ರಮಝಾನ್: ಚಿತ್ತವನ್ನು ಪಳಗಿಸುವ ಪ್ರಶಿಕ್ಷಣ
ಭಾಗ-2
ಶರೀರ ಮತ್ತು ಅದರಲ್ಲೆಲ್ಲೋ ಅವಿತಿರುವ ಚಿತ್ತಕ್ಕೆ ಮಾರುಹೋಗಿ ಆ ಶರೀರವೇ ತಾನು ಎಂಬ ಮತ್ತು ಚಿತ್ತವೇ ತನ್ನ ಪರಮ ಹಿತೈಷಿ ಎಂಬ ಭ್ರಮೆಯಲ್ಲಿದ್ದವನ ಭ್ರಮೆಯನ್ನು ಉಪವಾಸವು ಕ್ಷೀಣಗೊಳಿಸುತ್ತದೆ. ಚಿತ್ತದ ವೈಯಾರಗಳಿಗೆ ಮರುಳಾಗಿ ಅದನ್ನು ತನ್ನ ಸಾರಥಿಯಾಗಿಸಿಕೊಂಡವನು ಕಣ್ಣು ತೆರೆಯತೊಡಗುತ್ತಾನೆ. ತುಸು ಸಂವೇದನಾಶೀಲನಾಗಿ, ಪ್ರಜ್ಞೆಯೊಂದಿಗೆ ಉಪವಾಸ ಆಚರಿಸುವವನು ಪ್ರಥಮವಾಗಿ, ಶರೀರ ಮತ್ತು ತನ್ನ ನಡುವಣ ಅಂತರವನ್ನು ಗುರುತಿಸತೊಡಗುತ್ತಾನೆ. ತಾನು ಶರೀರವಲ್ಲ ಎಂಬುದನ್ನು ಮನಗಾಣಲಾರಂಭಿಸುತ್ತಾನೆ.
ವ್ಯಕ್ತಿ, ಕುಟುಂಬ ಮತ್ತು ಸಮಾಜವನ್ನು ಬದಲಿಸುವ ಅಪಾರ ಸಾಮರ್ಥ್ಯ ತನ್ನಲ್ಲಿ ಇದೆ ಎಂಬುದನ್ನು ರಮಝಾನ್ ತಿಂಗಳು ಪ್ರತಿವರ್ಷ ಬಹಳ ಪರಿಣಾಮಕಾರಿಯಾಗಿ ತೋರಿಸಿಕೊಡುತ್ತದೆ. ರಮಝಾನ್ ತಿಂಗಳು ಬಂತೆಂದರೆ ಜಗತ್ತಿನೆಲ್ಲಾ ಭಾಗಗಳಲ್ಲಿ ಸಂಪೂರ್ಣ ಮುಸ್ಲಿಮ್ ಸಮಾಜದ ದಿನಚರಿ ಆಮೂಲಾಗ್ರ ಬದಲಾಗಿ ಬಿಡುತ್ತದೆ. ತೀರಾ ಸಾಮಾನ್ಯ ಮುಸ್ಲಿಮರ ಬದುಕು ಕೂಡ ಒಂದು ವಿಶೇಷ ವೇಳಾಪಟ್ಟಿಗೆ ಬದ್ಧವಾಗಿ ಬಿಡುತ್ತದೆ. ಮಹಾ ಸೋಮಾರಿಗಳು ಕೂಡಾ ಈ ತಿಂಗಳಲ್ಲಿ ಬಿಡುವಿಲ್ಲದ, ಬಿರುಸಿನ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ನಿತ್ಯ ಬೆಳಗ್ಗೆ ತುಂಬಾ ತಡವಾಗಿ ಮಂಚ ಬಿಟ್ಟೇಳುವವರು ರಮಝಾನ್ ತಿಂಗಳಲ್ಲಿ, ಎಷ್ಟು ತೀವ್ರ ಚಳಿ ಇದ್ದರೂ ಬೆಳಗ್ಗೆ ಐದು ಗಂಟೆಗೆ ಮುನ್ನ ಮಸೀದಿಯಲ್ಲಿ ಕಂಡು ಬರುತ್ತಾರೆ. ಕಟ್ಟುನಿಟ್ಟಾಗಿ ನಿತ್ಯ ನಮಾಝ್ ಸಲ್ಲಿಸಲಾಗದವರು ಕೂಡಾ ಈ ತಿಂಗಳುದ್ದಕ್ಕೂ ಎಲ್ಲ ಐದು ಹೊತ್ತಿನ ನಮಾಝ್‌ಗಳನ್ನೂ ಕ್ಲಪ್ತ ಸಮಯದಲ್ಲಿ ಮಸೀದಿಗಳಲ್ಲಿ ಇತರರ ಜೊತೆ ಸೇರಿ ಸಲ್ಲಿಸುತ್ತಾರೆ. ಪದೇ ಪದೇ ಏನಾದರೂ ತಿನ್ನುತ್ತಲೇ ಇರುವುದು ತಮ್ಮ ಅಸ್ತಿತ್ವಕ್ಕೆ ಅನಿವಾರ್ಯ ಎಂದು ನಂಬಿರುವ ಎಷ್ಟೋ ಜನ ಈ ತಿಂಗಳಲ್ಲಿ ಸತತ ಸುಮಾರು 16 ಗಂಟೆಗಳ ಕಾಲ ಯಾವುದೇ ಬಗೆಯ ಒಂದು ಗ್ರಾಮ್ ಆಹಾರವನ್ನು ಕೂಡ ಸ್ವೀಕರಿಸದೆ ತಮ್ಮನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾರೆ. ತೀವ್ರ ಸೆಖೆಗಾಲದಲ್ಲೂ ಒಂದೇ ಒಂದು ಹನಿ ನೀರನ್ನು ಸೇವಿಸದೆ ಸಹನೆ ಮೆರೆಯುತ್ತಾರೆ. ಗಂಟೆಗೊಮ್ಮೆ ಚಹಾ ಅಥವಾ ಕಾಫಿ ಕುಡಿಯದಿದ್ದರೆ ಬದುಕೇ ಸಾಧ್ಯವಿಲ್ಲ ಎನ್ನುತ್ತಿದ್ದವರು, ಚಹಾ, ಕಾಫಿ ಮಾತ್ರವಲ್ಲ, ಬೀಡಿ, ಸಿಗರೇಟು, ಪಾನ್, ಗುಟ್ಕಾ ಮುಂತಾದ ಎಲ್ಲದಕ್ಕೂ ಸುಮಾರು 16 ಗಂಟೆಗಳ ದೀರ್ಘ ವಿದಾಯ ಹೇಳುತ್ತಾರೆ. ಇವೆಲ್ಲಾ ಮೇಲ್ನೋಟಕ್ಕೆ, ಮಾತ್ರವಲ್ಲ, ದೂರದಿಂದ ಇಣುಕಿದರೂ ಕಾಣುವ ಬದಲಾವಣೆಗಳು. ನಿಜವಾಗಿ, ಉಪವಾಸದ ಮೂಲಕ ಸಾಧಿಸಲು ಉದ್ದೇಶಿಸಲಾಗಿರುವ ನೈಜ ಗುರಿಗಳು ಇವೆಲ್ಲಕ್ಕಿಂತಲೂ ಬಹಳ ಉನ್ನತ ಹಾಗೂ ಸೂಕ್ಷ್ಮ ಸ್ವರೂಪದ್ದಾಗಿವೆ.
ಈ ರಮಝಾನ್ ತಿಂಗಳು ಮತ್ತು ಸಾಕ್ಷಾತ್ ಉಪವಾಸವನ್ನು ನಾವು ತುಸು ಗಮನವಿಟ್ಟು, ತುಂಬಾ ಹತ್ತಿರದಿಂದ, ಅನುಭವದ ಮಟ್ಟದಿಂದ ನೋಡಿದಾಗ ಮಾತ್ರ ಆ ಗುರಿಗಳು ಮತ್ತು ವಿಶೇಷತೆಗಳು ನಮ್ಮ ಮುಂದೆ ಅನಾವರಣಗೊಳ್ಳುತ್ತವೆ. ಉಪವಾಸದಲ್ಲಿ ಕ್ರಿಯೆಗಳಿಗೆ ಹೋಲಿಸಿದರೆ ನಿಷ್ಕ್ರಿಯತೆಗೆ ಒಂದು ಬೃಹತ್ ಪಾಲಿದೆ. ಆದರೆ ಆ ನಿಷ್ಕ್ರಿಯತೆಯು ಬಹಳ ನಿಯಂತ್ರಿತ ಹಾಗೂ ನಿಯಮಬದ್ಧವಾದ ಸೀಮಿತ ಸ್ವರೂಪದಲ್ಲಿರುತ್ತದೆ. ಉಪವಾಸದ ಋತುವಿನಲ್ಲಿ ಮಾತಿಗಿಂತ ಮೌನ, ಚಟುವಟಿಕೆಗಿಂತ ನಿಶ್ಚಲತೆ, ವೇಗಕ್ಕಿಂತ ನಿಧಾನ ಮತ್ತು ಧ್ವನಿಗಿಂತ ನಿಶ್ಯಬ್ದವೇ ಪ್ರಧಾನವಾಗಿ ಮೆರೆಯುತ್ತವೆ. ಸದಾ ಶರೀರವನ್ನೇ ಕೇಂದ್ರವಾಗಿಟ್ಟು, ಅದರ ಸುಖವನ್ನು ಅರಸುತ್ತಾ, ಅದನ್ನು ಓಲೈಸುತ್ತಾ, ತೃಪ್ತಿಪಡಿಸುತ್ತಾ, ಅದಕ್ಕೆ ವಿಧೇಯವಾಗಿ, ಅದರ ಸುತ್ತಲೇ ತನ್ನ ಬದುಕನ್ನು ಕಟ್ಟಿಕೊಂಡವನು ಆ ತನ್ನ ನಿತ್ಯಾಭ್ಯಾಸದಿಂದ ತಾತ್ಕಾಲಿಕವಾಗಿಯಾದರೂ ನಿವೃತ್ತನಾಗುವುದಕ್ಕೆ ಉಪವಾಸವು ಹೇತುವಾಗಿ ಬಿಡುತ್ತದೆ. ಶರೀರ ಮತ್ತು ಅದರಲ್ಲೆಲ್ಲೋ ಅವಿತಿರುವ ಚಿತ್ತಕ್ಕೆ ಮಾರುಹೋಗಿ ಆ ಶರೀರವೇ ತಾನು ಎಂಬ ಮತ್ತು ಚಿತ್ತವೇ ತನ್ನ ಪರಮ ಹಿತೈಷಿ ಎಂಬ ಭ್ರಮೆಯಲ್ಲಿದ್ದವನ ಭ್ರಮೆಯನ್ನು ಉಪವಾಸವು ಕ್ಷೀಣಗೊಳಿಸುತ್ತದೆ. ಚಿತ್ತದ ವೈಯಾರಗಳಿಗೆ ಮರುಳಾಗಿ ಅದನ್ನು ತನ್ನ ಸಾರಥಿಯಾಗಿಸಿಕೊಂಡವನು ಕಣ್ಣು ತೆರೆಯತೊಡಗುತ್ತಾನೆ. ತುಸು ಸಂವೇದನಾಶೀಲನಾಗಿ, ಪ್ರಜ್ಞೆಯೊಂದಿಗೆ ಉಪವಾಸ ಆಚರಿಸುವವನು ಪ್ರಥಮವಾಗಿ, ಶರೀರ ಮತ್ತು ತನ್ನ ನಡುವಣ ಅಂತರವನ್ನು ಗುರುತಿಸತೊಡಗುತ್ತಾನೆ. ತಾನು ಶರೀರವಲ್ಲ ಎಂಬುದನ್ನು ಮನಗಾಣಲಾರಂಭಿಸುತ್ತಾನೆ. ಉಪವಾಸ ವೃತ ಆರಂಭವಾಯಿತೆಂದರೆ ಶರೀರವನ್ನು ಪೋಷಿಸುವ, ಶರೀರದ ಆದೇಶಗಳನ್ನು ಪಾಲಿಸುವ ಮತ್ತು ಶರೀರದ ಬೇಡಿಕೆಗಳನ್ನು ಈಡೇರಿಸುವ ಕ್ರಿಯೆಗಳಿಗೆ ವಿರಾಮ ಸಿಗತೊಡಗುತ್ತದೆ. ಪ್ರತ್ಯಕ್ಷವಾಗಿ ಈ ವಿರಾಮವು ಒಂದು ಬಗೆಯ ನಿವೃತ್ತಿ ಮತ್ತು ನಿಷ್ಕ್ರಿಯತೆಯಾಗಿ ತೋರುತ್ತದೆ.
ಆದರೆ ಅದು ಸಂಪೂರ್ಣ ಜಡ ಅಥವಾ ಶೂನ್ಯತೆಯ ಸ್ಥಿತಿಯೂ ಆಗಿರುವುದಿಲ್ಲ. ಉಪವಾಸದ ಆರಂಭದೊಂದಿಗೆ ಶರೀರಕ್ಕೆ ಅಪಥ್ಯವಾದ ಕೆಲವು ಚಟುವಟಿಕೆಗಳು ಬಿರುಸಾಗಿ ಆರಂಭವಾಗುತ್ತವೆ. ಮಂಚದಲ್ಲಿ ಬಿದ್ದಿರಬೇಕಾದವನು ಪ್ರಾರ್ಥನೆಯ ಚಾಪೆಯಲ್ಲಿ ನಿಂತಿರುತ್ತಾನೆ. ಶರೀರದೊಳಗಿಂದ ಚಿತ್ತದ ಮೂಲಕ ಪ್ರಕಟವಾಗುವ ಹಲವು ಅಪೇಕ್ಷೆಗಳಿಗೆ ಉತ್ತರವಾಗಿ - ನೋ, ನೋ, ನೋ ಎನ್ನುತ್ತಾ ಮತ್ತೆ ಮತ್ತೆ ಅದರ ಆಜ್ಞೆಗಳನ್ನು ತಿರಸ್ಕರಿಸುವ ಚಟುವಟಿಕೆ ಆರಂಭದಲ್ಲಿ ಅಸಾಧ್ಯವೆನಿಸಿದ್ದರೂ ಮುಂದೆ ಆಹ್ಲಾದ ನೀಡತೊಡಗುತ್ತದೆ. ಚಿತ್ತದ ಆದೇಶಗಳನ್ನು ಮೀರಿ ನಿಲ್ಲುವ ಸಾಮರ್ಥ್ಯ ತನ್ನಲ್ಲಿದೆ ಎಂಬ ಅನುಭವವು ಮನುಷ್ಯನ ಆತ್ಮ ವಿಶ್ವಾಸವನ್ನು ತುಂಬಾ ಹೆಚ್ಚಿಸುತ್ತದೆ. ಆವರೆಗೆ ಆತ ಅಂಜಿ ದೂರವಿಟ್ಟಿದ್ದ ಎಷ್ಟೋ ನೈತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಪ್ರಯೋಗ ಮತ್ತು ಸಾಹಸಗಳಿಗೆ ಬೇಕಾದ ಧೈರ್ಯ ಅವನಿಗೆ ತನ್ನೊಳಗೆ ಕಾಣಿಸ ತೊಡಗುತ್ತದೆ. ಚಿತ್ತಕ್ಕೆ ತೀರಾ ಇಷ್ಟವಿಲ್ಲದ ಅನೇಕ ಚಟುವಟಿಕೆಗಳನ್ನು ಮಾಡಲು ಶರೀರವನ್ನು ನಿರ್ಬಂಧಿಸುವ ಕಠಿಣ ಅಭ್ಯಾಸವೂ ಈ ಅವಧಿಯುದ್ದಕ್ಕೂ ನಡೆಯುತ್ತಿರುತ್ತದೆ. ತನ್ನ ವಿಧೇಯ ದಾಸನಾಗಿದ್ದವನು ಈ ರೀತಿ ಹಠಾತ್ತನೆ ಬಂಡೆದ್ದು, ತನಗೆ ಆದೇಶಗಳನ್ನು ನೀಡುವ ಪ್ರೌಢಿಮೆಯನ್ನು ಬೆಳೆಸಿಕೊಂಡದ್ದು ಹೇಗೆ ಎಂದು ಶರೀರ ಮತ್ತು ಅದರಲ್ಲಿನ ಆಶ್ರಿತ ಚಿತ್ತವು ಅಚ್ಚರಿ ಪಡುತ್ತಿರುತ್ತದೆ. ರಮಝಾನ್ ತಿಂಗಳ ಸಾರ್ಥಕ್ಯವಿರುವುದೇ ಈ ಮಟ್ಟವನ್ನು ತಲುಪಿ ಅದೇ ದಿಕ್ಕಿನಲ್ಲಿ ಮುಂದುವರಿಯುವುದರಲ್ಲಿ.
ರಮಝಾನ್ ತಿಂಗಳಲ್ಲಿ, ಅನ್ನಾಹಾರಗಳನ್ನು ವರ್ಜಿಸುವುದಕ್ಕಿಂತ ಅನಗತ್ಯ ಮಾತುಕತೆಗಳನ್ನು ವರ್ಜಿಸುವುದು ಕಠಿಣವಾಗುತ್ತದೆ. ಇನ್ನೊಬ್ಬರನ್ನು ದೂಷಿಸುವ ಮಾತುಕತೆಗಳಲ್ಲಿ ಸೇರದಿರುವುದು ತುಂಬಾ ಕಷ್ಟದ ಕೆಲಸವಾಗಿ ಬಿಡುತ್ತದೆ. ತಪ್ಪು ನಮ್ಮದಾಗಿರುವಾಗಲೇ (ಸಾರಿ) ಹೇಳುವುದು ಭಾರಿ ಕಠಿಣವಾಗಿರುವಾಗ ತಪ್ಪುನಮ್ಮದಲ್ಲದಿರುವಾಗ ಅದೆಷ್ಟು ಕಷ್ಟವಾದೀತು! ಆದರೂ ಕೇವಲ ಕ್ಷಮೆಯ ಮಹಿಮೆಯನ್ನು ಗುರುತಿಸಿ, ಕ್ಷಮೆಯ ಮೇಲೆ ದೇವರಿಗಿರುವ ಪ್ರೀತಿಯನ್ನು ಸ್ಮರಿಸಿಕೊಂಡು, ತಾನು ಅವನ ಕ್ಷಮೆಗೆ ಅರ್ಹನಾಗಬೇಕಿದ್ದರೆ ಜನರನ್ನು ಕ್ಷಮಿಸಬೇಕಾದುದು ಅನಿವಾರ್ಯ ಎಂಬ ಅರಿವು, ನಾಲ್ಕು ಜನರ ಮುಂದೆ ನಿಂತು, ತಪ್ಪಿತಸ್ಥನ ಬಳಿ ನಾವೇ ವಿನಯದೊಂದಿಗೆ ಹೇಳಿ, ಕ್ಷಮೆಕೇಳುವ ಭಾರೀ ಸಾಹಸದ ಕೆಲಸಕ್ಕೆ ನಮ್ಮನ್ನು ಸಜ್ಜುಗೊಳಿಸುತ್ತದೆ. ನನ್ನ ದಾನ ಧರ್ಮಗಳನ್ನು ಪಡೆಯಲು ಅರ್ಹರಾದವರು ನನ್ನ ಮನೆಬಾಗಿಲಲ್ಲಿ ನಿಲ್ಲಲಿ ಎಂಬ ಹಳೆಯ, ಹೀನ ಮಾನಸಿಕತೆಯನ್ನು ಒದ್ದೋಡಿಸಿ, ಅರ್ಹರನ್ನು ಹುಡುಕಿ ಹೋಗಿ ಅವರ ಮನೆ ಬಾಗಿಲಲ್ಲಿ ನಿಂತು, ನಮ್ಮ ನೆರವನ್ನು ಅವರು ಸ್ವೀಕರಿಸಿದರೆ ಅದು ಅವರ ಔದಾರ್ಯ ಎಂಬಂತೆ ನಡೆದುಕೊಳ್ಳುವುದು ಪ್ರಯಾಸದ ಕೆಲಸವಾಗುತ್ತದೆ. ಆದರೆ ರಮಝಾನ್ ತಿಂಗಳಲ್ಲಿ ಕುರ್‌ಆನ್ ಪಠಣ, ಪ್ರವಚನ, ಉಪನ್ಯಾಸ, ಅಧ್ಯಯನಗಳ ಮೂಲಕ ಮತ್ತೆ ಮತ್ತೆ ನೆನಪಿಸಲಾಗುವ ಸತ್ಯಗಳು ಇದನ್ನೆಲ್ಲಾ ಸಾಧ್ಯಗೊಳಿಸಿ ಬಿಡುತ್ತವೆ. ನಮ್ಮ ಸ್ನೇಹ ಬೇಡ ಎಂದು ತಿರಸ್ಕರಿಸಿ ಹೋದವನ ಬಳಿ ಮತ್ತೆ ನಾವಾಗಿಯೇ ಸ್ನೇಹ ಯಾಚಿಸುವುದು, ಬಾಂಧವ್ಯ ಕಡಿದುಕೊಂಡ ಬಂಧುವಿನ ಜೊತೆ ಬಾಂಧವ್ಯ ಮರುಸ್ಥಾಪನೆ ಮಾಡುವುದು, ಯಾರಿಗೂ ಕಾಣದ, ತಿಳಿಯದ ಸ್ಥಳಗಳಲ್ಲಿ ಸಮಾಜ ಸೇವೆ, ಜನಸೇವೆಯ ಕೆಲಸಗಳನ್ನು ಮಾಡುವುದು ಇವೇ ಮುಂತಾದ ಕಠಿಣ ಚಟುವಟಿಕೆಗಳನ್ನೂ ರಮಝಾನ್ ಸುಲಭಗೊಳಿಸುತ್ತದೆ.
ರಮಝಾನ್ ತಿಂಗಳ ಉದ್ದಕ್ಕೂ ಪ್ರಜ್ಞಾಪೂರ್ವಕ ಪದೇ ಪದೇ ಈ ರೀತಿಯ ಕೆಲಸವನ್ನು ಮಾಡುತ್ತಿರುವುದರಿಂದ ಮುಂದೆ ಕ್ರಮೇಣ ವರ್ಷವಿಡೀ ಈ ಕೆಲಸಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತವೆ. ಇನ್ನೊಬ್ಬರನ್ನು ಟೀಕಿಸುವುದು, ಅವರ ತಪ್ಪುಗಳ ಪಟ್ಟಿ ತಯಾರಿಸುವುದು ತುಂಬಾ ಸುಲಭ, ಮಾತ್ರವಲ್ಲ, ಭಾರೀ ಮೋಜಿನ ಕೆಲಸ. ಇದಕ್ಕೆ ಹೋಲಿಸಿದರೆ ಒಂಟಿಯಾಗಿ ಒಂದೆಡೆ ಕೂತು, ನಾವೇ ನಮ್ಮ ತಪ್ಪುಗಳನ್ನು ನೆನಪಿಸಿಕೊಂಡು, ನಮ್ಮ ದೌರ್ಬಲ್ಯಗಳನ್ನು ಪಟ್ಟಿಮಾಡಲು ಆರಂಭಿಸುವುದು ಕಷ್ಟದ ಕೆಲಸ. ರಮಝಾನ್ ತಿಂಗಳು ಪದೇ ಪದೇ ನಮ್ಮಿಂದ ಈ ಕಷ್ಟದ ಕೆಲಸವನ್ನು ಮಾಡಿಸುತ್ತದೆ. ನಮ್ಮ ತಪ್ಪು ಮಾತು, ಕೃತಿ ಅಥವಾ ವ್ಯವಹಾರದಿಂದ ಯಾರಿಗೆಲ್ಲಾ ಹಾನಿ ಅಥವಾ ಅನ್ಯಾಯವಾಗಿರಬಹುದು ಎಂದು ಲೆಕ್ಕಾಚಾರ ಮಾಡಿ ಸಂಬಂಧಪಟ್ಟವರಿಗೆ ಪರಿಹಾರ ಪಾವತಿಸಿ, ಕ್ಷಮೆಕೇಳಿ, ಲೆಕ್ಕ ಚುಕ್ತಾ ಮಾಡುವುದು ಜಟಿಲ ಚಟುವಟಿಕೆ. ಆದರೆ ರಮಝಾನ್ ನಮ್ಮಿಂದ ಆ ಕೆಲಸವನ್ನು ಮತ್ತೆ ಮತ್ತೆ ಮಾಡಿಸುತ್ತದೆ. ಒಂದೇ ವಿಷಯದಲ್ಲಿ ಧರ್ಮದ ಆದೇಶ ಮತ್ತು ಚಿತ್ತದ ಆದೇಶಗಳು ಭಿನ್ನವಾಗಿದ್ದಾಗ ಚಿತ್ತವನ್ನು ಅನುಸರಿಸಿದರೆ ಚಿತ್ತವು ಸಂಭ್ರಮಿಸುತ್ತದೆ. ನೀನು ತುಂಬಾ ಜಾಣ ಎಂದು ಮೂರ್ಖನನ್ನು ನಂಬಿಸುತ್ತದೆ. ಅತ್ತ ಧರ್ಮವು ತನ್ನ ಆದೇಶವನ್ನು ಮೀರಿನಡೆದರೆಂದು ಯಾರ ಮೇಲೂ ಕೋಪಿಸಿಕೊಳ್ಳುವುದಿಲ್ಲ. ಪ್ರತಿಭಟಿಸು ವುದೂ ಇಲ್ಲ. ಇಂತಹ ಮೌನ ಧರ್ಮದ ಆದೇಶವನ್ನು ಪ್ರಯತ್ನಪಟ್ಟು, ಅರಿತು ಸ್ಪಂದಿಸುವುದಕ್ಕೆ ವ್ಯಕ್ತಿಯ ಬಳಿ ಬಹಳಷ್ಟು ವಿವೇಕ ಮತ್ತು ಸಂವೇದನಾಶೀಲತೆ ಇರಬೇಕಾಗುತ್ತದೆ. ರಮಝಾನ್ ತಿಂಗಳಲ್ಲಿ ಬೆನ್ನು ಬೆನ್ನಿಗೆ ಚಿತ್ತದ ಆದೇಶವನ್ನು ಧಿಕ್ಕರಿಸುವ ತರಬೇತಿ ಸಿಗುತ್ತದೆ. ಈ ತಿಂಗಳಲ್ಲಿ ನಿದ್ದೆಯ ಸಮಯದಲ್ಲಿ ಜಾಗರಣೆ, ವಿರಾಮದ ಸಮಯದಲ್ಲಿ ಆರಾಧನೆ, ಭೋಜನದ ಸಮಯದಲ್ಲಿ ನಿರಶನ - ಇದನ್ನೆಲ್ಲಾ ನಿತ್ಯ ಹಲವಾರು ಬಾರಿ ಮಾಡಿಸುವುದು ಇದೇ ಉದ್ದೇಶದಿಂದ. ಒಂದೆಡೆ ಚಿತ್ತವು ಭ್ರಷ್ಟತೆ, ಅಕ್ರಮ ಸಂಪತ್ತು, ಅನೈತಿಕ ಚಟುವಟಿಕೆಗಳು ಮತ್ತು ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿರುವಾಗ ಇನ್ನೊಂದೆಡೆ ಧರ್ಮ ಪ್ರಜ್ಞೆಯು ಪ್ರಾಮಾಣಿಕತೆ, ಸಚ್ಚಾರಿತ್ರ್ಯ, ನೈತಿಕ ಬದ್ಧತೆ, ಕಾನೂನಿನ ಪಾಲನೆ ಮುಂತಾದ ಮೌಲ್ಯಗಳಿಗೆ ಒತ್ತು ನೀಡುತ್ತಿರುತ್ತದೆ.
ಒಂದೆಡೆ ಚಿತ್ತವು ಕೋಪವನ್ನು, ರೋಷವನ್ನು, ಆಕ್ರಮಣವನ್ನು, ಹಲ್ಲೆಯನ್ನು ಮತ್ತು ಹಿಂಸೆಯನ್ನೆಲ್ಲ ಪ್ರಚೋದಿಸುತ್ತಿರುವಾಗ ಇನ್ನೊಂದೆಡೆ ಧರ್ಮವು ಶಾಂತಿ, ನೆಮ್ಮದಿ, ಸಂಧಾನ, ಕ್ಷಮೆ ಮುಂತಾದವುಗಳನ್ನು ಉಪದೇಶಿಸುತ್ತಿರುತ್ತದೆ. ಬೇರೆ ದಿನಗಳಲ್ಲಾಗಿದ್ದರೆ ಇಂತಹ ಘರ್ಷಣೆಯ ವೇಳೆ, ಧರ್ಮದ ಆದೇಶದ ಕಡೆಗೆ ಕಿಂಚಿತ್ತೂ ಗಮನ ಹರಿಸದೆ ನೇರವಾಗಿ ಚಿತ್ತದ ಚಾಕರಿಗೆ ಇಳಿಯುವವರು ರಮಝಾನ್ ತಿಂಗಳಲ್ಲಿ ಎಚ್ಚರ ವಹಿಸುತ್ತಾರೆ. ರಮಝಾನ್ ತಿಂಗಳು ಬರುವುದೇ ಚಿತ್ತ, ಕುಟುಂಬ, ಹಿತಾಸಕ್ತಿಗಳು, ಸ್ವಾರ್ಥ, ಸಮಾಜ ಮತ್ತು ಧರ್ಮಗಳ ನಡುವೆ ಸಂಘರ್ಷ ಏರ್ಪಟ್ಟರೆ ಯಾವಕಡೆಗೆ ನಿಲ್ಲಬೇಕೆಂಬುದನ್ನು ಕಲಿಸಲಿಕ್ಕಾಗಿ ಮತ್ತು ಅದರ ಅಭ್ಯಾಸ ಮಾಡಿಸುವುದಕ್ಕಾಗಿ. ರಮಝಾನ್ ತಿಂಗಳನ್ನು ಈ ರೀತಿ ಸ್ವತಃ ತಮ್ಮ ಚಿತ್ತ, ವಿಚಾರಗಳು, ಚಾರಿತ್ರ್ಯ ಮತ್ತು ಅಭ್ಯಾಸಗಳ ಶುದ್ಧೀಕರಣಕ್ಕಾಗಿ ಬಳಸಿಕೊಳ್ಳದವರು ಒಂದು ಸುವರ್ಣ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಮುಸ್ಲಿಮರಿಗೆ ಒಂದು ನಿರ್ದಿಷ್ಟ ಪ್ರಕಾರದ ನಿಯಮಬದ್ಧ ಉಪವಾಸವನ್ನು ಪರಿಚಯಿಸಿದ ಇಸ್ಲಾಮ್ ಧರ್ಮವು ಬೇರೆಲ್ಲ ವಿಷಯಗಳಂತೆ ಈ ವಿಷಯದಲ್ಲೂ ಸಮತೋಲನದ ನಿಲುವನ್ನು ಅನುಸರಿಸಿದೆ. ಎಳೆಯ ಮಕ್ಕಳಿಗೆ, ಪ್ರಯಾಣಿಕರಿಗೆ ಮತ್ತು ಅನಾರೋಗ್ಯ ಪೀಡಿತರಿಗೆ ಉಪವಾಸದಿಂದ ವಿನಾಯಿತಿಯನ್ನು ನೀಡಿದೆ. ಚಿತ್ತವನ್ನು ಪಾಲಾಗಿಸುವ ಪ್ರಕ್ರಿಯೆಯಲ್ಲಿ ಚಿತ್ತವನ್ನಾಗಲಿ, ಶರೀರವನ್ನಾಗಲಿ ದ್ವೇಷಿಸಲು, ದಂಡಿಸಲು ಅಥವಾ ಅವುಗಳಿಂದ ಪಲಾಯನ ಮಾಡಲು ಅದು ಅನುಮತಿಸುವುದಿಲ್ಲ. ಆತ್ಮ, ಚೇತನಗಳು ದೇವಾದೇಶಕ್ಕೆ ಶರಣಾದಂತೆ, ವಿಶಾಲ ಪ್ರಕೃತಿಯ ಬೇರೆಲ್ಲ ಸದಸ್ಯರಂತೆ ಶರೀರ ಮತ್ತು ಚಿತ್ತವನ್ನೂ ದೇವದತ್ತ ಶಿಸ್ತಿಗೆ ಅಧೀನಗೊಳಿಸಿರಿ ಎಂಬುದೇ ಅದರ ಆಶಯವಾಗಿದೆ.