ಬಡ ಹೆಣ್ಣು ಮಕ್ಕಳನ್ನು ಹಿಜಾಬ್ ಹೆಸರಿನಲ್ಲಿ ಪ್ರಚೋದಿಸಲಾಗುತ್ತಿದೆ: ಸಚಿವ ಶೋಭಾ ಕರಂದ್ಲಾಜೆ ಆರೋಪ

Update: 2022-03-18 14:28 GMT

ಉಡುಪಿ : ದೇಶದ ಸಂವಿಧಾನವನ್ನು, ನೆಲದ ಕಾನೂನನ್ನು ಪ್ರತಿ ಯೊಬ್ಬರೂ ಗೌರವಿಸಬೇಕು. ಆದರೆ ಸಂವಿಧಾನಕ್ಕಿಂತ ನಾವು ಮೇಲು ಎಂದು ಕೆಲವರಿಗೆ ಅನಿಸಿದೆ. ಇಂಥವರಿಗೆ ಕಾನೂನಿನಂತೆ  ಶಿಕ್ಷೆ ಆಗುವ ಅನಿವಾರ್ಯತೆ ಇದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ನಮ್ಮ ಮಕ್ಕಳಿಗೆ ಇಂದು ಬೇಕಾಗಿರುವುದು ಉತ್ತಮ ಶಿಕ್ಷಣ. ಶಿಕ್ಷಣ ಹಾಗೂ ಉದ್ಯೋಗಕ್ಕೆ ಯಾವುದೇ ಧರ್ಮವಿಲ್ಲ. ಮಕ್ಕಳು ಓದಬೇಕು, ಉದ್ಯೋಗ ಪಡೆಯಬೇಕು ಹಾಗೂ ತಮ್ಮ ಕಾಲ ಮೇಲೆ ನಿಲ್ಲಬೇಕು. ಮುಸ್ಲಿಂ ಹೆಣ್ಣು ಮಕ್ಕಳು ಕೂಡಾ ಒಳ್ಳೆಯ ಶಿಕ್ಷಣ ಪಡೆಯಬೇಕು ಎಂದವರು ಹೇಳಿದರು.

ಆದರೆ ಹಿಜಾಬ್ ಹೆಸರಿನಲ್ಲಿ ಬಡ ಕುಟುಂಬದ ಹೆಣ್ಣುಮಕ್ಕಳನ್ನು ಪ್ರಚೋದಿಸ ಲಾಗುತ್ತಿದೆ ಎಂದವರು ಆರೋಪಿಸಿದರು. ಶ್ರೀಮಂತರಿಗೆ ಹಿಜಾಬ್ ಜೊತೆ ಯಾವುದೇ ಸಂಬಂಧವಿಲ್ಲ. ಬಡ ಹೆಣ್ಣು ಮಕ್ಕಳನ್ನು ಮಾತ್ರ ಪ್ರಚೋದನೆ ಮಾಡಿ ಈ ಕೃತ್ಯ ಮಾಡಿಸಲಾಗುತ್ತಿದೆ. ಶಾಲೆಗೆ ಬೇಕಿದ್ದರೂ ಹೋಗಲ್ಲ, ಆದರೆ ಹಿಜಾಬ್ ಅಗತ್ಯ ಎನ್ನುತಿದ್ದಾರೆ ಎಂದರು.

ಇದೊಂದು ವ್ಯವಸ್ಥಿತ ಷಡ್ಯಂತ್ರ. ಯಾವುದೋ ಸಂಘಟನೆ ಈ ಕೆಲಸ ಮಾಡುತ್ತಿದೆ ಎಂದು ಹೈಕೋರ್ಟ್ ಕೂಡಾ ಹೇಳಿದೆ ಎಂದ ಅವರು, ಇದರ ಹಿಂದಿರುವ ಕಾರಣಗಳನ್ನು ಪತ್ತೆ ಮಾಡಬೇಕಾಗಿದೆ ಎಂದರು.

ಎಲ್ಲಾ ಮಕ್ಕಳ ದಯಮಾಡಿ ಶಾಲೆಗೆ ಬನ್ನಿ, ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ನಿಮಗೆ ರಕ್ಷಣೆ ನೀಡುತ್ತಾರೆ. ಯಾರು ಕೂಡಾ ಆತಂಕ ಪಡುವ ಅಗತ್ಯವಿಲ್ಲ. ಪರೀಕ್ಷೆ ಬರೆಯಿರಿ, ಚೆನ್ನಾಗಿ ಓದಿ ಉದ್ಯೋಗ ಪಡೆಯಿರಿ. ಎಲ್ಲಾ ಹೆಣ್ಣುಮಕ್ಕಳ ಸ್ವಂತ ಕಾಲ ಮೇಲೆ ನಿಲ್ಲಬೇಕು. ಎಲ್ಲಾ ಧರ್ಮದವರಿಗೂ ಇದು ಅನ್ವಯಿಸುತ್ತದೆ. ಜೀವನದಲ್ಲಿ ಕಷ್ಟ ಬಂದಾಗ ಯಾವುದೇ ಸಂಘಟನೆ ನಿಮ್ಮ ನೆರವಿಗೆ ಬರುವುದಿಲ್ಲ. ಹೀಗಾಗಿ ಯಾರದೋ ಪಿತೂರಿಗೆ ಬಲಿಯಾಗಬೇಡಿ ಎಂದರು.

ಕೃಷಿ ಕಾಯ್ದೆ ಲಾಭದಾಯಕ: ರೈತರ ಒತ್ತಡದಿಂದ ಕೇಂದ್ರ ಸರಕಾರ ಹಿಂಪಡೆದ ಕೃಷಿ ಕಾಯ್ದೆಯ ರದ್ಧತಿಯಿಂದ ಇತ್ತೀಚಿನ ಚುನಾವಣೆಯ ಮೇಲಾದ ಪರಿಣಾಮದ ಕುರಿತು ಮಾತನಾಡಿದ ಅವರು, ಕೃಷಿ ಕಾಯ್ದೆಯಿಂದ ರೈತರಿಗೆ ಲಾಭವಾಗುತ್ತಿತ್ತು. ಇದನ್ನು ವಾಪಾಸು ಪಡೆದ ಮೇಲೆ ರೈತರ ಬೆಳೆಗೆ ಕ್ವಿಂಟಾಲಿಗೆ ೧೦೦ರಿಂದ ೧೫೦ರೂ. ಕಡಿಮೆಯಾಗಿದೆ. ಹೀಗಾಗಿ ಇದರಿಂದ ರೈತರಿಗೆ ನಷ್ಟವಾಗಿದೆ ಎಂಬುದು ಸತ್ಯ ಎಂದರು.

ರೈತರ ಹೋರಾಟಕ್ಕೂ ಉತ್ತರ ಪ್ರದೇಶ ಚುನಾವಣೆಗೂ ಸಂಬಂಧವಿಲ್ಲ ಎಂಬುದನ್ನು ಎಂಬುದನ್ನು ಉತ್ತರ ಪ್ರದೇಶದ ಜನತೆ ಹಾಗೂ ಫಲಿತಾಂಶ ತೋರಿಸಿಕೊಟ್ಟಿದೆ. ಕಾಯ್ದೆಯನ್ನು ಮತ್ತೆ ಜಾರಿಗೆ ತರುವ ವಿಚಾರದಲ್ಲಿ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ ಎಂದು ಶೋಭಾ ಸ್ಪಷ್ಟಪಡಿಸಿದರು.

ನವೀನ್ ದೇಹ ತವರಿಗೆ: ಉಕ್ರೇನಿನಲ್ಲಿ ಯುದ್ಧ ಕಾರಣಕ್ಕೆ ಸತ್ತ ಏಕೈಕ ಭಾರತೀಯ ನವೀನ್ ಅವರ ಮೃತದೇಹವನ್ನು ಕಾಯ್ದಿರಿಸಲಾಗಿದೆ. ಅಲ್ಲಿ ಮತ್ತೊಬ್ಬ ವಿದ್ಯಾರ್ಥಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆತನ ಮೃತದೇಹ ಈಗಾಗಲೇ ಭಾರತಕ್ಕೆ ಬಂದಿದೆ. ಯುದ್ಧದ ವಾತಾವರಣ ಇನ್ನೂ ಅಲ್ಲಿರುವುದ ರಿಂದ ನವೀನ್ ಮೃತದೇಹವಿನ್ನೂ ಬಂದಿಲ್ಲ ಎಂದರು.

ಭಾರತಕ್ಕೆ ಎಲ್ಲಾ ದೇಶಗಳೊಂದಿಗೆ ಉತ್ತಮ ಸಂಬಂಧವಿರುವುದರಿಂದ ಉಕ್ರೇನಿನಿಂದ ೨೦ಸಾವಿರ ವಿದ್ಯಾರ್ಥಿ ಗಳನ್ನು ೯೦ ವಿಮಾನಗಳಲ್ಲಿ ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸಾಧ್ಯವಾಗಿದೆ. ನವೀನನ ಮೃತದೇಹವನ್ನು ತರುವುದಕ್ಕೂ ಭಾರತ ಸರಕಾರ ಪ್ರಯತ್ನಿಸುತ್ತಿದೆ ಎಂದರು.

ವೋಟ್‌ಬ್ಯಾಂಕ್ ರಾಜಕೀಯದ ಪರಿಣಾಮ: ಕಾಂಗ್ರೆಸ್  ವೋಟ್ ಬ್ಯಾಂಕ್ ರಾಜಕೀಯ ಮಾಡಿದ ಪರಿಣಾಮ ಈಗ ನಾಪತ್ತೆಯಾಗಿದೆ ಎಂದು ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.

ಐದು ದಶಕಗಳ ಕಾಲ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ರಾಜ್ಯಬಾರ ಮಾಡಿತ್ತು. ಉತ್ತರಪ್ರದೇಶ ಗೆದ್ದರೆ ದೇಶ ಗೆದ್ದಂತೆ ಎಂಬ ಭಾವನೆಯಿತ್ತು. ಈಗ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ನೋಡಿ. ಓಲೈಕೆ ರಾಜಕಾರಣದಿಂದ ಕೆಳಕ್ಕೆ ಬಿದ್ದಿದ್ದಾರೆ. ಇಷ್ಟಾದರೂ ಅವರಿಗೆ ಬುದ್ಧಿ ಬಂದಿಲ್ಲ ಎಂದರು.

ಕರ್ನಾಟಕದಲ್ಲಿ  ಕಾಂಗ್ರೆಸ್ ಸ್ವಲ್ಪ ಉಸಿರಾಡುತ್ತಿದೆ. ಆದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ಸೇರಿ ಕಾಂಗ್ರೆಸ್‌ನ್ನು ಉಸಿರುಗಟ್ಟಿಸುತ್ತಾರೆ. ಸ್ವತಹ ವಕೀಲರಾದ ಸಿದ್ದರಾಮಯ್ಯ, ಹೈಕೋರ್ಟ್ ತೀರ್ಪನ್ನು ವಿಧಾನಸಭೆಯಲ್ಲಿ ವಿರೋಧಿಸುತ್ತಾರೆ ಅಂದರೆ ಅವರ ಮಾನಸಿಕತೆ ಏನು ಅನ್ನೋದು ಜನರಿಗೆ ಅರ್ಥವಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News