ಅಸಮರ್ಪಕ ಮೌಲ್ಯ ಮಾಪನ; ಕೇಸು ದಾಖಲಿಸಲು ಅವಕಾಶವಿಲ್ಲ: ಸರಕಾರ

Update: 2022-03-13 06:02 GMT

ಬೆಂಗಳೂರು, ಮಾ.12: 2020ರ ಜುಲೈ ಮತ್ತು ಸೆಪ್ಟಂಬರ್‌ನಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಮಾಡಿರುವ ಮೌಲ್ಯಮಾಪಕರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಲು ಅವಕಾಶವಿಲ್ಲವೆಂದು ಸರಕಾರ ಇದೀಗ ಉತ್ತರಿಸಿದೆ.

2020ರ ಜುಲೈ ಮತ್ತು ಸೆಪ್ಟಂಬರ್‌ನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಸಮರ್ಪಕ ವೌಲ್ಯಮಾಪನ ಮಾಡಿದ ಮೌಲ್ಯಮಾಪಕರಿಂದ ವಸೂಲು ಮಾಡಿದ ದಂಡ ಮತ್ತು ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವ ಸಂಬಂಧ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆ (211-1702)ಗೆ ಪ್ರಾಥಮಿಕ, ಪ್ರೌಢಶಿಕ್ಷಣ, ಸಕಾಲ ಸಚಿವ ಬಿ.ಸಿ. ನಾಗೇಶ್ ಅವರು ಅಸಮರ್ಪಕ ಮೌಲ್ಯಮಾಪನ ಮಾಡಿದವರ ಮೇಲೆ ದಂಡ ವಿಧಿಸಲು ಮಾತ್ರ ಅವಕಾಶವಿದೆ ಎಂು ಉತ್ತರ ಒದಗಿಸಿದ್ದಾರೆ.

ಮರು ಮೌಲ್ಯಮಾಪನಕ್ಕೆ ಒಟ್ಟು 19,826 ಅರ್ಜಿಗಳು ದಾಖಲಾಗಿವೆ. ಈ ಪೈಕಿ 06ಕ್ಕಿಂತ ಕಡಿಮೆ ಅಂಕ ವ್ಯತ್ಯಾಸವಾಗಿರುವ ಪ್ರಕರಣಗಳು 15,591 ಸಂಖ್ಯೆಯಲ್ಲಿವೆ. ಅದೇ ರೀತಿ 06ಕ್ಕಿಂತ ಹೆಚ್ಚು ಅಂಕ ವ್ಯತ್ಯಾಸವಿರುವ ಪ್ರಕರಣಗಳು 4,235 ಸಂಖ್ಯೆಯಲ್ಲಿವೆ. ಈ ರೀತಿಯ ವ್ಯತ್ಯಾಸಗಳನ್ನು ಮರು ಮೌಲ್ಯಮಾಪನದಲ್ಲಿ ಸರಿಪಡಿಸಿರುವುದು ಸಚಿವ ನಾಗೇಶ್ ನೀಡಿರುವ ಉತ್ತರದಿಂದ ತಿಳಿದು ಬಂದಿದೆ. ಈ ರೀತಿ ಅಸಮರ್ಪಕ ಮೌಲ್ಯಮಾಪನ ಮಾಡಿರುವ ಮೌಲ್ಯಮಾಪಕರಿಗೆ ದಂಡ ವಿಧಿಸಲು ಕ್ರಮ ವಹಿಸಲಾಗಿದೆ ಮತ್ತು 06ಕ್ಕಿಂತ ಹೆಚ್ಚು ಅಂಕ ವ್ಯತ್ಯಾಸವಾಗಿರುವ ವಿದ್ಯಾರ್ಥಿಗಳಿಗೆ ಪಾವತಿಸಿರುವ ಶುಲ್ಕವನ್ನು ಸಹ ಮರುಪಾವತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

06ರಿಂದ 10 ಅಂಕಗಳ ವ್ಯತ್ಯಾಸಕ್ಕೆ ಮೌಲ್ಯಮಾಪಕರಿಗೆ 800 ರೂ. ದಂಡ ವಿಧಿಸಲಾಗಿದೆ. ಅದೇ ರೀತಿ 11ರಿಂದ 15 ಅಂಕಗಳ ವ್ಯತ್ಯಾಸಕ್ಕೆ 1,000 ರೂ., 16ರಿಂದ 20 ಅಂಕಗಳ ವ್ಯತ್ಯಾಸಕ್ಕೆ 1,500 ರೂ., 21ಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸಕ್ಕೆ 2,000 ರೂ.ಗಳ ದಂಡ ವಿಧಿಸಿರುವುದು ಉತ್ತರದಿಂದ ಗೊತ್ತಾಗಿದೆ.

ಅಸಮರ್ಪಕ ಮೌಲ್ಯಮಾಪನ ಮಾಡಿದ ಒಟ್ಟು 4,317 ಶಿಕ್ಷಕರಿಗೆ ಅಂಕಗಳ ವ್ಯತ್ಯಾಸದ ಅನುಸಾರ 51,26,600 ರೂ.ದಂಡ ವಿಧಿಸಲಾಗಿದೆ. ಈ ದಂಡದ ಮೊತ್ತದಲ್ಲಿ ಈವರೆಗೆ 10,56,400 ರೂ.ಗಳು ವಸೂಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಶಾಲೆಗಳು 2020-21ನೇ ಸಾಲಿನಲ್ಲಿ ಮುಚ್ಚಲ್ಪಟ್ಟಿದ್ದ ಕಾರಣದಿಂದ ದಂಡ ವಸೂಲಾತಿಯ ಪ್ರಮಾಣವು ಕಡಿಮೆಯಾಗಿದೆ ಎಂದು ದಂಡ ವಸೂಲಾತಿು ವಿಳಂಬಕ್ಕೆ ಕಾರಣವನ್ನು ಒದಗಿಸಿದೆ.

ವಿದ್ಯಾರ್ಥಿಯ ಜೀವನದಲ್ಲಿ ಎಸೆಸೆಲ್ಸಿ ಪರೀಕ್ಷೆ ಒಂದು ಉನ್ನತ ಶಿಕ್ಷಣದ ಹೆಬ್ಬಾಗಿಲಾಗಿದೆ. ಇಲ್ಲಿ ಮೌಲ್ಯಮಾಪಕರು ಎಡವಿದರೆ ಅವರಿಂದ ದಂಡ ವಸೂಲಿ ಮಾಡಿ ಸರಕಾರ ಕೈತೊಳೆದುಕೊಳ್ಳಬಹುದು. ವಿದ್ಯಾರ್ಥಿಯ ಭವಿಷ್ಯ ಮತ್ತು ಅವನ ಮುಂದಿನ ಶೈಕ್ಷಣಿಕ ಜೀವನದ ಮೇಲೆ ಆಗುವ ಪರಿಣಾಮದಿಂದ ಖಿನ್ನತೆಗೆ ಒಳಗಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ವಿದ್ಯಾರ್ಥಿಯ ಪೋಷಕರು ಮತ್ತು ಕುಟುಂಬದವರು ಮತ್ತು ಸಮಾಜದ ಮೇಲೆ ಅತ್ಯಂತ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಅಸಮರ್ಪಕ ಮೌಲ್ಯಮಾಪನ ಮಾಡುವ ಬೇಜವಾಬ್ದಾರಿ ಶಿಕ್ಷಕರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡುವಂತೆ ಕಾನೂನಿಗೆ ತಿದ್ದುಪಡಿ ತರುವುದು ಸರಕಾರದ ಆದ್ಯ ಕರ್ತವ್ಯವಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಎಚ್.ಎಂ. ವೆಂಕಟೇಶ್.

ಅಸಮರ್ಪಕ ಮೌಲ್ಯಮಾಪನ ಮಾಡಿರುವ ಕುರಿತು ಲೆಕ್ಕ ಪರಿಶೋಧನಾ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ವರದಿಯನ್ನಾಧರಿಸಿ ‘the-file.in’ ಮತ್ತು ‘ವಾರ್ತಾಭಾರತಿ’ ವಿಶೇಷ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News