ಮಕ್ಕಳಲ್ಲಿ ಅಟಿಸಂ ಲಕ್ಷಣಗಳನ್ನು ಬೇಗ ಪತ್ತೆಹಚ್ಚಿ: ರೇಖಾ ರಾವ್
ಉಡುಪಿ, ಎ.೫: ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಆಟಿಸಂ ಸೊಸೈಟಿ ಮತ್ತು ರೋಟರಿ ಕ್ಲಬ್ ಮಣಿಪಾಲ ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಆಟಿಸಂ ಜಾಗೃತಿ ದಿನಾಚರಣೆಯ ಪ್ರಯುಕ್ತ ಆಟಿಸಂ ಅರಿವಿನ ಕಾರ್ಯಾ ಗಾರವನ್ನು ಎ.೨ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಯೋಜನಾಧಿಕಾರಿ ವೀಣಾ ವಿವೇಕಾನಂದ ಮಾತನಾಡಿ, ಸರಕಾರ ಜನಪ್ರತಿನಿಧಿಗಳು, ಸಂಬಂಧಪಟ್ಟ ಸಂಘ ಸಂಸ್ಥೆಗಳು ಹಾಗೂ ಅದರ ಜೊತೆಗೆ ಪೋಷಕರು ಸೇರಿ ಪ್ರಯತ್ನಿಸಿದರೆ ಆಟಿಸಂ ಇರುವಂತಹ ಮಕ್ಕಳಿಗೆ ಹೆಚ್ಚಿನ ನೆರವು ಸಿಗುವಂತೆ ಮಾಡಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ರೇಖಾ ರಾವ್ ಮಾತನಾಡಿ, ಅಟಿಸಂ ಲಕ್ಷಣಗಳನ್ನು ಮಕ್ಕಳಲ್ಲಿ ಬೇಗ ಪತ್ತೆಹಚ್ಚುವುದರಿಂದ ಸಮಸ್ಯೆಯ ತೀವ್ರತೆಯನ್ನು ಕಡಿಮೆಗೊಳಿಸ ಬಹುದು. ಆಟಿಸಂ ಮಗುವಿನದ್ದಾಗಲಿ ಅಥವಾ ಪೋಷಕರದ್ದಾಗಲಿ ಸಮಸ್ಯೆ ಯಲ್ಲ, ಇದೊಂದು ಸ್ಥಿತಿ ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಳ್ಳುವುದರ ಜೊತೆಗೆ ಒಪ್ಪಿಕೊಳುವುದು ಮುಖ್ಯ ಎಂದರು.
ಮಕ್ಕಳ ಆಸಕ್ತಿ ಚಟುವಟಿಕೆಗಳನ್ನು ತಿಳಿದುಕೊಂಡು ಪ್ರೋತ್ಸಾಹಿಸುವ ಮೂಲಕ ಕಲಿಸಬೇಕು. ಮಗುವನ್ನು ದುರ್ಬಲಗೊಳಿಸುವ ಯಾವುದೇ ಚಟುವಟಿಕೆ ಗಳಾಗಲಿ, ತಿನಿಸಾಗಲಿ ನೀಡಬಾರದು. ಸಾಮಾನ್ಯ ಮಗುವಿನಂತೆ ನೋಡಿ, ದಿನನಿತ್ಯದ ವಿಷಯಗಳನ್ನು ಚರ್ಚಿಸಿ, ಹೇಳಿದ್ದೆಲ್ಲಾ ಅರ್ಥಮಾಡಿಕೊಳ್ಳಬೇಕು ಎಂಬ ಅತೀ ನಿರೀಕ್ಷೆ ಇಟ್ಟುಕೊಳ್ಳಬಾರದು. ಸ್ವತಂತ್ರವಾಗಿ ಕೆಲಸ ಮಾಡಲು ಪ್ರೋತ್ಸಾಹಿಸಬೇಕು. ಯಾವುದೇ ಕಾರಣಕ್ಕೂ ಮಗುವನ್ನು ದಂಡಿಸಬಾರದು ಎಂದು ಅವರು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮನೋ ತಜ್ಞ ಡಾ.ಪಿ.ವಿ.ಭಂಡಾರಿ ಮಾತನಾಡಿ, ಆಟಿಸಂ ಚಿಕಿತ್ಸೆಯನ್ನು ಸಾಮಾನ್ಯ ಜನರೂ ಆರ್ಥಿಕವಾಗಿ ನಿಭಾಯಿಸಲು ಅನುಕೂಲ ವಾಗುವಂತೆ ಉಡುಪಿಯಲ್ಲೂ ಒಂದು ಚಿಕಿತ್ಸಾ ಕೇಂದ್ರ ನಿರ್ಮಾಣ ವಾದರೆ ಉತ್ತಮ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಐಡಾ ಡಿಸೋಜ, ಡಾ.ವಿರೂಪಾಕ್ಷ ದೇವರಮನೆ, ಡಾ.ಗೌರಿ, ಟಿಡ್ಡಿ ಆಂಡ್ರ್ಯೂಸ್ ಉಪಸ್ಥಿತರಿದ್ದರು. ಡಾ.ಪ್ರಿಯದರ್ಶಿನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಜನ್ಯ ಶೆಟ್ಟಿ ವಂದಿಸಿದರು. ಸುಚಿತ್ರ ಮತ್ತು ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.