ರಮಝಾನ್: ಚಿತ್ತವನ್ನು ಪಳಗಿಸುವ ಪ್ರಶಿಕ್ಷಣ

Update: 2022-04-04 06:18 GMT
ರಮಝಾನ್

ಭಾಗ-1

ಚಂದ್ರಮಾನ ಆಧಾರಿತ ‘ಹಿಜ್ರಿ’ ಅಥವಾ ‘ಹಿಜ್ರತ್’ ಕ್ಯಾಲೆಂಡರ್ ನಲ್ಲಿ ಒಂಭತ್ತನೇ ತಿಂಗಳು ರಮಝಾನ್. ಇದು ಪವಿತ್ರ ‘ಕುರ್‌ಆನ್’ ಅನಾವರಣಗೊಂಡ ತಿಂಗಳಾದ್ದರಿಂದ ಕುರ್‌ಆನ್ ಅನುಯಾಯಿಗಳು ಈ ತಿಂಗಳುದ್ದಕ್ಕೂ ನಿತ್ಯ ಉಪವಾಸ ಆಚರಿಸುತ್ತಾರೆ - ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಕುರ್‌ಆನ್ ಎಂಬ ಗ್ರಂಥದ ಸ್ವರೂಪವೇನು? ಮಾನವ ಬದುಕಿನಲ್ಲಿ ಅದರ ಪಾತ್ರವೇನು? ಮನುಷ್ಯ ಸಮಾಜಕ್ಕೆ ಅದರ ಕೊಡುಗೆ ಏನು? ಒಂದು ಗ್ರಂಥದ ಆಗಮನಕ್ಕೂ ಉಪವಾಸಕ್ಕೂ ಏನು ಸಂಬಂಧ? ಇವೇ ಮುಂತಾದ ವಿಷಯಗಳ ಕುರಿತು ಅನೇಕರಲ್ಲಿ ಕುತೂಹಲವಿದೆ.

ಕುರ್‌ಆನ್‌ನಲ್ಲಿ ಏನಿದೆ ಎಂಬುದು ನಿಗೂಢವೇನಲ್ಲ. ತನ್ನ ಆಗಮನದ ಕಾಲದಿಂದಲೇ ಸದಾ ಎಲ್ಲರ ಅಧ್ಯಯನಕ್ಕೆ ಮುಕ್ತವಾಗಿದ್ದ ಗ್ರಂಥ ಅದು. ಅದನ್ನು ಅರಿಯಬಯಸುವವರ ಮುಂದೆ ಹಲವು ದಾರಿಗಳಿವೆ. ಅದು ಮೂಲತಃ ಅರಬಿ ಎಂಬ ಒಂದು ಸರಳ, ಸುಂದರ, ಜೀವಂತ ಹಾಗೂ ಸಕ್ರಿಯ ಭಾಷೆಯಲ್ಲಿದೆ. ಅರಬಿ ಭಾಷೆ ಜಗತ್ತಿನ ಅನೇಕಾರು ಭಾಗಗಳಲ್ಲಿ ನಿತ್ಯ ಬಳಕೆಯಲ್ಲಿದೆ. 22 ದೇಶಗಳಲ್ಲಿ ಅದು ಅಧಿಕೃತ ಸರಕಾರೀ ಭಾಷೆಯಾಗಿ ಅಂಗೀಕಾರ ಪಡೆದಿದೆ. ಅದು ಲೋಕದ ವಿವಿಧ ದೇಶಗಳಲ್ಲಿರುವ 30 ಕೋಟಿಗೂ ಹೆಚ್ಚಿನ ಜನರ ಮಾತೃ ಭಾಷೆಯಾಗಿದೆ. ವಿಶ್ವ ಸಂಸ್ಥೆಯು ಅಂಗೀಕರಿಸಿರುವ ಆರು ಅಧಿಕೃತ ಭಾಷೆಗಳಲ್ಲಿ ಅರಬಿ ಒಂದು. ಕುರ್‌ಆನ್‌ನ ಸಂದೇಶವನ್ನು ಅರಿಯುವುದು ಜಗತ್ತಿನ ಎಲ್ಲ ಸತ್ಯಾರ್ಥಿಗಳಿಗೆ ಸುಲಭವಾಗಬೇಕು. ಜ್ಞಾನವು ಮುಕ್ತವಾಗಿ ಲಭ್ಯವಿದ್ದಾಗ ಶೋಷಣೆಯ ಮತ್ತು ತಪ್ಪುದಾರಿಗೆಳೆಯುವ ಅವಕಾಶಗಳು ಮುಚ್ಚಿಹೋಗುತ್ತವೆ. ಅದಕ್ಕಾಗಿಯೇ ಈ ಗ್ರಂಥವನ್ನು ಇತರ ಭಾಷೆಗಳಿಗೆ ಅನುವಾದಿಸುವ ಪ್ರಕ್ರಿಯೆಯು ಹಲವು ಶತಮಾನಗಳ ಹಿಂದೆಯೇ ಆರಂಭವಾಗಿತ್ತು. ಸಾಕ್ಷಾತ್ ಪ್ರವಾದಿ ಮುಹಮ್ಮದ್ (ಸ) ಅವರ ಕಾಲದಲ್ಲೇ ಅವರ ಪರ್ಷಿಯನ್ ಸಂಗಾತಿ ಹಜ್ರತ್ ಸಲ್ಮಾನ್ ಫಾರ್ಸಿ (ರ) ಅವರು ಕುರ್‌ಆನ್ ನ ಕೆಲವು ವಾಕ್ಯಗಳನ್ನು ತಮ್ಮ ಪರ್ಷಿಯನ್ ಭಾಷೆಗೆ ಅನುವಾದಿಸಿದ್ದರು. ಒಂದು ಸಮೀಕ್ಷೆಯ ಪ್ರಕಾರ ಕಳೆದ ಶತಮಾನದ ಪೂರ್ವಾರ್ಧದಲ್ಲಿ ಅಂದರೆ 1936 ರ ಹೊತ್ತಿಗೆ ಆಗಲೇ ಜಗತ್ತಿನ ನೂರಕ್ಕೂ ಹೆಚ್ಚಿನ ಭಾಷೆಗಳಲ್ಲಿ ಕುರ್‌ಆನ್ ಅನುವಾದ ಗ್ರಂಥಗಳು ಪ್ರಕಟವಾಗಿದ್ದವು. ಇಂದು ಜಗತ್ತಿನ ಹೆಚ್ಚಿನೆಲ್ಲ ಪ್ರಮುಖ ಭಾಷೆಗಳಲ್ಲಿ ಕುರ್‌ಆನ್ ನ ಅನುವಾದಗಳು ಲಭ್ಯ. ಇಂಗ್ಲಿಷ್ ಭಾಷೆಯೊಂದರಲ್ಲೇ ಕುರ್‌ಆನ್ ನ ಅರವತ್ತಕ್ಕೂ ಹೆಚ್ಚಿನ ಅನುವಾದಗಳು ಸಿಗುತ್ತವೆ. ಹಲವು ಜನಪ್ರಿಯ ಭಾಷೆಗಳಲ್ಲಿ ಕುರ್‌ಆನ್ ವ್ಯಾಖ್ಯಾನ ಮತ್ತು ವಿಶ್ಲೇಷಣಾ ಗ್ರಂಥಗಳೂ ದೊಡ್ಡಪ್ರಮಾಣದಲ್ಲಿ ಬೆಳಕಿಗೆ ಬಂದಿವೆ. ಇದೀಗ ತೀರಾ ಸ್ಥಳೀಯ ಭಾಷೆಗಳಲ್ಲಿ ಮತ್ತು ಉಪಭಾಷೆಗಳಲ್ಲೂ ಕುರ್‌ಆನ್ ಅನುವಾದಗಳು ಮತ್ತು ಆ ಕುರಿತಾಗಿ ಇತರ ಬರಹಗಳೂ ಇವೆ.

  ಸವಿಸ್ತಾರವಾಗಿ ಸಂಪೂರ್ಣ ಗ್ರಂಥವನ್ನು ಓದುವ ಸಂಯಮ ಇಲ್ಲದ ಆರಂಭಿಕ ಓದುಗರಿಗೆ ಈ ಗ್ರಂಥದ ಒಂದು ಇಣುಕು ನೋಟವನ್ನು ಒದಗಿಸಲಿಕ್ಕಾಗಿ ಕೆಲವು ನೂರು ಆಯ್ದ ವಚನಗಳನ್ನು ಪರಿಚಯಿಸುವ ಗ್ರಂಥಗಳೂ ಪ್ರಕಟವಾಗಿವೆ. ಅಂತರ್ಜಾಲದಲ್ಲಿ ಕುರ್‌ಆನ್ ನ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲುವ, ತಜ್ಞರ ಉಪನ್ಯಾಸಗಳು ಸಿಗುತ್ತವೆ. ನಮ್ಮ ಕನ್ನಡದಲ್ಲಿ ಈಗಾಗಲೇ ಕುರ್‌ಆನ್‌ನ ಐದಾರು ತರ್ಜುಮೆಗಳು, ತರ್ಜುಮೆಯ ಆಡಿಯೊಗಳು, ಆ್ಯಪ್‌ಗಳೆಲ್ಲಾ ಸಿಗುತ್ತಿವೆ. ಯಾವುದೇ ಅನುವಾದ ಗ್ರಂಥವು ಮೂಲಗ್ರಂಥಕ್ಕೆ ಪರ್ಯಾಯವಾಗಲು ಎಂದೂ ಸಾಧ್ಯವಿಲ್ಲ. ಆದರೆ ಒಂದು ಗ್ರಂಥದಲ್ಲಿ ಏನಿದೆ ಎಂಬ ಕುರಿತು ಪ್ರಾಥಮಿಕ ಜ್ಞಾನವನ್ನು ಗಳಿಸಬಯಸುವವರಿಗೆ ಈ ಅನುವಾದ ಕೃತಿಗಳು ಖಂಡಿತ ಸಹಾಯಕ. ಪವಿತ್ರ ‘ಕುರ್‌ಆನ್’ ಅನಾವರಣಗೊಂಡ ರಮಝಾನ್ ತಿಂಗಳು, ಪ್ರತಿವರ್ಷವೂ ಜಾಗತಿಕ ಮಟ್ಟದಲ್ಲಿ ಒಂದು ಗಮನಾರ್ಹ ಬೆಳವಣಿಗೆಗೆ ರೂಪ ನೀಡುತ್ತದೆ.

ಜಗತ್ತಿನ ಇನ್ನೂರಕ್ಕೂ ಹೆಚ್ಚಿನ ದೇಶಗಳಲ್ಲಿ ತೀರಾ ವಿಭಿನ್ನ ಭಾಷೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ನೂರೈವತ್ತು ಕೋಟಿಗೂ ಹೆಚ್ಚಿನ ಜನರು ಸ್ಥಳೀಯ ಮಟ್ಟದಲ್ಲಿ ಸಂಘಟಿತರಾಗಿ ಏಕಕಾಲದಲ್ಲಿ, ಸತತ ಒಂದು ತಿಂಗಳಷ್ಟು ದೀರ್ಘಕಾಲ, ತಮ್ಮ ಅತ್ಯಧಿಕ ಸಮಯವನ್ನು ಒಂದು ನಿರ್ದಿಷ್ಟ ನಿಯಮಕ್ಕೆ ಅನುಸಾರವಾದ, ವಿವಿಧತೆಯಿಂದ ಸಂಪನ್ನ ಆರಾಧನಾ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಧರ್ಮಗಳು, ಧರ್ಮಾನುಯಾಯಿಗಳು ಮತ್ತು ಗೌರವಾರ್ಹ ಧಾರ್ಮಿಕ ಘಟನೆಗಳು ಧಾರಾಳವಾಗಿ ಕಾಣಲು ಸಿಗುವ ಜಗತ್ತಿನಲ್ಲಿ ಈರೀತಿ, ಇಷ್ಟು ದೊಡ್ಡ ಸಂಖ್ಯೆಯ ಜನರು ಇಷ್ಟೊಂದು ವ್ಯಾಪಕ ಮಟ್ಟದಲ್ಲಿ ಸತತ ಇಷ್ಟು ದೀರ್ಘಕಾಲ ಹಗಲಿರುಳೆನ್ನದೆ ಒಂದೇ ಗುರಿಯುಳ್ಳ ವಿಭಿನ್ನ ಸ್ವರೂಪದ ಚಟುವಟಿಕೆಗಳಲ್ಲಿ ನಿರತರಾಗುವುದು ಗಮನಾರ್ಹ ಮಾತ್ರವಲ್ಲ, ವೀಕ್ಷಣೀಯವೂ ಆಗಿದೆ. ಇಸ್ಲಾಮ್ ಧರ್ಮದಲ್ಲಿರುವ ನಮಾಝ್, ಝಕಾತ್ ಮತ್ತು ಹಜ್ ಎಂಬ ಕರ್ತವ್ಯಗಳಿಗೆ ಹೋಲಿಸಿದರೆ ಉಪವಾಸ ಎಂಬ ಕರ್ತವ್ಯದಲ್ಲಿ ಕೆಲವು ಅನುಪಮ ವಿಶೇಷತೆಗಳಿವೆ.

ಉದಾ: ಮೂಲತಃ ಉಪವಾಸವು ಜಗತ್ತಿನ ಹೆಚ್ಚಿನೆಲ್ಲ ಧರ್ಮಗಳ ಜನರ ಪಾಲಿಗೆ, ಮಾತ್ರವಲ್ಲ, ಯಾವುದೇ ಧರ್ಮದೊಂದಿಗೆ ಸಂಬಂಧವಿಲ್ಲದವರ ಪಾಲಿಗೂ ಪರಿಚಿತವಾಗಿರುತ್ತದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ವಲಯಗಳಲ್ಲಂತೂ ಉಪವಾಸವು ಒಂದು ಅವಿಭಾಜ್ಯ ಅಂಗವಾಗಿ ಎಲ್ಲ ಸಮಾಜಗಳಲ್ಲೂ ಮಾನ್ಯತೆ ಪಡೆದಿದೆ. ದೇವರು, ಪರಲೋಕ, ಪುನರ್ಜನ್ಮ, ಮೋಕ್ಷ ಇತ್ಯಾದಿ ವಿಷಯಗಳಲ್ಲಿ ಯಾವುದೇ ನಿರ್ದಿಷ್ಟ ನಿಲುವು ತಾಳಿಲ್ಲದ ಹಲವು ವಲಯಗಳಲ್ಲೂ ವಿಭಿನ್ನ ಸ್ವರೂಪಗಳಲ್ಲಿ ಉಪವಾಸಕ್ಕೆ ಗಣ್ಯ ಮಾನ್ಯತೆ ಇದೆ. ಕೆಲವೆಡೆ ಒಂದು ಸದುದ್ದೇಶ ಅಥವಾ ಸದ್ಗುರಿಯ ಕಡೆಗೆ ಸಮಾಜದ ಗಮನ ಸೆಳೆಯುವ ಒಂದು ಉಪಾಧಿಯಾಗಿ ರಾಜಕೀಯ ಹಾಗೂ ಸಾಮಾಜಿಕ ರಂಗಗಳಲ್ಲೂ ಈ ಆಚರಣೆ ಬಳಕೆಯಲ್ಲಿದೆ. ಆದ್ದರಿಂದಲೇ ಮೂಲತಃ ಉಪವಾಸ ಅಂದರೇನು ಎಂಬುದನ್ನು ಯಾರಿಗೂ ವಿವರಿಸಬೇಕಾಗಿಲ್ಲ. ಹೆಚ್ಚೆಂದರೆ ನಿರ್ದಿಷ್ಟ ಧ್ಯೇಯೋದ್ದೇಶಗಳನ್ನು ಐತಿಹಾಸಿಕ ಹಿನ್ನೆಲೆಯನ್ನು ಮತ್ತು ಕ್ರಮ-ನಿಯಮಗಳ ಕುರಿತಾದ ವಿವರಗಳನ್ನು ಮಾತ್ರ ಸಮಜಾಯಿಸಬೇಕಾಗುತ್ತದೆ. ಸಂಯಮ, ಶಿಸ್ತು, ವಿರಾಮ, ಆತ್ಮಾವಲೋಕನ, ಚಿಂತನೆ, ಧ್ಯಾನ, ನಿರಾಹಾರ, ಮೌನ - ಇವೆಲ್ಲಾ ಬೇರೆಬೇರೆ ಧರ್ಮ, ಸಮಾಜ ಮತ್ತು ಪಂಥಗಳ ಉಪವಾಸದ ಕಲ್ಪನೆಯಲ್ಲಿ ವಿಭಿನ್ನ ಪ್ರಮಾಣಗಳಲ್ಲಾದರೂ ಸಮಾನ ಅಂಶಗಳಾಗಿ ಎದ್ದು ಕಾಣುತ್ತವೆ. ಒಬ್ಬ ಮುಸ್ಲಿಮ್ ಜನಸಾಮಾನ್ಯನ ತರ್ಕ ಪ್ರಕಾರ, ಕುರ್‌ಆನ್ ಎಂಬ ಪರಮ ಅನುಗ್ರಹ ಬಂದ ತಿಂಗಳು ರಮಝಾನ್. ನಮ್ಮ ಮೇಲೆ ಈ ವಿಶ್ವದ ಸೃಷ್ಟಿಕರ್ತ ಹಾಗೂ ಪಾಲಕನ ಸಾವಿರ ಸಾವಿರ ಅನುಗ್ರಹಗಳಿವೆ.

ಆ ಪೈಕಿ ಒಂದೊಂದು ಅನುಗ್ರಹಕ್ಕಾಗಿಯೂ ನಾವು ನಿತ್ಯ ಅವನಿಗೆ ಕೃತಜ್ಞರಾಗಿರಬೇಕು. ಕುರ್‌ಆನ್ ಮೂಲಕ ನಮಗೆ ಅತ್ಯಂತ ಸಮರ್ಥ ಹಾಗೂ ಸಾರ್ಥಕ ಮಾರ್ಗದರ್ಶನ ಒದಗಿಸಿರುವುದು ಅವನ ಅತಿದೊಡ್ಡ ಅನುಗ್ರಹವಾಗಿದೆ. ಕ್ಷಣಕ್ಷಣವೂ ನಾವು ನೆನಪಿಟ್ಟುಕೊಳ್ಳಬೇಕಾದ ಮತ್ತು ಅವನಿಗೆ ನಮ್ಮ ಋಣ ಪ್ರಕಟಿಸುತ್ತಿರಬೇಕಾದಷ್ಟು ಮಹಾನ್ ಅನುಗ್ರಹ ಇದು. ದೇವರು ದಯಪಾಲಿಸುವ ಯಾವುದೇ ಅನುಗ್ರಹವನ್ನು ಅವನ ಆಶಯ ಹಾಗೂ ಆದೇಶಾನುಸಾರ ಸರಿಯಾಗಿ ಬಳಸಿಕೊಳ್ಳುವುದೇ ಆ ಅನುಗ್ರಹಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುವ ಅತ್ಯುತ್ತಮ ವಿಧಾನವಾಗಿದೆ. ಕುರ್‌ಆನ್ ಕೇವಲ ಒಂದಷ್ಟು ಮಾಹಿತಿಗಳನ್ನು ಒದಗಿಸಲಿಕ್ಕಾಗಿ, ಕೆಲವು ಶಾಸ್ತ್ರ ಮತ್ತು ಮಂತ್ರಗಳನ್ನು ಕಲಿಸುವುದಕ್ಕಾಗಿ ಅಥವಾ ಕೇವಲ ಪದೇ ಪದೇ ಓದಿ ಪುಣ್ಯಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಬಂದಿರುವ ಗ್ರಂಥವೇನೂ ಅಲ್ಲ. ಅದು ಪ್ರತಿಯೊಬ್ಬ ವ್ಯಕ್ತಿ, ಎಲ್ಲ ಕುಟುಂಬಗಳು ಹಾಗೂ ಸಂಪೂರ್ಣ ಸಮಾಜದ ಬದುಕನ್ನು ಸತ್ಯ - ನ್ಯಾಯ, ಸಹತಾಪಗಳಂತಹ ಮಹೋನ್ನತ ವಿಶ್ವಮಾನ್ಯ ಮೌಲ್ಯಗಳಿಗನುಸಾರವಾಗಿ ರೂಪಿಸಲು ಬಂದಿರುವ ಗ್ರಂಥ. ಮನುಷ್ಯರನ್ನು ಶಕ್ತರು, ಶ್ರೀಮಂತರು, ಪುರೋಹಿತರು, ಸರ್ವಾಧಿಕಾರಿಗಳು, ದಂಡಾಧಿಪತಿಗಳು ಮುಂತಾದ ಎಲ್ಲರ ದಾಸ್ಯದಿಂದ ಮುಕ್ತಗೊಳಿಸಲು ಬಂದಿರುವ ಗ್ರಂಥ. ಮಾನವರೆಲ್ಲರೂ ತಮ್ಮ ನೈಜ ಮಾಲಕನಿಗೆ ಮಾತ್ರ ನಿಷ್ಠರಾಗಿ ಮತ್ತು ಅವನಿಗೆ ಮಾತ್ರ ವಿಧೇಯರಾಗಿ ಬದುಕಲು ಸಾಧ್ಯವಾಗುವಂತಹ ಸ್ವತಂತ್ರ ವಾತಾವರಣವನ್ನು ನಿರ್ಮಿಸಲು ಬಂದಿರುವ ಗ್ರಂಥ.

ಕುರ್‌ಆನ್ ಬಯಸುವಂತಹ, ಎಲ್ಲರೂ ಸ್ವಪ್ರೇರಣೆಯಿಂದ ತಮ್ಮ ಕರ್ತವ್ಯಗಳನ್ನು ನೆರವೇರಿಸುವ ಮತ್ತು ಪ್ರತಿಯೊಬ್ಬ ನಾಗರಿಕನಿಗೆ ಅವನ ಹಕ್ಕು ಅಧಿಕಾರಗಳು ನಿರ್ವಿಘ್ನವಾಗಿ ಪ್ರಾಪ್ತವಾಗುವ ಸಮಾಜವು ತಾನಾಗಿ ರೂಪುಗೊಳ್ಳುವುದಿಲ್ಲ. ಅದನ್ನು ನಿರ್ಮಿಸಲು ಅಸಾಮಾನ್ಯ ಚಾರಿತ್ರ್ಯದ, ಭಾರೀ ಶಿಸ್ತುಬದ್ಧರಾದ ವ್ಯಕ್ತಿಗಳು ಸಂಘಟಿತರಾಗಿ ದೀರ್ಘಕಾಲ ಹೋರಾಡಬೇಕಾಗುತ್ತದೆ. ಜೀವಪರ ಮೌಲ್ಯಗಳನ್ನು ಸಮಾಜದಲ್ಲಿ ಪರಿಚಯಿಸಿ, ಜನಪ್ರಿಯಗೊಳಿಸಿ ಅವುಗಳಿಗೆ ಪ್ರಾಬಲ್ಯ ಕೊಡಿಸುವುದಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಅವಿರತ ಶ್ರಮಿಸಬೇಕಾಗುತ್ತದೆ. ಆ ಬಗೆಯ ಸಮರ್ಥ ವ್ಯಕ್ತಿತ್ವಗಳನ್ನು ಕಟ್ಟಿಬೆಳೆಸುವುದು ಮತ್ತು ಸಮಾಜದಲ್ಲಿ ಅವರ ಹೋರಾಟಕ್ಕೆ ಪೂರಕವಾದ ವಾತಾವರಣವನ್ನು ರೂಪಿಸುವುದೇ ರಮಝಾನ್ ತಿಂಗಳಲ್ಲಿ ನಡೆಯುವ ಪ್ರಧಾನ ಚಟುವಟಿಕೆಯಾಗಿರುತ್ತದೆ. ಶಿಸ್ತು, ಸಂಯಮ, ಚಿತ್ತ ನಿಯಂತ್ರಣ, ಸಮಾಜದ ಎಲ್ಲ ಸದಸ್ಯರಜೊತೆ ಸ್ನೇಹ ಮತ್ತು ವಿಶ್ವಾಸದ ಸಂಬಂಧ ಇವೆಲ್ಲವುಗಳ ಪಾಲಿಗೆ ರಮಝಾನ್ ತಿಂಗಳು ಸುಗ್ಗಿಯ ಪರ್ವವಾಗಿ ಬಿಡುತ್ತದೆ.

Writer - ಯೂಸುಫ್ ಶುಕೂರ್, ಬೋಳಾರ

contributor

Editor - ಯೂಸುಫ್ ಶುಕೂರ್, ಬೋಳಾರ

contributor

Similar News