ಬದನವಾಳಿನ ದುರಂತ
1993ರ ಎಪ್ರಿಲ್ ತಿಂಗಳಲ್ಲಿ ನಂಜನಗೂಡು ತಾಲೂಕಿನ ಬದನವಾಳು ಎಂಬ ಪುಟ್ಟ ಊರಿನಲ್ಲಿ ದೇವಾಲಯ ಪ್ರವೇಶದ ಪ್ರಶ್ನೆಯ ಹಿನ್ನೆಲೆಯಲ್ಲಿ ದಲಿತರು ಹಾಗೂ ಲಿಂಗಾಯತರ ನಡುವೆ ಆರಂಭಗೊಂಡ ವಿರಸ ಇಡೀ ತಾಲೂಕಿಗೆ ಹಬ್ಬಿತ್ತು. ಆಗ ಅಲ್ಲ್ಲಿಗೆ ಧಾವಿಸಿದ್ದ ಪಿ. ಲಂಕೇಶ್ ಆ ಸಮಯದ ಅಲ್ಲಿನ ವಾಸ್ತವವನ್ನು ತೆರೆದಿಟ್ಟಿದ್ದರು.
ನಂಜನಗೂಡು ಎಂತಹ ಐತಿಹಾಸಿಕ ಜಾಗ! ಇಲ್ಲಿಯ ಪುಟ್ಟ ನದಿ, ತೆಂಗಿನ ತೋಟಗಳು, ಬಾಳೆಯ ಬನಗಳು, ಇಲ್ಲಿಯ ನಂಜುಂಡ ದೇವರನ್ನು ಕುರಿತ ನೂರಾರು ಲಾವಣಿಗಳು.... ಮೈಸೂರಿಂದ ಕೇವಲ ಇಪ್ಪತ್ತು ಮೈಲಿ ದೂರದಲ್ಲಿರುವ ಈ ಊರು ಪಟ್ಟಣದ ಗದ್ದಲದಿಂದ ದೂರ, ಆದರೆ ಪಟ್ಟಣದ ಸಂಪತ್ತು ಮತ್ತು ಸಂಸ್ಕೃತಿಗೆ ಹತ್ತಿರ. ಇದರಿಂದಾಗಿಯೇ ಮೈಸೂರಿನ ಅರಮನೆ ನಂಜನಗೂಡಿಂದ ನೂರಾರು ಜನ ವಿದ್ವಾಂಸರನ್ನು ಪಡೆಯಿತು. ನಂಜನಗೂಡಿನ ಗ್ರಾಮೀಣ ರಮ್ಯತೆ ಮತ್ತು ಸಾಂಸ್ಕೃತಿಕ ಅರ್ಥಪೂರ್ಣತೆ ಅನನ್ಯವಾದವು, ಮೈಸೂರು ಜಿಲ್ಲೆ ಒಕ್ಕಲಿಗರು, ಹರಿಜನರು, ಲಿಂಗಾಯತರು, ಬೇಡರನ್ನು ಸಮಾನ ಸಂಖ್ಯೆಯಲ್ಲಿ ಪಡೆದಿದೆ; ನಂಜನಗೂಡು ಈ ಸಹಬಾಳ್ವೆಗೆ ಸಂಕೇತವಾಗಿದೆ.
ಮೊನ್ನೆ ಎಂಟನೇ ತಾರೀಕು ಮೈಸೂರನ್ನು ಬಿಟ್ಟು ನಂಜನಗೂಡಿನ ಬದನವಾಳು ಗ್ರಾಮದತ್ತ ಹೊರಟೆವು. ಈ ಗ್ರಾಮದ ಇತ್ತೀಚಿನ ದುರಂತದ ಬಗ್ಗೆ ನಮ್ಮ ಪತ್ರಿಕೆಯನ್ನೊಳಗೊಂಡು ಎಲ್ಲ ವೃತ್ತಪತ್ರಿಕೆಗಳು ಬರೆದಿವೆ. ಮತ್ತೆ ಹೇಳುವುದು ಏನಿಲ್ಲ, ಆದರೆ ಖುದ್ದು ಕಂಡದ್ದು ಮತ್ತು ಅಲ್ಲಿ ನಿಂತು ಯೋಚಿಸಿದ್ದನ್ನು ಮಾತ್ರ ಇಲ್ಲಿ ಹೇಳುತ್ತಿದ್ದೇನೆ. ಕಣ್ಣಾರೆ ಕಂಡದ್ದು: ಸುಮಾರು ನಾನೂರು ಮನೆಯ ಈ ಗ್ರಾಮದಲ್ಲಿ ಬೀದಿಯಲ್ಲಿ ಆಡಿಕೊಳ್ಳುವ ಒಂದೇ ಒಂದು ಹಸುಳೆ ಕಂಡುಬರಲಿಲ್ಲ. ಅಂದಮೇಲೆ ಇಲ್ಲಿಯ ದುರಂತವನ್ನು ನೀವು ಊಹಿಸಬಹುದು. ಹದಿಹರೆಯದವರಾಗಲಿ, ಮಕ್ಕಳಾಗಲಿ ಇಲ್ಲದ ಖಾಲಿ ರಸ್ತೆಗಳು, ಬೀಗ ಹಾಕಿದ ಹಲವಾರು ಮನೆಗಳು. ಅಲ್ಲಲ್ಲಿ ಖಾಲಿ ಮನೆಯ ಜಗಲಿಯ ಮೇಲೆ ಕೂತ ಪೊಲೀಸರು; ಇಲ್ಲಿ ಒಟ್ಟು 160ಜನ ಪೊಲೀಸರಿದ್ದಾರೆ. ಸದ್ಯಕ್ಕೆ ಬದನವಾಳು ಗ್ರಾಮದಲ್ಲಿ ಭಯ ಹುಟ್ಟಿಸುವವರು ಪೊಲೀಸರೇ, ಈ ಗ್ರಾಮ ಮತ್ತು ಸುತ್ತಮುತ್ತಲ ತೋಟಗಳಿಂದ ಸಲೀಸಾಗಿ ಎಳನೀರು ಕಿತ್ತು ಕುಡಿಯುತ್ತಾ ನೆಮ್ಮದಿಯಾಗಿರುವವರು ರಿಸರ್ವ್ ಪೊಲೀಸರು. ಈ ಬಗ್ಗೆ ಊರವರು ಚಕಾರವೆತ್ತುವುದಿಲ್ಲ.
ನಾವು ಬದನವಾಳಿಗೆ ಹೋದ ಹಿಂದಿನ ದಿನ ಭಾಸ್ಕರ್ ತಮ್ಮ ಕುಟುಂಬದೊಂದಿಗೆ ಗಾಡಿಯಲ್ಲಿ ಸಾಮಾನು ಹಾಕಿಕೊಂಡು ಊರುಬಿಟ್ಟು ಹೊರಟುಹೋದರು. ಭಾಸ್ಕರ್ ಯಾರೆಂದು ನಿಮಗೆ ತಿಳಿದಿರಲಿ. ಕಳೆದ ಸುಮಾರು ನಲವತ್ತು ವರ್ಷದಿಂದ ಮೈಸೂರಲ್ಲಿ ಗುಮಾಸ್ತರಾಗಿದ್ದು ತಮ್ಮ ಬದನವಾಳು ಗ್ರಾಮವನ್ನು ಬಹುವಾಗಿ ಪ್ರೀತಿಸುತ್ತಿದ್ದವರು ಭಾಸ್ಕರ್. ಸದಾ ನಗುನಗುತ್ತಾ ಎಲ್ಲರೊಂದಿಗೆ ಸ್ನೇಹದಿಂದ ಇರುತ್ತಿದ್ದ ಭಾಸ್ಕರ್ ಸರಳ, ಪ್ರಾಮಾಣಿಕ ವ್ಯಕ್ತಿ. ಮೊನ್ನೆ ಕೊಲೆಯಾದ ಹೆಡ್‌ಮಾಸ್ಟರ್ ನಾರಾಯಣಸ್ವಾಮಿಯವರ ಮಾವ ಭಾಸ್ಕರ್; ನಾರಾಯಣಸ್ವಾಮಿಯವರ ಜೊತೆಗೇ ಅವರ ಮಗ ಮಧುಕರನ ಕೊಲೆಯಾಯಿತು. ತನ್ನ ಪ್ರೀತಿಯ ಊರಲ್ಲಿ ನಡೆದ ಅಳಿಯ ಮತ್ತು ಮೊಮ್ಮಗನ ಕೊಲೆಯಿಂದ ಈ ಅಮಾಯಕ ಜೀವಿ ಭಾಸ್ಕರ್‌ಗೆ ಏನಾಗಿರಬಹುದು ಊಹಿಸಿ, ಹೆಡ್‌ಮಾಸ್ಟರ್ ನಾರಾಯಣಸ್ವಾಮಿ ಯಾರೊಬ್ಬರಿಗೂ ಕೇಡು ಬಗೆಯದ ಸಹಜ ನಾಯಕ; ಎಲ್ಲರಿಗೂ ಬೇಕಾದ ವ್ಯಕ್ತಿ. ಅವರು ಕೊಲೆಗಡುಕರೆದುರು ಕೈಜೋಡಿಸಿ ಬೇಡಿಕೊಂಡರೂ ಪ್ರಯೋಜನವಾಗಲಿಲ್ಲ. ಕೊಲೆ ನಡೆದೇ ಹೋಯಿತು.
ಎಲ್ಲರೂ ತಿಳಿದಿರುವುದು ಕೇಡಿಗಳಾಗಿ ವರ್ತಿಸಿರುವವರು ಮತ್ತು ಅವರ ಜಾತಿಯ ಜನ ಇನ್ನು ಮುಂದೆ ಈ ಗ್ರಾಮದಲ್ಲಿ ಇರುವುದು ಸಾಧ್ಯವಾಗಲಿಕ್ಕಿಲ್ಲ ಎಂದು. ಆದರೆ ದಲಿತ ಭಾಸ್ಕರ್ ಊರು ಬಿಟ್ಟಿದ್ದಾರೆ. ಕೇರಿಗಳು ಬಿಕೋ ಅನ್ನುತ್ತಿವೆ. ಎಲ್ಲರನ್ನೂ ಕಗ್ಗತ್ತಲು ಮುತ್ತಿದಂತಿದೆ. ರಾಜಕಾರಣಿಗಳು ಮತ್ತು ಜಗದ್ಗುರುಗಳ ಮಾತು ಕರ್ಕಶವಾಗಿ ಕೇಳಿಸುತ್ತಿವೆ. ಶಾಸಕ ಬೆಂಕಿ ಮಹದೇವ ಕೊಲೆಯಾದ ಹನ್ನೊಂದನೇ ದಿನ ಸುಮಾರು ಮೂವತ್ತು ಸಾವಿರ ಲಿಂಗಾಯತರನ್ನು ಸೇರಿಸಿ ಮೆರವಣಿಗೆ ನಡೆಸಿದ್ದಾರೆ. ಕಗ್ಗೊಲೆಗೀಡಾದ ಜನರ ವಿರುದ್ಧವೇ ಸಭೆ, ಮೆರವಣಿಗೆ ನಡೆಸಿರುವ ಮಹದೇವರ ಉದ್ದೇಶ ಏನೆಂದು ಯಾರಿಗೂ ಗೊತ್ತಾಗುತ್ತಿಲ್ಲ. ಮಹದೇವ ದಲಿತರ ವಿರುದ್ಧ ಚೀರಿಕೊಳ್ಳುತ್ತಲೇ ನಂಜನಗೂಡಿನ ಲೋಕಸಭಾ ಸದಸ್ಯ ಶ್ರೀನಿವಾಸ ಪ್ರಸಾದ್‌ರನ್ನು ಉಗ್ರವಾಗಿ ಟೀಕಿಸಿದ್ದಾರೆ. ಶ್ರೀನಿವಾಸ ಪ್ರಸಾದ್ ಅಷ್ಟೇ ಕಟುವಾಗಿ ಮಾತಾಡುತ್ತಾ ಸಿಬಿಐ ತನಿಖೆ ಮತ್ತು ಬೆಂಕಿ ಮಹದೇವರ ದಸ್ತಗಿರಿಗೆ ಒತ್ತಾಯಿಸಿದ್ದಾರೆ. ಇಬ್ಬರ ಮಾತು ಅವಿವೇಕದ ಪರಮಾವಧಿಯಂತೆ ಎಲ್ಲರಿಗೆ ಕೇಳಿಸುತ್ತಿವೆ. ದುಷ್ಟತನದ ಸಾಕಾರಮೂರ್ತಿಯಂತೆ ಕಾಣುವ ಮಹದೇವರಿಗೆ ಉತ್ತರ ಕೊಡುವ ರೀತಿ ಶ್ರೀನಿವಾಸ ಪ್ರಸಾದ್ ನಡವಳಿಕೆಯಲ್ಲ; ತಮ್ಮ ನಿಷ್ಕ್ರಿಯೆಗಾಗಿ ಆಕ್ಷೇಪಣೆಗೊಳಗಾಗುತ್ತಿದ್ದ ಶ್ರೀನಿವಾಸ್ ಪ್ರಸಾದ್‌ರಿಂದ ಈ ಬಗೆಯ ಕ್ರಿಯೆಯನ್ನು ಜನ ನಿರೀಕ್ಷಿಸಿರಲಿಲ್ಲ. ಬದನವಾಳಿಗೆ ಈಗ ತುರ್ತಾಗಿ ಬೇಕಾಗಿರುವ ಎರಡು ಅಂಶಗಳು-ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ಒಟ್ಟಾಗಿ ಬದುಕಲು ಬೇಕಾದ ಸಾಮರಸ್ಯ, ಜನ ನೋಡುತ್ತಿದ್ದಾರೆ: ರಾಕ್ಷಸತ್ವ ವಿಜೃಂಭಿಸಿರುವ ಈ ಸಮಯದಲ್ಲಿ ಪ್ರೀತಿಗಾಗಿ ಜನ ಕಾಯುತ್ತಿದ್ದಾರೆ.
‘‘ಜವನಪ್ಪಆದರ್ಶವನ್ನು ಇಟ್ಟುಕೊಂಡಿರುವ ವ್ಯಕ್ತಿ. ಅವರು ಸಿದ್ದೇಶ್ವರ ದೇವಸ್ಥಾನಕ್ಕೆ ದಲಿತರ ಪ್ರವೇಶವನ್ನು ಒಪ್ಪುತ್ತಾರೆ’’ ಎಂದು ಒಬ್ಬರು ಹೇಳಿದರು. ನನಗೆ ರೇಗಿಹೋಯಿತು; ನಮ್ಮ ಆದರ್ಶ ಯಾವ ಮಟ್ಟಕ್ಕೆ ಬಂದಿದೆ ನೋಡಿ. ಇಪ್ಪತ್ತೊಂದನೇ ಶತಮಾನಕ್ಕೆ ಕಾಲಿಡುತ್ತಿರುವ ನಾವು, ಅಸ್ಪೃಶ್ಯತೆಯನ್ನು ಸಂವಿಧಾನದ ಮೂಲಕವೇ ತೊಡೆದು ಹಾಕಿರುವ ನಾವು, ಹಗಲಿರುಳು ಜಾತ್ಯತೀತತೆಯ ಬಗ್ಗೆ ಬೊಗಳೆ ಬಿಡುವ ನಾವು ಒಂದು ಗುಂಪಿನ ಜನರು ದೇವಸ್ಥಾನ ಪ್ರವೇಶಿಸು ವುದನ್ನು ಆದರ್ಶ ಅನ್ನುತ್ತೇವಲ್ಲ ನಮ್ಮಲ್ಲಿ ಏನಾದರೂ ಮನುಷ್ಯತ್ವ ಉಳಿದಿದೆಯೇ ? ಈ ಸಿದ್ಧೇಶ್ವರ ದೇವಸ್ಥಾನದ ದುರಸ್ತಿ ಆದದ್ದರ ಬಗ್ಗೆ ಕೇಳಿದ್ದೀರಿ. ದೇವಸ್ಥಾನವೆಂದರೆ ಊರಲ್ಲಿಯೋ, ಊರ ಅಗಸೆಯ ಹತ್ತಿರವೋ ಇರುವ ಕಟ್ಟಡವೆಂದು ನೀವು ಊಹಿಸಿರಬಹುದು. ಅದು ತಪ್ಪು, ಬದನವಾಳು ಗ್ರಾಮದ ಈ ದೇವಸ್ಥಾನ ಊರಿನಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿದೆ. ಎಲ್ಲ ಜಾತಿಯ ಜನರೂ ಚಂದಾ ನೀಡಿ ಸುಮಾರು ಆರು ಲಕ್ಷದಷ್ಟು ಹಣ ಸಂಗ್ರಹಿಸಿ ಈ ದೇವಸ್ಥಾನದ ದುರಸ್ತಿ ಮಾಡಿದ್ದಾರೆ. ಬದನವಾಳು ಗ್ರಾಮದ ಮಾಜಿ ಛೇರ್ಮನ್ ಮತ್ತು ತೀವ್ರ ತೊಳಲಾಟ ಅನುಭವಿಸುತ್ತಿರುವ ಲಿಂಗಾಯತರ ಸಭ್ಯ ಮನುಷ್ಯ ಜವನಪ್ಪ ಹೇಳಿದರು: ‘‘ಎಲ್ಲರೂ ಚಂದಾ ಕೊಟ್ಟಿದ್ದಾರೆ. ದಲಿತರು ತಮ್ಮ ಸ್ಥಿತಿವಂತಿಕೆ, ಬಡತನ ಅವಲಂಬಿಸಿ ಸ್ವಲ್ಪಕಡಿಮೆ ಕೊಟ್ಟರು. ಲಿಂಗಾಯತರಲ್ಲಿ ಕೆಲವರು ಕೊಳವೆ ಬಾವಿ ಕೂಡ ತೋಡಿಸಿಕೊಟ್ಟರು. ದುರಸ್ತಿಯಾದೊಡನೆ ದೇವಸ್ಥಾನಕ್ಕೆ ಎಲ್ಲರ ಪ್ರವೇಶವಿರಬೇಕೆಂಬ ಶರತ್ತನ್ನು ದೇವಸ್ಥಾನದ ಸಮಿತಿಯವರು ಒಪ್ಪಿಕೊಂಡಿದ್ದರು. ದುರಸ್ತಿಯಾದೊಡನೆ ಲಿಂಗಾಯತರ ತರುಣರು ದಲಿತರ ಪ್ರವೇಶ ಒಪ್ಪಲಿಲ್ಲ. ಚಂದಾ ಕೊಟ್ಟ ಎಲ್ಲರ ಅಭಿಪ್ರಾಯ ಕೇಳಿ ಮುಂದುವರಿಯೋಣ ಎಂದರೂ ಒಪ್ಪದೆ ಜಗಳ ತೆಗೆದರು’’ ಅಂದರು.
‘‘ಹಾಗಾದರೆ, ಹೆಚ್ಚಿಗೆ ಹಣ ನೀಡಿದ ಲಿಂಗಾಯತರು ದಲಿತರ ಪ್ರವೇಶಕ್ಕೆ ಒಪ್ಪಿಗೆ ನೀಡದಿದ್ದರೆ?’’ ಅಂದೆ.
‘‘ಕೇಳಿದ್ದರೆ ಒಳ್ಳೆಯದಾಗುತ್ತಿತ್ತು’’ ಅಂದರು.
‘‘ಜವನಪ್ಪನವರೇ, ನೀವು ಪ್ರವೇಶ, ಪ್ರವೇಶವಿಲ್ಲದಿರುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಪ್ರವೇಶ ಇರಲೇಬೇಕು ಅನ್ನುತ್ತಿದ್ದೀರಿ. ಇಂತಹ ವಿಚಾರದಲ್ಲಿ ಹಣ ನೀಡಿದವರ ಅಭಿಪ್ರಾಯ ಕೇಳಕೂಡದು. ಇದು ಚರ್ಚಿಸಬೇಕಾದ ವಿಷಯವೇ ಅಲ್ಲ, ಅಲ್ಲವೆ? ಅರ್ಧ ಶತಮಾನದ ಹಿಂದೆಯೇ ಅಸ್ಪೃಶ್ಯತೆ ಕಾನೂನುಬಾಹಿರ, ನೀತಿಬಾಹಿರ ಎಂದು ಇಡೀ ದೇಶ ತೀರ್ಮಾನಿಸಿದೆ’’ ಅಂದೆ.
ಜವನಪ್ಪ ತುಂಬಾ ಒಳ್ಳೆಯವರು. ಹಳ್ಳಿಯಲ್ಲಿ ಆದ ಇತ್ತೀಚಿನ ಕೊಲೆಗಳನ್ನೊಳಗೊಂಡು ಹಳ್ಳಿಯಲ್ಲಿ ಆಗುತ್ತಿರುವ ದುರಂತಮಯ ಬೆಳವಣಿಗೆಗಳನ್ನು ನೋಡಿ ಖಿನ್ನರಾದವರು. ಬಹುಪಾಲು ದಲಿತ ಯುವಕರು ಓದುತ್ತಾರೆ, ಬಹುಪಾಲು ಲಿಂಗಾಯತ ಹುಡುಗರು ಓದು ಅರ್ಧಕ್ಕೆ ನಿಲ್ಲಿಸಿ ಬಿಡುತ್ತಾರೆ. ದಲಿತರನೇಕರು ನೆಮ್ಮದಿ ತರುವ ಕೆಲಸಗಳಲ್ಲಿದ್ದಾರೆ. ಗ್ರಾಮಜೀವನದ ಮೂಲ ಸೆಲೆಗಳೇ ಬತ್ತಿ ಹೋಗುತ್ತಿವೆ. ಹಿಂದೆ ಲಿಂಗಾಯತರು ಕುಡಿಯುತ್ತಿರಲಿಲ್ಲ, ಮಾಂಸ ತಿನ್ನುತ್ತಿರಲಿಲ್ಲ. ಅದೆಲ್ಲ ಈಗ ಬದಲಾಗಿದೆ. ಹಳ್ಳಿಯ ಕಟ್ಟುಪಾಡುಗಳು, ಮರ್ಜಿಗಳೆಲ್ಲ ಹೊರಟು ಹೋಗಿವೆ. ಪರಂಪರಾಗತವಾಗಿ ಹಿರಿಯರ ಮಾತು ಕೇಳುತ್ತಿದ್ದ, ಹಬ್ಬಹರಿದಿನಗಳನ್ನು ಸಾಮೂಹಿಕವಾಗಿ ಆಚರಿಸುತ್ತಿದ್ದ, ಊರ ಮುಖಂಡರ ತೀರ್ಪು ಮನ್ನಿಸುತ್ತಿದ್ದ ಗ್ರಾಮದ ಜನ ಈಗ ಎಲ್ಲ ನಿಯಮಗಳನ್ನೂ ಮೀರಿ ನಿಲ್ಲುತ್ತಿದ್ದಾರೆ. ಬದನವಾಳು ಗ್ರಾಮದಲ್ಲಿ ಎಂದೂ ಘರ್ಷಣೆ ಆಗಿರಲಿಲ್ಲ. ಜಾತಿ ಜಗಳಗಳಂತೂ ಆಗಿರಲಿಲ್ಲ. ಅದು ನಿಜವಿರಬಹುದು. ಆದರೆ ನಾನು ಈ ಹಳ್ಳಿಗಳನ್ನು ಬಲ್ಲೆನಾದ್ದರಿಂದ ಒಂದು ಮುಖ್ಯ ಪ್ರಶ್ನೆ ಕೇಳಿದೆ. ಅವರು ಉತ್ತರಿಸಿದಂತೆ, ಈ ಊರಲ್ಲಿ ಈಚೆಗೆ ಜನರನ್ನು ಒಂದುಗೂಡಿಸುವ, ತಮ್ಮ ಊರಿನ ಬಗ್ಗೆ ಹೆಮ್ಮೆ ಹುಟ್ಟಿಸುವ ಹಬ್ಬ, ಕ್ರೀಡೆ ಒಟ್ಟಾಗಿ ಆಗಿರಲಿಲ್ಲ. ಊರಲ್ಲಿ ಇರುವ ಸಂಭ್ರಮ ಮೂಡುವುದೇ ಇಂತಹ ಚಟುವಟಿಕೆಗಳಿಂದ ಕೊಲೆಯಾದ ದಿನ ಶಾಂತಿಗಾಗಿ ಕ್ರಿಕೆಟ್ ಆಡಲು ಹೋದವರ ತಂಡದಲ್ಲಿದ್ದವರೂ ದಲಿತರು ಮಾತ್ರ; ಅವರು ಕ್ರಿಕೆಟ್ ಆಡಲು ಹೋದರೆ ಅವರ ಮೇಲೆ ಬಿದ್ದ ಅರವತ್ತು ಜನ ಲಿಂಗಾಯತರು ಕುಡಿದು ಮತ್ತರಾಗಿದ್ದರು; ಎಲ್ಲ ಮರ್ಯಾದೆಗಳನ್ನು ಮರೆತರು. ತಮ್ಮ ಊರಿನ ಹುಡುಗರು (ಯಾವ ಜಾತಿಯವರೇ ಆಗಿರಲಿ) ಒಂದು ಪಂದ್ಯದಲ್ಲಿ ಗೆದ್ದರೆ ಸಂತೋಷಪಡುವ, ಅಭಿನಂದಿಸುವ ಮನುಷ್ಯತ್ವ ಕೂಡ ಅವರಲ್ಲಿ ಉಳಿದಿರಲಿಲ್ಲ.
ಸಂವಿಧಾನ ಹೇಳುವ, ಮಾನವತೆ ನಿರೀಕ್ಷಿಸುವ ವಿಷಯಗಳೂ ಆ ಕೇಡಿ ಹುಡುಗರಿಗೆ ಗೊತ್ತಿರಲಿಲ್ಲ. ಆದ್ದರಿಂದ ನಾನು ವ್ಯಥೆಯಿಂದ ಹೇಳಿದೆ: ‘‘ಈ ಗ್ರಾಮದ ಮುಖ್ಯ ದೋಷವೇನೆಂದರೆ ವ್ಯವಹಾರಜ್ಞಾನ ಕೂಡ ಇಲ್ಲದಿರುವುದು, ಹಳೆಯ ಕಾಲದ ಜವನಪ್ಪನವರ ತರಹದವರು ಅಸ್ಪೃಶ್ಯತೆ ನಿಷಿದ್ಧವೆಂದು ಅರಿತಿದ್ದಾರೆ, ಈ ಗ್ರಾಮದ ನೂರಾರು ಲಿಂಗಾಯತ ಹುಡುಗರಲ್ಲಿ ಕೆಲವರಾದರೂ ಮನುಷ್ಯರಂತೆ ಇದ್ದಿದ್ದರೆ, ‘ಒಂದು ಗುಂಪಿನ ಜನಕ್ಕೆ ಸಿದ್ದೇಶ್ವರ ದೇವಸ್ಥಾನಕ್ಕೆ ಪ್ರವೇಶವಿಲ್ಲದಿದ್ದರೆ ನಾವೂಪ್ರವೇಶಿಸುವುದಿಲ್ಲ, ನಾವೆಲ್ಲ ಶಾಂತಿಯುತವಾಗಿ ಪ್ರತಿಭಟಿಸುತ್ತೇವೆ’ ಎಂದು ಹೇಳುತ್ತಿದ್ದರು. ‘‘ಅಂತಹ ಒಂದು ಗುಂಪೇ ಈ ಊರಿನ ಲಿಂಗಾಯತರಲ್ಲಿ ಇಲ್ಲದಿರುವುದು ನಿಜಕ್ಕೂ ದುಃಖಕರ’’ ಅಂದೆ.
ಬದನವಾಳಿನ ಬಗ್ಗೆ ನಾನು ಇಷ್ಟೆಲ್ಲ ಬರೆಯುತ್ತಿರುವುದಕ್ಕೆ ಇನ್ನೆರಡು ಮುಖ್ಯ ಕಾರಣಗಳಿವೆ. ಅಲ್ಲಿ ಆಗಿರುವ ಕೊಲೆಗಳು ದಲಿತರ ದಮನವನ್ನು ಸಾಧಿಸಿವೆ ಎಂದು ತಿಳಿಯುವವರು ತಪ್ಪುಮಾಡುತ್ತಾರೆ. ಅದು ಲಿಂಗಾಯತರ ದುರಂತ ತೋರುತ್ತದೆ. ಕೆಲವರು ದುಷ್ಟ ಹುಡುಗರು ಯಾವುದೋ ಒಂದು ಹಳ್ಳಿಯಲ್ಲಿ ಮಾಡಿದ ತಪ್ಪು ಮಾತ್ರ ಅದಲ್ಲ; ಬೆಂಡಿಗೇರಿಯಲ್ಲಿ ಮಲ ತಿನ್ನಿಸಿದ್ದು ಮತ್ತು ಇಲ್ಲಿ ಅಸಹಾಯಕರ ಮೇಲೆ ಬಿದ್ದದ್ದು ಬಸವಣ್ಣನ ಅನುಯಾಯಿಗಳನ್ನು ಕೂಡಲೇ ಆತ್ಮಶೋಧನೆಗೆ ಹಚ್ಚದಿದ್ದರೆ, ಸಾಮೂಹಿಕ ಪ್ರತಿಭಟನೆ, ತ್ಯಾಗ ಮತ್ತು ಸಾಮರಸ್ಯ ಸೃಷ್ಟಿಗೆ ಪ್ರೇರೇಪಿಸದಿದ್ದರೆ ಅವರ ಸಂಸ್ಕೃತಿಗೆ ಅಪಾಯವೊದಗಲಿದೆ. ಲಿಂಗಾಯತ ಯುವಕರು ತಮ್ಮ ಪಾಳೆಗಾರಿಕೆ ಮನೋಭಾವದಿಂದ, ಸ್ವಪ್ರತಿಷ್ಠೆಯ ಕ್ರಿಯೆಗಳಿಂದ ಹಾಸ್ಯಾಸ್ಪದರೂ ಕರುಣಾಜನಕ ಪಶುಗಳೂ ಆಗಲಿದ್ದಾರೆ; ಅವರಲ್ಲಿ ಶಿಕ್ಷಣ, ಶಿಸ್ತು, ಸಹನೆ ಇವೆಲ್ಲದರ ಬಗ್ಗೆ ಕಾತರ ಮೂಡದಿದ್ದರೆ ದೊಡ್ಡ ಅಪಾಯಗಳೇ ಕಾದಿವೆ.
ಇದನ್ನರಿಯದೆ ಬೆಂಕಿ ಮಹದೇವ ಅವರ ತರಹದವರು ಉಗ್ರ ಭಾಷೆಯಲ್ಲಿ ಮಾತಾಡುತ್ತಿರುವುದು ನನ್ನನ್ನು ಎರಡನೇ ಮುಖ್ಯ ಕಾರಣಕ್ಕೆ ತಲುಪಿಸುತ್ತದೆ. ಅದೇನೆಂದರೆ, ಅಯೋಧ್ಯೆಯಲ್ಲಿ ಮಸೀದಿ ಕೆಡವಿದವರೂ ಮೇಲಿನ ಕೊಲೆಗಡುಕ ಕೇಡಿಗಳಂತೆಯೇ ದೊಡ್ಡ ಪಾತಕಿಗಳು. ಈ ಬದನವಾಳಿನ ದುಷ್ಟ ಗುಂಪಿಗೆ ಹಚ್ಚಿಕೊಡುತ್ತಿರುವವರ ದೇವಸ್ಥಾನ, ಧರ್ಮ ಮುಂತಾದ ಮಾತುಗಳು ಅಯೋಧ್ಯೆಯ ಉದ್ಧಟತನದಿಂದಲೇ ಹುಟ್ಟಿಕೊಂಡವು. ಮುಸ್ಲಿಮರ ಬಗ್ಗೆ ಅಲ್ಲಿ ಸುಳ್ಳು ಬೊಗಳಿ ಅನ್ಯಾಯ ಮಾಡಿದವರು ಇಲ್ಲಿ ದಲಿತರ ವಿರುದ್ಧ ಕೆಂಡಕಾರುತ್ತಿದ್ದಾರೆ; ಅಲ್ಲಿ ದೈಹಿಕ ಶಕ್ತಿ ಮತ್ತು ಸಂಖ್ಯಾಬಲದಿಂದ ಗೆದ್ದೆವೆಂದು ಭ್ರಮಿಸಿದವರ ಕ್ಷುದ್ರ ಹುಂಬತನವೇ ಇಲ್ಲಿಯೂ ಇದೆ. ಅಯೋಧ್ಯೆಯಲ್ಲಿ ಒಂದು ಶೈಲಿಯಲ್ಲಿ ಕೂಗಾಡಿ ಮುಸ್ಲಿಮೇತರರ ಕಣ್ಣಿಗೆ ಮಣ್ಣೆರಚಲು ಯತ್ನಿಸಿದಂತೆಯೇ ಇಲ್ಲಿ ಶಕ್ತಿ ತೋರಿ ದಲಿತೇತರರ ಕಣ್ಣಿಗೆ ಮಣ್ಣೆರಚಲು ಪ್ರಯತ್ನಿಸಲಾಗುತ್ತಿದೆ. ಮುಸ್ಲಿಮರು, ದಲಿತರು, ಹಿಂದುಳಿದವರು, ಎಲ್ಲ ಜಾತಿಯ ಬಡವರು, ವಿಚಾರವಾದಿಗಳೆಲ್ಲ ಈ ಕರಾಳ ಸ್ಫೂರ್ತಿಯ ಮೂಲಗಳನ್ನು ಅರಿಯಬೇಕಾಗಿದೆ. ಈ ಕರಾಳ ಸ್ಫೂರ್ತಿಯೇ ಬೆಂಕಿ ಮಹದೇವ ಮೊನ್ನೆ ಬದನವಾಳದಲ್ಲಿ ಮೂವತ್ತು ಸಾವಿರ ಜನರನ್ನು ಸೇರಿಸುವಂತೆ ಮಾಡಿದ್ದು.
ಕೊಲೆಗೀಡಾದ ನಾರಾಯಣಸ್ವಾಮಿಯವರ ಮಾವ ಭಾಸ್ಕರ್ ಊರು ಬಿಟ್ಟರು. ಊರಿಗೆ ಹತ್ತಿರ ಇರಲು ಜೀವನಪರ್ಯಂತ ಪ್ರಯತ್ನಿಸಿ ಒಂದು ಪುಟ್ಟ ಕುಟುಂಬವನ್ನು ರೂಪಿಸಿಕೊಂಡ, ತಮ್ಮ ಅಕ್ಕರೆಯ ಗ್ರಾಮದ ಬಗ್ಗೆ ಜೀವಂತ ಸಂಬಂಧ ಇಟ್ಟುಕೊಂಡಿದ್ದ ಭಾಸ್ಕರ್ ಊರುಬಿಟ್ಟರೆಂದರೆ ಅವರ ನೋವು ಎಷ್ಟು ತೀವ್ರವಾದದ್ದೆಂಬುದನ್ನು ಎಂಥವರೂ ಊಹಿಸಬಲ್ಲರು. ನಾವೆಲ್ಲ ಈ ಬಗ್ಗೆ ಚಿಂತಿಸುತ್ತಾ ಜವನಪ್ಪನವರೊಂದಿಗೆ ಮಾತಾಡಿ ಎದ್ದಾಗ ಕಣ್ಣಲ್ಲಿ ನೋವು ಸೂಸುತ್ತಿದ್ದ ಜವನಪ್ಪ ಹೇಳಿದರು, ‘‘ನನಗೂ ಸುಸ್ತಾಗಿದೆ. ಇಲ್ಲಿ ಇರಲು ಕಾರಣಗಳೇ ಹೊಳೆಯುತ್ತಿಲ್ಲ. ಇದ್ದ ಬದ್ದ ನೆಲ, ಮನೆ ಮಾರಿಕೊಂಡು ನಾನೂ ಹೊರಟುಹೋಗಬೇಕೆಂದಿದ್ದೇನೆ.’’
(ಎಪ್ರಿಲ್ 21, 1993ರಂದು ‘ಲಂಕೇಶ್ ಪತ್ರಿಕೆ’ಯಲ್ಲಿ ಪ್ರಕಟವಾದ ಸಂಪಾದಕೀಯ ಲೇಖನ)