‘ನ್ಯಾನೂಕ್.....’ ಶತಮಾನದ ಮಹಾನ್ ಸಾಕ್ಷಕಥಾ ಚಿತ್ರ

Update: 2022-03-13 04:51 GMT

ಮೊದಲು ಬಿಡುಗಡೆಯಾದಾಗ ಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿದ, ಚಲನಚಿತ್ರ ನಿರ್ಮಾಣದಲ್ಲಿ ಹೊಸದೊಂದು ಮಾರ್ಗ ತೆರೆದ ರಾಬರ್ಟ್ ಫ್ಲಾಹರ್ಟಿಯವರ ‘ನ್ಯಾನೂಕ್ ಆಫ್ ದ ನಾರ್ತ್’ ಚಿತ್ರಕ್ಕೆ ಈಗ ಶತಮಾನದ ಸಂಭ್ರಮ. ಕೆನಡದ ಹಿಮವಲಯವಾದ ಹಡ್ಸನ್ ಬೇ ಪ್ರದೇಶದಲ್ಲಿ ಅಸ್ತಿತ್ವಕ್ಕಾಗಿ ದಿನನಿತ್ಯ ಹೋರಾಟ ಮಾಡುವ ಇನುಯಿಟ್ ಪಂಗಡದ ನ್ಯಾನೂಕ್ ಎಂಬ ವ್ಯಕ್ತಿಯ ಕುಟುಂಬದ ಹೋರಾಟಗಾಥೆಯು 1922ರಲ್ಲಿ ಬಿಡುಗಡೆಯಾದಾಗ ಅಪಾರ ಜನಮನ್ನಣೆ ಪಡೆಯಿತು. ಸಿನೆಮಾ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲೆನಿಸಿದ ಈ ಚಿತ್ರಕ್ಕೆ ಈಗಲೂ ಪ್ರೇಕ್ಷಕರಲ್ಲಿ ರೋಮಾಂಚನ ತರುವಷ್ಟು ಕಸುವಿದೆ.

 ಅದೊಂದು ವಿಸ್ತಾರವಾದ ಹಿಮಭೂಮಿ. ಕಣ್ಣಿಗೆ ಕಾಣುವಷ್ಟು ದೂರ ಬಿಳಿಯ ಹಿಮವೇ ತುಂಬಿಕೊಂಡ ಬಯಲು. ನೀರ್ಗಲ್ಲು ಪ್ರತಿಫಲಿಸುವ ಬೆಳಕನ್ನು ಸೀಳಿ ಬರುವ ನಾಲ್ಕಾರು ಜೋಡಿ ನಾಯಿ ಎಳೆಯುವ ಹಿಮಬಂಡಿ(ಸ್ಲೆಡ್ಜ್)ಯಲ್ಲಿ ಕುಳಿತವರು ಐದಾರು ಮಂದಿ. ಗಾಡಿಯನ್ನು ನಿಲ್ಲಿಸಿದ ನಾಯಕನೊಬ್ಬನೇ ಹಿಮದ ಬಯಲನ್ನು ಪರೀಕ್ಷಿಸುತ್ತಾ ಮುಂದುವರಿಯುತ್ತಾನೆ. ಇಡೀ ಮೈ ಮತ್ತು ತಲೆಯನ್ನು ಆವರಿಸಿದ ಉಡುಪಿನ ಒಳಗಿರುವ ನಾಯಕನ ಬಾಗಿದ ಮುಖ ಮಾತ್ರ ದರ್ಶನವಾಗುತ್ತದೆ. ಅತ್ತಿಂದಿತ್ತ ನೋಡುತ್ತಾ ಅಲ್ಲೆಲ್ಲೋ ಒಂದೆಡೆ ಹಿಮದ ನೆಲದಲ್ಲಿ ಕಾಣುವ ಕುಳಿಯತ್ತ ಬರುತ್ತಾನೆ. ಕೂತು ಕೈಯಿಂದ ಆ ಕುಳಿಯನ್ನು ಪರೀಕ್ಷಿಸುತ್ತಾನೆ. ಬಳಿಕ ಸಿರಿಯನ್ನು ಕಂಡವನಂತೆ ಎದ್ದು ತನ್ನ ಹಾರ್ಪೂನ್ (ಈಟಿ ಗಾಳ) ಅನ್ನು ಹಿಡಿದು ನಿಲ್ಲುತ್ತಾನೆ. ಈಟಿಯ ಕೊಕ್ಕೆಗೆ ಕಟ್ಟಿದ ಹುರಿಯ ಇನ್ನೊಂದು ತುದಿಯನ್ನು ಎಡಗೈಯಲ್ಲಿ ಹಿಡಿದು ಬಲಗೈಯಲ್ಲಿ ಈಟಿಯನ್ನು ಕುಳಿಯತ್ತ ಗುರಿ ಇಡುತ್ತಾನೆ. ಹಿಮದಿಂದ ಉದ್ಭವಗೊಂಡ ಮೂರ್ತಿಯಂತೆ ಅನೇಕ ನಿಮಿಷ ನಿಶ್ಚಲನಾಗಿ ನಿಂತ ಆತ ಇದ್ದಕ್ಕಿದ್ದಂತೆ ಕುಳಿಯೊಳಗೆ ಈಟಿಯನ್ನು ಮಿಂಚಿನಂತೆ ಪ್ರಯೋಗಿಸಿ ಕ್ಷಣ ಮಾತ್ರದಲ್ಲಿ ಅದನ್ನು ಕೈಬಿಟ್ಟು ಎರಡು ಕೈಯಿಂದ ಹುರಿಯನ್ನು ಹಿಡಿದು ಎಳೆಯುತ್ತಾನೆ. ಅಲ್ಲಿಂದ ಜಗತ್ತು ಎಂದೂ ನೋಡಿರದ, ಅಸ್ತಿತ್ವಕ್ಕಾಗಿ ನಡೆಯುವ ಮಹಾಯುದ್ಧವೊಂದು ಆರಂಭವಾಗುತ್ತದೆ.

ಹುರಿಯನ್ನು ಬಿಡಬಾರದೆಂದು ತೊಡೆಗೆ ಸುತ್ತಿಕೊಂಡು ಎರಡು ಕೈಯಲ್ಲಿ ಹತ್ತಾರು ಅಡಿ ದೂರ ಎಳೆಯುತ್ತಾ ಹೋದ ಬೇಟೆಗಾರ ಇನ್ನೇನು ತನ್ನ ಮಿಕವನ್ನು ಹೊರಗೆಳೆದ ಎನ್ನುವಷ್ಟರಲ್ಲಿ ಅನಿರೀಕ್ಷಿತ ಘಟನೆ ಜರಗುತ್ತದೆ. ವಾತಾವರಣದ ಗಾಳಿಯನ್ನೆಲ್ಲ ಒಂದೇ ಬಾರಿಗೆ ಆ ಕುಳಿ ಹೀರಿಕೊಂಡಿತೇನೋ ಅನ್ನುವ ರೀತಿಯಲ್ಲಿ ಬೇಟೆಗಾರ ಮುಗ್ಗರಿಸಿ ಕುಳಿಯತ್ತ ಜಾರುತ್ತಾನೆ. ಕುಳಿಯೇ ಬಾಯ್ದೆರೆದು ನುಂಗಿಬಿಡುವಂತೆ ದೃಶ್ಯ ಮೂಡುತ್ತದೆ. ಆ ದಾರದ ಅತ್ತ ಇರುವುದು ಭೂಮಿಯಲ್ಲಿ ಅಡಗಿದ ಪೆಡಂಭೂತವೇನೋ ಅನ್ನುವ ರೀತಿಯಲ್ಲಿ ಅದರ ವಿರುದ್ಧ ಸೆಣಸಾಡುತ್ತಾನೆ. ಮತ್ತೆ ಸಾವರಿಸಿಕೊಂಡು ಐದಾರು ಅಡಿ ಎಳೆದೊಯ್ದರೂ ಇತ್ತ ಕಡೆಯ ಜಗ್ಗಾಟದಿಂದ ಮತ್ತೆ ಮುಗ್ಗರಿಸುತ್ತಾನೆ. ಈ ಜಗ್ಗಾಟ ಎರಡು ಜೀವಗಳ ನಡುವಿನ ದೊಡ್ಡ ಹೋರಾಟವಾಗುತ್ತದೆ. ಇಡೀ ದೃಶ್ಯ ಎಲ್ಲೂ ತುಂಡರಿಸದೇ ಅಖಂಡ ದೃಶ್ಯವಾಗಿ ಬಿಚ್ಚಿಕೊಳ್ಳುವುದು ಪ್ರೇಕ್ಷಕನನ್ನು ಕುತೂಹಲದ ಶಿಖರದಲ್ಲಿ ತಂದುಕೂರಿಸುತ್ತದೆ. ಅನೇಕ ನಿಮಿಷಗಳ ಈ ಹೋರಾಟದ ನಂತರ ಸುಸ್ತಾದ ನಾಯಕ ದೂರದಲ್ಲೆಲ್ಲೋ ನಿಂತ ತನ್ನ ತಂಡದವರತ್ತ ಕೈಬೀಸಿ ನೆರವಿಗಾಗಿ ಸಂಜ್ಞೆ ಮಾಡುತ್ತಾನೆ. ಸ್ಲೆಡ್ಜ್ ಗಾಡಿಯ ಜೊತೆ ತಂಡ ಓಡೋಡಿ ಬರುವ ವೇಳೆಗೆ ನಾಯಕ ಹೈರಾಣಾಗಿರುತ್ತಾನೆ. ಬಳಿಕ ಕೂಡಿಕೊಂಡ ತಂಡದ ಸದಸ್ಯರು ಒಟ್ಟಾಗಿ ಹುರಿಯನ್ನು ಹಿಡಿದು ಎಳೆಯುತ್ತಾರೆ. ನಾಯಕ ತನ್ನ ಚಾಕುವಿನಿಂದ ಕುಳಿಯ ಬಾಯನ್ನು ಅಗಲ ಮಾಡುತ್ತಾನೆ. ಅದರಿಂದ ನಿಧಾನವಾಗಿ ಆ ತುದಿಯಲ್ಲಿ ಈಟಿಯ ಕೊಕ್ಕೆಗೆ ಸಿಲುಕಿದ, ಎಮ್ಮೆ ಕರುವಿನ ಗಾತ್ರದ ನಯವಾದ ಶರೀರದ ಕರಿಬಣ್ಣದ ಸೀಲ್ ಪ್ರಾಣಿಯೊಂದು ತಾಯ ಗರ್ಭದಿಂದ ಈಚೆ ಬರುವ ಶಿಶುವಿನಂತೆ ಹೊರಬರುತ್ತದೆ. ಇಷ್ಟೊಂದು ಘಾಸಿ ಮಾಡಿದ ಪ್ರಾಣಿಯ ಮೇಲೆ ಸೇಡು ತೀರಿಸಿಕೊಳ್ಳುವವರಂತೆ ತಂಡದ ಸದಸ್ಯರು ಅದರ ಚರ್ಮ ಸುಲಿದು ಒಳಗಿನ ಹಸಿಮಾಂಸವನ್ನು ಅಲ್ಲಿಯೇ ತಿನ್ನ ತೊಡಗುತ್ತಾರೆ. ನಾಯಿಗಳು ಬೊಬ್ಬಿಡುತ್ತಾ, ಗರಗಸದಂತಹ ದಂತಪಂಕ್ತಿ ಪ್ರದರ್ಶಿಸುತ್ತಾ ಆಹಾರಕ್ಕಾಗಿ ರೌದ್ರವನ್ನು ಬೆರೆಸಿದ ಬೇಡಿಕೆಯಿಡುತ್ತವೆ. ತಮ್ಮ ಸಹವರ್ತಿಗಳಾದ ನಾಯಿಗಳಿಗೂ ಸೀಲ್ ಮಾಂಸವನ್ನು ಕತ್ತರಿಸಿ ಎಸೆಯುತ್ತಾ ಬೇಟೆಗಾರರ ತಂಡ ಮೋಜು ಮಸ್ತಿಯಲ್ಲಿ ನಿರತವಾಗುತ್ತದೆ. ಈ ಹಂತದಲ್ಲಿ ಕತ್ತಲಾಗುತ್ತಿರುವುದನ್ನು ಗಮನಿಸಿದ ತಂಡ ತಮ್ಮ ಕಚ್ಚಾಡುವ ನಾಯಿಗಳನ್ನು ಹದಕ್ಕೆ ಹಾಕಿ ಹಿಮವನ್ನು ಹೊತ್ತು ತರುವ ಗಾಳಿಯಲ್ಲೇ ತನ್ನ ಪ್ರಯಾಣವನ್ನು ಮುಂದುವರೆಸುತ್ತದೆ.

ಇದು ಕಳೆದ ಶತಮಾನದ ಇಪ್ಪತ್ತನೆಯ ದಶಕದಿಂದ ಈತನಕವೂ ಒಂದಲ್ಲ ಒಂದು ವೇದಿಕೆಯಲ್ಲಿ ಚರ್ಚೆಗೆ, ಅಭಿಮಾನಕ್ಕೆ, ಅಧ್ಯಯನಕ್ಕೆ, ಟೀಕೆಗೆ ಒಳಪಡುತ್ತಿರುವ ‘ನ್ಯಾನೂಕ್ ಆಫ್ ದಿ ನಾರ್ತ್’ ಚಿತ್ರದ ರೋಮಾಂಚಕ ದೃಶ್ಯಗಳಲ್ಲೊಂದು. (ಚಳಿಗಾಲದಲ್ಲಿ ನೀರಿನ ಮೇಲ್ಪದರ ಗಟ್ಟಿಯ ಹಿಮವಾಗಿ ಮಾರ್ಪಟ್ಟ ಕಾರಣ ಒಳಗಿನ ನೀರಿನಲ್ಲಿರುವ ಸೀಲ್ ಪ್ರಾಣಿಗಳ ಜಾಡನ್ನು ಹಿಡಿದು ಬರುವ ನಾಯಕನಿಗೆ ಅಪಾರವಾದ ಸ್ಥಳೀಯ ಜ್ಞಾನವಿದೆ. ಸಸ್ತನಿಗಳಾದ ಸೀಲ್ ಪ್ರಾಣಿಗಳು ವಾತಾವರಣದ ಗಾಳಿಯನ್ನು ಉಸಿರಾಡಲು ಪ್ರತಿ ಇಪ್ಪತ್ತು ನಿಮಿಷಕ್ಕೆ ನೀರಿನಿಂದ ಹೊರಬಂದು ಹಿಮದಲ್ಲಿ ಮಾಡಿದ ಕುಳಿಯಲ್ಲಿ ಮೂತಿಯಿಟ್ಟು ಉಸಿರೆಳೆದುಕೊಳ್ಳುತ್ತವೆ. ಅದನ್ನು ಬಲ್ಲ ನಾಯಕ ಈಟಿಗಾಳ ಹಿಡಿದು ಬೇಟೆಯಾಡುವ ಭಾಗ ಜಗತ್ತಿನ ಸಿನೆಮಾದ ಅಚ್ಚಳಿಯದ ದೃಶ್ಯವೆನಿಸಿದೆ)

‘ನ್ಯಾನೂಕ್ ಆಫ್ ದಿ ನಾರ್ತ್’ ಜಗತ್ತಿನ ಸಿನೆಮಾ ಪಂಥವೊಂದಕ್ಕೆ ನಾಂದಿ ಹಾಡಿದ ಚಿತ್ರ. ಈ ಚಿತ್ರದ ನಂತರ ಇದೇ ಜಾಡಿನಲ್ಲಿ ಬಂದ ಚಿತ್ರಗಳನ್ನು ವರ್ಗೀಕರಿಸಲು ಅನೇಕ ವರ್ಷಗಳ ತರುವಾಯ ವಿಮರ್ಶಕ ಜಾನ್ ಗ್ರೀರ್ಸನ್ ಅವರು ಸಾಕ್ಷಚಿತ್ರ (Documentary) ಎಂಬ ಪದವನ್ನು ಬಳಸಿದರು. ಆದರೆ ಈ ಚಿತ್ರವು ಕಥನವೊಂದನ್ನು ನಿರೂಪಿಸುವ ಚಿತ್ರವಾದ ಕಾರಣ ಸಾಕ್ಷಕಥನ (Docufiction Docudramaಅಥವಾ ) ಎಂಬ ಹೆಸರಿನಿಂದ ಈ ಶೈಲಿಯನ್ನು ನಂತರ ಕರೆಯಲಾಯಿತು. ಈ ಬಗೆಯ ಸಾಕ್ಷಕಥನವನ್ನು ಚಿತ್ರ ಮಾಧ್ಯಮಕ್ಕೆ ಅಳವಡಿಸಿದ ನಿರ್ದೇಶಕರೇ ರಾಬರ್ಟ್ ಜೋಸೆಫ್ ಪ್ಲಾಹರ್ಟಿ. ಅವರು ತಯಾರಿಸಿದ ಮೊದಲ ಎಪಿಕ್ ಚಿತ್ರವೇ ‘ನ್ಯಾನೂಕ್ ಆಫ್ ದಿ ನಾರ್ತ್’ ಅಥವಾ ‘ಉತ್ತರ ಹಿಮಭೂಮಿಯ ನ್ಯಾನೂಕ್’.

‘ನ್ಯಾನೂಕ್ ಆಫ್ ದಿ ನಾರ್ತ್’ ಚಿತ್ರವು 1922ರಲ್ಲಿ ಸಾರ್ವಜನಿಕ ಪ್ರದರ್ಶನ ಕಂಡಾಗ ಪ್ರೇಕ್ಷಕರು ನಿಬ್ಬೆರಗಾದರು. ಅದು ಉತ್ತರ ಅಮೆರಿಕ ಖಂಡದ ಅಲಾಸ್ಕಾ ಪ್ರಾಂತದ ಉತ್ತರ ಭಾಗದಿಂದ ಹಿಡಿದು ಕೆನಡಾದ ಪೂರ್ವದವರೆಗೆ ಹರಡಿರುವ ವಿಶಾಲ ನೀರ್ಗಲ್ಲ ಪ್ರದೇಶದಲ್ಲಿ ನಿಸರ್ಗದೊಡನೆ ಸೆಣಸಾಡಿ ಬದುಕುವವರ ಹೋರಾಟದ ಬದುಕನ್ನು ತನ್ನೆಲ್ಲ ಕಟು ವಾಸ್ತವಗಳೊಂದಿಗೆ ತೆರೆದಿಟ್ಟ ಚಿತ್ರ. ಸುಮಾರು ಇಂಗ್ಲೆಂಡ್‌ನಷ್ಟೇ ವಿಶಾಲವಾದ ಈ ಪ್ರದೇಶದಲ್ಲಿ ವಾಸಿಸುವವರೆಂದರೆ ‘ಇನುಯಿಟ್’ ಎಂಬ ವಿಶೇಷ ವರ್ಗಕ್ಕೆ ಸೇರಿದ ಎಸ್ಕಿಮೋ ಪಂಗಡದ ಜನರು. ವಿಶಾಲವಾದ ಬಯಲಿದ್ದರೂ ಅವರ ಸಂಖ್ಯೆ ಆಗ 300ನ್ನೂ ಮೀರಿರಲಿಲ್ಲ.

ಉತ್ತರಾರ್ಧ ಗೋಳದ ಈ ಪ್ರದೇಶದಲ್ಲಿ ವರ್ಷದ ಬಹುತೇಕ ಕಾಲ ಎಲ್ಲೆಡೆ ಹಿಮದ್ದೇ ಸಾಮ್ರಾಜ್ಯ. ಹಿಮದಲ್ಲಿ ಬೆಳೆಯುವ ಒಂದು ಬಗೆಯ ಪಾಚಿ (moss)ಬಿಟ್ಟರೆ ಜಲಚರಗಳು ಮತ್ತು ಹಿಮನರಿ ಮುಂತಾದ ಹಿಮಭೂಮಿಗೆ ಹೊಂದಿಕೊಂಡ ಪ್ರಾಣಿಗಳು ಮಾತ್ರ ಅಲ್ಲಿ ಬದುಕಬಲ್ಲವು. ಜೊತೆಗೆ ಹಿಮಬಂಡಿ ಎಳೆಯಲು ತೋಳದ ಮೂಲದಿಂದ ವಿಕಾಸಗೊಂಡ ಪಳಗಿಸಿದ ನಾಯಿಗಳೇ ಅವರ ಸಂಗಾತಿಗಳು. ಇಂಥವರ ಬದುಕಿನ ಒಂದು ಅವಧಿಯ ಸೀಳುನೋಟವೇ ‘ದಿ ನ್ಯಾನೂಕ್ ಆಫ್ ದಿ ನಾರ್ತ್’.

ಉತ್ತರ ಅಮೆರಿಕ ಖಂಡದ ನ್ಯಾನೂಕ್ ಮತ್ತವನ ಇಬ್ಬರು ಹೆಂಡತಿಯರು (ನೈಲಾ, ಕನಾವು) ಮಗ (ಅಲಿ) ಕೈಗೂಸು (ರೇನ್‌ಬೋ) ಹಾಗೂ ನಾಯಿಗಳು ಮತ್ತು ಸಲಕರಣೆಗಳ(ಇಗ್ಲೂ, ಸ್ಲೆಡ್ಜ್, ದೋಣಿ, ಹುಟ್ಟು, ಹಗ್ಗ, ಕತ್ತಿ, ಈಟಿ)ನ್ನೊಳಗೊಂಡ ಕುಟುಂಬದ ಕೆಲವು ವಾರಗಳ ಬದುಕೇ ಈ ಚಿತ್ರದ ಜೀವಾಳ. ನ್ಯಾನೂಕ್‌ನ ಬದುಕೇ ಇಡೀ ಇನುಯಿಟ್‌ಗಳ ಬದುಕಾಗಿ ವಿಸ್ತೃತಗೊಳ್ಳುವುದು ಚಿತ್ರದ ಮತ್ತೊಂದು ವಿಶೇಷತೆ. ಈ ಬದುಕಿನ ಅನಾವರಣದಲ್ಲಿ ನೂರಾರು ವಿವರಗಳು ತುಂಬಿಕೊಳ್ಳುತ್ತವೆ. ಸೀಲ್ ಚರ್ಮದಿಂದ ತಯಾರಿಸಿದ ಪುಟ್ಟ ದೋಣಿಯಲ್ಲಿ ನ್ಯಾನೂಕ್‌ನ ಸಂಸಾರವು ತೀರಕ್ಕೆ ಬಂದು ಇಳಿಯುವ ದೃಶ್ಯದಿಂದ ಆರಂಭವಾಗುವ ಕುತೂಹಲವು ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಹೋಗುತ್ತದೆ. ತಮ್ಮ ಹೊಟ್ಟೆಪಾಡಿಗಾಗಿ ಇಡೀ ಸಮುದಾಯ ವಾಲ್‌ರಸ್‌ಗಳನ್ನು ಬೇಟೆಯಾಡುವ ದೃಶ್ಯ ಈ ಲೇಖನದ ಆರಂಭದಲ್ಲಿ ವಿವರಿಸಿದಂತಹ ಮತ್ತೊಂದು ಮಹಾ ಹೋರಾಟವನ್ನು ದರ್ಶನ ಮಾಡಿಸುತ್ತದೆ. ನೀರಿನಲ್ಲಿ ಈಜಿ ದಡಕ್ಕೆ ಬಂದು ವಿಶ್ರಾಂತಿಯಲ್ಲಿ ಮೈಮರೆತಿರುವ ವಾಲ್‌ರಸ್‌ಗಳನ್ನು ಬೇಟೆಯಾಡಲು ನೆಲದಲ್ಲಿ ಅಡಗಿ ಇಂಚು ಇಂಚೇ ಮುಂದಕ್ಕೆ ಹೋಗಿ ಈಟಿ ಗಾಳವನ್ನು ಎಸೆಯುವ ಮತ್ತು ಅಲ್ಲಿಂದ ಆರಂಭವಾಗುವ ಅಸ್ತಿತ್ವದ ಹೋರಾಟ ಮನುಷ್ಯ-ಪ್ರಾಣಿ ನಡುವಿನ ಸಂಘರ್ಷವಾಗಿ ಉಳಿಯುವುದಿಲ್ಲ. ಬದಲು ಬದುಕಿನ ವಿರಾಟ್ ಹೋರಾಟದ ದರ್ಶನವಾಗಿ ಅರಳಿಕೊಳ್ಳುತ್ತದೆ.

ಚಿತ್ರದ ಮತ್ತೊಂದು ಮಾಂತ್ರಿಕ ದೃಶ್ಯವೆಂದರೆ ನ್ಯಾನೂಕ್ ಮತ್ತವನ ಗೆಳೆಯರು ನಿರ್ಮಿಸುವ ‘ಇಗ್ಲೂ’ (ಹಿಮಮನೆ). ನೀರ್ಗಲ್ಲ ದೊಡ್ಡ ಇಟ್ಟಿಗೆಗಳನ್ನು ಕತ್ತರಿಸಿ, ಕಲಾತ್ಮಕವಾಗಿ ಜೋಡಿಸಿ ಹಿಮದಲ್ಲೇ ಅಂಟಿಸುತ್ತಾ ಗುಮ್ಮಟವನ್ನು ನಿರ್ಮಿಸುವ ಅವರ ಕೌಶಲ್ಯ ನೋಡುಗನನ್ನು ಮಂತ್ರ ಮುಗ್ಧನನ್ನಾಗಿಸುತ್ತದೆ. ಗುಮ್ಮಟದಲ್ಲಿ ಕಿಟಿಕಿಯನ್ನು ಕೊರೆದು ಅದೇ ಗಾತ್ರದ ಅರೆ ಪಾರದರ್ಶಕ ಮಂಜುಗಡ್ಡೆಯನ್ನು ಆರಿಸಿ ತಂದು ಬೆಳಕಿಂಡಿಯಾಗಿ ರೂಪಿಸುವ ಅವರ ದೇಸೀಜ್ಞಾನವನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಛಾವಣಿಗೆ ತೂಗುಬಿಟ್ಟ ಡಬ್ಬದಲ್ಲಿ ಹಿಮವನ್ನಿಟ್ಟು ಕೆಳಗೆ ಒಣಪಾಚಿಯ ಬೆಂಕಿ ಮಾಡಿ ಏಕಕಾಲಕ್ಕೆ ನೀರನ್ನು ಒಳಗೆ ಶಾಖವನ್ನು ಸೃಷ್ಟಿಸುವ ಅವರ ಅರಿವು ಅಮೋಘವೆನಿಸುತ್ತದೆ. ದೊಡ್ಡ ನಾಯಿಗಳಿಗೆ ಆಹಾರವಾಗುವುದನ್ನು ತಪ್ಪಿಸಲು ನಾಯಿಮರಿಗಳಿಗೆ ಪುಟಾಣಿ ಇಗ್ಲೂ ರಚನೆಯು ಶತಮಾನಗಳ ಕಾಲದಿಂದ ಸಂಚಯನಗೊಂಡ ಜ್ಞಾನದ ಫಲ. ಡಬ್ಬದಲ್ಲಿನ ಹಿಮ ಮಾತ್ರ ಕರಗಿ, ಛಾವಣಿಯ ಹಿಮಕ್ಕೆ ಘಾಸಿಯಾಗದ ರೀತಿಯಲ್ಲಿ ಹಿಮಮನೆಯೊಳಗಡೆ ಅವರು ಉಷ್ಣವನ್ನು ನಿರ್ವಹಿಸುವ ರೀತಿಯೇ ಜಗದಚ್ಚರಿಯ ವಿಷಯ.

ಚಿತ್ರದಲ್ಲಿ ಅನೇಕ ಭಾವನಾತ್ಮಕ ದೃಶ್ಯಗಳ ಜೊತೆಗೆ ‘ಇನುಯಿಟ್’ಗಳ ಸಾಹಸದ ಬದುಕು ಮತ್ತು ಅಸ್ತಿತ್ವಕ್ಕಾಗಿ ನಡೆಸುವ ನಿರಂತರ ಹೋರಾಟ ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತವೆ. ಚಿಕ್ಕಮಕ್ಕಳು ನಾಯಿಗಳ ಜೊತೆ ಆಡುವುದು, ಬೇಟೆಯ ಅಭ್ಯಾಸ, ರಾತ್ರಿ ಚರ್ಮದ ಹೊದಿಕೆಯಲ್ಲಿ ನಗ್ನವಾಗಿ ಮಲಗಿ ದೇಹದ ತಾಪದಿಂದ ತಮ್ಮ ದೇಹ ಮತ್ತು ಮನೆಯ ತಾಪಮಾನವನ್ನು ಸರಿದೂಗಿಸುವ ವಿಧಾನ, ಹಿಮದಲ್ಲಿ ಅಡಗಿಕೂತ ಶುಭ್ರ ಕೂದಲಿನ ಹಿಮನರಿಯನ್ನು ಹಿಡಿದು ಸಾಗಿಸುವ ಬೇಟೆಯ ಕೌಶಲ್ಯ, ಇದ್ದಕ್ಕಿದ್ದಂತೆ ಏಳುವ ಹಿಮಗಾಳಿಯನ್ನು ಪ್ರತಿರೋಧಿಸಿ ಮುನ್ನಡೆವ ಛಲ, ಹಸಿವು ಅಸಹಾಯಕತೆಗಳೊಡನೆ ಬದುಕುವ ಶ್ರಮಗಳೆಲ್ಲವೂ ಈ ಚಿತ್ರದಲ್ಲಿ ವಿವರಪೂರ್ಣವಾಗಿ ಮೂಡಿವೆ.

ನಿರಾಶೆಯೇ ಹೆಪ್ಪುಗಟ್ಟಿದಂಥ ಆರ್ಕ್‌ಟಿಕ್ ಪ್ರದೇಶದ ಮೇರೆಯರಿಯದ ಹಿಮದ ಬಯಲನ್ನು ಫ್ಲಾಹರ್ಟಿ ಮನೋಹರವಾಗಿ ಸೆರೆಹಿಡಿದಿದ್ದಾರೆ. ಆ ವಿಶಾಲ ಬಯಲಿನಲ್ಲಿ ಮಾನವರ ಬಿಂಬಗಳು ಚಲಿಸುವ ಕಪ್ಪು ಚುಕ್ಕಿಯಾಗಿ ಜೀವತಳೆಯುತ್ತವೆ. ಮಂಜಿನ ಪಕಳೆಗಳು ಮರಳಿನ ಕಣಗಳಂತೆ ಬಯಲಿನಲ್ಲಿ ತೂರಿಹೋಗುವ, ಸಮುದ್ರ ತೀರದಲ್ಲಿ ಒಟ್ಟಿದಂತೆ ಕಾಣುವ ಮಂಜಿನ ಶಿಲಾ ಉಂಡೆಗಳ ದೃಶ್ಯಗಳನ್ನು ಅಂಥ ವೈಪರೀತ್ಯ ಪರಿಸ್ಥಿತಿಯಲ್ಲಿ ಆ ಕಾಲದಲ್ಲಿ ಚಿತ್ರಿಸಿದ ಅವನ ಜಾಣ್ಮೆ ಮೆಚ್ಚುಗೆಗೆ ಪಾತ್ರವಾಗುತ್ತವೆ. ಆದರೂ ಅವನ ಕ್ಯಾಮೆರಾ ಹೆಚ್ಚು ಕೇಂದ್ರಿಕೃತವಾಗಿರುವುದು ನ್ಯಾನೂಕ್ ಕುಟುಂಬದ ವಿವರಗಳಿಗೆ. ಅದನ್ನವರು ಅಭಿಮಾನದಿಂದ, ಪ್ರೀತಿಯಿಂದಲೇ ಮಾಡಿದ್ದಾರೆ. ಚಿತ್ರದ ಆರಂಭದಲ್ಲಿ ಕಯಾಕ್ ದೋಣಿಯಿಂದ ಇಡೀ ಕುಟುಂಬವೇ ಇಳಿದು ನಗೆಯುಕ್ಕಿಸುವ ದೃಶ್ಯದಿಂದ ಹಿಡಿದು ಕೊನೆಯಲ್ಲಿ ಅವನ ಹೆಂಡತಿ ನೈಲಾ ಕೂಸಿಗೆ ಸ್ನಾನ ಮಾಡಿಸುವ ಮನಕ್ಕೆ ತಟ್ಟುವ ದೃಶ್ಯದವರೆಗೆ ಅ ಕುಟುಂಬದ ಬದುಕಿನ ಎಲ್ಲ ವಿವರಗಳನ್ನೂ ಜೀವತುಂಬಿ ದಾಖಲಿಸಿದ್ದಾರೆ. ತನ್ನ ವರ್ತನೆಯಿಂದ ಮನಗೆಲ್ಲುವ ನ್ಯಾನೂಕ್ ಪಾತ್ರವು ಸಿನೆಮಾ ಚರಿತ್ರೆಯಲ್ಲಿಯೇ ವಿಶಿಷ್ಟವಾದದ್ದು. ಚಿತ್ರ ಬಿಡುಗಡೆಯಾದ ನಂತರ ಅವನ ನಗೆ ಜಗತ್ತಿಗೆ ಪ್ರಿಯವಾಯಿತು. ಚಿತ್ರ ಬಿಡುಗಡೆಯಾದ ಎರಡು ವರ್ಷಗಳ ನಂತರ ಅದರ ಪಾತ್ರಧಾರಿ ಅಲ್ಲಕರಿಯಲ್ಲಕ್‌ರವರ ನಿಧನ ಜಾಗತಿಕ ಸುದ್ದಿಯಾಯಿತು.

ಆದರೆ ಹೊಗಳಿಕೆಯ ಹೂಮಳೆಯ ಜೊತೆಗೆ ಚಿತ್ರವು ಟೀಕೆಯ ಸುರಿಮಳೆಯನ್ನೂ ಎದುರಿಸಿತು. ಮುಖ್ಯವಾಗಿ ಅದು ಸಾಕ್ಷಚಿತ್ರವಾಗಿರದೆ ಸ್ಥಳೀಯ ‘ಕಲಾವಿದ’ರನ್ನು ಬಳಸಿ ಸಾಕ್ಷಚಿತ್ರದ ರೀತಿಯಲ್ಲಿ ತೆಗೆದಂತೆ ಮಾಡಿದ ಚಿತ್ರ ಎಂಬ ಟೀಕೆ ಕೇಳಿಬಂತು. ಅದರಿಂದ ನಿಜ ಸಂಗತಿಗಳಿಗೆ ಇಲ್ಲಿ ಜಾಗವಿಲ್ಲ ಇಲ್ಲವೇ ನೇಪಥ್ಯಕ್ಕೆ ಸರಿದವು ಎಂದು ಸಕಾರಣವಾಗಿಯೇ ವಿಮರ್ಶಕರು ಆಕ್ಷೇಪಿಸಿದ್ದಾರೆ. ಚಿತ್ರದ ನಾಯಕ ನ್ಯಾನೂಕ್ ನಿಜವಾದ ವ್ಯಕ್ತಿಯಲ್ಲ; (ಪಾತ್ರಧಾರಿಯ ಹೆಸರು ಅಲ್ಲುಕರಿಯಲ್ಲಕ್) ಚಿತ್ರದ ಕೊನೆಯ ಅಡಿಟಿಪ್ಪಣಿಯಲ್ಲಿ ಸೂಚಿಸಿದಂತೆ ಜಿಂಕೆಯ ಬೇಟೆಗೆ ಹೋದ ಆತ ದಿಕ್ಕುತಪ್ಪಿ ಹಸಿವಿನಿಂದ ಸಾಯಲಿಲ್ಲ; ಬದಲು ಕ್ಷಯರೋಗದಿಂದ ಸತ್ತ; ಅದಾಗಲೇ ಈಟಿಗಾಳವನ್ನು ತ್ಯಜಿಸಿ ಬೇಟೆಗೆ ಬಂದೂಕು ಬಳಸುತ್ತಿದ್ದ ಎಸ್ಕಿಮೋಗಳ ಕೈಯಲ್ಲಿ ಹಳೆಯ ಆಯುಧವನ್ನೇ ಹಿಡಿಸಿ ವಾಸ್ತವತೆಗೆ ಭಂಗ ತಂದಿದ್ದಾರೆ ಎಂಬುದು ವಿಮರ್ಶಕರ ಆಕ್ಷೇಪಣೆ. ಅವರ ಹಿಂದಿನ ಬದುಕನ್ನು ರೊಮ್ಯಾಂಟಿಕ್ ಆಗಿ ತೋರಿಸಲು ಫ್ಲಾಹರ್ಟಿ ಅಂಥ ದೃಶ್ಯಗಳನ್ನು ರೂಪಿಸಿದ್ದಾರೆ ಎಂದು ವಿಮರ್ಶಕರು ಆಕ್ಷೇಪಿಸಿದರು. ಆದರೆ ಫ್ಲಾಹರ್ಟಿ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಎತ್ತಿದ ಯಾವ ಆಕ್ಷೇಪಣೆಗಳನ್ನು ನಿರಾಕರಿಸಲಿಲ್ಲ. ಆದರೆ ಹಲವು ವಿಮರ್ಶಕರು ಫ್ಲಾಹರ್ಟಿಯ ಪರ ನಿಂತು ವಾದಿಸಿದರು. ಫ್ಲಾಹರ್ಟಿ ಕೇವಲ ಕ್ಯಾಮೆರಾ ಹಿಡಿದ ಒಬ್ಬ ವರದಿಗಾರನಲ್ಲ. ಸೃಜನಶೀಲ ಕಲಾವಿದ. ತಮಗೆ ದಕ್ಕಿದ ಕಲಾವಿದನ ‘ಸ್ವಾತಂತ್ರ್ಯ’ ಅಥವಾ ‘ಕಲಾಸ್ವಾತಂತ್ರ್ಯ’ (Artistic Truth )ಕ್ಕೆ ಆತ ನಿಜವಾಗಲೂ ಅಪಚಾರ ಮಾಡಿರುವನೇ ಎಂಬುದನ್ನು ಪರಿಗಣಿಸಬೇಕು. ಚಿತ್ರೀಕರಣದ ಅನುಕೂಲಕ್ಕೆ ನ್ಯಾನೂಕ್ ಕುಟುಂಬ ಎಲ್ಲಿ ನಡೆಯಬೇಕು, ಓಡಾಡಬೇಕು ಎಂಬ ಬಗ್ಗೆ ಸೂಚನೆ ನೀಡಿ ಚಿತ್ರೀಕರಿಸಿರಬಹುದು. ಕೆಲವು ದೃಶ್ಯಗಳನ್ನು ಫ್ಲಾಹರ್ಟಿ ಪೂರ್ವ ನಿಯೋಜನೆಯಂತೆ ಚಿತ್ರೀಕರಿಸಿದರೂ ಚಿತ್ರದ ಅಥೆಂಟಿಸಿಟಿಗೆ ಎಲ್ಲೂ ಭಂಗಬಂದಿಲ್ಲವೆಂಬುದನ್ನು ಮನಗಾಣಬೇಕು. ಉದಾಹರಣೆಗೆ ನ್ಯಾನೂಕ್‌ನಲ್ಲಿನ ವಾಲ್‌ರಸ್‌ಗಳ ಬೇಟೆಯ ದೃಶ್ಯ ನೋಡಬಹುದು. ಅಲ್ಲಿ ನಡೆಯುವುದು ನಿಜವಾದ ಪ್ರಾಣಿಬೇಟೆ. ವಾಲ್‌ರಸ್‌ಗೆ ಚಿತ್ರಕತೆಯೂ ತಿಳಿದಿಲ್ಲ; ಚಿತ್ರದ ಶೂಟಿಂಗ್ ವೇಳಾಪಟ್ಟಿಯೂ ಗೊತ್ತಿಲ್ಲ. ಹೊಂಚುಹಾಕಿ ಮುಗಿಬಿದ್ದ ಬೇಟೆಗಾರರ ತಂಡಕ್ಕೆ ಅದು ಬಲಿಯಾಗುತ್ತದೆ. ಹಾಗಾಗಿ ಅದನ್ನು ಸಂಪೂರ್ಣ ಸ್ಟೇಜ್ ಮ್ಯಾನೇಜ್ ಮಾಡಿ ತೆಗೆದ ಚಿತ್ರವಲ್ಲವೆಂದು ವಾದಿಸಿದರು.

ಅದೇನೆ ಇರಲಿ, ತನ್ನ ತಾಜಾತನ, ಕಲಾತ್ಮಕ ಛಾಯಾಗ್ರಹಣ ಮತ್ತು ಕಟುವಾಸ್ತವದ ಬದುಕಿನ ಭಿನ್ನ ಭಿನ್ನ ಚಿತ್ರಗಳೇ ಒಂದು ಸುಮಧುರ ಕಾವ್ಯವಾಗಿ ಅರಳಿದ ಪವಾಡದಿಂದ ‘ನ್ಯಾನೂಕ್ ಆಫ್ ದಿ ನಾರ್ತ್’ ಜಗತ್ತಿನ ಅಭಿಜಾತ ಚಲನಚಿತ್ರ ಕೃತಿಯಾಗಿ ಅಮರವಾಯಿತು. 1920ರಲ್ಲಿಯೇ ‘ನ್ಯಾನೂಕ್ ಆಫ್ ದಿ ನಾರ್ತ್’ ಅನ್ನು ಚಿತ್ರೀಕರಿಸಿದ ಫ್ಲಾಹರ್ಟಿಯವರನ್ನೇ ಡಾಕ್ಯುಮೆಂಟರಿ ಪ್ರಕಾರದ ಪಿತಾಮಹನೆಂದು ಅಂಗೀಕರಿಸಲಾಯಿತು.

Writer - ಕೆ. ಪುಟ್ಟಸ್ವಾಮಿ

contributor

Editor - ಕೆ. ಪುಟ್ಟಸ್ವಾಮಿ

contributor

Similar News

ಓ ಮೆಣಸೇ...