ತಮ್ಮ ಸುತ್ತಲೂ ಹೊಗಳುಭಟರನ್ನು. ಹೊಗಳಿದಷ್ಟು ಉನ್ಮತ್ತತೆಯಿಂದ ಅಹಮಿನ ಅಮಲಿನಲ್ಲಿ ವಿಹರಿಸುತ್ತಿರುತ್ತಾರೆ. ನಾನು ಮನೆಗೆ ಸಾಮಾನು ತಂದು ಹಾಕುವುದು ಎಂಬ ಅಪ್ಪ, ಈ ಮನೆಯಲ್ಲಿ ಅಡುಗೆ ಮಾಡುವುದು ನಾನು ಎಂಬ ಅಮ್ಮನಿಂದ ಹಿಡಿದು, ನಾವು ಯುದ್ಧ ಪೀಡಿತ ದೇಶಕ್ಕೆ ನಮ್ಮ ವಿಮಾನ ಕಳುಹಿಸಿದೆವು ಎಂಬುವುದರವರೆಗೂ ಈ ಗಾಡ್ ಕಾಂಪ್ಲೆಕ್ಸ್ ಜನರು ತಮ್ಮ ಸಾಮಾನ್ಯ ಜವಾಬ್ದಾರಿಯನ್ನೂ ತಮ್ಮ ಅಮಿತ ಔದಾರ್ಯದ ಪರಮಾವಧಿಯೆಂಬಂತೆ ಬಿಂಬಿಸಿಕೊಳ್ಳುತ್ತಾ ಜೈಕಾರಗಳನ್ನು ಬಯಸುತ್ತಿರುತ್ತಾರೆ. ನಿರ್ಲಜ್ಜೆಯ ಸ್ವಾರ್ಥಪರತೆ ಆತ್ಮರತಿಯ ಪರಮಾವಧಿಯ ತುತ್ತತುದಿ. ಅಜ್ಞಾನವೇ ಅಹಂಕಾರದ ಮೂಲ. ಆ ಅಹಂಕಾರಕ್ಕೆ ದಕ್ಕುವ ಅಮಲಿನಲ್ಲಿ ಮೈಮರೆತು, ಅರಿವುಗೇಡಿತನದಲ್ಲಿ ಓಲಾಡುವಾಗ ಅದು ನಿರ್ಲಜ್ಜೆಯಿಂದ ಕೂಡಿರುತ್ತದೆ. ಈ ರೋಗ ವ್ಯಕ್ತಿಗತವಾಗಿಯೂ, ಸಾಮುದಾಯಿಕವಾಗಿಯೂ, ಸಾಂಸ್ಥಿಕವಾಗಿಯೂ, ವ್ಯವಸ್ಥೆಯ ರೂಪದಲ್ಲಿಯೂ ಕಾಣಬಹುದು. ಹಾಗಾಗಿ ವ್ಯಕ್ತಿಗತವಾಗಿಯಾದರೂ, ಸಾಮೂಹಿಕವಾದರೂ ವರ್ತಿಸುವಾಗ ನಾವೆಲ್ಲಿ ಲಜ್ಜೆಗೇಡಿತನದಿಂದ ಅತೀವ ಪ್ರಶಂಸೆಗಳನ್ನು ಬಯಸುತ್ತಾ ಆತ್ಮರತಿಯ ಸಂತೋಷದ ಅಮಲಿನಲ್ಲಿ ತೇಲಾಡುತ್ತಿದ್ದೇವಾ, ಇಲ್ಲವಾ ಅಂತ ಕೊಂಚ ಗಮನಿಸಿಕೊಳ್ಳಬೇಕು. ಅದನ್ನೇ ಆತ್ಮಾವಲೋಕನ ಅಥವಾ ಇಂಟ್ರಾಸ್ಪೆಕ್ಷನ್ ಅನ್ನುವುದು. ಇದು ನಾರ್ಸಿಸಂನ ಕಡಿಮೆ ಮಾಡಲು ಅಥವಾ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಹಳ ಒಳ್ಳೆಯ ಚಿಕಿತ್ಸಕಾ ವಿಧಾನ.