ಭಟ್ಕಳ: ಪ.ಜಾ. ಪ್ರಮಾಣಪತ್ರಕ್ಕೆ ಒತ್ತಾಯಿಸಿ ಮೊಗೇರರಿಂದ ಧರಣಿ ಸತ್ಯಾಗ್ರಹ

Update: 2022-04-09 16:30 GMT

ಭಟ್ಕಳ: ಉ.ಕ.ಜಿಲ್ಲೆಯ ಮೊಗೇರ ಸಮುದಾಯಕ್ಕೆ ಈ ಹಿಂದೆ ಸರ್ಕಾರ ನೀಡುತ್ತಿದ್ದ ಪ.ಜಾ.ಪ್ರಮಾಣಪತ್ರ ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಹಾಗೂ ಕೂಡಲೇ ಪ.ಜಾ.ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ಕಳೆದ 18 ದಿನಗಳಿಂದ ಭಟ್ಕಳದ ಸಹಾಯಕ ಅಯುಕ್ತರ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ಅದು ಶನಿವಾರ ಉಗ್ರಸ್ವರೂಪ ಪಡೆದುಕೊಂಡಿತು.

ಪ್ರತಿಭಟನಾ ನಿರತರು ಅರೆಬೆತ್ತಲೆಯಾಗಿ ಮೆರವಣೆಗೆ ನಡೆಸಿ ಸಹಯಕ ಆಯುಕ್ತರ ಕಚೇರಿ ಎದುರು ಉರುಳು ಸೇವೆ ಕೈಗೊಂಡರು. ಈ ಸಂದರ್ಭ ಸೀಮೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಓರ್ವ ಯುವಕನನ್ನು ಇತರ ಪ್ರತಿಭಟನಾಕಾರರು ರಕ್ಷಿಸಿದ ಘಟನೆ ನಡೆಯಿತು.

ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾನಿರತರು ಕಳೆದ 14 ವರ್ಷಗಳಿಂದ ಮೊಗೇರ ಸಮುದಾಯಕ್ಕೆ ನೀಡುತ್ತಿದ್ದ ಪ.ಜಾ. ಪ್ರಮಾಣಪತ್ರವನ್ನು ಸರ್ಕಾರ ಸ್ಥಗಿತಗೊಳಿಸಿದ್ದು, ಇದು ಮೊಗೇರ ಸಮುದಾಯಕ್ಕೆ ಸರ್ಕಾರ ಮಾಡುತ್ತಿರುವ ಅನ್ಯಾಯವಾಗಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಸರ್ಕಾರ ನಡೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ನಾವು ಸಾಮೂಹಿಕವಾಗಿ ಆತ್ಮಹ‌ತ್ಯೆ ಮಾಡಿಕೊಳ್ಳುವ ಪ್ರಸಂಗ ಬಂದರೆ ಅದರ ಸಂಪೂರ್ಣ ಹೊಣೆ ಸರ್ಕಾರವೇ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ ತಿಲಕ್ ಮೊಗೇರ್ ಎಂಬ ಪ್ರತಿಭಟನಾಕಾರ ಸರ್ಕಾರ ಪ.ಜಾ. ಪ್ರಮಾಣಪತ್ರ ನಮ್ಮ ಕೈಗೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲದು ಎಂದರು.

ನೂರಾರು ಮಹಿಳೆಯರು, ಯುವಕರು ಹಾಗೂ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News