ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ

Update: 2022-03-24 07:38 GMT

ಭಾಗ - 3

ರಂಜಾನ್ ದರ್ಗಾ
 

ಹೆಂಡತಿ ಗಂಡನನ್ನು ಪ್ರಶ್ನಿಸಿದ ದಾಖಲೆ ಭಾರತೀಯ ಸಾಹಿತ್ಯದಲ್ಲಿ ನಮಗೆ ಮೊದಲ ಬಾರಿಗೆ ಅನುಭವ ಮಂಟಪದಲ್ಲಿ ಸಿಗುವುದು. ‘‘ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಿ’’ ಎಂದು ಆಯ್ದಕ್ಕಿ ಲಕ್ಕಮ್ಮ, ಅವಶ್ಯಕತೆಗಿಂತಲೂ ಹೆಚ್ಚಿಗೆ ಅಕ್ಕಿಯನ್ನು ಆಯ್ದು ತಂದ ತನ್ನ ಪತಿ ಆಯ್ದಕ್ಕಿ ಮಾರಯ್ಯಗೆ ಪ್ರಶ್ನೆ ಮಾಡುತ್ತಾಳೆ. ಇಂತಹ ಪ್ರಶ್ನಿಸುವ ಹಕ್ಕನ್ನು ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸಿಕ್ಕಿದ್ದು ಬಸವಣ್ಣನವರಿಂದ.

20ನೇ ಅಂಶ: ಪ್ರತಿಯೊಬ್ಬರಿಗೂ ಶಾಂತಿಯುತವಾಗಿ ಸಭೆ ಸೇರುವ ಸ್ವಾತಂತ್ರ್ಯ ಇದೆ. ಅನುಭವ ಮಂಟಪದಲ್ಲಿ ಶಾಂತಿಯುತವಾಗಿ ಇದ್ದಂಥ ಶರಣರಿಗೆ ಕಿರಿಕಿರಿ ಮಾಡಿದರು, ಬಹಳ ತೊಂದರೆ ಕೊಟ್ಟರು, ಅನೇಕ ಶರಣರ ಕೊಲೆ ಮಾಡಿದರು. ಅವರ ವಚನ ಸಾಹಿತ್ಯವನ್ನು ಸುಟ್ಟರು.

21ನೇ ಅಂಶ: ತಮ್ಮ ದೇಶದ ಸರಕಾರದಲ್ಲಿ ಭಾಗಿಯಾಗುವ ಹಕ್ಕನ್ನು ಪ್ರತಿಯೊಬ್ಬರು ಪಡೆದಿರುತ್ತಾರೆ. ಬಸವಣ್ಣನವರು ಕಲ್ಯಾಣದ ಪ್ರಧಾನಿಯಾಗಿದ್ದರು.

22ನೇ ಅಂಶ: ಪ್ರತಿಯೊಬ್ಬರು ಸಾಮಾಜಿಕ ಭದ್ರತೆಯ ಹಕ್ಕನ್ನು ಹೊಂದಿರುತ್ತಾರೆ. ಶರಣ ಸಂಕುಲದಿಂದಾಗಿ ಶರಣರು ಸಾಮಾಜಿಕ ಭದ್ರತೆ ಪಡೆದಿದ್ದರು.

23ನೇ ಅಂಶ: ಪ್ರತಿಯೊಬ್ಬರು ದುಡಿಯುವ ಮತ್ತು ಕಾರ್ಮಿಕ ಸಂಘವನ್ನು ರಚಿಸುವ ಹಕ್ಕನ್ನು ಪಡೆದಿದ್ದಾರೆ. ಶರಣರು ಸ್ವಯಂ ಕಾಯಕಜೀವಿಗಳಾಗಿದ್ದರು. ಬಸವಧರ್ಮದ ಮೂಲಕ ಎಲ್ಲರೂ ಒಂದಾಗಿದ್ದರು.

24ನೇ ಅಂಶ: ಪ್ರತಿಯೊಬ್ಬರು ವಿಶ್ರಾಂತಿಯ ಹಕ್ಕನ್ನು ಪಡೆದಿದ್ದಾರೆ. ಸ್ವತಂತ್ರ ಕಾಯಕದಿಂದಾಗಿ ಸಹಜವಾಗಿಯೆ ಶರಣರು ವಿಶ್ರಾಂತಿ ಪಡೆಯುತ್ತಿದ್ದರು.

25ನೇ ಅಂಶ: ಗುಣಮಟ್ಟದ ಬದುಕಿನ ಹಕ್ಕನ್ನು ಪ್ರತಿಯೊಬ್ಬರು ಪಡೆದಿದ್ದಾರೆ. ಶರಣರು ಘನತೆವೆತ್ತ ಬದುಕನ್ನು ಬಾಳಿದರು.

26ನೇ ಅಂಶ: ಪ್ರತಿಯೊಬ್ಬರಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಕಾಯಕಜೀವಿ ಶರಣರು ವಚನ ರಚನೆ ಮಾಡುವಷ್ಟು ಪ್ರತಿಭಾವಂತರಾಗಿದ್ದರು.

27ನೇ ಅಂಶ: ಸಮಾಜದ ಸಾಂಸ್ಕೃತಿಕ ಬದುಕಿನಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರತಿಯೊಬ್ಬರಿಗೆ ಇದೆ. ಜಾತಿ ಮತಗಳನ್ನು ಮೀರಿದ ಶರಣರು ಹೊಸ ಸಮಾಜದ ಸಂಸ್ಕೃತಿಯನ್ನು ನಿರ್ಮಿಸಿ ಇತಿಹಾಸ ಸೃಷ್ಟಿಸಿದರು.

28ನೇ ಅಂಶ: ಮಾನವ ಹಕ್ಕುಗಳ ಘೋಷಣೆ ಪ್ರಕಾರ ಸಾಮಾಜಿಕ ಮತ್ತು ಅಂತರ್‌ರಾಷ್ಟ್ರೀಯ ವ್ಯವಸ್ಥೆಯನ್ನು ಬಯಸುವ ಹಕ್ಕು ಪ್ರತಿಯೊಬ್ಬರಿಗೆ ಇದೆ. ತಮ್ಮ ಸರ್ವಸಮಾನತೆಯ ಸಮಾಜ ಲೋಕದಲ್ಲಿ ಹಬ್ಬಲಿ ಎಂದು ಶರಣರು ಬಯಸಿದ್ದರು.

29ನೇ ಅಂಶ: ಸಮಾಜಕ್ಕೆ ಸೇವೆ ಸಲ್ಲಿಸುವ ಕರ್ತವ್ಯ ಪ್ರತಿಯೊಬ್ಬರದ್ದಾಗಿದೆ. ಶರಣರು ದಾಸೋಹದ ಮೂಲಕ ಸಮಾಜ ಸೇವೆಯ ಕರ್ತವ್ಯ ಪಾಲನೆ ಮಾಡಿದರು.

30ನೇ ಅಂಶ: ಮೇಲೆ ತಿಳಿಸಿದ ಮಾನವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಹಾಳುಮಾಡುವಂಥ ವ್ಯಾಖ್ಯಾನ ಮಾಡಬಾರದು. ಶರಣರು ತಮ್ಮ ಬಲಿದಾನ ಮಾಡಿದರೇ ಹೊರತು ತತ್ವಗಳಿಂದ ವಿಮುಖರಾಗಲಿಲ್ಲ.

‘ಅಭಿವ್ಯಕ್ತಿ ಸ್ವಾತಂತ್ರ್ಯ ಆಮೇಲೆ ಸಾಮೂಹಿಕ ನಿರ್ಧಾರ’. ಇದು ಬಹಳ ಮುಖ್ಯವಾದುದು. ಅನುಭವ ಮಂಟಪದಲ್ಲಿ 770 ಅಮರಗಣಂಗಳಿದ್ದರು. ಅವರು ಅನುಭವ ಮಂಟಪ ಎಂಬ ಸಮಾಜೋಧಾರ್ಮಿಕ ಸಂಸತ್ತಿನ ಸದಸ್ಯರು. 700 ಎಂ.ಪಿ.ಗಳು ಇರುವ ಯಾವ ಪಾರ್ಲಿಮೆಂಟೂ ಜಗತ್ತಿನಲ್ಲಿ ಇವತ್ತಿನವರೆಗೂ ಹುಟ್ಟಿಲ್ಲ. ಜಗತ್ತಿನಲ್ಲೇ ಅತಿದೊಡ್ಡ ಪಾರ್ಲಿಮೆಂಟ್ ಅಂದರೆ ಭಾರತದ ಪಾರ್ಲಿಮೆಂಟ್. ಇಲ್ಲಿ ಕೂಡ 770 ಎಂ.ಪಿ.ಗಳು ಇಲ್ಲ. ಅನುಭವ ಮಂಟಪದಲ್ಲಿ ಎಲ್ಲ ಸಮಾಜದಿಂದ ಬಂದ ಮಹಿಳೆಯರು ಕೂಡ ಇದ್ದರು. 71 ಶರಣೆಯರ ಹೆಸರುಗಳು ಸಿಗುತ್ತವೆ. ಅವುಗಳಲ್ಲಿ 33 ಮಹಿಳೆಯರ ವಚನಗಳು ಸಿಕ್ಕಿವೆ. ಆಗ ದೇಶದಲ್ಲಿ ಕೆಳವರ್ಗದವರಿಗೆ ಶಿಕ್ಷಣ ವ್ಯವಸ್ಥೆ ಇದ್ದಿದ್ದಿಲ್ಲ. ಜಗತ್ತಿನಲ್ಲಿ ವಯಸ್ಕರ ಶಿಕ್ಷಣ ವ್ಯವಸ್ಥೆ ತಂದವರು ಬಸವಣ್ಣನವರು. ಕೆಳಜಾತಿ, ಕೆಳವರ್ಗ ಮತ್ತು ಬೇರೆ ಕಡೆಗಳಿಂದ ಬಂದವರಿಗೆ ಕನ್ನಡ ಸಾಕ್ಷರರನ್ನಾಗಿ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಹೀಗೆ ವಯಸ್ಕರ ಶಿಕ್ಷಣ ಶರಣಸಂಕುಲದಿಂದಲೇ ಶುರುವಾಯಿತು. ಹೆಣ್ಣು ಮಕ್ಕಳು ಪ್ರಶ್ನಿಸುವುದು ಅಲ್ಲಿಂದಲೇ ಶುರುವಾಯಿತು. ನಮ್ಮ ಕಸಗುಡಿಸುವ ಸತ್ಯಕ್ಕ ವಚನಗಳನ್ನು ಬರೆದಾಗ 12ನೇ ಶತಮಾನದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಒಂದು ಸಾಲಿನ ಸಾಹಿತ್ಯ ಕೂಡ ಇದ್ದಿದ್ದಿಲ್ಲ. ಇದು ನಮ್ಮ ಶರಣರ ಬಹುದೊಡ್ಡ ಸಾಧನೆ. ಇಷ್ಟೊಂದು ಜನ ಮಹಿಳೆಯರು ಅನುಭವ ಮಂಟಪದಲ್ಲಿ ಭಾಗವಹಿಸಿದ್ದಾರೆ. ಪಾರ್ಲಿಮೆಂಟ್‌ಗೆ ಸ್ಪೀಕರ್ ಪರಿಕಲ್ಪನೆ ಕೊಟ್ಟವರು ಕೂಡ ಬಸವಣ್ಣನವರೇ ಆಗಿದ್ದಾರೆ. ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ, ಶೂನ್ಯಸಿಂಹಾಸನವಿಟ್ಟು ಕೆಳವರ್ಗದ ಮಹಾಜ್ಞಾನಿ ಅಲ್ಲಮಪ್ರಭುಗಳನ್ನು ತಂದು ಆ ಸಿಂಹಾಸನದ ಮೇಲೆ ಕೂಡಿಸಿದ್ದು ಇದೆಯಲ್ಲ ಇದು ದೇಶಕ್ಕೆ ಬಹಳ ದೊಡ್ಡ ಸಂದೇಶವನ್ನು ಕೊಡುವ ಸಾಮರ್ಥ್ಯವನ್ನು ಹೊಂದಿದೆ.

ನಾವು ಜಾತಿ ಜಾತಿ ಎಂದು ಸಾಯುತ್ತಿದ್ದೇವೆ. ದಿನವೂ ನೋಡುತ್ತಿದ್ದೇವೆ. ದಲಿತ ಮಹಿಳೆಯರ ಕೊಲೆ ಆಗುತ್ತಿದೆ. ದಲಿತರ ಕೊಲೆ ಆಗುತ್ತಿದೆ. ಜಾತಿ ವ್ಯವಸ್ಥೆಯಿಂದ ಹಿಂಸೆ ಆಗುತ್ತಿದೆ. ಆದ್ದರಿಂದ ಬಸವಣ್ಣನವರು ನಟುವರ ಜನಾಂಗದ ಅಲ್ಲಮಪ್ರಭುಗಳನ್ನು ಅನುಭವ ಮಂಟಪ ಎಂಬ ಪಾರ್ಲಿಮೆಂಟಿನ ಸ್ಪೀಕರ್ (ಶೂನ್ಯಸಿಂಹಾಸನಾಧೀಶ್ವರ) ಮಾಡಿದರು. ಎಲ್ಲ ಜಾತಿಗಳಿಂದ, ಎಲ್ಲ ಸಮುದಾಯಗಳಿಂದ, ಎಲ್ಲ ಹಿನ್ನೆಲೆಯಿಂದ ಬಂದಂಥ 700 ಪ್ರತಿನಿಧಿಗಳು ಅಲ್ಲಿರುವ ವ್ಯವಸ್ಥೆ ಮಾಡಿದರು.

ಮಸೂದೆ ಕಾಯ್ದೆಯಾಗುವ ರೀತಿಯಲ್ಲಿ ಯಾವುದೇ ಶರಣನ ಒಂದು ವಚನ ಅನುಭವ ಮಂಟಪದಲ್ಲಿ 770 ಅಮರಗಣಂಗಳ ಒಪ್ಪಿಗೆ ಪಡೆದ ಮೇಲೆ ಹೊರಗೆ ಬರುತ್ತಿತ್ತು. ಆಮೇಲೆ ಅವರು ಆ ದಿನದ ಮುಖ್ಯವಾದ ಸಾಲನ್ನು ಗೋಡೆಯ ಮೇಲೆ ಬರೆಯುತ್ತಿದ್ದರು. ದೇಶದಲ್ಲಿ ಹೀಗೆ ಮೀಡಿಯಾ ಕೂಡ ಅವರೇ ಮೊದಲು ಶುರು ಮಾಡಿದರು. 12ನೇ ಶತಮಾನದಲ್ಲಿ ಎಷ್ಟೊಂದು ರೀತಿಯ ಸಾಧನೆಗಳಿದ್ದಾವಲ್ಲಾ ಆಶ್ವರ್ಯವೆನಿಸುತ್ತದೆ. ಅಂಥ ಒಂದು ಚಿಂತನೆಯನ್ನು ನಾವು ಇವತ್ತು ಮಾಡಬೇಕಿದೆ. ಪ್ರತಿಯೊಂದು ಶಬ್ದ ವಿವಿಧ ವಚನಗಳಲ್ಲಿ ಆಯಾ ಸಂದರ್ಭಕ್ಕೆ ತಕ್ಕಂತೆ ಅರ್ಥವಿಸ್ತಾರ ಹೊಂದುತ್ತ ಹೋಗುತ್ತದೆ. ಅಂತರಂಗದಲ್ಲಿ ವ್ರತ, ನೋಡಿ ವ್ರತದ ಪರಿಕಲ್ಪನೆ ಎಷ್ಟು ಅದ್ಭುತ ಇದೆ. ಇಲ್ಲಿ ವ್ರತ ಎಂಬುದು ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂಬ ಸಂಕಲ್ಪವಾಗಿದೆ. ಅಂತರಂಗದ ವ್ರತ ಬಹಿರಂಗದಲ್ಲಿ ಆಚಾರವಾಗಿ ಕ್ರಿಯೆಗೆ ಇಳಿಯಬೇಕು. ಬರಿ ವ್ರತ ಇಟ್ಟುಕೊಂಡು ಯಾವುದೇ ಉಪಯೋಗವಿಲ್ಲ. ಇದು ಕೇವಲ ವಾಗದ್ವೈತ ಎಂದು ಶರಣರು ಕರೆಯುತ್ತಾರೆ. ವಾಗದ್ವೈತ ಎಂದರೆ ಮಾತಿನಲ್ಲೇ ಎಲ್ಲ. ‘‘ಸರ್ವೇಜನಾ ಸುಖಿನೋ ಭವಂತು’’, ‘‘ಆನೋ ಭದ್ರಾಃ ಕೃತವೋ ಯಂತು ವಿಶ್ವತಃ’’ ಅಂದರೆ ಎಲ್ಲ ಜನರು ಸುಖವಾಗಿರಲಿ ಮತ್ತು ಉದಾತ್ತ ವಿಚಾರಗಳು ನಮಗೆ ಎಲ್ಲೆಡೆಯಿಂದ ಬರಲಿ ಎಂದು ಹೇಳುವುದು. ಆದರೆ ಈ ಮಾತು ಕೃತಿಯಲ್ಲಿ ಇಲ್ಲದ ಕಾರಣ ಶರಣರು ಇಂತಹ ವಾಗದ್ವೈತವನ್ನು ಒಪ್ಪಲಿಲ್ಲ. ಅಂತರಂಗದಲ್ಲಿ ವ್ರತ ಬಹಿರಂಗದಲ್ಲಿ ಆಚಾರ. ಶರಣರು ಸದ್ಗುಣಕ್ಕೆ ವ್ರತ ಎಂದು ಕರೆದರು. ಅದನ್ನು ಆಚಾರಣೆಗೆ ತಂದು ಸಾಮಾಜಿಕಗೊಳಿಸುವ ಮೂಲ ಮೌಲ್ಯವಾಗಿಸಿದ್ದಾರೆ. ಇನ್ನು ಜಂಗಮವೇ ದೇವರೆಂದು ನಂಬಿದೆ ಎಂದು ಬಸವಣ್ಣನವರು ಹೇಳುತ್ತಾರೆ. ಜಂಗಮ ಅಂದರೆ ಸಮಾಜ. ಈ ಸಮಾಜವನ್ನೇ ನಾನು ದೇವರೆಂದು ತಿಳಿದುಕೊಳ್ಳುವೆ. ಕಾಯಕ, ಪ್ರಸಾದ, ದಾಸೋಹದ ಮೂಲಕ ನಾವು ಸ್ವಾವಲಂಬಿಯಾಗಬೇಕು. ಕಾಯಕ ಮಾಡಬೇಕು ಬಂದದ್ದನ್ನು ದೇವರ ಪ್ರಸಾದ ಎಂದು ಸ್ವೀಕರಿಸಬೇಕು, ಆಮೇಲೆ ಒಕ್ಕಮಿಕ್ಕಿದ್ದನ್ನೆಲ್ಲ ಸಮಾಜಕ್ಕೆ ಕೊಡಬೇಕು. ನಾನು ಆವಾವ ಕರ್ಮಂಗಳ ಮಾಡಿದೊಡೆಯೂ ಅದರ ಫಲಭೋಗವ ನೀ ಕೊಡುವೆ ಎಂಬುದು ನಾ ಬಲ್ಲೆ. ನಿಮ್ಮ ಸೊಮ್ಮಿಂಗೆ ಅಂದರೆ ಶಿವನಿಧಿಗೆ ಸಲ್ಲಿಸುವೆನು ಎಂದು ಬಸವಣ್ಣನವರು ತಿಳಿಸಿದ್ದಾರೆ. ಉದ್ದಂಡ ವೃತ್ತಿ ಕಾಯಕವಲ್ಲ. ಕಾಯಕ ಎಂದರೆ ಯೋಗ್ಯ ಉತ್ಪಾದನೆ. ಪ್ರಸಾದ ಎಂದರೆ ಸದ್ಬಳಿಕೆ. ದಾಸೋಹ ಎಂದರೆ ಸಾಮಾಜಿಕ ವಿತರಣೆ. ದಾರ್ಶನಿಕ ಬಸವಣ್ಣನವರು ದೊಡ್ಡ ಅರ್ಥಶಾಸ್ತ್ರಜ್ಞರೂ ಆಗಿದ್ದರು. ಆಡಳಿತ ತಜ್ಞರಾಗಿದ್ದು ಮನೋವಿಜ್ಞಾನಿಯಾಗಿದ್ದರು. ಯೋಗ್ಯ ಉತ್ಪಾದನೆ, ಸದ್ಬಳಕೆ, ಯೋಗ್ಯ ಸಾಮಾಜಿಕ ವಿತರಣೆಯಾದಾಗ ಈ ಜಗತ್ತಿನಲ್ಲಿ ಯುದ್ಧಗಳು ಆಗುವುದಿಲ್ಲ. ಜಾತಿಗಳು ಇರುವುದಿಲ್ಲ. ಅಸಮಾನತೆ ಇರುವುದಿಲ್ಲ. ಎಂಬುದನ್ನು ಅವರು ತೋರಿಸಿಕೊಟ್ಟರು.

‘‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ,

ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ,

ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ. ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ.

ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.’’

 ಈ ಸಪ್ತಶೀಲ ಅಥವಾ ವ್ರತಗಳನ್ನು ನಾವೆಲ್ಲ ಆಚರಿಸಿದಾಗ ಅವು ಸಾಮಾಜಿಕ ಮೌಲ್ಯಗಳ ರೂಪು ತಾಳುತ್ತವೆ. ಈ ಸಪ್ತಶೀಲಗಳು ವಚನದ ಮೊದಲ ಭಾಗದಲ್ಲಿವೆ. ಈ ಏಳು ಶೀಲಗಳನ್ನು ಪಾಲಿಸಿದಾಗ ಏನಾಗುವುದು ಎಂಬುದನ್ನು ಮುಂದೆ ಹೇಳುತ್ತಾರೆ. ‘‘ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ’’ ಇದು ವಚನದ ಎರಡನೇ ಭಾಗ. ನಾವು ದೇಶವನ್ನು ಸ್ವಚ್ಛಗೊಳಿಸಬೇಕಾದರೆ ಮೊದಲಿಗೆ ನಮ್ಮ ಅಂತರಂಗವನ್ನು ಸ್ವಚ್ಛಗೊಳಿಸಬೇಕು. ಒಳಗಡೆ ಸ್ವಚ್ಛ ಇರದಿದ್ದರೆ ಹೊರಗಡೆ ಸ್ವಚ್ಛ ಹೇಗಾಗುವುದು? ಸ್ವಚ್ಛ ಮನಸ್ಸುಗಳಿದ್ದಾಗ ಸ್ವಚ್ಛ ಭಾರತದ ನಿರ್ಮಾಣವಾಗುತ್ತದೆ. 130 ಕೋಟಿ ಮನಸ್ಸುಗಳು ಸ್ವಚ್ಛವಾದಾಗ ಇದು ಸಾಧ್ಯವಾಗುವುದು. ವಚನದ ಮೂರನೇ ಭಾಗದಲ್ಲಿ ‘‘ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ’’ ಎಂದು ಹೇಳುತ್ತಾರೆ. ಇದುವೇ ಧರ್ಮದ ಪರಿಪೂರ್ಣತೆ. ಹೀಗೆ ಸಪ್ತಶೀಲಗಳನ್ನು ಆಚರಿಸುವುದರಲ್ಲಿ ಧರ್ಮದ ಪರಿಪೂರ್ಣತೆ ಇದೆ. ಇದರಿಂದ ನಾವು ಶುದ್ಧರಾಗುತ್ತೇವೆ, ನಮ್ಮ ಸಮಾಜ ಶುದ್ಧವಾಗುತ್ತದೆ. ನಮಗೆ ದೇವರನ್ನು ಒಲಿಸಲು ಬೇರೆ ದಾರಿಯಿಲ್ಲ. ನಮ್ಮ ಪೂಜೆ ಪುನಸ್ಕಾರಗಳು ಮುಂತಾದವೆಲ್ಲ ಇಲ್ಲಿ ಪ್ರಮುಖವಾಗಿಲ್ಲ. ಶೀಲ ಪಾಲನೆಯೇ ಕೂಡಲ ಸಂಗಮದೇವರನ್ನು ಒಲಿಸುವ ಕ್ರಮವಾಗಿದೆ. ಇದು ಬಸವಣ್ಣನವರ ಪರಿಕಲ್ಪನೆ. ಹೀಗೆ ಬಸವಾದಿ ಪ್ರಮಥರು ನಡೆನುಡಿಯಲ್ಲಿ ಮಾನವ ಹಕ್ಕುಗಳ ಪ್ರತಿಪಾದಕರಾಗಿ ಕಂಗೊಳಿಸುತ್ತಿದ್ದಾರೆ. ಈ ವಿಚಾರಗಳು ಪಾಶ್ಚಿಮಾತ್ಯ ಜಗತ್ತಿಗೆ ಹೊಳೆಯಲು 19ನೇ ಶತಮಾನದ ವರೆಗೆ ಕಾಯಬೇಕಾಯಿತು. ಅಲ್ಲದೆ ಎರಡು ಮಹಾಯುದ್ಧಗಳನ್ನು ಎದುರಿಸಬೇಕಾಯಿತು. ಭಾರತದ ಸಂವಿಧಾನ ಕೂಡ ಈ ಮಾನವಹಕ್ಕುಗಳನ್ನು ಒಳಗೊಂಡಿರುವುದರಿಂದ ಬಸವಣ್ಣನವರ ವಚನಗಳು ಭಾರತ ಸಂವಿಧಾನದ ಜೀವಾಳವಾಗಿವೆ. ಬಸವಣ್ಣನವರ ವಚನಗಳಂತೆ ನಡೆದರೆ ಅಂತರ್‌ರಾಷ್ಟ್ರೀಯ ಮಟ್ಟದ ಮಾನವ ಹಕ್ಕುಗಳನ್ನು ಮತ್ತು ನಮ್ಮ ದೇಶದ ಸಂವಿಧಾನವನ್ನು ಏಕಕಾಲಕ್ಕೆ ಗೌರವಿಸಿದಂತಾಗುತ್ತದೆ. ಬಸವಣ್ಣನವರ ವಚನಗಳಿಗೆ ವಿರುದ್ಧವಾಗಿ ನಡೆದರೆ ಸಂವಿಧಾನ ಬಾಹಿರ ಕೃತ್ಯವಾಗುತ್ತದೆ. ಅಲ್ಲದೆ ಅಂತರ್‌ರಾಷ್ಟ್ರೀಯ ಮಾನವ ಹಕ್ಕುಗಳಿಗೆ ಅಪಮಾನ ಮಾಡಿದಂತಾಗುತ್ತದೆ. ಕಲ್ಯಾಣ ಹತ್ಯಾಕಾಂಡಕ್ಕೆ ಕಾರಣವಾದ ಹರಳಯ್ಯ ಮಧುವರಸರ ಮಕ್ಕಳ ಮದುವೆಯನ್ನು ಇಂದು ಅಂತರ್‌ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭಾರತದ ಸಂವಿಧಾನ ಜೊತೆಯಾಗಿಯೆ ಗೌರವಿಸುತ್ತವೆ. ಅನುಭವ ಮಂಟಪದ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಬೀಜಗಳು ಈ ನೆಲದಲ್ಲಿ ಮೊಳಕೆ ಒಡೆದವು ಮತ್ತು ಮಾನವಹಕ್ಕುಗಳ ಹೂಗಳು ಅರಳಿದವು. ಹೀಗೆ ಬಸವಣ್ಣನವರು ಸಾಮಾಜಿಕ ನ್ಯಾಯದೊಂದಿಗೆ ಈ ನೆಲದ ಪ್ರಜಾಪ್ರಭುತ್ವ ಮತ್ತು ಮಾನವಹಕ್ಕುಗಳ ಮೂಲ ಪುರುಷರಾದರು.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News