ಆರೋಪಿಗಳನ್ನು ಬಂಧಿಸದೆ ಲಾಡ್ಜಿನಿಂದ ಮೃತದೇಹ ಕೊಂಡೊಯ್ಯಲು ಬಿಡಲ್ಲ: ಕುಟುಂಬಸ್ಥರ ಪಟ್ಟು
ಉಡುಪಿ, ಎ.13: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಕಿರುಕುಳದ ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಕೆ. ಪಾಟೀಲ್ ಸಾವಿಗೆ ಸಂಬಂಧಿಸಿ ಮೂವರು ಆರೋಪಿಗಳ ಬಂಧನ ಆಗುವ ತನಕ ಮೃತದೇಹವನ್ನು ಲಾಡ್ಜಿನಿಂದ ಹೊರ ತೆಗೆಯಲು ಅವಕಾಶ ನೀಡುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ
ಪ್ರಕರಣದ ಪಂಚನಾಮೆ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶಾಂಭವಿ ಲಾಡ್ಜಿನಿಂದ ಹೊರಗೆ ಬಂದ ಕುಟುಂಬಸ್ಥರು ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಈ ಬಗ್ಗೆ ಮಾತನಾಡಿದ ಸಂತೋಷ್ ಪಾಟೀಲ್ ಸಹೋದರ ಸಂಬಂಧಿ ಪ್ರಶಾಂತ್ ಪಾಟೀಲ್, ಸಚಿವ ಈಶ್ವರಪ್ಪ ಹಾಗೂ ಅವರ ಆಪ್ತರಾದ ಬಸವರಾಜ ಮತ್ತು ರಮೇಶ್ ಬಂಧನದ ನಂತರ ಮುಂದಿನ ಪ್ರಕ್ರಿಯೆ ಮಾಡುತ್ತೇವೆ. ನಾವು ಪೊಲೀಸ್ ತನಿಖೆಗೆ ಈವರೆಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದೇವೆ ಎಂದರು
ಮರಣೋತ್ತರ ಪರೀಕ್ಷೆ ಆಗುವ ಮೊದಲು ಆರೋಪಿಗಳ ಬಂಧನ ಆಗಬೇಕು. ಉಡುಪಿಯ ಶಾಂಭವಿ ಲಾಡ್ಜ್ ನಿಂದ ಮೃತದೇಹವನ್ನು ಮಣಿಪಾಲಕ್ಕೆ ರವಾನೆ ಮಾಡಲು ಬಿಡುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಸರಕಾರಕ್ಕೆ ನಾವು ಈಗಾಗಲೇ ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ. ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಸಂತೋಷ ಆತ್ಮಕ್ಕೆ ಶಾಂತಿಗಾಗಿ ನಾವು ಈ ನಿರ್ಧಾರ ಮಾಡಿದ್ದೇವೆ ಎಂದು ಅವರು ತಿಳಿಸಿದರು