ಹರ್ಯಾಣ, ದೆಹಲಿ, ಗುಜರಾತ್‍ನಲ್ಲಿ ಕೋವಿಡ್ ಸೋಂಕು ಹೆಚ್ಚಳ

Update: 2022-04-11 02:06 GMT

ಹೊಸದಿಲ್ಲಿ: ದೇಶಾದ್ಯಂತ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದರೂ, ಹರ್ಯಾಣ, ದೆಹಲಿ ಮತ್ತು ಗುಜರಾತ್‍ನಲ್ಲಿ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಳಿಕೆ ವೇಗ ತಗ್ಗಿದೆ.

ಎಪ್ರಿಲ್ 4-10ರ ಅವಧಿಯಲ್ಲಿ ದೇಶಾದ್ಯಂತ 54 ಮಂದಿ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಗಣನೀಯವಾಗಿ ಇಳಿದಿದೆ. ಇದು ದೇಶಾದ್ಯಂತ ಮೊದಲ ಬಾರಿಗೆ ಲಾಕ್‍ಡೌನ್ ಹೇರಿಕೆಯಾದ 2020ರ ಮಾರ್ಚ್ 23-29ರ ಅವಧಿಯಲ್ಲಿ ದಾಖಲಾದ ಸಾವಿನ ಸಂಖ್ಯೆಯ ಬಳಿಕ ದಾಖಲಾದ ಕನಿಷ್ಠ ಸಂಖ್ಯೆಯಾಗಿದೆ.

ದೇಶದಲ್ಲಿ ಕಳೆದ ವಾರ 7100 ಹೊಸ ಪ್ರಕರಣಗಳು ವರದಿಯಾಗಿದ್ದು, 2020ರ ಎ 6-12ರ ಬಳಿಕ ಇದು ಕನಿಷ್ಠ ಸಂಖ್ಯೆಯಾಗಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಶೇಕಡ 15ರಷ್ಟು ಇಳಿದಿವೆ. ಆದರೆ ದೆಹಲಿಯಲ್ಲಿ ಹಿಂದಿನ ವಾರ ದಾಖಲಾದ 751 ಪ್ರಕರಣಗಳಿಗೆ ಹೋಲಿಸಿದರೆ ಕಳೆದ ವಾರ 943 ಪ್ರಕರಣಗಳು ದಾಖಲಾಗಿದ್ದು, ಶೇಕಡ 26ರಷ್ಟು ಏರಿಕೆ ಕಂಡುಬಂದಿದೆ.

ನೆರೆಯ ಹರ್ಯಾಣದಲ್ಲಿ ಕೂಡಾ ಸಾಪ್ತಾಹಿಕ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡ 50ರಷ್ಟು ಏರಿಕೆ ಕಂಡುಬಂದಿದೆ. ಹಿಂದಿನ ವಾರ ದಾಖಲಾದ 344 ಪ್ರಕರಣಗಳಿಗೆ ಹೋಲಿಸಿದರೆ ಕಳೆದ ವಾರ 514 ಪ್ರಕರಣಗಳು ವರದಿಯಾಗಿವೆ.

ಗುಜರಾತ್‍ನಲ್ಲಿ ಕಳೆದ ಮೂರು ದಿನಗಳಿಂದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವಾರ 115 ಹೊಸ ಪ್ರಕರಣಗಳು ದಾಖಲಾಗಿದ್ದು, ಹಿಂದಿನ ವಾರ ದಾಖಲಾದ 61ಕ್ಕೆ ಹೋಲಿಸಿದರೆ ಇದು ಶೇಖಡ 89ರಷ್ಟು ಅಧಿಕ.

ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಪ್ರಕರಣಗಳು ಕ್ರಮವಾಗಿ ಶೇ. 8, ಶೇ. 4 ಮತ್ತು 12ರಷ್ಟು ಇಳಿಕೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News