ಹಿಂದೂ ಧರ್ಮದ ಶೀಲ ಕೆಡಿಸುತ್ತಿರುವ ಹಿಂದುತ್ವ ಪಡೆ

Update: 2022-03-28 05:28 GMT

ಮುಸ್ಲಿಮರ ಅನ್ನಕ್ಕೆ ಕಲ್ಲು ಹಾಕಿ ಅವರನ್ನು ಬರ್ಬಾದು ಮಾಡುವ ಲೆಕ್ಕಾಚಾರದಲ್ಲಿ ಷಡ್ಯಂತ್ರ ಮಾಡುವಾಗ ಈ ಕುಚೇಷ್ಟೆಯ ಮೂಲಕ ತಮ್ಮ ಸಮಾಜದ ಬಹು ಸಂಖ್ಯಾತ ಹಿಂದೂಗಳಲ್ಲಿ ಇನ್ನೂ ಉಳಿದು ಕೊಂಡಿರುವ ಕೂಡಿ ಬಾಳುವ ನೈತಿಕ ಪ್ರಜ್ಞೆ, ಚಾರಿತ್ರ. ಶೀಲಕ್ಕೇ ಕಿಲುಬು ಹಿಡಿಸಿ ಕೆಡಿಸುವ ಬಗೆ ಎಷ್ಟು ಅಪಾಯಕಾರಿ ಎಂದು ಈ ಮಂದಿಗಿನ್ನೂ ಗೊತ್ತಾಗಿಲ್ಲ.

ಒಂದಷ್ಟು ಮಂದಿ ಜೊತೆ ಸೇರಿದಾಗ, ಗುಂಪಿನ ಅಜೆಂಡಾಕ್ಕೆ ಹೇಗೆ ನಿಧಾನಕ್ಕೆ ಎಲ್ಲರೂ ಒಲಿಯುತ್ತಾರೆ ಎಂಬುದನ್ನು ಮನಃಶಾಸ್ತ್ರಜ್ಞರು ಸರಳವಾಗಿ ವಿವರಿಸುತ್ತಾರೆ. ಪಡ್ಡೆ ಹುಡುಗರ ಗುಂಪು ಮುಸ್ಸಂಜೆ ವೇಳೆಗೆ ಸಂಗೀತ, ಡ್ರಗ್ಸ್, ಗುಂಗಿನಲ್ಲಿರುವ ಮನಸ್ಸು ಮಾಡಿದರೆ, ಮೊದಲಿಗೆ ಒಬ್ಬಿಬ್ಬರು ಧೈರ್ಯ ಮಾಡಿದರೆ, ಉಳಿದವರೂ-ಅಂದರೆ ಒಂದಷ್ಟು ಹಿಂಜರಿಕೆ ಇರುವವರೂ ನಿಧಾನಕ್ಕೆ ಒಲಿಯುತ್ತಾರೆ. ಈ ಲಜ್ಜೆ ತ್ಯಜಿಸಲು ವಿಶೇಷ ಒತ್ತಡ, ಬಲಾತ್ಕಾರ ಇರುವುದಿಲ್ಲ. ಗುಂಪಿನ ಉಚ್ಛಂಖಲ ಉತ್ಸಾಹ ಉಳಿದವರಲ್ಲೂ ಧೈರ್ಯ ತುಂಬುತ್ತದೆ.

   

ಮೊನ್ನೆ ಮೊನ್ನೆ ಕಣ್ಣನ್ ಎಂಬ ಕನ್ನಡದಲ್ಲಿ ಮಂತ್ರ ಊದುವ ಪುರೋಹಿತ ಮಾತಾಡಿದ್ದು ನೋಡಿ ಇದು ನೆನಪಾಯಿತು. ನೆನಪಿಡಿ ಇದು ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ನೋಡ ನೋಡುತ್ತಿದ್ದಂತೆ, ನಾವೆಲ್ಲ ಗಣ್ಯರು, ಗುಣಗ್ರಾಹಿಗಳು, ವಿವೇಚನೆ ಉಳ್ಳವರು ಎಂದು ಭಾವಿಸಿದ್ದ ನೂರಾರು ಮಂದಿ ಈ ವಿಕೃತ ಕೋಮು ನಿಲುಮೆಯ ವಿಷ ಕಕ್ಕುತ್ತಾ ಸ್ಖಲಿಸುತ್ತಾ ಓಡಾಡಲಿದ್ದಾರೆ.assumption  ನಮಗೆಲ್ಲಾ ಮಾತಾಡುವಾಗ ಒಂದು ಇರುತ್ತೆ. ಒಂದು ಸಭೆಯಲ್ಲಿ ಮಾತಾಡುವುದಿದ್ದರೆ, ಕೆಳಗೆ ಕೂತ ನಮ್ಮ ಸಭೀಕರು ಹೇಗೆ ಗ್ರಹಿಸುತ್ತಾರೆ ಎಂಬ ನಿರೀಕ್ಷೆ ಅದು. ಅಷ್ಟರ ಮಟ್ಟಿಗೆ ನಾವು ಪರಕಾಯ ಪ್ರವೇಶ ಮಾಡಿಯೇ ನಮ್ಮ ಮಾತುಗಳನ್ನು ತೂಕ ತಪ್ಪದಂತೆ, ನಾವು ಹಗುರಾಗದಂತೆ ಆಡುತ್ತಾ ಹೋಗುತ್ತೇವೆ. ಎದುರಿಗಿರುವ ವಿವೇಚನೆ ಇರುವ ಮಂದಿಗೆ ನಾವು ಗೌರವ ಕೊಡುವುದಾದರೆ ಮಾತ್ರ ಇದು ಘಟಿಸುವುದು. ಎದುರಿರುವ ಗುಂಪು, ಈಗಾಗಲೇ ನಿರ್ದಿಷ್ಟ ಸನ್ನಿಗೆ ಒಳಗಾಗಿದೆ ಎಂದು ಗೊತ್ತಾದಾಗ ಅದರ ಪ್ರಶಂಸೆ ಗಳಿಸುವುದೇ ಮುಖ್ಯವಾಗಿ, ಅದರ ಅಪೇಕ್ಷೆಗೆ ತಕ್ಕಂತೆ ಮಾತಾಡಲು ತೊಡಗಿದರೆ ಏನಾಗುತ್ತದೆ?

ಈ ಕಣ್ಣನ್ ತರಹ ಆಗುತ್ತದೆ.. ಇದು ಒಂದು ಭಾಗ. ಆದರೆ ಬಹು ಮುಖ್ಯ ಪಾತ್ರಧಾರಿಗಳು ಗುಂಪನ್ನು ಛೂಬಿಡುವ ಅಜೆಂಡಾ ಇಟ್ಟುಕೊಂಡೇ ಮಾತಾಡುತ್ತಾರೆ. ಜೂಲಿಯಸ್ ಸೀಜರ್ ನಾಟಕದಲ್ಲಿ ಮಾರ್ಕ್ ಆಂಟನಿ ತನ್ನ ಭೀಕರ ಭಾಷಣದಲ್ಲಿ ಜೂಲಿಯಸ್ ಸೀಸರ್ ಬಗ್ಗೆ ಕಣ್ಣೀರು ಗರೆದು, ನಾಟಕೀಯವಾಗಿ ತನ್ನ ದುಃಖ ಪ್ರದರ್ಶಿಸಿ ಸಾವಿಗೆ ಸೇಡು ಎಂಬಲ್ಲಿಗೆ ತನ್ನ ಎದುರಿರುವ ಸಮೂಹವನ್ನು ಪ್ರಚೋದಿಸುತ್ತಾನೆ.ಈಗ ಇದು ಕೆಲಸ ಶುರು ಹಚ್ಚಿಕೊಳ್ಳಲಿ.. ಘಾಸಿಗೊಳಿಸುವ ನೀನುಯಾವ ಹಾದಿ ಇಚ್ಛಿಸುಮೋ ಆ ಹಾದಿಯಲ್ಲಿ ನಡೆ,.ಎಂದು ಅರಾಜಕ ಸೇಡಿನ ಕಿಚ್ಚನ್ನು ಹಚ್ಚಿ ನಡೆಯುತ್ತಾನೆ.

ಪರಸ್ಪರ ಸಣ್ಣ ಗುಂಪಿನಲ್ಲಿ ಮಾತ್ರಾ ನಿಜ ಅರ್ಥದ ಭಾವಾವೇಶದ ಕ್ರಿಯೆ ಪ್ರತಿಕ್ರಿಯೆಗಳು ಜರಗುತ್ತವೆ. ವೇದಿಕೆ ಮೇಲಿನ ಮಾತುಗಳೆಲ್ಲಾ ನೂರಕ್ಕೆ ನೂರು ಪ್ರಜ್ಞಾಪೂರ್ವಕವಾಗಿ, ನಿರ್ದಿಷ್ಟ ಉದ್ದೇಶ ಸಾಧನೆಗೆ ಮಾಡುವ ನಟನೆ. ಭಾವಾವೇಶವೂ ನಟನೆಯೇ. ಇಂದು ಹಿಂದುತ್ವದ ಸಕಲಾತಿ ಗಣನಾಯಕರು- ಕಲ್ಲಡ್ಕ, ಸೂಲಿಬೆಲೆ, ಮುತಾಲಿಕ, ಈಶ್ವರಪ್ಪ ಮೊದಲಾದವರು ಮಾಡುತ್ತಿರುವುದು ಈ ನಟನೆ. ಹಿಜಾಬ್ ವಿಷಯದಲ್ಲಿ ಮುಸ್ಲಿಮ್ ಹೆಣ್ಣು ಮಕ್ಕಳನ್ನು ಧಾರ್ಮಿಕ ಹಿಡಿತದಿಂದ ಪಾರು ಮಾಡುತ್ತೇವೆ ಎಂಬ ಪೋಸು ಕೊಟ್ಟ ಈ ಪಡೆ ಈಗ ಎಲ್ಲಾ ಲಜ್ಜೆ ತೊರೆದು ಮುಸ್ಲಿಮರ ಹೊಟ್ಟೆಗೆಹೊಡೆಯುವುದೇ ನಮ್ಮ ಧ್ಯೇಯ ಎಂದು ನೇರ ಹೇಳುತ್ತಿದ್ದಾರೆ. ಮುಸ್ಲಿಮರ ಬಗ್ಗೆ ಯಾಕಿಷ್ಟು ಕಿಚ್ಚು ಎಂದು ಕೇಳಿದರೆ ಅದಕ್ಕೆ ಅವರಲ್ಲಿ ಉತ್ತರವೇನೂ ಇಲ್ಲ. ಹೊಟ್ಟೆ ಕಿಚ್ಚು ಬಿಟ್ಟರೆ ಇನ್ನೇನೂ ಇಲ್ಲ.

   

ಇವರಿಗೆ ಸಂವಿಧಾನವಾಗಲೀ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಿಶ್ವಸಂಸ್ಥೆ ಕಳೆದ 60-70 ವರ್ಷಗಳಿಂದ ತಂದಿರುವ ಹಲವಾರು ಹಕ್ಕುಗಳ ಸನ್ನದಾಗಲೀ, ಅದಕ್ಕೆ ನಮ್ಮ ಸರಕಾರ ಸಹಿ ಹಾಕಿ ಉತ್ತರದಾಯಿಯಾಗಿರುವು ದಾಗಲೀ ಬೇಕಿಲ್ಲ. ಇದು ನಿರ್ಲಜ್ಜೆಯ ಧಮಕಿ ಅಷ್ಟೇ. ಮೋದಿಯಿಂದ ಹಿಡಿದು ಬೊಮ್ಮಾಯಿಯ ವರೆಗೆ ಈ ಅಜೆಂಡಾಕ್ಕೆ ಸರಕಾರದ ಬೆಂಬಲದ ಅಧಿಕೃತ ಮೊಹರು ಒತ್ತಿದ್ದಾರೆ. ಆದರೆ ಈ ಮೊಹರು ಒತ್ತಿದ ಕಾರಣಕ್ಕೆ ಇವು ಕಾನೂನುಬದ್ಧವೂ ಆಗುವುದಿಲ್ಲ. ನೈತಿಕವಾಗಿಯೂ ಸಮ್ಮತವಾಗುವುದಿಲ್ಲ.

  

ತಾನು ಅಧಿಕಾರ ವಹಿಸಿಕೊಂಡು ಪ್ರಮಾಣ ವಚನ ಸ್ವೀಕರಿಸುವಾಗಲೂ ಬಾಬಾ ಸಾಹೇಬರ ಸಂವಿಧಾನದ ಹೆಸರಿನಲ್ಲಿ ಅದರ ರಕ್ಷಣೆ ಮಾಡುತ್ತೇನೆ , ಅದರಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂದೇ ಜನಪ್ರತಿನಿಧಿಗಳಾಗಿರುವ ಭಾಜಪಿಗಳು ಹೇಳಿದ್ದಾರಷ್ಟೇ! ಈ ರಿಮೈಂಡರ್ ಇವರ ಮೇಲೆ ಏನೂ ಪರಿಣಾಮ ಬೀರದು ನಿಜ. ಆದರೆ ಆತ್ಮದ್ರೋಹದ ಪರಿ ಎಂಥಾದ್ದು ಎಂಬುದಾದರೂ ಜನರಿಗೆ ಗೊತ್ತಾಗಲು ನಾವು ಇದನ್ನು ಹೇಳಬೇಕಿದೆ.

ಈ ದ್ವೇಷ ರಾಜಕೀಯ, ಮನಸ್ಸುಗಳಲ್ಲಿ ವಿಷ ತುಂಬುವ ದ್ರೋಹ ಕೆಲಸದ ಪರಿಣಾಮ ಏನು?ಸಂವಿಧಾನ ನಮಗೆ ಒಗ್ಗುವಂಥಾದ್ದಲ್ಲ ಎಂದು ಪದೇ ಪದೇ ಈ ಮಂದಿ ಮಾಡಿ ತೋರಿಸಿದ್ದಾರೆ. ಈಗ ಈ ಧಮಕಿ/ಯಜಮಾನಿಕೆಯ ವಿರುದ್ಧ ಶಾಸಕಾಂಗ, ಕಾಯಾರ್ಂಗ, ನ್ಯಾಯಾಂಗ ಮತ್ತು ಮಾಧ್ಯಮಗಳ ಮೊರೆ ಹೋಗುವುದಕ್ಕೆ ಅರ್ಥವೇ ಇಲ್ಲ ಎಂಬುದನ್ನು ನಮ್ಮ ಕಾಲ ತೋರಿಸಿಕೊಟ್ಟಿದೆ. ಈ ದ್ವೇಷ ಕನಿಷ್ಠ ವ್ಯಕ್ತಿಗತ ನೋವಿನ ಅನುಭವದಿಂದ ಹುಟ್ಟಿದ್ದಾದರೆ ಅದಕ್ಕೊಂದು ರಿಯಾಯಿತಿ ಕೊಟ್ಟು ಈ ಕಿಚ್ಚು ಕಾರುವವನಿಗೆ ಎಲ್ಲರೂ ಹಾಗಿರುವುದಿಲ್ಲ ಎಂದು ತಿಳಿ ಹೇಳಬಹುದು. ಆದರೆ ಇದು ಅಪ್ಪಟ ಪ್ರಜ್ಞಾಪೂರ್ವಕ ಕೃತ್ಯ.

ನಮ್ಮ ಮುಖ್ಯ ರಾಜಕೀಯ ಪಕ್ಷಗಳು, ಚಳವಳಿಯ ಸಂಘಟನೆಗಳು ಇದನ್ನು ಮುಖ್ಯವೆಂದು ಪರಿಗಣಿಸುವವರೆಗೆ ಈ ದ್ವೇಷವನ್ನು ಆರಿಸುವ ಬಗೆ ಕಷ್ಟ.

(sentiments that influence voting) ಚುನಾವಣಾ ಸಮಯದಲ್ಲಿ ಜನರು ಮತ ಹಾಕಲು ಕೆಲವೊಂದು ವಿಷಯಗಳ ಬಗ್ಗೆ ಮಾನಸಿಕ ಆಯ್ಕೆಯ ಅಭಿಪ್ರಾಯ ಹೊಂದಿರುತ್ತಾರೆ. ಬೆಲೆ ಏರಿಕೆ,, ಕಾನೂನು ಸುವ್ಯವಸ್ಥೆ- ಹೀಗೆ. ಈ ಸೂಚಿಗಳಲ್ಲಿ ಭಾಜಪ ಕೋಮು ದ್ವೇಷವನ್ನು ಮತದಾನದ ಭಾವನಾತ್ಮಕ ಆಯ್ಕೆಯಾಗಿ ಮುಂದಿಡುವಲ್ಲಿ ಯಶಸ್ವಿಯಾಗಿದೆ.ಈಗ ಕೋಮು ಸೌಹಾರ್ದವನ್ನು ಜನತೆಯ ಸೆಂಟಿಮೆಂಟ್ ಆಗಿಸಬೇಕಿದೆ.

ಎಲ್ಲಾ ದೇಶಗಳಲ್ಲೂ ಬಹುತೇಕ ಸಾಮಾನ್ಯರು ತಮ್ಮ ಎಲ್ಲಾ ರಗಳೆ, ಜಿದ್ದು. ಜಗಳಗಳ ನಡುವೆಯೂ ಒಂದು ಸಹಜ ಅನುಕಂಪ, ಪ್ರೀತಿ ತೋರುವುದಿದೆ. ನಮ್ಮ ಹಳ್ಳಿಗಳು ಜಾತಿ ಯಜಮಾನಿಕೆಯ ಕೊಚ್ಚೆ ಗುಂಡಿಗಳಾಗಿರುವಾಗಲೂ ಅಲ್ಲಿನ ಅಲ್ಪಸಂಖ್ಯಾತ ಬೆರಳೆಣಿಕೆಯ ಅಗಸ, ಕುಂಬಾರ, ಗಾಣಿಗ ಇತ್ಯಾದಿಗಳನ್ನು ತೀರಾ ನೋಯಲು ಬಿಟ್ಟಿಲ್ಲ. ತಮ್ಮವರೇ ಯಾರಾದರೂ ವಿಪರೀತ ಗೋಳು ಹುಯ್ಕಿಂಡಾಗ ಕನಿಷ್ಠ ಆತ್ಮಸಾಕ್ಷಿಯ ಮೂಲಕ ಆಯಾ ಕೋಮಿನ ಹಿರಿಯರು, ಮಹಿಳೆಯರು ಗದರುವ ಕ್ರಮ ಇತ್ತು. ಇದರರ್ಥ ಎಲ್ಲವೂ ಸರಿಯಾಗಿ ಇತ್ತೆಂದಲ್ಲ. ಇರೋ ಹಿಡಿಯಷ್ಟು ಮಂದಿಯ ಬಾಳುವೆಗೆ ಕಲ್ಲು ಹಾಕಬಾರದು, ಅವರಿಗೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸಬಾರದು ಅನ್ನುವ ಪಾಪಪ್ರಜ್ಞೆ ಅದು.ಇದನ್ನು ನೀವು ಹಿಂದೂ ಸಮಾಜ ಎಂದು ಕರೆಯಿರಿ.

ಭಾಜಪ/ ಸಂಘಿಗಳು ಈ ಒಂದು ಶೀಲವನ್ನೇ ಕೆಡಿಸುತ್ತಿದ್ದಾರೆ. ತನ್ಮೂಲಕ ನಿತ್ಯ ಬಾಳುವೆಯ ಸಹಜ ಕೊಡು-ಕೊಳ್ಳುವನ್ನೂ ಮಲಿನಗೊಳಿಸಿದ್ದಾರೆ. ಜಾತ್ರೆಗಳಲ್ಲಿ ಮುಸ್ಲಿಮರಿಗೆ ಅವಕಾಶ ಕೊಡಕೂಡದು ಎಂಬ ಅಮಾನವೀಯ ಬೇಡಿಕೆಗೆ ಬಹುತೇಕ ಭಕ್ತರು ಕಕ್ಕಾಬಿಕ್ಕಿಯಾಗಿರುವ ವರದಿಗಳಿವೆ. ಇಷ್ಟು ದಿನ ನಡೆದುಕೊಂಡು ಬಂದಿತ್ತಲ್ಲಾ? ಈಗೇನು ಇದು? ಎಂಬ ನಿಲುವು ಇದು. ಇವರನ್ನೂ ಒಪ್ಪಿಸುವ ಕೆಲಸ ಭಾಜಪ ಮಾಡುತ್ತಿದೆ. ಕೇಳಿದರೆ ಸರಕಾರದ ನಿಯಮ ಇದೆ ಎಂಬ ಧೂರ್ತ ಸಮರ್ಥನೆಯೂ ಇದೆ. ಸರಕಾರದ ನಿಯಮವೇ ಅನೈತಿಕ ಎಂದು ನಾವು ಹೇಳಬೇಕಿದೆ.ಇಂಥಾ ಒಂದು ವೈಪರೀತ್ಯದ ನಿಯಮವನ್ನು ಅಸಿಂಧು ಗೊಳಿಸುವ ಕೆಲಸವನ್ನು ಚಿಟಿಕೆ ಹಾಕುವಷ್ಟರಲ್ಲಿ ಸರಕಾರ ಮಾಡಬಹುದು. ಹಿಜಾಬ್ ವಿಷಯದಲ್ಲೂ ಅಷ್ಟೇ.ಸರಕಾರ ನೇರವಾಗಿ ಈ ಅಮಾನುಷ ಯಜಮಾನಿಕೆಗೆ ಬೆಂಬಲವಾಗಿ ನಿಂತರೆ ಸಮಾಜ ಮೂಕವಾಗುತ್ತದೆ. ಒಂದಷ್ಟು ಜನ ಗೊಂದಲದಲ್ಲಿ ಗೋಣಲ್ಲಾಡಿಸಿದರೆ ಇದು ತಪ್ಪು ಎಂದು ಅನ್ನಿಸಿದವರೂ ದನಿ ಎತ್ತದೇ ಸುಮ್ಮನಾಗುತ್ತಾರೆ.

ಮುಸ್ಲಿಮರ ಅನ್ನಕ್ಕೆ ಕಲ್ಲು ಹಾಕಿ ಅವರನ್ನು ಬರ್ಬಾದು ಮಾಡುವ ಲೆಕ್ಕಾಚಾರದಲ್ಲಿ ಷಡ್ಯಂತ್ರ ಮಾಡುವಾಗ ಈ ಕುಚೇಷ್ಟೆಯ ಮೂಲಕ ತಮ್ಮ ಸಮಾಜದ ಬಹು ಸಂಖ್ಯಾತ ಹಿಂದೂಗಳಲ್ಲಿ ಇನ್ನೂ ಉಳಿದುಕೊಂಡಿರುವ ಕೂಡಿ ಬಾಳುವ ನೈತಿಕ ಪ್ರಜ್ಞೆ, ಚಾರಿತ್ರ. ಶೀಲಕ್ಕೇ ಕಿಲುಬು ಹಿಡಿಸಿ ಕೆಡಿಸುವ ಬಗೆ ಎಷ್ಟು ಅಪಾಯಕಾರಿ ಎಂದು ಈ ಮಂದಿಗಿನ್ನೂ ಗೊತ್ತಾಗಿಲ್ಲ. ಈ ಅಮಾನುಷ, ಸ್ವನಾಶದ ಕೃತ್ಯಕ್ಕೆ ನಮ್ಮ ನಡುವೆಯೇ ಇರುವ ಶಿಕ್ಷಿತ ಮಂದಿ ತಾವೂ ಶೀಲಕೆಟ್ಟು ಉಳಿದವರನ್ನೂ ಹುರಿದುಂಬಿಸುತ್ತಿರುವುದು ನೋಡಿದರೆ ದುಃಖವಾಗುತ್ತದೆ. ಕೊನೆಗೂ ಈ ಕಣ್ಣನ್, ಭಾಗವತರಾದಿಯಾಗಿ ಬಹುಮಂದಿ ಉಪನಿಷತ್ತಿನ ಎಲ್ಲರೂ ದ್ವೇಷ ಮರೆಯೋಣ, ಜೊತೆಗೇ ಉಣ್ಣೋಣ! ಎಂಬುದನ್ನು ಸಾರ್ವಜನಿಕವಾಗಿ ಪಲುಕುವ ಗಳಿಗೆಗಳು ಬರುತ್ತವಲ್ಲ.

Writer - ಕೆ.ಪಿ.ಸುರೇಶ

contributor

Editor - ಕೆ.ಪಿ.ಸುರೇಶ

contributor

Similar News