ವಾಟ್ಸ್‌ಆ್ಯಪ್ ಯೂನಿವರ್ಸಿಟಿಗಳು

Update: 2022-04-10 06:46 GMT

ವಾಸ್ತವಾಂಶಗಳಿಗಿಂತ ಊಹಾಪೋಹಗಳು ಬಹುಬೇಗ ಹರಡಲು ಮತ್ತು ಪರಿಣಾಮಕಾರಿಯಾದ ಪ್ರಭಾವವನ್ನು ಬೀರಲು ಕಾರಣವೇನು ಎಂದು ಈ ಕಾಲಘಟ್ಟದಲ್ಲಾದರೂ ಯೋಚಿಸಲೇ ಬೇಕಾಗಿದೆ.

ವ್ಯಕ್ತಿಗಳು ಯಾವುದ್ಯಾವುದೋ ಕಾರಣದಿಂದ ಹಲವಾರು ವಿಷಯಗಳ ಬಗ್ಗೆ ತಮ್ಮ ಗ್ರಹಿಕೆಗಳನ್ನು ಹೊಂದಿರುತ್ತಾರೆ. ಹಲವಾರು ವಿಷಯಗಳ ಬಗ್ಗೆ ಮಿಥ್‌ಗಳನ್ನು ಹೊಂದುವುದಕ್ಕೆ ಹಲವಾರು ಕಾರಣಗಳಿವೆ. ಒಟ್ಟಾರೆ ಮಿಥ್‌ಗಳನ್ನು ಸತ್ಯವೆಂದು ಗ್ರಹಿಸುವ ವ್ಯಕ್ತಿ ಅದರ ಬಗ್ಗೆ ಪ್ರಾಯೋಗಿಕವಾಗಿ ತೊಡಗಿಕೊಳ್ಳದೆ ಇರುವುದೇ ಒಂದು ಮುಖ್ಯ ಕಾರಣ. ವಿಪರ್ಯಾಸವೆಂದರೆ ಆತ ಪ್ರಯೋಗಕ್ಕೆ ಒಡ್ಡಿಕೊಳ್ಳಲು ಅಡ್ಡವಾಗುವಂತೆ ಕೆಲವು ಸಾಮಾನ್ಯ ಕಲ್ಪನೆಗಳನ್ನು ಹೊಂದಿರುತ್ತಾನೆ. ಈ ಸಾಮಾನ್ಯ ಕಲ್ಪನೆಗಳು ಕೇವಲ ಬಾಯಿ ಮಾತಿನ ಮೂಲಕವೇ ಹರಡಿರುತ್ತವೆ. ಬಹಳಷ್ಟು ಜನರ ಬಾಯಿಂದ ಇದು ಬರುವ ಕಾರಣಕ್ಕೆ ಬಹಳಷ್ಟು ಜನ ಇದನ್ನು ನಿಜವೆಂದೇ ನಂಬಿಬಿಟ್ಟಿರುತ್ತಾರೆ. ನಮ್ಮಲ್ಲಿ ಹೊಸ ಬಗೆಯ ಅಪ್ರಯೋಗಿಕ ವಿಜ್ಞಾನಿಗಳಿರುವರು. ಇವರಿಗೆ ತಮ್ಮ ಆಲೋಚನಾ ಲಹರಿ ಹರಿದಂತೆಲ್ಲಾ ತರ್ಕವನ್ನು ಕೂಡಾ ಮಂಡಿಸುತ್ತಾರೆ. ಅವರ ತರ್ಕಕ್ಕೆ ಯಾವ ತಾರ್ಕಿಕ ಆಧಾರವೂ ಇರದಿದ್ದರೂ ತಮ್ಮ ಮಾತನ್ನು ಸಮರ್ಥಿಸಲೇ ಬೇಕು ಎಂಬ ಹಟದಿಂದ ಬಹಳ ಗಟ್ಟಿಯಾಗಿ ಹೇಳುತ್ತಾರೆ. ಇಷ್ಟು ಗಟ್ಟಿಯಾಗಿ ಮತ್ತು ಸಾರ್ವಜನಿಕವಾಗಿ ಯಾವ ಮುಜುಗರ, ಸಂಕೋಚವೂ ಇಲ್ಲದೆ ಹೇಳುವುದರಿಂದ ಇದು ಸತ್ಯವೇ ಇರಬೇಕೆಂದು ಇತರರು ಭಾವಿಸುತ್ತಾರೆ. ಇಂಥವರಿಂದ ಮಿಥ್‌ಗಳು ಬಹಳಷ್ಟು ಗಟ್ಟಿಯಾಗಿ ಪ್ರಚಾರಗೊಂಡು, ಪ್ರಯೋಗಿಸಲು ಇರಲಿ, ಆಲೋಚಿಸಲೂ ಪುರುಸೊತ್ತಿಲ್ಲದ ಜನ ಅವನ್ನು ಸ್ವೀಕರಿಸುತ್ತಾರೆ. ಕೆಲವೊಮ್ಮೆ ಶ್ರದ್ಧಾ ನಂಬುಗೆಯ ರೀತಿಯಲ್ಲಿಯೇ ಹಲವು ವಿಷಯಗಳನ್ನು ನಂಬುತ್ತಾರೆ. ಕೆಲವೊಮ್ಮೆ ಕಾಕತಾಳೀಯ ಉದಾಹರಣೆಗಳನ್ನು ಗಟ್ಟಿಯಾಗಿ ಹಿಡಿದುಕೊಂಡುಬಿಟ್ಟರೆ ಮತ್ತೆ ಕೆಲವೊಮ್ಮೆ ತಮ್ಮ ಊಹೆಗೆ ಹಿತವಾಗಿರುವುದನ್ನೆಲ್ಲಾ ನಂಬುವುದರ ಮೂಲಕವೂ ಮಿಥ್‌ಗಳನ್ನು ಜನರು ಪೋಷಿಸುತ್ತಾರೆ. ಮಿಥ್‌ಗಳನ್ನು ಮಿಥ್ಯೆಗಳು ಎಂದು ಹಲವು ರೀತಿಗಳಲ್ಲಿ ಒಡೆಯಬಹುದು. ಒಂದು ವೈಚಾರಿಕ ಅಧ್ಯಯನದಿಂದಾದರೆ ಮತ್ತೊಂದು ವೈಜ್ಞಾನಿಕ ಪ್ರಯೋಗಗಳಿಂದ. ಒಟ್ಟಾರೆ ತಿಳುವಳಿಕೆಯಿಂದ ಮಿಥ್‌ಗಳನ್ನು ಒಡೆದು ವಸ್ತು ಸ್ಥಿತಿಗಳು ಏನೆಂದು ಅರಿಯಬಹುದು. ಸಾಮಾನ್ಯವಾಗಿ ಪುರಾಣ, ಪುಣ್ಯಕತೆಗಳು, ಪವಿತ್ರ ಅಪವಿತ್ರ, ಶೀಲ ಅಶ್ಲೀಲ ಇತ್ಯಾದಿಗಳ ಗಾಢ ಪ್ರಭಾವವಿರುವವರು ಸಾಮಾಜಿಕವಾಗಿರುವ ಮಿಥ್‌ಗಳನ್ನೂ ಕೂಡ ಗಂಭೀರವಾಗಿ ನಂಬುತ್ತಾರೆ.

ಕೆಲವೊಮ್ಮೆ ತಮ್ಮ ಬೇಜವಾಬ್ದಾರಿತನವನ್ನು ಅಥವಾ ವೈಫಲ್ಯವನ್ನು ಮುಚ್ಚಿಕೊಳ್ಳಲೂ ವ್ಯಕ್ತಿಗತವಾಗಿ ಮಿಥ್ ಗಳನ್ನು ಸೃಷ್ಟಿಸುತ್ತಾರೆ. ಹಲವಾರು ಮಂದಿ ಯುವಕರು ಅಥವಾ ವಯಸ್ಕರು ಹೇಳುತ್ತಿರುತ್ತಾರೆ. ನಮ್ಮ ಮನೆಯಲ್ಲಿ ಯಾರೂ ಕಲಿತವರಿರಲಿಲ್ಲ. ಹಾಗೆಯೇ ನಮಗೆ ಪ್ರೋತ್ಸಾಹಿಸುವವರಿರಲಿಲ್ಲ. ಹಾಗಾಗಿ ನಾವು ಸರಿಯಾಗಿ ಓದಲಿಲ್ಲ. ವಿದ್ಯಾಭ್ಯಾಸ ಸಾಧ್ಯವಾಗಲಿಲ್ಲ ಎಂದು. ಆದರೆ ಇದು ನಿಜಕ್ಕೂ ಸಂಪೂರ್ಣ ಸತ್ಯವಲ್ಲ. ಏಕೆಂದರೆ ಮನೆಯಲ್ಲಿ ತಲೆಮಾರಿನಿಂದ ತಲೆಮಾರಿಗೆ ಅನಕ್ಷರಸ್ಥರಾಗಿಯೇ ಇರುವಂತಹ ಕುಟುಂಬಗಳಲ್ಲಿ ಮೊತ್ತ ಮೊದಲ ಅಕ್ಷರಸ್ಥರಾದವರು ಅತ್ಯಂತ ಉನ್ನತ ವಿದ್ಯಾಭ್ಯಾಸಗಳನ್ನು ಪಡೆದಿದ್ದಾರೆ ಮತ್ತು ಅತ್ಯುನ್ನತ ವ್ಯಾಸಂಗಗಳನ್ನು ಪಡೆದಿದ್ದಾರೆ. ಹಾಗೆಯೇ ಮನೆಯಲ್ಲಿ ಅತ್ಯಂತ ಶ್ರೇಷ್ಠ ವಿದ್ಯಾವಂತರಿದ್ದರೂ ಕೂಡಾ ಏನೂ ಓದದೆ ಬರೆಯದೆ, ಸರಿಯಾದ ವಿದ್ಯಾಭ್ಯಾಸವನ್ನು ಪಡೆಯದೆ ಅವಿದ್ಯಾವಂತರಾಗಿಯೇ ಉಳಿದಿರುವ ಉದಾಹರಣೆಗಳೂ ಕೂಡ ಸಾಕಷ್ಟಿವೆ. ರಕ್ತದಿಂದಲೋ, ವಂಶವಾಹಿನಿಯಿಂದಲೋ ಅಥವಾ ಮನೆ ಹಾಗೂ ಸಾಮಾಜಿಕ ಪರಿಸರಗಳಿಂದಲೋ ಮಕ್ಕಳು ಒಳ್ಳೆಯ ವಿದ್ಯಾವಂತರಾಗಿಬಿಡುವುದಿಲ್ಲ. ಅವರಿಗೆ ಯಾವುದ್ಯಾವುದೋ ಬಗೆಯಲ್ಲಿ ಕಲಿಕೆಯ ಮತ್ತು ಕಲಿಯುವ ವಿಷಯಗಳು ಪರಿಚಯವಾಗಬಹುದು. ಆದರೆ ಅವುಗಳನ್ನು ಅವರು ಗಟ್ಟಿಯಾಗಿ ಹಿಡಿದುಕೊಳ್ಳುವುದಕ್ಕೆ ಮತ್ತು ಅವುಗಳನ್ನು ಅನುಸರಿಸುವುದಕ್ಕೆ ವಿಶೇಷವಾದ ಅಂಶಗಳಿವೆ.

ಒಟ್ಟಾರೆ ಮನುಷ್ಯನು ತನ್ನಲ್ಲಿರುವ ಪೂರ್ವಾಗ್ರಹ ಪೀಡಿತ ಧೋರಣೆಗಳಿಂದ, ಪೂರ್ವನಿರ್ಧಾರಿತ ವಿಷಯಗಳಿಂದ, ಅದರಲ್ಲೂ ಒಳ್ಳೆಯದಲ್ಲ ಎಂಬುದಾಗಿ ಹೆಸರಿಸಿರುವ ತನ್ನಲ್ಲಿರುವ ದ್ವೇಷ, ಅಸಹನೆ, ಅಸೂಯೆ ಇತ್ಯಾದಿಗಳಿಂದ ಹೊರಗೆ ಹೋಗಲು ಸಿದ್ಧವಿರದೇ ಇರುವವನು, ಅದರಿಂದ ಹೊರಬರಲಾಗದೇ ಇರುವವನು ಅದಕ್ಕೆ ಪೂರಕವಾಗಿರುವ ಎಲ್ಲಾ ವಿಷಯಗಳನ್ನೂ ಹರಡುತ್ತಾ ತನ್ನದು ಸತ್ಯವೆಂದು ತಾನೂ ನಂಬಲು, ಇತರರನ್ನೂ ನಂಬಿಸಲು ಹಾತೊರೆಯುತ್ತಿರುತ್ತಾನೆ. ಅದನ್ನೇ ನಾವು ಈ ಕಾಲಘಟ್ಟದಲ್ಲಿ ವಾಟ್ಸ್‌ಆ್ಯಪ್ ಯೂನಿವರ್ಸಿಟಿಗಳೆಂದು ಕರೆಯುವುದು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News