ಎಂದೆಂದಿಗೂ ಪ್ರಸ್ತುತವಾಗುವ ಅಂಬೇಡ್ಕರ್ ಆರ್ಥಿಕ ಚಿಂತನೆಗಳು
ಅಭಿವೃದ್ಧಿಯ ವ್ಯಾಖ್ಯಾನವು ಬದಲಾಗುತ್ತಲೇ ಇದೆ. ಮೊದಲು ರಾಷ್ಟ್ರೀಯ ಆದಾಯದ ಹೆಚ್ಚಳವನ್ನು ಆರ್ಥಿಕತೆಯ ಅಳತೆ ಎಂದು ಪರಿಗಣಿಸಲಾಗಿತ್ತು. ಆದರೆ ಕೆಲವರು ಇದನ್ನು ಅಭಿವೃದ್ಧಿ ಮತ್ತು ಇದು ವಂಚಿತ ವರ್ಗಕ್ಕೆ ಮಾಡಿದ ಮೋಸ ಎಂದು ವಾದಿಸಿದರು. ಮಹಿಳೆಯರು ಮತ್ತು ಮಕ್ಕಳ ಪರಿಸ್ಥಿತಿ, ಸಮತೋಲಿತ ಬೆಳವಣಿಗೆಗಳು ಅಭಿವೃದ್ಧಿಯಲ್ಲಿ ಪ್ರಾಮುಖ್ಯತೆಯನ್ನು ಹೊಂದಿವೆ. ಮನುಷ್ಯನ ಗೌರವಾನ್ವಿತ ಜೀವನಕ್ಕೆ ಸಾಮಾಜಿಕ ಅಂಶಗಳಾದ ಮಾನವ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಲೋಚನೆಗಳು ಇಂದಿಗೂ ಅತ್ಯಂತ ಪ್ರಸ್ತುತವೆನಿಸುತ್ತವೆ.
ಭಾರತದ ಆರ್ಥಿಕತೆಯು ಮಿಶ್ರ ಆರ್ಥಿಕತೆಯಾಗಿದ್ದು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕತೆಯ ಪ್ರಭಾವವನ್ನು ಅದು ಒಳಗೊಂಡಿದೆ. ಅಂಬೇಡ್ಕರ್ ಅವರು ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಬದಲಾವಣೆಗಳಿಗೆ ಹೊಸ ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನವನ್ನು ನೀಡಿದರು. ಆದರೆ ಇಂದು ಭಾರತದ ಆರ್ಥಿಕತೆಯಲ್ಲಿ ಹಲವು ಸ್ಥಿತ್ಯಂತರಗಳು ಮತ್ತು ತಲ್ಲಣಗಳು ಉಂಟಾಗಿವೆ. ಕೇವಲ ಆರ್ಥಿಕ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಜಾರಿಗೆ ತರಲಾಗುತ್ತಿರುವ ಅಭಿವೃದ್ಧಿ ಯೋಜನೆಗಳ ಫಲವಾಗಿ ಸಾಮಾಜಿಕ ಅಭಿವೃದ್ಧಿಯ ಪರಿಕಲ್ಪನೆ ನಾಶವಾಗುತ್ತಿದೆ. ಮೂಲತಃ ಅರ್ಥಶಾಸ್ತ್ರಜ್ಞರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭಾರತದ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದರ ಜೊತೆಗೆ ಮೌಲ್ಯ ಯುತವಾದ ಸಹೆಗಳನ್ನು ಸರಕಾರಕ್ಕೆ ಕೊಡುತ್ತಿದ್ದರು. ಅವರು ರಾಷ್ಟ್ರದ ಅಭಿವೃದ್ಧಿ ವಿಷಯದಲ್ಲಿ ನೀಡಿದ ಹಲವಾರು ಸಲಹೆಗಳನ್ನು ಸರಕಾರಗಳು ಜಾರಿಗೆ ತಂದಿವೆ. ಅವರ ಸಲಹೆಗಳು ಎಷ್ಟು ದೂರದೃಷ್ಟಿಯುಳ್ಳವುಗಳಾಗಿದ್ದವೆಂದರೆ ಈಗಲೂ ಸರಕಾರ ಅವರ ಕೆಲವು ಸಲಹೆಗಳನ್ನು ಜಾರಿಗೆ ತರುತ್ತಲೇ ಇರುವುದು ಇದಕ್ಕೆ ಸಾಕ್ಷಿಯಾಗಿದೆ. ಅವರ ಕೆಲವು ಸಲಹೆಗಳು ಕೆಳಕಂಡಂತಿವೆ.
1. ಅಭಿವೃದ್ಧಿ ಕಾರ್ಯಕ್ರಮಗಳು ಕೇವಲ ಮಾತುಗಳಿಗೆ ಮಾತ್ರ ಸೀಮಿತವಾಗ ಬಾರದು. ಅದನ್ನು ಕಾರ್ಯಗತಗೊಳಿಸಬೇಕು. ಎಂದರೆ ಅಗತ್ಯವಿರುವ ಆದಾಯದ ಮಾರ್ಗಗಳನ್ನು ಹುಡಕಬೇಕು. ಅಗತ್ಯವಿರುವ ಹಣಕಾಸಿನ ಮಾರ್ಗವನ್ನು ರೂಪಿಸಿ ಜನರಿಗೆ ಮನವರಿಕೆ ಮಾಡದಿದ್ದರೆ ಯಾರೂ ಸರಕಾರ ಜಾರಿಗೆ ತರುವ ಕಾರ್ಯಕ್ರಮಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.
2. ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಂದಾಜು ಮಾಡಿರುವ ಹಣದ ಮೊತ್ತವು ಸಣ್ಣದಲ್ಲದಿದ್ದರೂ ಅಷ್ಟು ಹಣದ ವ್ಯವಸ್ಥೆ ಮಾಡುವುದು ಅಸಾಧ್ಯವೇನೂ ಅಲ್ಲ. ಈ ದೇಶದ ಅಭಿವೃದ್ಧಿಗಾಗಿ ಹಣದ ವ್ಯವಸ್ಥೆ ಮಾಡಲು ಅವರು ಸೂಚಿಸಿದ ಮಾರ್ಗಗಳು ಇಂದಿಗೂ ಮತ್ತು ಭವಿಷ್ಯದ ದಿನಗಳಿಗೂ ಸೂಕ್ತವಾಗಿವೆ. ಅವರು ನೀಡಿದ ಪ್ರಮುಖ ಸಲಹೆಗಳೆಂದರೆ,
ಅ. ಸೇನೆಯ ಮೇಲೆ ಮಾಡುತ್ತಿರುವ ವೆಚ್ಚವನ್ನು ಕಡಿಮೆ ಮಾಡಬೇಕು.
ಆ. ಉಪ್ಪಿನ ಮೇಲಿನ ತೆರಿಗೆಯನ್ನು ಮರಳಿ ಜಾರಿಗೆ ತರಬೇಕು.
ಇ. ಪಾನ ನಿಷೇಧವನ್ನು ರದ್ದುಗೊಳಿಸಿ ಮಾದಕ ಪಾನೀಯಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸಬೇಕು.
ಈ. ಜೀವವಿಮೆಯನ್ನು ರಾಷ್ಟ್ರೀಕರಣಗೊಳಿಸಬೇಕು.
* ಭಾರತದ ಒಟ್ಟು ವಾರ್ಷಿಕ ಆದಾಯದ ಶೇ.50ಕ್ಕಿಂತಲೂ ಹೆಚ್ಚಿನ ಹಣವನ್ನು ಸೇನೆಗಾಗಿ ವ್ಯಯ ಮಾಡಲಾಗುತ್ತಿದೆ. ಭಾರತದಲ್ಲಿ ಅಸಂಖ್ಯ ಜನರು ಹಸಿವೆಯಿಂದ ದಿನನಿತ್ಯ ಸಾಯುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಇದು ಊಹಿಸಿಕೊಳ್ಳಲಾಗದಷ್ಟು ದೊಡ್ಡ ವೆಚ್ಚ. ವಿದೇಶಾಂಗ ನೀತಿಯಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ತರಬೇಕಾಗಿದೆ. ಇದರಿಂದ ಭಾರತಕ್ಕೆ ಶತ್ರುಗಳ ಭೀತಿಯೂ ಕಡಿಮೆ ಆಗುತ್ತದೆ. ಇದರಿಂದ ಸೇನೆಯ ಮೇಲೆ ಮಾಡುತ್ತಿರುವ ವೆಚ್ಚವನ್ನು ಕಡಿಮೆ ಮಾಡಬಹುದು.
* ಪಾನ ನಿಷೇಧವು ಹುಚ್ಚುತನದ ಪರಮಾವಧಿ. ಇದನ್ನು ಈ ಕೂಡಲೇ ರದ್ದು ಮಾಡಬೇಕು. ಇದರಿಂದ ಆಗಿರುವ ಮತ್ತು ಆಗುವ ಒಳಿತಿಗಿಂತ ಕೆಡುಕೇ ಹೆಚ್ಚು. ಮಧ್ಯ ತಯಾರಿಕೆಯು ಇದೀಗ ಗೃಹ ಕೈಗಾರಿಕೆಯೇ ಆಗಿ ಹೋಗಿದೆ. ಹಾಗಾಗಿ ಕುಡುಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪಾನ ನಿಷೇಧವು ಒಟ್ಟಾರೆಯಾಗಿ ನಿರುಪಯುಕ್ತವಾಗಿದೆ. ಮದ್ಯಪಾನ ಮಾಡುವವರ ಸುಧಾರಣೆಗಾಗಿ ಸಾರ್ವಜನಿಕ ಹಣವನ್ನು ಏಕೆ ದುಂದುವೆಚ್ಚ ಮಾಡಬೇಕು? ಇದರ ಬದಲು ಶಿಕ್ಷಣ, ಮನೆಗಳ ನಿರ್ಮಾಣ ಹಾಗೂ ಆರೋಗ್ಯದ ಸಮಸ್ಯೆಗಳಿಗಾಗಿ ಹಣ ವ್ಯಯಿಸುವುದು ಸೂಕ್ತವಲ್ಲವೆ? ಯಾರಿಗೆ ನಾವು ಹೆಚ್ಚಿನ ಆದ್ಯತೆ ನೀಡಬೇಕು, ಕುಡುಕರಿಗೋ ಅಥವಾ ಹಸಿದಿರುವವರಿಗೋ? ಆದ್ದರಿಂದ ಪಾನ ನಿಷೇಧವನ್ನು ರದ್ದುಗೊಳಿಸಬೇಕು ಮತ್ತು ಇದರಿಂದ ಬರುವ ಅಬಕಾರಿ ಸುಂಕವನ್ನು ಜನರ ಕಲ್ಯಾಣಕ್ಕಾಗಿ ವ್ಯಯ ಮಾಡಬೇಕು.
* ವಿಮೆಯನ್ನು ರಾಷ್ಟ್ರೀಕರಣಗೊಳಿಸುವುದು ಅತ್ಯಂತ ಲಾಭದಾಯಕ, ಅಂಕಿ ಅಂಶಗಳ ಪ್ರಕಾರ ಜೀವ ವಿಮಾ ಸಂಸ್ಥೆಗಳಿಗೆ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಉಳಿಯುತ್ತದೆ. ಬ್ಯಾಂಕಿನ ಬಂಡವಾಳದಂತೆ ಇವು ಅಲ್ಪಾವಧಿ ಠೇವಣಿಗಳಲ್ಲ, ಆದ್ದರಿಂದ ಈ ಹಣದಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು.
* ಕೇವಲ ವಿಮೆಯನ್ನು ರಾಷ್ಟ್ರೀಕರಣ ಮಾಡುವ ಜೊತೆಗೆ ರಾಜ್ಯ ಸರಕಾರ, ಕೇಂದ್ರ ಸರಕಾರ ಮತ್ತು ಖಾಸಗಿ ನೌಕರರಿಗೆ ವಿಮೆಯನ್ನು ಕಡ್ಡಾಯ ಮಾಡಬೇಕು. ಹೀಗೆ ಮಾಡುವುದರಿಂದ ನೌಕರರಿಗೆ ಭದ್ರತೆಯೂ ದೊರೆಯುತ್ತದೆ. ಸರಕಾರಕ್ಕೆ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಹಣವೂ ದೊರೆಯುತ್ತದೆ.
ಅಂಬೇಡ್ಕರ್ ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಕೋನವು ವಿಶ್ವಸಂಸ್ಥೆಯ 2030ರ ಅಭಿವೃದ್ಧಿ ಕಾರ್ಯಸೂಚಿಯ ಮಹತ್ವಾಕಾಂಕ್ಷೆಗಳನ್ನು ಪ್ರತಿಧ್ವನಿಸುತ್ತದೆ. ಎಂದರೆ ಅಂಬೇಡ್ಕರ್ ಅವರ ಚಿಂತನೆಗಳು ಹಿಂದೆ-ಇಂದು ಮತ್ತು ಮುಂದೆಯೂ ಕೂಡ ಮೌಲ್ಯಯುತವಾದುವುಗಳಾಗಿವೆ. ಸುಸ್ಥಿರ ಅಭಿವೃದ್ಧಿಯು ಅಂಬೇಡ್ಕರ್ ಅವರ ಸಮತಾವಾದಿ ನೀತಿಯ ಕೇಂದ್ರ ಬಿಂದುವಾಗಿದೆ. ಏರುತ್ತಿರುವ ಮತ್ತು ನಿರಂತರ ಅಸಮಾನತೆಗಳು ರಾಷ್ಟ್ರಗಳು ಮತ್ತು ಜನರ ಆರ್ಥಿಕ ಮತ್ತು ಸಾಮಾಜಿಕ ಯೋಗಕ್ಷೇಮಕ್ಕೆ ಮೂಲಭೂತ ಸವಾಲುಗಳನ್ನು ಒಡ್ಡುತ್ತವೆ ಎಂದು ಅವರು ಅರ್ಥ ಮಾಡಿಕೊಂಡಿದ್ದರು. ಆರ್ಥಿಕ ಸ್ಥಿರತೆಗೆ ಕೃಷಿ ಮತ್ತು ಉದ್ಯಮದ ಸಮತೋಲಿತ ಬೆಳವಣಿಗೆ ಅತ್ಯಂತ ಅವಶ್ಯಕ. ಸಾಮಾಜಿಕ ಮೂಲಸೌಕರ್ಯ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಅವಶ್ಯಕ ಎಂದು ಅಂಬೇಡ್ಕರ್ ನಂಬಿದ್ದರು. ಅವರು ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಗೆ ಹಚ್ಚು ಪ್ರಾಮುಖ್ಯತೆ ನೀಡಿದರು. ಕೃಷಿಯನ್ನು ಒಂದು ಉದ್ಯಮ ಎಂದು ಪರಿಗಣಿಸಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು.
ಜಾತಿ ವ್ಯವಸ್ಥೆಯು ಆರ್ಥಿಕ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುತ್ತದೆ ಎಂದು ಪ್ರತಿಪಾದಿಸಿದ ಅವರು ಖಾಸಗೀಕರಣವು ವಿತ್ತೀಯ ನಿರ್ವಹಣೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿದರು. ಆದರೆ ಇಂದು ಅಂಬೇಡ್ಕರ್‌ರವರ ರಾಷ್ಟ್ರೀಕರಣದ ಸಿದ್ಧಾಂತವನ್ನು ಬದಿಗೊತ್ತಿ ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ರಾಷ್ಟ್ರದ ಹಿತದೃಷ್ಟಿಯಿಂದ ಅಪಾಯಕಾರಿ ನಿಲುವಾಗಿದೆ. ಖಾಸಗೀಕರಣದಿಂದ ಆರ್ಥಿಕ ಅಸಮಾನತೆಗಳು ಹೆಚ್ಚಾಗಲಿವೆ. ಭಾರತದಂತಹ ದೇಶಕ್ಕೆ ಖಾಸಗೀಕರಣದಿಂದ ಯಾವುದೇ ಪ್ರಯೋಜನವಾಗಲಾರದು. ಸಮಾನತೆಯ ಸಮಾಜವನ್ನು ರೂಪಿಸಲು ಎಲ್ಲರಿಗೂ ಕಡ್ಡಾಯ ಶಿಕ್ಷಣದ ವ್ಯವಸ್ಥೆ ಇರಬೇಕು ಎಂಬುದು ಬಾಬಾಸಾಹೇಬರ ನಿಲುವಾಗಿತ್ತು. ಸಾಮಾಜಿಕ ಮತ್ತು ರಾಜಕೀಯ ಅಸ್ಥಿರತೆ ಮತ್ತು ಆರ್ಥಿಕತೆಯ ನಡುವಿನ ಸಂಬಂಧದ ಕುರಿತು ಹಲವು ಉತ್ತಮವಾದ ಸಲಹೆಗಳನ್ನು ನೀಡಿದ ಅವರು ಭಾರತದ ಅಭಿವೃದ್ಧಿ ಯೋಜನೆಗಳ ಮಹತ್ವವನ್ನು ಕುರಿತು ಅಧ್ಯಯನ ಮಾಡಿದ ಪ್ರಥಮ ಭಾರತೀಯ ಕೂಡ ಆಗಿದ್ದಾರೆ.
ಸಾರ್ವಜನಿಕ ಹಣಕಾಸು, ತೆರಿಗೆ ಮತ್ತು ಬ್ರಿಟಿಷ್ ಭಾರತದ ವಿತ್ತೀಯ ಮಾನದಂಡಗಳು ಮತ್ತು ಸ್ಥಳೀಯ ಹಾಗೂ ಆಂತರಿಕ ತೆರಿಗೆಗಳ ದುಷ್ಪರಿಣಾಮಗಳನ್ನು ಅಂಬೇಡ್ಕರ್ ಬಹಳ ಸೂಕ್ಷ್ಮವಾಗಿ ವಿವರಿಸಿದರು. ಯಾವುದೇ ರಾಷ್ಟ್ರದ ಅಭಿವೃದ್ಧಿಯಲ್ಲಿ, ಅಲ್ಲಿನ ಜನರ ಅಭಿವೃದ್ಧಿ ಯೋಜನೆಗಳಲ್ಲಿ ಭಾಗವಹಿಸುವುದು ಅತ್ಯಂತ ಮುಖ್ಯವಾದ ವಿಷಯ. ಜನರ ಗೈರು ಹಾಜರಿಯಲ್ಲಿ ಯಾವುದೇ ಯೋಜನೆಗಳು ಯಶಸ್ವಿಯಾಗುವುದಿಲ್ಲ. ಇದನ್ನು ಅಂಬೇಡ್ಕರ್ ಅವರು ಅಂದೇ ಹೇಳಿದ್ದರು. ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಭಾಗವಹಿಸುವಿಕೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅದ್ದರಿಂದ ಪ್ರತಿಯೊಬ್ಬರನ್ನು ಆರ್ಥಿಕ ಪಾಲ್ಗೊಳ್ಳುವಿಕೆಯಲ್ಲಿ ಒಳಪಡಿಸಬೇಕು ಎಂದು ಶಿಫಾರಸು ಮಾಡಿದ್ದರು.
ಸಾರ್ವಜನಿಕ ವೆಚ್ಚದಲ್ಲಿ ಆರ್ಥಿಕತೆ ಎಂದರೆ ಹಣದ ಬುದ್ದಿವಂತ ಬಳಕೆಯಾಗಿದೆ. ಸಾರ್ವಜನಿಕ ನಿಧಿಗಳ ಉಸ್ತುವಾರಿ ಜವಾಬ್ದಾರಿಯನ್ನು ಹೊಂದಿರುವವರು ಪರ್ಯಾಯ ವಿಧಾನಗಳ ಕುರಿತು ದೃಷ್ಟಿ ಹರಿಸಬೇಕು. ಸೋರಿಕೆಗಳ ಕುರಿತು ಗಮನ ನೀಡಬೇಕು. ಖರ್ಚು ನಿರ್ಧಾರಗಳು ನಿಗದಿತ ಉದ್ದೇಶಗಳು ಮತ್ತು ಲಭ್ಯವಿರುವ ಸಂಪನ್ಮೂಲಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿರಬೇಕು. ಯೋಜನೆಗಳ ಅನುಷ್ಠಾನದಲ್ಲಿ ಆರ್ಥಿಕತೆ, ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಖಾತರಿಪಡಿಸಿಕೊಳ್ಳುವ ಜೊತೆಗೆ ಭ್ರಷ್ಟಾಚಾರ ಮತ್ತು ರಾಜಕೀಯ ಒತ್ತಡದಿಂದಾಗಿ ಅಂತಿಮ ಫಲಾನುಭವಿಗಳಿಗೆ ಸಂಪೂರ್ಣವಾಗಿ ತಲುಪುವುದಿಲ್ಲ ಎಂಬುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು.
ವಿಮೆಯನ್ನು ರಾಷ್ಟ್ರೀಕರಣಗೊಳಿಸುವುದು ಅತ್ಯಂತ ಲಾಭದಾಯಕ, ಅಂಕಿ-ಅಂಶಗಳ ಪ್ರಕಾರ ಜೀವ ವಿಮಾ ಸಂಸ್ಥೆಗಳಿಗೆ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಹಣ ಉಳಿಯುತ್ತದೆ. ಬ್ಯಾಂಕಿನ ಬಂಡವಾಳದಂತೆ ಇವು ಅಲ್ಪಾವಧಿ ಠೇವಣಿಗಳಲ್ಲ, ಆದ್ದರಿಂದ ಈ ಹಣದಿಂದ ಅಭಿವೃದ್ಧಿ ಕಾರ್ಗಳನ್ನು ಕೈಗೊಳ್ಳಬಹುದು ಎಂದು ಅಂಬೇಡ್ಕರ್ ಅವರು ಸೂಚಿಸಿದ್ದರು. ಆದ್ದರಿಂದಲೇ ವಿಮೆಯನ್ನು ರಾಷ್ಟ್ರೀಕರಣ ಮಾಡಲಾಗಿತ್ತು. ಆದರೆ ಇಂದು ವಿಮೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಸಮಾಜದ ಅರ್ಥ ವ್ಯವಸ್ಥೆಯ ಸಮತೋಲನವನ್ನು ಕಾಪಾಡಿಕೊಳ್ಳುವುದು ಸರಕಾರಗಳ ಜವಾಬ್ದಾರಿಯಾಗಿದೆ. ಮತ್ತು ಅದರ ಹೊಣೆಯನ್ನು ಮಾರುಕಟ್ಟೆ ನೀತಿ ನಿಯಮಗಳಿಗೆ, ಖಾಸಗಿ ಬಂಡವಾಳಶಾಹಿಗಳಿಗೆ ವರ್ಗಾಯಿಸಬಾರದು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ದೊಡ್ಡ ಮತ್ತು ಅತಿ ದೊಡ್ಡ ಕೈಗಾರಿಕೆಗಳು ಸರಕಾರದ ಒಡೆತನದಲ್ಲಿರಬೇಕು. ಗೃಹ ಕೈಗಾರಿಕೆಗಳು ಮತ್ತು ಸಣ್ಣ ಕೈಗಾರಿಕೆಗಳು ಮಾತ್ರ ಖಾಸಗಿ ಒಡೆತನದಲ್ಲಿರಬೇಕು. ಜೀವ ವಿಮೆ, ಸಾರಿಗೆ ವ್ಯವಸ್ಥೆಗಳು ರಾಷ್ಟ್ರೀಕರಣವಾಗಬೇಕು. ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳುವಲ್ಲಿ ಧಕ್ಕೆ ಬಂದರೆ ಅದನ್ನು ಪ್ರತಿಭಟಿಸಲು ಮುಷ್ಕರಗಳನ್ನು ನಡೆಸಲು ಅವಕಾಶಗಳಿರಬೇಕು ಇವುಗಳು ಅಂಬೇಡ್ಕರ್ ಅವರ ಕೈಗಾರಿಕಾ ಮತ್ತು ರಾಷ್ಟ್ರೀಕರಣ ಕುರಿತ ಚಿಂತನೆಗಳಾಗಿದ್ದವು.
ಭಾರತದಲ್ಲಿ ಹಣಕಾಸು ಆಯೋಗದ ರಚನೆಗೆ ಅಂಬೇಡ್ಕರ್ ಅವರೇ ಮೂಲ ಕಾರಣಕರ್ತರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯಗಳು ತಮ್ಮ ಆರ್ಥಿಕ ಮಟ್ಟವನ್ನು ಹಂತ ಹಂತವಾಗಿ ಹೆಚ್ಚಿಸಿಕೊಳ್ಳಲು ಮತ್ತು ಅವರ ಹಿತಾಸಕ್ತಿಗೆ ಧಕ್ಕೆ ಬರದಂತೆ ಫೆಡರಲ್ ಹಣಕಾಸು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಅವರು ಮಹತ್ವದ ಕೊಡುಗೆಗಳನ್ನು ನೀಡಿದರು. ಡಾ.ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ತನ್ನ ಮೇಲೆ ಪ್ರಭಾವ ಬೀರಿವೆ ಎನ್ನುವುದನ್ನು ಕಾರ್ಮಿಕ ಸಿದ್ದಾಂತದ ಜನಕ ನೊಬೆಲ್ ಪ್ರಶಸ್ತಿ ವಿಜೇತ ಆರ್ಥರ್ ಲೂಯಿಸ್ ಪ್ರಸ್ತಾಪಿಸಿದ್ದಾರೆ. ಕಡಿಮೆ ಕೂಲಿಗೆ ದುಡಿಯುವ ಕೃಷಿ ಕಾರ್ಮಿಕರನ್ನು ಉದ್ದಿಮೆಗಳಿಗೆ ವರ್ಗಾವಣೆ ಮಾಡಿದರೆ ಕೃಷಿ ಮತ್ತು ಕೈಗಾರಿಕೆ ಎರಡೂ ಕ್ಷೇತ್ರಗಳಿಗೂ ಲಾಭ ಎನ್ನುವ ವಾದವನ್ನು ಲೂಯಿಸ್ ಸಮರ್ಥವಾಗಿ ಮಂಡಿಸಿದರು.
ಕೃಷಿ ಸಮಸ್ಯೆಗೆ ಕೃಷಿಯಲ್ಲಿ ಉತ್ತರವಿಲ್ಲ, ಅದು ಸಂಪೂರ್ಣ ಅರ್ಥ ವ್ಯವಸ್ಥೆಯ ಸುಧಾರಣೆಯಲ್ಲಿದೆ. ಇದು ವಿಚಿತ್ರವಾಗಿ ಕಂಡರೂ ಕೃಷಿಯ ಸಮಸ್ಯೆಗಳಿಗೆ ಉತ್ತರ ಕೈಗಾರಿಕೀಕರಣದಲ್ಲಿದೆ ಎಂಬುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು. ರೈತರು ಹಾಗೂ ಕೃಷಿ ಕಾರ್ಮಿಕರು ಹೊಂದಿರುವ ಕೌಶಲ್ಯ ಎಲ್ಲಕ್ಕಿಂತ ಮುಖ್ಯ. ಇದು ಅವರಿಗೆ ಆಸಕ್ತಿ ಇದ್ದರೆ ಮಾತ್ರ ದೊರೆಯುತ್ತದೆ. ಕೈಗಾರಿಕೆಗಳು ಹೆಚ್ಚಬೇಕು. ಭಾರತವು ಬಡತನದ ಹಣೆಪಟ್ಟಿಯಿಂದ ಹೊರಬಂದು ಅಭಿವೃದ್ಧಿ ಪಥದಲ್ಲಿ ಸಾಗಬೇಕೆಂದರೆ ಹೆಚ್ಚು ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂಬುದು ಅವರ ಅಭಿಮತವಾಗಿತ್ತು. ಇದರಿಂದ ಉದ್ಯೋಗ ಸೃಷ್ಟಿ ಮಾಡಿ ಬಡತನ ಹೋಗಲಾಡಿಸಬಹುದು. ತಂತ್ರಜ್ಞಾನ ಮತ್ತು ಉದ್ದಿಮೆಗಳ ಆಧಾರದ ಮೇಲೆ ನವಭಾರತ ಉದಯಿಸಬೇಕು ಎಂಬುದು ಅವರ ಆಶಯವಾಗಿತ್ತು.
ಡಾ.ಬಿ.ಆರ್.ಅಂಬೇಡ್ಕರ್ ಅವರು ರಾಷ್ಟ್ರೀಯತೆ ಮತ್ತು ರಾಷ್ಟ್ರದ ಸಮಗ್ರತೆ ವಿಷಯದಲ್ಲಿ ಸ್ಪಷ್ಟವಾದ ನಿಲುವುಗಳನ್ನು ಹೊಂದಿದ್ದರು. ಅವರ ಪ್ರಕಾರ ಒಟ್ಟಾಗಿ ಬದುಕಬೇಕೆಂಬ ರಾಜಕೀಯ ಬಯಕೆ ಇದ್ದಾಗ ಮಾತ್ರ ಒಂದು ರಾಷ್ಟ್ರೀಯತೆ ಜನ್ಮ ತಾಳುತ್ತದೆ ಮತ್ತು ಅಂತಹ ಭಾವನೆ ಮೂಡಲು ಹಲವು ಬಗೆಯ ಏಕರೂಪತೆಗಳು ಅಗತ್ಯವಿದ್ದರೂ ರಾಜಕೀಯ ಬಯಕೆ ಅತ್ಯಗತ್ಯ. ಎರಡು ಭಿನ್ನ ರಾಷ್ಟ್ರೀಯತೆಗಳು ಒಟ್ಟಾಗಿ ಬದುಕಬೇಕೆಂದರೆ ರಾಜಕೀಯ ಸಮಾನಾಧಿಕಾರ ಹಂಚಿಕೊಳ್ಳುವ ವ್ಯವಸ್ಥೆ ಇರಬೇಕು ಮತ್ತು ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರವು ಯಾವಾಗಲೂ ಒಂದೇ ರೀತಿಯಲ್ಲಿ ಚಲಾವಣೆಯಗಬೇಕಿಲ್ಲವೆಂಬ ಎಚ್ಚರಿಕೆಯನ್ನು ನೀಡಿದರು.
ಡಾ.ಬಿ.ಆರ್ ಅಂಬೇಡ್ಕರ್ ಅವರ ಅರ್ಥಶಾಸ್ತ್ರದ ದೃಷ್ಟಿಕೋನಗಳು ರಾಜಕೀಯದ ಬಗೆಗಿನ ಅವರ ಅಭಿಪ್ರಾಯಗಳಷ್ಟೇ ಸಂಕೀರ್ಣವಾದವು ಮತ್ತು ಒಬ್ಬರು ಇನ್ನೊಂದನ್ನು ರೂಪಿಸುವ ಸಾಧ್ಯತೆಯಿದೆ. ಭಾರತದ ಕೃಷಿ ಸಮಸ್ಯೆಗಳ ಬಗ್ಗೆ ಅವರ ಅಭಿಪ್ರಾಯಗಳು ಸೂಚಿಸುವಂತೆ ಅವರು ಒಂದೆಡೆ ಕೈಗಾರಿಕೀಕರಣವನ್ನು ಪ್ರತಿಪಾದಿಸಿದರೆ ಮತ್ತೊಂದೆಡೆ ಸಹಕಾರಿ ಕೃಷಿಯನ್ನು ಪ್ರೋತ್ಸಾಹಿಸಿದ್ದರು. ಕೈಗಾರಿಕೀಕರಣ ಮತ್ತು ನಗರೀಕರಣದ ಪರವಾಗಿ ಅಂಬೇಡ್ಕರ್ ಮಾತನಾಡಿದ್ದರೂ ಬಂಡವಾಳಶಾಹಿಯ ದುಷ್ಪರಿಣಾಮಗಳ ಬಗ್ಗೆಯೂ ಎಚ್ಚರಿಸಿದರು. ಅನಿಯಂತ್ರಿತ ಬಂಡವಾಳಶಾಹಿ ದಬ್ಬಾಳಿಕೆ ಮತ್ತು ಶೋಷಣೆಯ ಶಕ್ತಿಯಾಗಿ ಬದಲಾಗಬಹುದು ಎಂದು ವಾದಿಸಿದರು. ಅಂಬೇಡ್ಕರ್ ಅವರು ಆರ್ಥಿಕ ಶೋಷಣೆಯ ವಿರುದ್ಧ ಪರಿಹಾರೋಪಾಯಗಳ ಬಗ್ಗೆ ಒಂದು ವಿಭಾಗವನ್ನು ಸೇರಿಸಿದ್ದಾರೆ. ಇದು ಇತರ ವಿಷಯಗಳ ಜೊತೆಗೆ ಪ್ರಮುಖ ಕೈಗಾರಿಕೆಗಳನ್ನು ರಾಜ್ಯದ ಒಡೆತನದಲ್ಲಿಟ್ಟುಕೊಳ್ಳಬೇಕು ಮತ್ತು ಕೃಷಿ ರಾಜ್ಯದ ಹಿಡಿತದಲ್ಲಿರಬೇಕು ಎಂದು ಪ್ರಸ್ತಾಪಿಸಿದ್ದರು.
ಒಟ್ಟಿನಲ್ಲಿ ಅಂಬೇಡ್ಕರ್ ಅವರ ಚಿಂತನೆಗಳು ಸಾರ್ವಕಾಲಿಕವಾದುವುಗಳಾಗಿವೆ.