‘ಲಿಟ್ ಫೆಸ್ಟ್’ಗಳೆಂಬ ರಾಜಕೀಯ ದಾಳಗಳು

Update: 2022-04-12 18:35 GMT

ಲಿಟ್ ಫೆಸ್ಟ್ ಅರ್ಥಾತ್ ಸಾಹಿತ್ಯ ಹಬ್ಬಗಳು ಆಧುನಿಕ ಕಾಲಘಟ್ಟದ ಸಾಹಿತ್ಯದ ಹಿನ್ನೆಲೆಯ ಒಂದು ಸುಂದರ ಕಮರ್ಷಿಯಲ್ ವ್ಯವಸ್ಥೆ. ಸಾಹಿತ್ಯ ಸಮ್ಮೇಳನಗಳು ಬಹುತೇಕ ಜಾತ್ರೆಯ ರೂಪ ಪಡೆದುಕೊಂಡಾಗ ಮತ್ತು ಇದರಿಂದ ನೇರವಾಗಿ ಯಾವುದೇ ದೊಡ್ಡ ಲಾಭವಿಲ್ಲದಿರುವಾಗ ಒಂದಿಷ್ಟು ಕಾರ್ಪೊರೇಟ್ ರೂಪದಲ್ಲಿ ಹೊಸತನದೊಂದಿಗೆ ಅಲ್ಲಲ್ಲಿ ಆರಂಭವಾದ ಈ ಲಿಟ್ ಫೆಸ್ಟ್‌ಗಳು ಇಂದು ಜಾಗತಿಕ ವಿದ್ಯಮಾನ. ಇತ್ತೀಚಿನ ಕೆಲವು ಲಿಟ್ ಫೆಸ್ಟ್‌ಗಳಂತೂ ದೇಶ, ಊರಿನ ಹೆಸರನ್ನೇ ಬೆಳಗಿಸಿ ಕೋಟ್ಯಂತರ ರೂಪಾಯಿಗಳ ವ್ಯವಹಾರದೊಂದಿಗೆ ವಿಶ್ವ ಪ್ರಸಿದ್ಧಿಯನ್ನು ಪಡೆದ್ದದಿದೆ. ಭಾರತದಲ್ಲೂ ಇಂತಹ ಲಿಟ್ ಫೆಸ್ಟ್‌ಗಳು 21ನೇ ಶತಮಾನದ ಮೊದಲ ದಶಕದಲ್ಲಿ ಆರಂಭಗೊಂಡು ರಾಜಧಾನಿಗಳ ಜತೆಗೆ ಇದೀಗ ಹೆಚ್ಚೆಚ್ಚು ರಾಜಕೀಯ ದಾಳದ ಭಾಗವಾಗಿ ಮಂಗಳೂರು ಮತ್ತು ಮಂಗಳೂರಿನಂತಹ ಗಾತ್ರದ ಬೇರೆ ಬೇರೆ ಪಟ್ಟಣಗಳಿಗೂ ಕಾಲಿಟ್ಟಿದೆ. ಈ ಲಿಟ್ ಫೆಸ್ಟ್‌ಗಳಿಗೂ ರಾಜಕೀಯ ಒಲವಿಗೂ ಒಂದು ರೀತಿಯ ಬಿಡಲಾರದ ನಂಟು. ಬಹುತೇಕ ಖಾಸಗಿ ನೆಲೆಯಲ್ಲಿ ನಡೆಯುವ ಇಂತಹ ಲಿಟ್ ಫೆಸ್ಟ್ ಗಳು ತನ್ನ ಲಾಭ ನಷ್ಟ ಮತ್ತು ಆಯೋಜಕರ ಆಸಕ್ತಿಗೆ ಅನುಗುಣವಾಗಿ ನಿರ್ದಿಷ್ಟ ರಾಜಕೀಯ ಪ್ರಜ್ಞೆಯನ್ನು ತನ್ನೊಳಗೆ ಇಟ್ಟುಕೊಂಡಿರುವುದು ಹೊಸತೇನಲ್ಲ.

ಇತ್ತೀಚಿನ ದಿನಗಳಲ್ಲಿ ಮಾತ್ರ ಇದು ವಿಪರೀತವಾಗಿ ಪಕ್ಷಗಳ ಸಾಂಸ್ಕೃತಿಕ ರಾಜಕಾರಣದ ಭಾಗವಾಗಿಯೇ ಬದಲಾಗಿದೆ. ಕೆಲವೊಮ್ಮೆ ಕಾಲಕಾಲಕ್ಕೆ ತನ್ನ ಬಣ್ಣವನ್ನು ಸಹ ಬದಲಾಯಿಸುತ್ತ (ಎಡಪಂಥೀಯ ಧೋರಣೆಯೊಳಗಿದ್ದ ಜಗತ್ತಿನ ಅತಿ ದೊಡ್ಡ ಲಿಟ್ ಫೆಸ್ಟ್ ಖ್ಯಾತಿಯ ಜೈಪುರ ಸಾಹಿತ್ಯ ಹಬ್ಬ ಈ ಬಾರಿ ಗೆದ್ದೆತ್ತಿನ ಬಾಲ ಹಿಡಿಯಹೊರಟು ಮೆಲ್ಲ ಸದ್ದಿಲ್ಲದೆ ಬಲಪಂಥದೆಡೆಗೆ ವಾಲಿಕೊಂಡಂತೆ!) ಈ ನಿಟ್ಟಿನಲ್ಲಿ ನಿನ್ನೆ ಮೊನ್ನೆಯಷ್ಟೇ ಸಮಾಪನಗೊಂಡ 4ನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್, (MLF) ಪ್ರಾರಂಭದಿಂದಲೂ ಬಲಪಂಥೀಯ ವಿಚಾರವಾದದ ಪೋಷಣೆಗೆ ಸೃಷ್ಟಿ ಆದದ್ದೆಂದು ಎಲ್ಲರೂ ಕಂಡುಕೊಂಡ ಸತ್ಯ(ಕಳೆದ ಮೂರು ಆವೃತ್ತಿಯ ಅನುಭವದಂತೆ). ಎರಡು ದಿನಗಳಲ್ಲಿ ಬಹುತೇಕ ಒಂದೇ ಧರ್ಮದ ಏಕ ಮಾನಸಿಕತೆಯ ವ್ಯಕ್ತಿಗಳು ಮಾತ್ರ ಭಾಗವಹಿಸಿದ್ದೂ ಇದಕ್ಕೆ ಜ್ವಲಂತ ಸಾಕ್ಷಿ. ಆರಂಭದ ವರ್ಷಗಳಲ್ಲಿ ನೇರವಾಗಿ ಇಂತಹ ಪಕ್ಷ, ವ್ಯಕ್ತಿಗಳಿಗೆ ವೋಟ್ ಕೊಡಿ ಎಂಬ ನಿಲುವಿನೊಂದಿಗಿದ್ದ ಔಊ ಈ ಬಾರಿ ಇನ್ನಷ್ಟು ಮುಂದವರಿದು, ದುರದೃಷ್ಟವಶಾತ್ ಈಗಾಗಲೇ ಸಾಮಾಜಿಕವಾಗಿ ನಿರ್ಮಾಣವಾಗುತ್ತಿರುವ ಧರ್ಮಾ ಧಾರಿತ ಧ್ರುವೀಕರಣದ ಬೆಂಕಿಗೆ ಮತ್ತಷ್ಟು ತುಪ್ಪವನ್ನು ಹಾಕುವ ಯೋಜಿತ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಂದುವರಿಸಿದೆ(ನಡುವೆ ಕೆಲವು ಅದ್ಭುತ ಜ್ಞಾನದ ಮತ್ತು ಜತೆ ಜತೆಗೆ ಸಂಪೂರ್ಣ ನೀರಸವಾದ ಎರಡು ಬಗೆಯ ಗೋಷ್ಠಿಗಳನ್ನು ಸಹ ಹೊತ್ತು ತಂದು) ಗಾಂಧಿ ನೆಹರೂ ಮತ್ತು ಆಗಾಗ ಸ್ವಲ್ಪ ಅಂಬೇಡ್ಕರ್, ಬುದ್ಧನನ್ನೂ ಬಿಡದೆ ಅವಕಾಶ ಸಿಕ್ಕಿದಾಗಲೆಲ್ಲ ಯಾವುದೇ ದಯೆದಾಕ್ಷಿಣ್ಯವಿಲ್ಲದೆ ಮನಸಾರೆ ದೂಷಿಸಿ! ಹಾಗೂ ಭವಿಷ್ಯದ ಐಛಿ ಟ್ಛ ಆಚ್ಟಠಿನೊಳಗೆ ಸಾಮಾಜಿಕ ನ್ಯಾಯದ ಕಲ್ಪನೆಗೆ ಕೊಡಲಿಯೇಟು ನೀಡುವ ಮುನ್ನುಡಿಯೊಂದಿಗೆ (ಈ ಬಾರಿಯ MLF ಪ್ರಶಸ್ತಿ ವಿಜೇತರು ಮತ್ತು ಲಿಟ್ ಫೆಸ್ಟ್‌ನ ಉದ್ಘಾಟಕರಾದ ಘನ ವಿದ್ವಾಂಸರು ಪ್ರಾರಂಭದಲ್ಲಿ ನೇರ ಮಾತುಗಳಲ್ಲಿ ಹೇಳಿ) ಹತ್ತನ್ನೆರಡು ಗೋಷ್ಠಿಗಳಲ್ಲಿ ಹರಡಿಕೊಂಡಿದ್ದ ಈ ಬಾರಿಯ MLF ಒಂದರ್ಥದಲ್ಲಿ ಹೆಚ್ಚು ಚರ್ಚಿಸಿದ್ದು ಭಾರತದ ವಿವಿಧತೆಯೊಳಗಿನ ಏಕತೆಯನ್ನು (ಬಹುತ್ವ) ಹೊಡೆದು ಹಾಕಿ, ಬದಲಾಗಿ ಏಕತೆಯೊಳಗೆ ವಿವಿಧತೆಯನ್ನು ಕಟ್ಟುವ ಪ್ರಯತ್ನದ ಪ್ರಸ್ತುತ ಆಡಳಿತದ ರಾಜಕೀಯ ಮತ್ತು ಆದರ ಪೂರಕ ಸಂಘಟನೆ ಹಾಗೂ ಪರಿವಾರದ ಅಜೆಂಡವನ್ನೇ.

ಅರ್ಥಾತ್ ಮಾವಿನ ಗೊರಟೊಂದನ್ನು ಮಾತ್ರ ನೆಟ್ಟು ಮುಂದೆ ಅದೇ ಮರದಲ್ಲಿ ಜಗತ್ತಿನ ಎಲ್ಲ ಬಗೆಯ ಹಣ್ಣುಗಳನ್ನು ಕಾಣಬಹುದೆಂಬ ಭ್ರಮೆಯಲ್ಲಿ. ಇತಿಹಾಸದ ನಡೆಯ ಪ್ರಯೋಗ ವರ್ತಮಾನದಲ್ಲಿ ಭವಿಷ್ಯದ ಬಗ್ಗೆ ಭಯಾನಕ ವಾತಾವರಣ ಉಂಟುಮಾಡಿದರೆ ಅದೆಂತಹ ಘೋರ ದಿನಗಳನ್ನು ಕಾಣಬೇಕಾಗಬಹುದೆಂಬುದಕ್ಕೆ ಸರಕಾರದ ಮೌನ ಸಮ್ಮತಿಯೊಂದಿಗಿನ ಅಮಾಯಕರ ಕೊಲೆಗಳೂ ಸೇರಿದಂತೆ ನಿತ್ಯದ ಹತ್ತಾರು ಧರ್ಮಧಾರಿತ ಅಹಿತಕರ ಘಟನೆಗಳನ್ನು ಮತ್ತು ವಿಪರೀತ ಧರ್ಮಾಂಧತೆಯ ಮನಸ್ಥಿತಿಯವರನ್ನು ಪ್ರಸ್ತುತ ಕಾಣುತ್ತಿರುವ ಕರ್ನಾಟಕದಲ್ಲಿ, ಅದರಲ್ಲೂ ರಾಜಕೀಯ ಫಲಿತಾಂಶ ಆಧಾರಿತ ಧಾರ್ಮಿಕ ಪ್ರಯೋಗಶಾಲೆಯೆಂಬ ಕುಖ್ಯಾತಿಯ ಕರಾವಳಿಯಲ್ಲಿ ಸಾಹಿತ್ಯ ಹಬ್ಬವೊಂದು ಇಂತಹದಕ್ಕೆಲ್ಲ ನೀರುಣಿಸಿ ಪೋಷಿಸುವುದೇ ಭಾರೀ ಅಪಾಯಕಾರಿ. ಲಿಟ್ ಫೆಸ್ಟ್‌ನ ಹೆಸರಿನ ಇಂತಹ ನಡೆ, ನುಡಿಗೆ ಮಾತ್ರವಲ್ಲ ನಾಡಿಗೂ ಅಪಾಯಕಾರಿ. ಈ ಎಚ್ಚರ ಜನತೆಯಲ್ಲಿ ಮೂಡಿಬಂದರೆ ಮಾತ್ರ ಅದು ಯಾವುದೇ ಲಿಟ್ ಫೆಸ್ಟ್ ಆದರೂ ಸೈ... ನಿಜರ್ಥದ ಲಿಟ್ ಫೆಸ್ಟ್ ಆಗಿ ಉಳಿಯಬಹುದು ವಿನಹ ಇಲ್ಲವಾದರೆ ಅದೊಂದು ಸುಲಭವಾಗಿ ಸಿಗುವ ದಾಳವಾಗಬಹುದಷ್ಟೇ

Writer - ಕಲ್ಲಚ್ಚು ಮಹೇಶ ಆರ್. ನಾಯಕ್

contributor

Editor - ಕಲ್ಲಚ್ಚು ಮಹೇಶ ಆರ್. ನಾಯಕ್

contributor

Similar News