ಭಾರತದ ದೇಶೀಯ ಕ್ರಿಕೆಟ್‌ನಿಂದ ಶ್ರೀಶಾಂತ್ ನಿವೃತ್ತಿ

Update: 2022-03-09 15:11 GMT

 ಹೊಸದಿಲ್ಲಿ, ಮಾ.9: 2011ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ಎಸ್.ಶ್ರೀಶಾಂತ್ ಭಾರತದ ದೇಶೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಕೇರಳದ ವೇಗದ ಬೌಲರ್ ಶ್ರೀಶಾಂತ್ ಟ್ವಿಟರ್‌ನ ಮೂಲಕ ಈ ಘೋಷಣೆ ಮಾಡಿದರು.

  ಶ್ರೀಶಾಂತ್ 27 ಟೆಸ್ಟ್, 53 ಏಕದಿನ ಹಾಗೂ 10 ಟ್ವೆಂಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2007ರಲ್ಲಿ ಮೊದಲ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್ ಗೆದ್ದಿರುವ ಭಾರತದ ತಂಡದ ಭಾಗವಾಗಿದ್ದರು. 2013ರಲ್ಲಿ ಐಪಿಎಲ್‌ನಲ್ಲಿ ಸ್ಪಾಟ್‌ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪದಲ್ಲಿ ರಾಜಸ್ಥಾನ ರಾಯಲ್ಸ್‌ನ ಸಹ ಆಟಗಾರರಾದ ಅಜಿತ್ ಚಾಂಡಿಲಾ ಹಾಗೂ ಅಂಕಿತ್ ಚವಾಣ್‌ರೊಂದಿಗೆ ಶ್ರೀಶಾಂತ್‌ಗೆ ಕೂಡ ಬಿಸಿಸಿಐ ಆಜೀವ ನಿಷೇಧ ವಿಧಿಸಿತ್ತು. 2019ರಲ್ಲಿ ಅವರ ಆಜೀವ ನಿಷೇಧವನ್ನು 7 ವರ್ಷಕ್ಕೆ ಇಳಿಸಲಾಗಿತ್ತು. ಆ ನಿಷೇಧದ ಅವಧಿಯು 2020ರ ಸೆಪ್ಟಂಬರ್‌ಗೆ ಕೊನೆಯಾಗಿತ್ತು.

ನಿಷೇಧದ ಅವಧಿ ಮುಗಿದ ಬಳಿಕ 2021ರಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೆ ಕೇರಳ ಕ್ರಿಕೆಟ್ ಸಂಸ್ಥೆ ಪ್ರಕಟಿಸಿರುವ 20 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದರು. 2021 ಹಾಗೂ 2022ರಲ್ಲಿ ಐಪಿಎಲ್ ಹರಾಜಿನ ಕಿರು ಪಟ್ಟಿಯಲ್ಲಿದ್ದರೂ ಎರಡೂ ಸಂದರ್ಭಗಳಲ್ಲಿ ಹರಾಜಾಗದೆ ಉಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News