ಕೆಎಸ್ಸಾರ್ಟಿಸಿ ಸಿಬ್ಬಂದಿಗೆ 2 ವರ್ಷಗಳಿಂದ ಸಿಕ್ಕಿಲ್ಲ ಸಮವಸ್ತ್ರ!
ಬೆಂಗಳೂರು: ರಾಜ್ಯದ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವುದರ ಕುರಿತು ಕಳೆದ ಎರಡು ತಿಂಗಳಿನಿಂದಲೂ ಅತ್ಯಂತ ಹೆಚ್ಚಿನ ಆಸಕ್ತಿ ವಹಿಸಿರುವ ರಾಜ್ಯ ಬಿಜೆಪಿ ಸರಕಾರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗೆ ಕಳೆದ ಎರಡೂ ವರ್ಷಗಳಿಂದ ಸಮವಸ್ತ್ರವನ್ನೇ ವಿತರಣೆ ಮಾಡಿಲ್ಲ. ಕೋವಿಡ್ ಆರ್ಥಿಕ ಸಂಕಷ್ಟದಲ್ಲೂ ಮುಖ್ಯಮಂತ್ರಿ ಆದಿಯಾಗಿ ಶಾಸಕರ ವೇತನವನ್ನು ಪರಿಷ್ಕರಣೆ ಮಾಡಿರುವ ಸರಕಾರವು ಇದೇ ಕೋವಿಡ್ ಆರ್ಥಿಕ ಸಂಕಷ್ಟವನ್ನು ಮುಂದೊಡ್ಡಿ ಕೆಎಸ್ಸಾರ್ಟಿಸಿ ನೌಕರರಿಗೆ ಸಮವಸ್ತ್ರ ಖರೀದಿಯನ್ನು ವಿಳಂಬ ಮಾಡಿರುವುದು ಮತ್ತು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳ ಸಮವಸ್ತ್ರ ಸಂಹಿತೆ ಕುರಿತು ಎಲ್ಲಿಲ್ಲದ ಮುತುವರ್ಜಿ ವಹಿಸಿದ್ದು, ಚರ್ಚೆಗೆ ಕಾರಣವಾಗಿದೆ.
ಎರಡು ವರ್ಷಗಳಿಂದ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಸಮವಸ್ತ್ರ ವಿತರಣೆ ಮಾಡದಿರುವುದು ಸರಕಾರದ ಗಮನಕ್ಕೆ ಬಂದಿದ್ದರೂ ನಗದು ಪಾವತಿ ಮಾಡಿ ಕೈತೊಳೆದುಕೊಂಡಿದೆಯೇ ಸಮವಸ್ತ್ರ ವಿತರಿಸಲು ಆಸಕ್ತಿ ವಹಿಸಿಲ್ಲ. ಹಿಜಾಬ್ ಪ್ರಕರಣದ ಕುರಿತು ಹೈಕೋರ್ಟ್ ನೀಡಿದ್ದ ತೀರ್ಪಿನ ಬೆನ್ನಲ್ಲೇ ಕೆಎಸ್ಸಾರ್ಟಿಸಿ ನೌಕರರಿಗೆ ಸಮವಸ್ತ್ರವನ್ನು ವಿತರಿಸದಿರುವುದು ಮುನ್ನೆಲೆಗೆ ಬಂದಿದೆ.
ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಸಮವಸ್ತ್ರ ವಿತರಣೆ ಮಾಡದಿರುವ ಕುರಿತು ವಿಧಾನಪರಿಷತ್‌ನ ಸದಸ್ಯ ಡಾ.ಚಂದ್ರಶೇಖರ್ ಬಿ. ಪಾಟೀಲ್ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ 2022ರ ಮಾರ್ಚ್ 11ರಂದು ಉತ್ತರಿಸಿರುವ ಸಚಿವ ಶ್ರೀರಾಮುಲು ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಸಮವಸ್ತ್ರ ವಿತರಣೆ ಮಾಡದಿರುವುದನ್ನು ಒಪ್ಪಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರರಿಗೆ ಸಮವಸ್ತ್ರ ಖರೀದಿಸಲು ಕರೆದಿದ್ದ 2 ಟೆಂಡರ್‌ಗಳನ್ನು ತಾಂತ್ರಿಕ ಕಾರಣಗಳಿಂದ ರದ್ದುಗೊಂಡಿತ್ತು. 2017-18ನೇ ಸಾಲಿನಲ್ಲಿ ವಿತರಿಸಬೇಕಿದ್ದ ಸಮವಸ್ತ್ರಗಳನ್ನು ಟೆಂಡರ್ ಮುಖಾಂತರ ಅಂದರೆ 2020ರ ಆಗಸ್ಟ್ ನಿಂದ 2021ರ ಮಾರ್ಚ್ ವರೆಗೆ ವಿತರಿಸಿತ್ತು. ಆ ನಂತರ ಕೋವಿಡ್ ನೆಪವೊಡ್ಡಿ ಸಮವಸ್ತ್ರ ಸರಬರಾಜಿನಲ್ಲಿ ವಿಳಂಬವಾಗಿದೆ ಎಂದು ಹೇಳಿತ್ತು.
ಅದೇ ರೀತಿ 2018-19ನೇ ಸಾಲಿನಲ್ಲಿ ಸಮವಸ್ತ್ರಗಳ ಬದಲು ಮಾರ್ಚ್ 2020ರಲ್ಲಿ ನಗದು ಪಾವತಿಸಲಾಗಿತ್ತು. 2019-20 ಮತ್ತು 2020-21ನೇ ಸಾಲಿಗೂ ಸಮವಸ್ತ್ರದ ಬದಲು ನಗದು ಪಾವತಿಸಲಾಗಿತ್ತು ಎಂಬುದು ಸಚಿವ ಶ್ರೀರಾಮುಲು ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.
2021-22ನೇ ಸಾಲಿಗೆ ಸಮವಸ್ತ್ರಗಳ ಖರೀದಿಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಆದೇಶ ನೀಡಲಾಗಿತ್ತು. ಕೋವಿಡ್-19ರ ಹಿನ್ನೆಲೆಯಲ್ಲಿ ನಿಗಮದಲ್ಲಿ ಆರ್ಥಿಕ ಸಂಕಷ್ಟ ಉಂಟಾದ ಕಾರಣದಿಂದ ಸಮವಸ್ತ್ರ ಖರೀದಿಯಲ್ಲಿ ಸ್ವಲ್ಪ ಮಟ್ಟಿಗೆ ವಿಳಂಬವಾದರೂ ಅರ್ಹ ಸಿಬ್ಬಂದಿಗೆ ಸಮವಸ್ತ್ರ ವಿತರಿಸಲು ಮತ್ತು ಸಮವಸ್ತ್ರದಬದಲು ನಗದು ಪಾವತಿ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ಶ್ರೀರಾಮುಲು ಉತ್ತರದಲ್ಲಿ ವಿವರಿಸಿದ್ದಾರೆ.
ಸಮವಸ್ತ್ರ ಹೊಲಿಗೆಗೆ 175 ರೂ.
ಸಾರಿಗೆಯ ನಿಗಮಗಳ ನೌಕರರಿಗೆ ವರ್ಷಕ್ಕೆ ಎರಡು ಸಮವಸ್ತ್ರ ವಿತರಿಸಬೇಕು. ಇದರ ಜತೆಗೆ ಹೊಲಿಗೆಯ ಶುಲ್ಕ 175 ರೂ.ಗಳನ್ನು ನೀಡುತ್ತದೆ. ಇದಲ್ಲದೆ ವರ್ಷಕ್ಕೆ ಒಮ್ಮೆ ಶೂ ಬಿಲ್ 500 ರೂ. ನೀಡುತ್ತದೆ. ನಾಲ್ಕು ನಿಗಮಗಳ ನೌಕರರಿಗೆ 2016ರಲ್ಲಿ ಸಮವಸ್ತ್ರ ನೀಡಲಾಗಿತ್ತು. 2017ರಲ್ಲಿ ಸಮವಸ್ತ್ರ ನೀಡಿರಲಿಲ್ಲ. ಅದರ ಬದಲಿಗೆ ನಗದು ಪಾವತಿಸಲಾಗಿತ್ತು. 2018ರಲ್ಲಿ ಸಮವಸ್ತ್ರ ನೀಡಲಾಗಿದೆಯೇ ವಿನಹ 2019, 2020, 2021ರ ಸಮವಸ್ತ್ರವನ್ನು ನೀಡಿರಲಿಲ್ಲ. ಇದರಿಂದ ನೌಕರರು ತೊಂದರೆ ಅನುಭವಿಸುವಂತಾಗಿತ್ತು.
ನಾಲ್ಕು ಸಾರಿಗೆ ನಿಗಮಗಳಲ್ಲಿ 1.20 ಲಕ್ಷಕ್ಕೂ ಹೆಚ್ಚು ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಚಾಲಕ, ನಿರ್ವಾಹಕ, ಸಂಚಾರ ನಿರೀಕ್ಷಕ, ಸಹಾಯಕ ಸಂಚಾರ ನಿರೀಕ್ಷಕ, ಸಹಾಯಕ ಸಂಚಾರ ಅಧೀಕ್ಷಕ, ಮೆಕ್ಯಾನಿಕ್ ಸೇರಿದಂತೆ ಅನೇಕ ನೌಕರರು ಕಡ್ಡಾಯವಾಗಿ ನೌಕರಿ ಸಮಯದಲ್ಲಿ ಸಮವಸ್ತ್ರ ಧರಿಸಬೇಕೆಂಬ ನಿಯಮವಿದೆ. ಕರ್ನಾಟಕ ಸರಕಾರವು 1983ರಲ್ಲಿ ಜಾರಿಗೆ ತಂದಿದ್ದ ಶಿಕ್ಷಣ ಕಾಯ್ದೆ 1983 (1-1995) ಕಲಂ 7(2)(5)ರಲ್ಲಿ ವಿವರಿಸಿದ್ದಂತೆ ರಾಜ್ಯದ ಎಲ್ಲಾ ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಒಂದೇ ಕುಟುಂಬದ ರೀತಿಯಲ್ಲಿ ನಡೆದುಕೊಳ್ಳಬೇಕು ಮತ್ತು ಯಾವುದೇ ಒಂದು ವರ್ಗಕ್ಕೆ ಮೀಸಲಾಗದಂತೆ ಸಾಮಾಜಿಕ ನ್ಯಾಯದ ಪರವಾಗಿ ನಡೆದುಕೊಳ್ಳಬೇಕು ಎಂದು ಆದೇಶ ಹೊರಡಿಸಿತ್ತು. ಅಲ್ಲದೆ ಪ್ರಸಕ್ತ ಕಾಯ್ದೆ ಕಲಂ 133ರಡಿಯಲ್ಲಿ ಶಾಲಾ ಮತ್ತು ಕಾಲೇಜುಗಳಿಗೆ ಈ ಬಗ್ಗೆ ಸೂಕ್ತ ನಿರ್ದೇಶನವನ್ನು ನೀಡುವ ಅಧಿಕಾರವನ್ನು ಸರಕಾರಕ್ಕೆ ನೀಡಲಾಗಿತ್ತು.
ಕೆಲವು ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಧರ್ಮದ ಅನುಸಾರ ಆಚರಣೆಗಳನ್ನು ಪಾಲಿಸಲಾಗುತ್ತಿದೆ ಎಂದು ಹೇಳಿದ್ದ ಸರಕಾರವು ಇದರಿಂದ ಶಾಲಾ ಕಾಲೇಜುಗಳಲ್ಲಿ ಸಮಾನತೆ ಮತ್ತು ಏಕತೆಗೆ ಧಕ್ಕೆ ಬರುತ್ತಿದೆ ಎಂದಿತ್ತು. ಈ ಹಿನ್ನೆಲೆಯಲ್ಲಿ ವೈಯಕ್ತಿಕ ವಸ್ತ್ರ ಸಂಹಿತೆಗಿಂತ ಸಾಮೂಹಿಕ ವಸ್ತ್ರ ಸಂಹಿತೆಯನ್ನು ಪಾಲಿಸಬೇಕು ಎಂದು ಸೂಚಿಸಿದ್ದ ಸರಕಾರವು ಪದವಿಪೂರ್ವ ಶಿಕ್ಷಣ ಇಲಾಖೆಯ ಕಾಲೇಜುಗಳಲ್ಲಿ ಆಯಾ ಕಾಲೇಜಿನ ಆಡಳಿತ ಮಂಡಳಿಯ ಮೇಲ್ವಿಚಾರಣೆ ಸಮಿತಿಯು ನಿರ್ಧರಿಸುವ ಸಮವಸ್ತ್ರಗಳನ್ನು ಧರಿಸಬೇಕು ಎಂದು ಸುತ್ತೋಲೆ ಹೊರಡಿಸಿದ್ದನ್ನು ಸ್ಮರಿಸಬಹುದು.
ಹಳೆ ಸಮವಸ್ತ್ರ ಧರಿಸುತ್ತಿರುವ ನೌಕರರು
ಕಳೆದೆರಡು ವರ್ಷಗಳಿಂದ ರಾಜ್ಯ ಸರಕಾರವು ಸಮವಸ್ತ್ರ ವಿತರಿಸದಿರುವುದಿಂದ ನೌಕರರು ಹಳೆಯ ಮತ್ತು ಹರಿದು ಹೋದ ಸಮವಸ್ತ್ರಗಳನ್ನು ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಎಸ್ಸಾರ್ಟಿಸಿಯ ನಾಲ್ಕೂ ನಿಗಮಗಳ ನೌಕರರು ಕರ್ತವ್ಯ ನಿರ್ವಹಿಸಬೇಕಾದ ಸಂದರ್ಭದಲ್ಲಿ ಸಮವಸ್ತ್ರ ಧರಿಸುವುದು ಕಡ್ಡಾಯ. ಒಂದೊಮ್ಮೆ ನೌಕರರು ಸಮವಸ್ತ್ರ ಧರಿಸದೇ ಇದ್ದಲ್ಲಿ ದಂಡವನ್ನೂ ವಿಧಿಸಲಾಗುತ್ತದೆ. ಹೀಗಾಗಿ ನೌಕರರು ದಂಡದ ಭೀತಿಯಿಂದಾಗಿ ಹಳೆಯ ಮತ್ತು ಹರಿದು ಹೋಗಿರುವ ಸಮವಸ್ತ್ರಗಳನ್ನು ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.