"ಉರ್ದು ಮಾತಾಡದ್ದಕ್ಕೆ ಕೊಲೆ ಮಾಡಲಾಗಿದೆ" ಎಂದು ಹೇಳಿಕೆ ನೀಡಿ ಬಳಿಕ ಕ್ಷಮೆ ಕೋರಿದ ಗೃಹ ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರಿನ ಗೋರಿಪಾಳ್ಯದಲ್ಲಿ ನಡೆದಿದ್ದ ಚಂದ್ರು ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಉರ್ದು ಭಾಷೆ ಮಾತನಾಡದ್ದಕ್ಕೆ ಆತನನ್ನು ಕೊಲೆ ಮಾಡಲಾಗಿತ್ತು ಎಂದು ಹೇಳಿಕೆ ನೀಡಿದ ಬಳಿಕ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಬೈಕ್ ಅಪಘಾತ ಸಂಬಂಧ ನಡೆದಿದ್ದ ಯುವಕರ ನಡುವಿನ ಜಗಳ ಕೊಲೆಯಲ್ಲಿ ಪರ್ಯಾವಸಾನಗೊಂಡಿತ್ತು. ಆದರೆ, ಉರ್ದು ಭಾಷೆ ಮಾತನಾಡದ ಕಾರಣ ಚಂದ್ರು ಎಂಬ ದಲಿತ ಯುವಕನ ಕೊಲೆ ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಳೂರಿನ ಬಿಜೆಪಿ ಕಛೇರಿಯಲ್ಲಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಿಟಿ ರವಿ ಕೂಡಾ ಪ್ರಚೋದನಾಕಾರಿ ಹೇಳಿಕೆ ನೀಡಿದ್ದು, ಕನ್ನಡದ ಕಾರಣಕ್ಕೆ ಹತ್ಯೆ ನಡೆದಿದ್ದರೆ ಅವರೆಲ್ಲರನ್ನೂ ಪಾಕಿಸ್ತಾನಕ್ಕೆ ಓಡಿಸಬೇಕೆಂದು ಹೇಳಿಕೆ ನೀಡಿದ್ದರು.
ಮೊನ್ನೆ ಕಾಶ್ಮೀರದಲ್ಲಿ ನಡೆದಿದ್ದು ಇಲ್ಲೂ ನಡೆಯಬಹುದು. ಸತ್ತವನು ಹಿಂದೂ ಆದರೆ ಕಾಂಗ್ರೆಸ್ ನವರಿಗೆ ಕಣ್ಣೀರು ಬರಲ್ಲ. ಸತ್ತವರು ಹಿಂದೂ ಆದರೆ ಸಿದ್ದರಾಮಯ್ಯ ಸಂತಾಪ ಸೂಚಿಸಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿಕೆ ನೀಡಿದ್ದರು.
ಆದರೆ, ಪೊಲೀಸರು ಬಿಜೆಪಿ ನಾಯಕರ ಹೇಳಿಕೆಯನ್ನು ನಿರಾಕರಿಸಿದ್ದು, ಬೈಕ್ ತಾಗಿದ ಘಟನೆಗೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಕೊಲೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಹಿದ್ ಪಾಷಾ (21 ವರ್ಷ), ಶಾಹಿದ್ ಗೋಲಿ (22 ವರ್ಷ) ಹಾಗೂ ಇನ್ನೋರ್ವ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಬಂಧಿಸಿದ್ದಾರೆ.
ಘಟನೆ ನಡೆದ ಬೆನ್ನಲ್ಲೇ ಡಿಸಿಪಿ ಅನುಚೇತ್ ಮಾತನಾಡಿ, ಮೃತ ಯುವಕ ಹಾಗೂ ಆತನ ಗೆಳೆಯ ಹಳೆಗುಡ್ಡದಳ್ಳಿ ಬಳಿ ಕಬಾಬ್ ಸೆಂಟರ್ ಗೆ ಹೋದಾಗ ಸೈಯದ್ ಎಂಬಾತನ ಬೈಕ್ ತಗುಲಿದೆ. ಇದರಿಂದ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಗಲಾಟೆಯಲ್ಲಿ 22 ವರ್ಷ ಚಂದ್ರು ಎಂಬಾತನ ತೊಡೆಗೆ ಚಾಕುವಿನಿಂದ ಇರಿಯಲಾಗಿದೆ. ತೀವ್ರ ರಕ್ತಸ್ರಾವದಿಂದ ಚಂದ್ರು ಆಸ್ಪತ್ರೆಗೆ ಸಾಗಿಸುವ ನಡುವೆಯೇ ಅಸುನೀಗಿದ್ದಾನೆ' ಎಂದು ತಿಳಿಸಿದ್ದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಕೂಡಾ ಬೈಕ್ ತಾಗಿದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನ ಕೊಲೆಯಾಗಿದೆ ಎಂದು ಹೇಳಿದ್ದರು.
'ಏಪ್ರಿಲ್ 5ರ ಮಧ್ಯ ರಾತ್ರಿ ಸ್ನೇಹಿತನೊಂದಿಗೆ ಚಂದ್ರು ಮೈಸೂರು ರಸ್ತೆ ಕಡೆಗೆ ಹೋಗಿದ್ದರು. ವಾಪಸ್ಸು ಮರಳುವಾಗ ಅವರ ಬೈಕ್ ಮತ್ತೊಂದು ಬೈಕ್‌ಗೆ ತಾಗಿದೆ. ಈ ವೇಳೆ ಗಲಾಟೆ ನಡೆದಿದೆದ್ದು, ಈ ಗಲಾಟೆಯಲ್ಲಿ ಓರ್ವ ವ್ಯಕ್ತಿ ಚಂದ್ರು ಮೇಲೆ ಹಲ್ಲೆ ಮಾಡಿದ್ದಾನೆ. ಕೂಡಲೇ ಗಾಯಗೊಂಡಿದ್ದ ಚಂದ್ರು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾದರೂ, ಅಧಿಕ ರಕ್ತ ಸ್ರಾವದಿಂದಾಗಿ ಆತ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆʼ ಎಂದು ಕಮಲ್ ಪಂತ್ ಟ್ವೀಟ್ ಮಾಡಿದ್ದಾರೆ.
ಆದರೆ, ಪೊಲೀಸರ ಹೇಳಿಕೆಗಿಂತ ವಿಭಿನ್ನವಾಗಿ ಗೃಹ ಸಚಿವರು ಹೇಳಿಕೆ ನೀಡಿದ್ದು ಸಾಕಷ್ಟು ಗೊಂದಲವನ್ನು ಸೃಷ್ಟಿಸಿತ್ತು. ಉರ್ದು ಮಾತನಾಡಲು ನಿರಾಕರಿಸಿದ್ದಕ್ಕೆ ಚಂದ್ರುವಿನ ಕೊಲೆ ಆಗಿದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದರು.
ಬೆಂಗಳೂರಿನಲ್ಲಿ ಚಂದ್ರು ಎಂಬಾತನನ್ನು ಹತ್ಯೆ ಮಾಡಿದ್ದಾರೆ. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡಲ್ಲ ಎಂದಿದ್ದಕ್ಕೆ ದಲಿತ ಯುವಕನನ್ನು ಹತ್ಯೆ ಮಾಡಲಾಗಿದೆ. ಚೂರಿಯಿಂದ ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದರು.
ಈ ಹೇಳಿಕೆ ಆಧಾರದಲ್ಲಿ ಹಲವು ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಬಲಪಂಥೀಯರು ದಲಿತ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳು ಈ ಪ್ರಕರಣದಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಇದೇ ಪ್ರಕರಣವನ್ನಿಟ್ಟುಕೊಂಡು ಮುಸ್ಲಿಮರು ವಿರುದ್ಧ, ಉರ್ದು ಭಾಷಿಕರ ವಿರುದ್ಧ ಅಪಪ್ರಚಾರ ನಡೆಸಲಾಗಿದೆ.
ಆದರೆ ಇದೀಗ, ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದು, ತನಗೆ ಆರಂಭದಲ್ಲಿ ಸಿಕ್ಕಿದ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸದೆ ಆತುರವಾಗಿ ಹೇಳಿಕೆ ನೀಡಿದ್ದು ತಪ್ಪಾಗಿದೆ, ತಕ್ಷಣಕ್ಕೆ ಸಿಕ್ಕಿದ ಮಾಹಿತಿಯನ್ನು ಮಾಧ್ಯಮಗಳ ಮುಂದೆ ಹೇಳಿದ್ದೆ ಈಗ ಸಂಪೂರ್ಣ ಮಾಹಿತಿ ಸಿಕ್ಕಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಬೈಕ್ ಅಪಘಾತ ನಡೆದ ಬಳಿಕ ಗಲಾಟೆಯಾಗಿ ಚಂದ್ರುಗೆ ಚೂರಿ ಇರಿತ ಆಗಿದೆ. ಆಸ್ಪತ್ರೆಗೆ ಹೋಗುವಷ್ಟರಲ್ಲಿ ರಕ್ತಸ್ರಾವದಿಂದ ಆತ ಸಾವನ್ನಪ್ಪಿದ್ದಾನೆ. ಈ ಹಿಂದೆ ನಾನು ನೀಡಿದ್ದ ಹೇಳಿಕೆ ತಪ್ಪಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ತಮ್ಮ ವೆಬ್ ಸೈಟ್ ನಲ್ಲಿ ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದ್ದು ಅದರ ಲಿಂಕ್ ಇಲ್ಲಿದೆ.