ದುಬೈ: ವರ್ಣರಂಜಿತ 'ಎಕ್ಸ್ ಪೊ 2020' ಸಮಾಪ್ತಿಗೆ ಕ್ಷಣಗಣನೆ

Update: 2022-03-27 09:54 GMT
Photo: AP/PTI

ದುಬೈ: ಪ್ರತಿ ಐದು ವರ್ಷಗಳಿಗೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ವಲ್ಡ್ ಎಕ್ಸ್ ಬಿಷನ್(ಎಕ್ಸ್ ಪೊ) ಇದರ 2020ರ ಆವೃತ್ತಿ "ಎಕ್ಸ್ ಪೊ 2020" ದುಬೈಯಲ್ಲಿ ಅಕ್ಟೋಬರ್ 1, 2021ರಿಂದ ಆರಂಭಗೊಂಡು ಸುಮಾರು ಆರು ತಿಂಗಳಿನಿಂದ ಪ್ರದರ್ಶನಗೊಳ್ಳುತ್ತಿದ್ದು, 2022ರ ಮಾರ್ಚ್ 31 ಕ್ಕೆ ಕೊನೆಗೊಳ್ಳಲಿದೆ.

2013 ನವೆಂಬರ್ 27ರಂದು ಪ್ಯಾರಿಸ್ ನಲ್ಲಿ ನಡೆದಿದ್ದ ಎಕ್ಸ್ ಪೊ ಮಾತೃಸಂಸ್ಥೆ 'ಬ್ಯೂರೊ ಇಂಟರ್ ನ್ಯಾಷನಲ್ ಡೆಸ್ ಎಕ್ಸ್ಪೊಸಿಶನ್ಸ್' (ಬಿಐಇ) ಶೃಂಗ ಸಭೆಯಲ್ಲಿ 2020ರ ಆತಿಥ್ಯವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಇದರ ವಾಣಿಜ್ಯನಗರಿ ದುಬೈಗೆ ವಹಿಸಿಕೊಡಲಾಗಿತ್ತು.

'ಕನೆಕ್ಟಿಂಗ್ ಮೈಂಡ್, ಕ್ರಿಯೇಟಿಂಗ್ ಫ್ಯೂಚರ್' ಎಂಬ ಶೀರ್ಷಿಕೆಯಲ್ಲಿ 438 ಹೆಕ್ಟೇರ್( 1080 ಎಕರೆ) ಚದರ ವಿಸ್ತೀರ್ಣದಲ್ಲಿ ಈ ಬೃಹತ್ ಉತ್ಸವ ನಡೆಯುತ್ತಿದೆ. ಇದುವರೆಗೆ ವಿಶ್ವದ ಸುಮಾರು 20 ಮಿಲಿಯನ್ ಜನರು 'ಎಕ್ಸ್ ಪೊ' ಸಂದರ್ಶಿಸಿರುವುದಾಗಿ ಅಧಿಕೃತ ದಾಖಲೆಗಳು ತಿಳಿಸಿವೆ. 

ಭಾಗವಹಿಸಿದ ರಾಷ್ಟ್ರಗಳು: 192
ಹಿಂದಿನ ಆತಿಥ್ಯ ರಾಷ್ಟ್ರ: ಇಟಲಿಯ ಮಿಲನ್(2015)
ಮುಂದಿನ ಆತಿಥ್ಯ: 'ಎಕ್ಸ್ ಪೊ 2025' ಜಪಾನ್‍ನ ಒಸಾಕ

ವಿಶ್ವದಾಖಲೆಗಳು 
ಅರಬ್ ಲೋಕದಲ್ಲಿಯೇ ಅತಿದೊಡ್ಡ ಪ್ರದರ್ಶನ ಎಂಬ ಖ್ಯಾತಿಗೆ 'ಎಕ್ಸ್ ಪೋ 2020' ಭಾಜನವಾಗಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳ ಪ್ರಖ್ಯಾತ ಕಂಪೆನಿಗಳು, ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ. ಜಗತ್ತಿನ ಪ್ರಖ್ಯಾತ ಕಲಾವಿದರು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ಪಾಪ್ ಗಾಯಕರು, ಪ್ರಖ್ಯಾತ ಕ್ರೀಡಾಪಟುಗಳು ಸೇರಿದಂತೆ ವಿವಿಧ ರಂಗಗಳ ಹಲವು ಪ್ರಮುಖರು ಈ ಬೃಹತ್ ಆಕರ್ಷಣೀಯ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ.

360 ಡಿಗ್ರಿಯಲ್ಲಿ ತಿರುಗುವ ಅತಿವಿಸ್ತಾರದ ಜಗಮಗಿಸುವ ಪ್ರೊಜೆಕ್ಷನ್‍ಗಳನ್ನು ಅಳವಡಿಸಿ ಆ ಮೂಲಕ ಕಣ್ಸೆಳೆಯುವ ಲೈಟ್ ಶೋ, ಸಿಡಿಮದ್ದು ಪ್ರದರ್ಶನ ಸೇರಿದಂತೆ ಇನ್ನಿತರ ಆಕರ್ಷಣೀಯ ಕಾರ್ಯಕ್ರಮಗಳು ಜಗತ್ತಿನಲ್ಲಿಯೇ ಮೆಚ್ಚುಗೆಗೆ ಪಾತ್ರವಾಗಿದೆ.

'ಮೊಬಿಲಿಟಿ ಪೆವಿಲಿಯನ್‍'ನಲ್ಲಿರುವ ಲಿಫ್ಟ್ ವಿಶ್ವದ ಅತಿದೊಡ್ಡ ಸಂಚಾರಿ ಲಿಫ್ಟ್ ಎಂಬ ಮನ್ನಣೆಗೆ ಪಾತ್ರವಾಗಿದೆ.

ಅತ್ಯುತ್ತಮ ಪೆವಿಲಿಯನ್ ಎಂಬ ಹೆಗ್ಗಳಿಕೆಯನ್ನು ಸೌದಿ ತನ್ನದಾಗಿಸಿಕೊಂಡಿದೆ. ಜಗತ್ತಿನ ಅತಿದೊಡ್ಡ ಸಂವಹನ ಬೆಳಕಿನ ಮಹಡಿಯನ್ನೂ ಸೌದಿಯೇ ನಿರ್ಮಿಸಿದೆ.

ವಿಷನ್ ಎಂಬ ಹೆಸರಿನ ಪ್ರದರ್ಶನದ ಮಹಡಿ ನಿರ್ಮಾಣಕ್ಕೆ 7998 ಎಲ್‍ಇಡಿ ಲೈಟ್‍ಗಳನ್ನು ಬಳಸಲಾಗಿದೆ.

ಇಂಗ್ಲೆಂಡ್ ರಾಜಕುಮಾರ ವಿಲಿಯಂ, ಖ್ಯಾತ ಫುಟ್ಬಾಲ್ ತಾರೆಯರಾದ ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೊನೆಲ್ ಮೆಸ್ಸಿ, ದ. ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್, ಪಾಪ್ ಗಾಯಕ ಕೋಲ್ಡ್ ಪ್ಲೇ, ಭಾರತದ ಸಿನೆಮಾ ತಾರೆ ರಣಬೀರ್ ಕಪೂರ್, ನಟಿ ದೀಪಿಕಾ ಪಡುಕೋಣೆ, ಗಾಯಕ ಅರ್ಮಾನ್ ಮಲಿಕ್, ಶ್ರೇಯಾ ಘೋಷಲ್, ಬೆಲ್ಜಿಯಂ ರಾಜ ಫಿಲಿಪ್ಪೆ ಹಾಗೂ ರಾಣಿ ಮತಿಲ್ಡೆ, ಬೆಲ್ಜಿಯಂ ಡಿಜೆ ಡಿಮಿಟ್ರಿ ವೇಗಸ್, ಫಿಲಿಪೀನ್ ಗಾಯಕ ಲಿಯಾ ಸಾಲೊಂಗ, ಈಜಿಪ್ಟ್ ಖ್ಯಾತ ಹಾಡುಗಾರ ತಾಮೆರ್ ಹೊಸ್ನಿ, ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರಹ್ಮಾನ್, ನೃತ್ಯಪಟು ಅಲಿಸಿಯಾ ಕೀಸ್, ಆತಿಫ್ ಅಸ್ಲಂ, ಖ್ಯಾತ ಅತ್ಲೀಟ್ ಉಸೈನ್ ಬೋಲ್ಟ್ ಸೇರಿದಂತೆ ಹಲವರು ಈ ಬೃಹತ್ ಉತ್ಸವವನ್ನು ವೀಕ್ಷಿಸಿದ್ದಾರೆ. 

ಯುಎಇ, ಜಪಾನ್, ಸೌದಿ ಅರೇಬಿಯಾ, ಭಾರತ ಸೇರಿದಂತೆ ಹಲವು ದೇಶಗಳ ಆಕರ್ಷಕ ಶೈಲಿಯಲ್ಲಿ ವಿನ್ಯಾಸಗೊಳಿಸಿದ ಪೆವಿಲಿಯನ್‍ಗಳು ಜನರ ಮನಸೆಳೆದಿದೆ.

ಮನಮೋಹಕ 4 ಮಹಡಿಗಳಿರುವ ಪೆವಿಲಿಯನ್ ನಿರ್ಮಿಸುವ ಮೂಲಕ ಭಾರತವೂ ತನ್ನಲ್ಲಿಗೆ ವಿಶ್ವದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ದೇಶದ ಪರಂಪರಾಗತ ವೈದ್ಯಕೀಯ ಪದ್ದತಿಯಾದ ಆಯುರ್ವೇದವನ್ನು ವಿಶ್ವದೆಲ್ಲೆಡೆ ಪ್ರಚಾರಗೊಳಿಸಲು 'ಎಕ್ಸ್ ಪೊ 2020'ನ್ನು ಸಮರ್ಥವಾಗಿ ಬಳಸಿಕೊಂಡಿರುವ ಭಾರತ ಯೋಗ, ಬಾಹ್ಯಾಕಾಶ ಉಡ್ಡಯನ ಪ್ರದರ್ಶನದಲ್ಲಿನ ಭಾರತದ ಸಾಧನೆ ಹಾಗೂ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ದೇಶದ ಆರ್ಥಿಕತೆಯ ನೀಲನಕ್ಷೆಯನ್ನೂ ವಿಶ್ವದ ಮುಂದೆ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದೆ.

ಭಾರತದ ಕಲೆ, ಸಂಸ್ಕೃತಿ, ಸಾಹಿತ್ಯ, ಸಿನೆಮಾ, ಉಡುಗೆ ತೊಡುಗೆ ಹಾಗೂ ಆಹಾರ ಪದ್ದತಿಗಳ ಮೇಲೆ ಬೆಳಕು ಚೆಲ್ಲುವ ಪ್ರದರ್ಶನಗಳು ಮೆಚ್ಚುಗೆಗೆ ಪಾತ್ರವಾಗಿದೆ. 

ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸಿದ ಈ ಬೃಹತ್ ಉತ್ಸವಕ್ಕೆ ಭೇಟಿ ಕೊಟ್ಟವರಿಂದ ಪ್ರಶಂಸೆಗಳ ಸುರಿಮಳೆಯೇ ಹರಿದುಬರುತ್ತಿದೆ.

ಬೆರಳ ತುದಿಯಲ್ಲಿಯೇ ಇಷ್ಟವಿರುವ ಪೆವಿಲಯನ್‍ಗಳನ್ನು ಆಯ್ಕೆಮಾಡಿ ಅಲ್ಲಿಗೆ ಯಾವುದೇ ಗೊಂದಲವಿಲ್ಲದೆ ತೆರಳುವ ವ್ಯವಸ್ಥೆಯನ್ನೂ ಹಾಗೂ ರೊಬೊಟ್ ತಂತ್ರಜ್ಞಾನದ ಮೂಲಕ ಅಗತ್ಯ ಸಹಾಯ ಸಲಕರಣೆಯನ್ನೂ ಒದಗಿಸಿಕೊಡಲಾಗಿದೆ. 

ಸಂಚಾರಕ್ಕಾಗಿ ಯಾವುದೇ ಭಂಗವಾಗದ ರೀತಿಯಲ್ಲಿ ಎಕ್ಸ್ ಪೋ ಗೇಟ್ ವರೆಗೆ ಹೊಸ ಮೆಟ್ರೋ ರೈಲು ವ್ಯವಸ್ಥೆ, ಬಸ್ಸು ಸಾರಿಗೆ ವ್ಯವಸ್ಥೆ ಹಾಗೂ ಅತಿವಿಸ್ತಾರವಾದ ಪಾರ್ಕಿಂಗ್ ವ್ಯವಸ್ಥೆಗಳನ್ನೂ ಕಲ್ಪಿಸಿಕೊಡಲಾಗಿದೆ. 

'ಎಕ್ಸ್ ಪೋ' ಕಳೆದ ಬಳಿಕವೂ ಈ ಚಾರಿತ್ರಿಕ ಸ್ಥಳ ಡಿಸ್ಟ್ರಿಕ್ಟ್ 2022 ಎಂಬ ಹೆಸರಿನಿಂದ ಗುರುತಿಸಲಾಗುತ್ತಿದ್ದು, ಇಲ್ಲಿ ವಿದ್ಯಾಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಮತ್ತಿತರ ಸೇವಾಕೇಂದ್ರಗಳು ತಲೆಎತ್ತಲಿವೆ ಎಂದು ಯುಎಇ ಅಧಿಕೃತ ಮೂಲಗಳು ತಿಳಿಸಿವೆ.

200 ಪೆವಿಲಿಯನ್‍ಗಳ ಪೈಕಿ ಯುಎಇ, ಭಾರತ ಸೇರಿದಂತೆ 10 ಪೆವಿಲಿಯನ್‍ಗಳು ಮಾರ್ಚ್ 31ರ ಬಳಿಕವೂ ಉಳಿಯಲಿವೆ.

Full View

Writer - ಸಿರಾಜ್ ಅರಿಯಡ್ಕ

contributor

Editor - ಸಿರಾಜ್ ಅರಿಯಡ್ಕ

contributor

Similar News