ಅಭಿಜಾತ ಪ್ರತಿಭೆಯ ಅನನ್ಯ ಕೊಡುಗೆ

Update: 2022-03-19 05:59 GMT
ನಾಗೇಶ ಹೆಗಡೆ

ಹಿಂದೆ ಸಮುದ್ರಮಥನ ಮಾಡಿದಾಗ ಸಿಕ್ಕ ಅಮೃತ ಕೆಲವರಿಗೆ ಮಾತ್ರ ದಕ್ಕುವಂತೆ ಮಸಲತ್ತು ನಡೆದಿತ್ತಂತಲ್ಲ? ಸಾಲದ್ದಕ್ಕೆ ಅಮೃತ ಸಿಕ್ಕದವರಿಗೆ ರಾಕ್ಷಸ ಪಟ್ಟ ಕಟ್ಟಿದ್ದರಲ್ಲ? ಹಾಗಾಗಬಾರದು -ಇದು ನಾಗೇಶ ಹೆಗಡೆ ಶೈಲಿ.

ಮನುಷ್ಯ ಭೂಮಿಗೆ ಭಾರವಾಗಿ ಬದುಕುತ್ತಿದ್ದಾನೆ. ಎಷ್ಟು ಆಧುನಿಕವಾಗುತ್ತ ನಡೆದಿದ್ದಾನೆಯೋ ಅಷ್ಟು ಆದಿಮ ಆಗತೊಡಗಿದ್ದಾನೆ. ಯಥಾರ್ಥದಲ್ಲಿ ಆದಿಮ ಮಾನವ ಭೂಮಿಗೆ ಭಾರವಾಗಿ ಬದುಕಿರಲಿಲ್ಲ. ಮೇಲು, ಕೀಳು, ಹಿಂಸೆ, ದ್ವೇಷ, ಅಸಹನೆ, ಕ್ಷುದ್ರತನದ ಭಾವಾರ್ಥದಲ್ಲಿ ಇಂದಿನ ಮನುಕುಲ ಆದಿಮ ಯುಗಕ್ಕೆ ಜಾರಿದೆ. ವಿಕಾಸ ಎಂಬ ಕ್ರಿಯೆ ಮನುಷ್ಯನ ಬುದ್ಧಿಯನ್ನು ಬದಲಿಸಿತೇ ವಿನಾ ಭಾವವನ್ನು ಅಂಧಯುಗದಲ್ಲೇ ಉಳಿಸಿಬಿಟ್ಟಿದೆ.

ನಾನು ಬಹುವಾಗಿ ಮೆಚ್ಚಿ ಗೌರವಿಸುವ ನಾಗೇಶ ಹೆಗಡೆಯವರ ಬರಹಗಳ ಸಾರ-ಸಂದೇಶವನ್ನು ಈ ಮೇಲೆ ಕಾಣಿಸಿದ ಮೂರು ವಾಕ್ಯಗಳಲ್ಲಿ ಹೇಳಲು ಬಂದೀತೇನೋ.

ನಾಗೇಶ ಹೆಗಡೆಯವರನ್ನು ಬಹು ಎತ್ತರದ ಬಹುಮುಖ ಪ್ರತಿಭೆ ಎನ್ನುವುದು ಕ್ಲೀಷೆಯ ವರ್ಣನೆಯಾದರೂ ಅದು ನೂರುಪಾಲು ನಿಜದ ಮಾತು. ಅವರ ಅಭಿಜಾತ ಪ್ರತಿಭೆ ಮತ್ತು ಅನನ್ಯ ಕೊಡುಗೆಯನ್ನು ಪದಗಳಲ್ಲಿ ಹಿಡಿದಿಡುವುದು ನನ್ನಂತಹ ಸಾಧಾರಣ ಪತ್ರಕರ್ತನಿಗೆ ಬಹಳ ಕಷ್ಟದ ಕೆಲಸ. ಬೃಹತ್ ಬೆಟ್ಟವನ್ನು ಸಾಸಿವೆಯಲ್ಲಿ ಪ್ರತಿಫಲಿಸಲು ಹೊರಟಂತೆ.

ವಿಜ್ಞಾನ ಬರಹಗಾರ, ಪರಿಸರವಾದಿ, ಅಪಾರ ಪ್ರತಿಬದ್ಧತೆಯ ಪತ್ರಕರ್ತ, ಪ್ರಕಾಶಕ, ದೂರದರ್ಶಿ ಚಿಂತಕ, ಇವೆಲ್ಲಕ್ಕೆ ಕಳಶವಿಟ್ಟಂತೆ ಕಿರಿಯರಿಂದಲೂ ಕಲಿಯುವುದಿದೆ ಎಂಬ ವಿರಳ ವಿನಮ್ರತೆ.

ಕನ್ನಡ ನುಡಿ, ಜನ, ಸಂಸ್ಕೃತಿ, ನಾಡು, ನದಿ, ಕಾಡು, ಕಣಿವೆ ಪರ್ವತ, ಖನಿಜ, ಪ್ರಾಣಿ ಪಕ್ಷಿಯ ಲೋಕವನ್ನು ಸ್ಥಳೀಯ ದುರ್ಬೀನಿನಿಂದಲೇ ಅವರು ಬ್ರಹ್ಮಾಂಡವನ್ನು ಬಗೆಯುವ ಬಗೆ ಬೆರಗಿನದು. ಸೃಷ್ಟಿಯ ಅಗಾಧತೆ ಮಹಾನತೆಯ ಮುಂದೆ ಮನುಷ್ಯ ಪ್ರಾಣಿಯ ಕ್ಷುದ್ರತೆ ದುರಾಸೆಯನ್ನು ಬೆತ್ತಲುಗೊಳಿಸಿ ನ್ಯಾಯ ನಿಷ್ಠುರ ಸತ್ಯದಕನ್ನಡಿ ಹಿಡಿದು ಪಾಪಪ್ರಜ್ಞೆ ಹುಟ್ಟಿಸುವ ಅಸೀಮ ಶಕ್ತಿ ಅವರ ಬರವಣಿಗೆಯದು. ಬೆಂಗಳೂರಿನ ಮೂಲೆಯೊಂದರಲ್ಲಿ ಕುಳಿತೇ ಇಳೆಯ ಹೊರಳನ್ನು, ವಾಯುಮಂಡಲದ ಮಾರಕ ವ್ಯತ್ಯಾಸಗಳನ್ನು, ಕಾಡುಕಣಿವೆ ಧ್ರುವಗಳ ಪತನವನ್ನು ಕನ್ನಡದ ಪ್ರಜ್ಞೆಗೆ ಭಟ್ಟಿ ಇಳಿಸಿಕೊಡಬಲ್ಲವರು. ತಾನು ಕುಳಿತ ವೃಕ್ಷದ ಟೊಂಗೆಯಿರಲಿ, ಬೇರನ್ನೇ ಕತ್ತರಿಸುತ್ತಿರುವ ಮಾನವ ಜನಾಂಗದ ಆತ್ಮಘಾತಕತನವನ್ನು ಮರ್ಮಸ್ಪರ್ಶಿಯಾಗಿ ಚಿತ್ರಿಸಬಲ್ಲವರು.

Intergenerational Equity ಎಂಬ ಮಾತೊಂದಿದೆ ಇಂಗ್ಲಿಷಿನಲ್ಲಿ. ಅಂದರೆ ಈ ಭೂಮಿಯ ಮೇಲಿನ ನೈಸರ್ಗಿಕ ಸಂಪತ್ತು ಇನ್ನೂ ಹುಟ್ಟಲಿರುವ ತಲೆತಲಾಂತರಗಳಿಗೂ ಸೇರಿದ್ದೇ ವಿನಾ ನಿನ್ನೊಬ್ಬನದೇ ಆಸ್ತಿಯಲ್ಲ, ತಿಂದುತೇಗಿ ಬರಿದು ಮಾಡಬೇಡ ಎಂಬುದು ಈ ಮಾತಿನ ಅರ್ಥ. ನಾಳೆ ಎಂಬುದೇ ಇಲ್ಲ, ಇಂದೇ ಎಲ್ಲ ಎಂಬಂತೆ ಬಕಾಸುರ ಭಕ್ಷಣೆಯ ನಶೆಯಲ್ಲಿ ತೇಲಿರುವ ನಮ್ಮ ಆತ್ಮಸಾಕ್ಷಿಗಳನ್ನು ಎಚ್ಚರಿಸುವ ಬಹುಮುಖ್ಯ ಕೆಲಸದಲ್ಲಿ ನಿರಂತರತೊಡಗಿದ್ದಾರೆ ಹೆಗಡೆಯವರು.

ಕನ್ನಡಿಗನ ಬದುಕನ್ನು ಬಾಧಿಸುವ ಯಾವುದೇ ವಿಷಯ ಅವರ ರೇಡಾರ್‌ನಿಂದ ತಪ್ಪಿಸಿಕೊಂಡದ್ದಿಲ್ಲ. ಕನ್ನಡದ ಪ್ರಜ್ಞೆಯ ಪಾತಳಿಯಂದಲೇ ಅವನನ್ನು ವಿಶ್ವದೆತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಬರಹದ ಕೊಡುಗೆಗೆ ಅಮೂಲ್ಯ ಮತ್ತು ಅನನ್ಯ.

ಜಲ ಜಮೀನು ಜಂಗಲುಗಳ ಕಾರ್ಪೊರೇಟೀಕರಣದ ದುಷ್ಟ ಪರಿಣಾಮಗಳ ಕುರಿತು ಬಹಳ ಹಿಂದೆಯೇ ಅವರ ಬರಹ ಪ್ರತಿಭಟನೆಯನ್ನು ದಾಖಲಿಸಿತ್ತು. ನರ್ಸಿಂಗ್ ಹೋಮ್‌ಗಳ ಸುಲಿಗೆಯ ಚರ್ಚೆಯ ಹೊತ್ತಿನಲ್ಲಿ ಹೈಟೆಕ್ ಆಸ್ಪತ್ರೆಗಳ ಅನಾಹುತವನ್ನೂ ನಿರರ್ಥಕತೆಯನ್ನೂ ಕುರಿತು ಎಚ್ಚರಿಸಿದವರು ಅವರು.

 ರಾಜಕೀಯ, ಅಪರಾಧ, ಸಿನೆಮಾ, ಕ್ರೀಡೆ, ನೆರೆ-ಬರ, ದಿನಭವಿಷ್ಯದ ವಿನಾ ಕನ್ನಡ ಪತ್ರಿಕೆಗಳಿಗೆ ಇನ್ನೇನೂ ಕಾಣದಿದ್ದ ಕಾಲದಲ್ಲಿ ಹೆಗಡೆ ಅವರನ್ನು ‘ವಿಜ್ಞಾನ ಮತ್ತು ಅಭಿವೃದ್ಧಿ ಬಾತ್ಮೀದಾರ’ ಎಂದು ನೇಮಕ ಮಾಡಿಕೊಂಡ ಹೆಗ್ಗಳಿಕೆ ಪ್ರಜಾವಾಣಿಯದು. ಪ್ರಜಾವಾಣಿ ಮತ್ತು ನಾಗೇಶ ಹೆಗಡೆಯವರ ಈ ಅಪೂರ್ವ ಜೋಡಿ ಪತ್ರಿಕಾ ಮೌಲ್ಯವನ್ನು ಮಾತ್ರವಲ್ಲದೆ ವಿಜ್ಞಾನಲೋಕದ ಕುರಿತ ಕನ್ನಡಿಗರ ಅರಿವಿನ ಗಡಿಗಳನ್ನು ವಿಸ್ತರಿಸಿತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಜೆಎನ್‌ಯುನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಸರ ವಿಜ್ಞಾನವನ್ನು ಕಲಿತಿದ್ದ ಹೆಗಡೆಯವರು ಅನುದಿನದ ಬದುಕಿನ ವಿಜ್ಞಾನದ ಒಗಟುಗಳನ್ನು ಓದುಗರಿಗೆ ಸರಳ ಸುಂದರ ಕನ್ನಡದಲ್ಲಿ ಬಿಡಿಸಿ ಹರವಿದರು.

ಅವರ ಕನ್ನಡವನ್ನು ಓದುವುದೇ ಒಂದು ವಿಶಿಷ್ಟ ಅನುಭವ. ವಿಜ್ಞಾನ ವಿಷಯಗಳನ್ನು ಸಂಸ್ಕೃತ ಭೂಯಿಷ್ಠ ಕ್ಲಿಷ್ಟಕನ್ನಡದಲ್ಲಿ ಬರೆದವರಿದ್ದಾರೆ. ಓದುವಾಗ ವಿಶೇಷವಾದದ್ದೇನನ್ನೋ ಓದಿದೆವೆಂದು ಅನಿಸುತ್ತಿತ್ತಾದರೂ ಓದಿದ ನಂತರ ವಿಷಯವನ್ನು ಅರ್ಥ ಮಾಡಿಕೊಂಡೆವು ಎನಿಸುತ್ತಿರಲಿಲ್ಲ. ಹೆಗಡೆಯವರ ಬರಹ ಓದಿದ ನಂತರ ಓದಿದ್ದನ್ನು ಅರಗಿಸಿಕೊಂಡ ಅನುಭೂತಿ. ಹೆಗಡೆಯವರ ವಿಜ್ಞಾನ ಪರಿಸರ ಬರಹಗಳು ದೈನಂದಿನ ಬದುಕಿನ ಸಹಜ ಭಾಗವಾಗಿ ಮೂಡುತ್ತಿದ್ದುದು ಅವುಗಳ ವೈಶಿಷ್ಟ್ಯ. ಎಂಬತ್ತರ ದಶಕದ ಅನೇಕ ಜನಪರ ಆಂದೋಲನಗಳಿಗೂ ಅವರ ಬರಹಗಳಿಗೂ ಸಂಬಂಧ ಇದ್ದದ್ದು ಅವುಗಳ ಪ್ರಸ್ತುತತೆಗೆ ಹಿಡಿದಕನ್ನಡಿ.

ನಡೆ ಮತ್ತು ನುಡಿಯಲ್ಲಿ ಅಂತರವಿಲ್ಲದಂತೆ ಬದುಕಿರುವವರು. ನಾಡಿನ ನೆಲ ಜಲ ವಾಯುಮಂಡಲಕ್ಕೆ ಕುತ್ತು ಬಂದಾಗ ಸಿಡಿದ ಹಲವು ಪರಿಸರ ಹೋರಾಟಗಳ ಮುಂಚೂಣಿಯಲ್ಲಿದ್ದವರು. ಅಪರೂಪದ ಬರಹಗಾರ-ಹೋರಾಟಗಾರ.

ಟೆಲಿವಿಷನ್ ಎಂಬ ಆರಂಭದ ಮಾಯಾಪೆಟ್ಟಿಗೆ ಮತ್ತು ಹಾಲಿ ಮೂರ್ಖರ ಪೆಟ್ಟಿಗೆ ಅಡಿಯಿಡುವುದಕ್ಕೂ ಮುನ್ನಿನ ದಿನಗಳಲ್ಲಿ ವಿಜ್ಞಾನ ವಿಷಯಗಳ ಕುರಿತು ಹೆಗಡೆಯವರು ಸುಧಾ ವಾರಪತ್ರಿಕೆಯಲ್ಲಿ ಬರೆಯುತ್ತಿದ್ದ ನುಡಿಚಿತ್ರಗಳು ಅತ್ಯುತ್ತಮ ದೃಶ್ಯ ಸಾಕ್ಷ್ಯಚಿತ್ರಗಳನ್ನು ನೋಡಿದಷ್ಟೇ ದಟ್ಟ ಅನುಭವವನ್ನು ಕಟ್ಟಿಕೊಡುತ್ತಿದ್ದವು.

ಈ ಪತ್ರಿಕೆಯಲ್ಲಿ ಹೆಣ್ಣು ಭ್ರೂಣ ಹತ್ಯೆಯ ಹಿನ್ನೆಲೆಯಲ್ಲಿ ಅವರು ಬರೆದಿದ್ದ ‘ಭ್ರೂಣದ ಪ್ರಾಣ ಸಂಕಟ’ ನುಡಿಚಿತ್ರದ ಚಿತ್ರಕಶಕ್ತಿಯನ್ನೂ ಅಪೂರ್ವ ಕನ್ನಡ ಶೈಲಿಯನ್ನೂ ಉಸಿರಿರುವ ತನಕ ಮರೆಯಲಾರೆ.

ತಾವು ಬರೆಬರೆಯುತ್ತಲೇ ವಿಜ್ಞಾನ ಬರವಣಿಗೆಗೆ ಸರಳ ಸುಂದರ ಚಿತ್ರಕಶಕ್ತಿಯ ಕನ್ನಡವನ್ನು ಅದರ ಎಲ್ಲ ಕುಸುರಿಯ ಸಿರಿವಂತಿಕೆಯೊಂದಿಗೆ ರೂಪಕ-ಪ್ರತಿಮೆಗಳೊಂದಿಗೆ ಕಟ್ಟುತ್ತ ಹೋದವರು ನಾಗೇಶ ಹೆಗಡೆ. ಕನ್ನಡದಲ್ಲಿ ವಿಜ್ಞಾನ, ಪರಿಸರ, ತಂತ್ರಜ್ಞಾನದ ಓದುಗರನ್ನು ಸೃಷ್ಟಿಸಿ ಬೆಳೆಸುತ್ತ ಹೋದ ಹುದ್ದರಿ ಅವರು.

‘‘ಬಳ್ಳಾರಿಯ ಅದುರಿನ ಬೆಟ್ಟವನ್ನು ನಮ್ಮವರು ಕಿತ್ತು ಚೀನಾಕ್ಕೆ ಕಳಿಸಿದರಲ್ಲ. ಗಣಿ ಮಾಲಕರು ಕ್ವಿಂಟಲ್‌ಗಟ್ಟಲೆ ಚಿನ್ನವನ್ನು ಬಾಚಿಕೊಂಡರು. ನೆಲೆ ಕಳೆದುಕೊಂಡ ಲಕ್ಷಾಂತರ ಜನರ ಬದುಕು ಮೂರಾಬಟ್ಟೆ ಆಯ್ತು. ಈ ಗಣಿಗಾರಿಕೆ ಏನಿದೆ, ಪ್ರಕೃತಿ 20 ಸಾವಿರ ವರ್ಷಗಳಲ್ಲಿ ಮಾಡಿರೋ ಕೆಲಸವನ್ನು ನಾವು ಎರಡೇ ವರ್ಷಗಳಲ್ಲಿ ಮಾಡ್ತೀವಿ’’- ಕೆಲವೇ ವಾಕ್ಯಗಳಲ್ಲಿ ಗಣಿದುರಂತದ ಅಗಾಧ ಅನಾಹುತವನ್ನು ಚಿತ್ರಿಸುವ ಈ ಬಗೆ ಅಪರೂಪದ್ದು.

ಓದುಗರ ಪ್ರಶ್ನೆಯೊಂದಕ್ಕೆ ಅವರು ನೀಡಿದ ಈ ಉತ್ತರ ನೋಡಿ- ‘‘ಯುರೇನಿಯಂ ಅದಿರು ಶಿಲೆಗಳ ಬಿಗಿಬಂಧದಲ್ಲಿ ಆಳದಲ್ಲಿರುತ್ತದೆ. ಮೇಲಕ್ಕೆ ತಂದ ನಂತರ ಅದಿರನ್ನು ಕುಟ್ಟಿ ಪುಡಿ ಮಾಡಿ ಲೋಹದ ಸರಳನ್ನಾಗಿಸಿ ಅದಕ್ಕೆ ವಿದ್ಯುತ್ ಆಘಾತ ಕೊಡುತ್ತಾರೆ. ಅದುವರೆಗೆ ಪರಮಾಣುವಿನಲ್ಲೇ ಗಟ್ಟಿ ಬಂಧನದಲ್ಲಿದ್ದ ನ್ಯೂಟ್ರಾನ್‌ಗಳು ಸಿಡಿದು ಅದು ಶಕ್ತಿಯಾಗಿ ಹಾಗೂ ಇನ್ನಷ್ಟು ಆಘಾತಕಾರಿ ಪ್ಲುಟೋನಿಯಂ ಆಗಿ ಹೊಮ್ಮುತ್ತದೆ. ನಿಸರ್ಗದಲ್ಲಿ ಪ್ಲುಟೋನಿಯಂ ತಂತಾನೇ ಎಲ್ಲೂ ಸಿಗುತ್ತಿಲ್ಲ.’’

ಇದೇ ವಿಷಯದ ಮತ್ತೊಂದು ಗಹನ ಪ್ರಶ್ನೆಗೆ ಅವರು ನೀಡಿರುವ ಉತ್ತರ ಹೈಸ್ಕೂಲು ವಿದ್ಯಾರ್ಥಿಗೂ ಅರ್ಥವಾದೀತು. ಕ್ರಿಯೆಯನ್ನು ಕಣ್ಣಿಗೆ ಕಟ್ಟುವ ವಿವರಣೆಯಿದು - ‘‘ಒಂದು ಪರಮಾಣುವಿನ ನ್ಯೂಟ್ರಾನ್‌ಗಳಿಗೆ ಆಘಾತ ಕೊಟ್ಟು ಸಿಡಿಸಿದರೆ ಸಾಕು. ಅವು ಬುಲೆಟ್‌ನಂತೆ ತಮ್ಮ ಆಚೀಚಿನ ಎಲ್ಲ ಪರಮಾಣುಗಳಲ್ಲಿರುವ ನ್ಯೂಟ್ರಾನ್‌ಗಳಿಗೂ ಆಘಾತಕೊಡುತ್ತ ಸಿಡಿಸುತ್ತ ಹೋಗುತ್ತವೆ. ಇದು ಚೈನ್ ರಿಯಾಕ್ಷನ್. ಇದನ್ನು ನಿಯಂತ್ರಿಸಲು ರಿಯಾಕ್ಟರಿನೊಳಕ್ಕೆ ಬೋರಾನ್ ಸರಳನ್ನು ತೂರಿಸುತ್ತಾರೆ. ಅದರಲ್ಲಿರುವ ಪರಮಾಣುಗಳು ಈ ದಾಳಿಕೋರ ನ್ಯೂಟ್ರಾನ್‌ಗಳನ್ನೆಲ್ಲ ಹೀರಿಕೊಳ್ಳುತ್ತವೆ. ಸರಪಳಿ ಕ್ರಿಯೆಗೆ ಬ್ರೇಕ್ ಹಾಕುತ್ತವೆ.’’

‘‘ಬಂಡವಾಳಶಾಹಿ (ನಾವದನ್ನು ಇಂಗಾಲಶಾಹಿ ಎನ್ನೋಣ) ಶಕ್ತಿಗಳಿಂದ ಈ ಭೂಮಿಗೆ ಬಿಡುಗಡೆ ಸಿಕ್ಕರೆ ಪ್ರತಿ ಊರಿನ ಜನರು ತಮ್ಮದೇ ಸ್ಥಳೀಯ ಶಕ್ತಿಮೂಲಗಳನ್ನು ಬಳಸಿಕೊಂಡು, ತಾವೇ ತಮ್ಮ ಸುರಕ್ಷಿತ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ. ಈಗ ಚಾಲ್ತಿಯಲ್ಲಿರುವ ಧನದಾಹಿ ವ್ಯವಸ್ಥೆಗೆ ವಿದಾಯ ಹೇಳಿ ಹೊಸ ಸಮಾಜವನ್ನು ಕಟ್ಟುತ್ತಾರೆ’’ -ಎಂಬ ವಾಕ್ಯಗಳಲ್ಲಿ ಗ್ರಾಮಸ್ವರಾಜ್ಯದ ಮತ್ತು ಸಮಾಜವಾದದ ತುಡಿತವಿದೆ.

‘‘ತಂತ್ರಜ್ಞಾನವನ್ನೂ ಹಾಗೆ ತಿರುಗಿಸಿಕೊಳ್ಳಲು ಸಾಧ್ಯವಾದರೆ ನಮ್ಮ ಯುವಜನಾಂಗ ಕಾರ್ಪೊರೇಟ್ ಶಕ್ತಿಗಳ ಮುಷ್ಟಿಯಿಂದ ಬಿಡುಗಡೆ ಪಡೆದು ತಾವಾಗಿ ಹೇರಳ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಕೊಳ್ಳಬಹುದು. ಹಿಂದೆ ಸಮುದ್ರಮಥನ ಮಾಡಿದಾಗ ಸಿಕ್ಕ ಅಮೃತ ಕೆಲವರಿಗೆ ಮಾತ್ರ ದಕ್ಕುವಂತೆ ಮಸಲತ್ತು ನಡೆದಿತ್ತಂತಲ್ಲ? ಸಾಲದ್ದಕ್ಕೆ ಅಮೃತ ಸಿಕ್ಕದವರಿಗೆ ರಾಕ್ಷಸ ಪಟ್ಟ ಕಟ್ಟಿದ್ದರಲ್ಲ? ಹಾಗಾಗಬಾರದು’’ -ಎಂಬ ವಾಕ್ಯದಲ್ಲಿ ಕಾರ್ಪೊರೇಟೀಕರಣದ ವಿರೋಧವಿದೆ ಮತ್ತು ದೇವ-ದಾನವ ಪರಿಕಲ್ಪನೆಯ ರಾಜಕಾರಣ ಹಾಗೂ ಅದು ಎತ್ತಿ ಹಿಡಿದ ಖಾಯಂ ಅನ್ಯಾಯದ ಖಂಡನೆಯಿದೆ.

‘‘..ಚಿಂತೆಯ ವಿಷಯ ಏನೆಂದರೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಒಂದು ಟ್ರೆಂಡ್ ಕಾಣುತ್ತಿದೆ. ರಾಷ್ಟ್ರನಾಯಕನ ಏಕಾಧಿಪತ್ಯ, ಆತನ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ನಿರಂತರ ಅತಿರಂಜಿತ ಪ್ರಚಾರ, ಆತನ ಸಾಧನೆಯ ಡೋಲು ಬಜಾಯಿಸುವ ಬಾಲಂಗೋಚಿ ಮಾಧ್ಯಮ ಸಂಸ್ಥೆಗಳ ಸಂಖ್ಯೆಯ ನಿರಂತರ ಏರಿಕೆ; ತನ್ನನ್ನು ಪ್ರಶ್ನಿಸುವವರನ್ನು ಬಗ್ಗುಬಡಿಯಲು ಆತನೇ ಸೃಷ್ಟಿಸಿಕೊಂಡ ಟ್ರೋಲ್ ಫ್ಯಾಕ್ಟರಿ, ಅವುಗಳ ಮೂಲಕ ಸುಳ್ಳುಸುದ್ದಿಗಳ ಪ್ರಸಾರ...ಇವೆಲ್ಲವೂ ಕಳೆದ ಆರೆಂಟು ವರ್ಷಗಳಿಂದ ಹೆಚ್ಚುತ್ತಿವೆ. ನಾಯಕನ ನಿಯಂತ್ರಣದಲ್ಲಿರುವ ಸರಕಾರಿ ಯಂತ್ರಗಳು ನೀಡುವ ಎಲ್ಲ ಬಗೆಯ ಹಿಂಸಾತ್ಮಕ ದಾಳಿಗಳನ್ನೂ ವೈಯಕ್ತಿಕ ನಿಂದನೆಯನ್ನೂ ಎದುರಿಸಿ ನ್ಯಾಯಕ್ಕಾಗಿ, ಸತ್ಯಕ್ಕಾಗಿ ಪ್ರಜಾತಂತ್ರದ ಮೌಲ್ಯಗಳ ರಕ್ಷಣೆಗಾಗಿ ಎದೆಯೆತ್ತಿ ನಿಲ್ಲುವೆನೆಂಬ ಛಾತಿ ತೋರಿಸುವವರ ಸಂಖ್ಯೆ ದಿನದಿನಕ್ಕೆ ಕಮ್ಮಿ ಆಗುತ್ತಿದೆ’’- ಎಂಬ ವಾಕ್ಯಗಳನ್ನು ಗಮನಿಸಿರಿ. ವಿಜ್ಞಾನ ಪರಿಸರ ತಂತ್ರಜ್ಞಾನ ಕುರಿತ ಬರಹಗಳು ಸಮಕಾಲೀನ ರಾಜಕೀಯ-ಸಾಮಾಜಿಕ ವಿಷಮತೆಯ ನಿಷ್ಠುರ ವಾಸ್ತವಕ್ಕೆ ಬೆನ್ನು ತೋರಬೇಕಿಲ್ಲ ಎಂಬ ಸತ್ಯವನ್ನು ಸಾರಿವೆ. ಫ್ಯಾಶಿಸಮ್, ಕೋಮುವಾದ, ಭಟ್ಟಂಗಿವಾದಗಳ ಜಾರುರೊಜ್ಜಿನಲ್ಲೇ ಗಟ್ಟಿಯಾಗಿ ಕಾಲೂರಿ ನಿಂತು ಅವುಗಳನ್ನು ಮುಖಾಮುಖಿಯಾಗುವ ದಿಟ್ಟತನ ಪಡಿಮೂಡಿದೆ.

ಸೂಜಿಗಲ್ಲು ಶೈಲಿಯ ಹೆಗಡೆಯವರ ಬರಹಗಳು ಓದುಗರಿಂದ ಸಾವಿರಾರು ಪ್ರತಿಕ್ರಿಯೆಗಳನ್ನು ಆಕರ್ಷಿಸುತ್ತವೆ. ಪ್ರಾತಿನಿಧಿಕವಾಗಿ ಈ ಕೆಲವು ಪ್ರತಿಕ್ರಿಯೆಗಳನ್ನು ಗಮನಿಸಿರಿ.

ಶಾಂತಾ ನಾಗರಾಜ್: ‘‘ಅದ್ಭುತ ಕಲ್ಪನೆ. ಚೆಂದದ ಬರಹ ಸರ್. ನೀವು ನಮ್ಮಂಥ ಪಾಮರರನ್ನೂ ವಿಶ್ವಮಟ್ಟದಲ್ಲಿ ಚಿಂತಿಸುವಂತೆ ಮಾಡುತ್ತೀರಿ.’’

ಸಂತೋಷ ಕೌಲಗಿ: ‘‘ನಿಮ್ಮ ಲೇಖನ ಚೆನ್ನಾಗಿದೆ ಎನ್ನುತ್ತಾ ಲೈಕ್ ಒತ್ತುವ ಕಾಲ ಮುಗಿದು ಹೋಯಿತು. ಮಾಹಿತಿಗೆ ವಂದಿಸುವುದೂ ಮುಗಿಯಿತು. ಬದುಕುಳಿಯಲು ಕ್ರಮಗಳನ್ನು ಕೈಗೊಳ್ಳಬೇಕಿದೆ. ನಿಜಕ್ಕೂ ಮುಳುಗುತ್ತಿರುವ ಹಡಗಿನಲ್ಲಿ ನಿಂತ ಭಾವ ಕಾಡುತ್ತಿದೆ. ದೂರದಲ್ಲಿ ಅಲ್ಲ, ಹತ್ತಿರದಲ್ಲೇ ಎದ್ದು ಬರುತ್ತಿರುವ ದೊಡ್ಡದೊಡ್ಡ ಅಲೆಗಳು ಕಾಣುತ್ತಿವೆ.’’

ನಿಖಿಲ್ ಕೋಲ್ಪೆ: ‘‘ಲೇಖನದ ಮಧ್ಯಭಾಗಕ್ಕೆ ಬರುವಾಗ ನಾನೇನೋ ಒಂದು ಪ್ರಳಯ ಕುರಿತ ಚಲನಚಿತ್ರದ ಸ್ಕ್ರಿಪ್ಟ್ ಓದುತ್ತಿದ್ದೇನೋ ಎಂಬ ಭಾವನೆ ಮೂಡಿತು.. ನೀವು ಹೇಳಿರುವ ಉತ್ತರ ಅಮೆರಿಕ, ಗ್ರೀಸ್, ಚೀನಾ, ಸೈಬೀರಿಯಾ ಘಟನಾಸರಣಿಯನ್ನು ಬಿಡಿಬಿಡಿಯಾಗಿ ಓದಿದಾಗ, ಈ ರೀತಿಯಲ್ಲಿ ಪರಿಸ್ಥಿತಿಯ ಗಾಂಭೀರ್ಯ ಅರಿವಾಗಿರಲಿಲ್ಲ. ಈ ಬರಹದಲ್ಲಿ ಎಲ್ಲವನ್ನೂ ಜೊತೆಗೆ ನೋಡಿದಾಗ ನಮ್ಮ ಭವಿಷ್ಯದ ಪೀಳಿಗೆಗಳ ಬಗ್ಗೆ ನಿಜವಾಗಿ ಚಿಂತೆಯಾಗಿದೆ. ಆದರೆ ಮಾಧ್ಯಮಗಳು ಇಂತಹ ವಿಷಯಗಳನ್ನು ಸಾಮಾನ್ಯಜನರಿಗೆ ಮುಟ್ಟಿಸುವ ಗೋಜಿಗೇ ಹೋಗುತ್ತಿಲ್ಲ.’’

ಗೋಹತ್ಯೆಯನ್ನು ವಿರೋಧಿಸುವ ರಾಜಕಾರಣದ ಆಷಾಢಭೂತಿತನವನ್ನು ಬಯಲು ಮಾಡಿದ ಅವರ ಅದ್ಭುತ ವೈಜ್ಞಾನಿಕ ಲೇಖನವೊಂದು ಹಿಂದುತ್ವವಾದಿಗಳ ಕೆಂಗಣ್ಣಿಗೆ ತುತ್ತಾಗಿತ್ತು. ‘ಆಧುನಿಕ ಬದುಕಿನ ಪ್ರತಿಕ್ಷಣವೂ ಗೋ-ಮಯ’ ಎಂಬ ಶೀರ್ಷಿಕೆಯ ಬರಹವದು. ಕಸಾಯಿಖಾನೆಗೆ ಹೋದ ದನದ ಅರ್ಧಪಾಲು ಮಾತ್ರ ಆಹಾರಕ್ಕೆ, ಇನ್ನರ್ಧ ಭಾಗ ನಮ್ಮ ನಿಮ್ಮೆಲ್ಲರ ಬಳಕೆಗೆ ಎಂಬುದಾಗಿ ಹೆಗಡೆಯವರು ಅನಾವರಣಗೊಳಿಸಿದ ಸುಡುಸತ್ಯವನ್ನು ಹಿಂದುತ್ವವಾದಿಗಳು ಅರಗಿಸಿಕೊಳ್ಳದಾದರು. ಸಾಮಾಜಿಕ ಬದ್ಧತೆಯ ಜೀವಪರ ಬರಹಗಾರನೊಬ್ಬ ಸತ್ಯ ಹೇಳಿದ ಕಾರಣಕ್ಕಾಗಿ ಹೀನಾಯ ಟ್ರೋಲಿಂಗ್‌ಗೆ ತುತ್ತಾಗಿದ್ದು ದುರಂತದ ಸಂಗತಿ. ಅಲ್ಲಿ ಬಲಿಪೀಠ ಏರಿದ್ದು ಸಮಾಜದ ಆತ್ಮಸಾಕ್ಷಿಯೇ ವಿನಾ ನಾಗೇಶ ಹೆಗಡೆಯವರಲ್ಲ.

Writer - ಡಿ. ಉಮಾಪತಿ

contributor

Editor - ಡಿ. ಉಮಾಪತಿ

contributor

Similar News