ಐಪಿಎಲ್: ಪಂಜಾಬ್ ಕಿಂಗ್ಸ್‌ನ್ನು ಕೆಡವಿದ ಕೋಲ್ಕತಾ ನೈಟ್ ರೈಡರ್ಸ್

Update: 2022-04-01 17:30 GMT
photo courtesy:twitter/@IPL

ಮುಂಬೈ, ಎ.1: ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಅಮೋಘ ಬ್ಯಾಟಿಂಗ್ ನೆರವಿನಿಂದ ಐಪಿಎಲ್ ಟೂರ್ನಿಯಲ್ಲಿ ಶುಕ್ರವಾರ ನಡೆದ 8ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್) ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಆರು ವಿಕೆಟ್‌ಗಳ ಅಂತರದಿಂದ ಮಣಿಸಿತು.

ಗೆಲ್ಲಲು 138 ರನ್ ಗುರಿ ಪಡೆದ ಕೆಕೆಆರ್ 14.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತು. ಗೆಲ್ಲಲು ಸುಲಭ ಸವಾಲು ಪಡೆದಿದ್ದ ಕೆಕೆಆರ್‌ನ ಆರಂಭ ಉತ್ತಮವಾಗಿರಲಿಲ್ಲ. ಕೆಕೆಆರ್ 51 ರನ್ ಗಳಿಸುವಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ 5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 90 ರನ್ ಸೇರಿಸಿದ ರಸೆಲ್ (ಔಟಾಗದೆ 70, 31 ಎಸೆತ, 2 ಬೌಂಡರಿ, 8 ಸಿಕ್ಸರ್) ಹಾಗೂ ಬಿಲ್ಲಿಂಗ್ಸ್ (ಔಟಾಗದೆ 24, 23 ಎಸೆತ, 1 ಬೌಂ, 1 ಸಿ.)ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.  ಕೆಕೆಆರ್ ಪರ ನಾಯಕ ಶ್ರೇಯಸ್ ಅಯ್ಯರ್ 26 ರನ್ ಹಾಗೂ ಅಜಿಂಕ್ಯ ರಹಾನೆ 12 ರನ್ ಗಳಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಂಜಾಬ್ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಕೆಕೆಆರ್ ತಂಡದ ಹಿರಿಯ ವೇಗದ ಬೌಲರ್ ಉಮೇಶ್ ಯಾದವ್ (4-23)ಹಾಗೂ ಟಿಮ್ ಸೌಥಿ(2-36) ದಾಳಿಗೆ ಕಂಗಾಲಾದ ಪಂಜಾಬ್ ಕಿಂಗ್ಸ್ 18.2 ಓವರ್‌ಗಳಲ್ಲಿ ಕೇವಲ 137 ರನ್ ಗಳಿಸಿ ಆಲೌಟಾಯಿತು.

ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ 206 ರನ್ ಕಠಿಣ ಸವಾಲನ್ನು ಬೆನ್ನಟ್ಟಿ ಅಮೋಘ ಜಯ ದಾಖಲಿಸಿದ್ದ ಪಂಜಾಬ್ ಇಂದು ಕಳಪೆ ಪ್ರದರ್ಶನ ನೀಡಿತು. ನಾಯಕ ಮಯಾಂಕ್ ಅಗರ್ವಾಲ್(1)ಮೊದಲ ಓವರ್‌ನಲ್ಲೇ ವಿಕೆಟ್ ಕೈಚೆಲ್ಲಿದರು. ಎರಡನೇ ವಿಕೆಟಿಗೆ 41 ರನ್ ಜೊತೆಯಾಟ ನಡೆಸಿದ ಶಿಖರ್ ಧವನ್(16 ರನ್) ಹಾಗೂ ಭಾನುಕ ರಾಜಪಕ್ಸ(31, 9 ಎಸೆತ, 3 ಬೌಂ., 3 ಸಿ.)ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ ಈ ಇಬ್ಬರು ಬೇರ್ಪಟ್ಟ ಬಳಿಕ ಪಂಜಾಬ್ ಮತ್ತೆ ಕುಸಿತದ ಹಾದಿ ಹಿಡಿಯಿತು.

9ನೇ ವಿಕೆಟಿಗೆ 35 ರನ್ ಸೇರಿಸಿದ ಕಾಗಿಸೊ ರಬಾಡ (25 ರನ್, 16 ಎಸೆತ, 4 ಬೌಂ.,1 ಸಿ.) ಹಾಗೂ ಒಡಿಯನ್ ಸ್ಮಿತ್(9 ರನ್ )ತಂಡದ ಸ್ಕೋರನ್ನು 137ಕ್ಕೆ ತಲುಪಿಸಿದರು.

ಪಂಜಾಬ್ ಪರ ಶ್ರೀಲಂಕಾ ಬ್ಯಾಟರ್ ರಾಜಪಕ್ಸ ಸರ್ವಾಧಿಕ ಸ್ಕೋರ್ ಗಳಿಸಿದರು. ಲಿಯಾಮ್ ಲಿವಿಂಗ್‌ಸ್ಟೋನ್(19 ರನ್), ಹರ್‌ಪ್ರೀತ್ ಬ್ರಾರ್ (14 ರನ್), ರಾಜ್ ಬಾವ(11 ರನ್)ಎರಡಂಕೆಯ ಸ್ಕೋರ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್
ಪಂಜಾಬ್ ಕಿಂಗ್ಸ್: 18.2 ಓವರ್‌ಗಳಲ್ಲಿ 137/10

(ಭಾನುಕ ರಾಜಪಕ್ಸ 31, ,ಕಾಗಿಸೊ ರಬಾಡ 25, ಲಿವಿಂಗ್‌ಸ್ಟೋನ್ 19,ಉಮೇಶ್ ಯಾದವ್ 4-23, ಟಿಮ್ ಸೌಥಿ 2-36)

ಕೋಲ್ಕತಾ ನೈಟ್ ರೈಡರ್ಸ್: 14.3 ಓವರ್‌ಗಳಲ್ಲಿ 141/4

(ರಸೆಲ್ ಔಟಾಗದೆ 70, ಸ್ಯಾಮ್ ಬಿಲ್ಲಿಂಗ್ಸ್ ಔಟಾಗದೆ 24, ಶ್ರೇಯಸ್ ಅಯ್ಯರ್ 26, ರಾಹುಲ್ ಚಹಾರ 2-13)
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News