ನಾಳೆ ಮತ್ತೆ ನಾಟಕ ಮಾಡಿದರೆ ನ್ಯಾಯಾಂಗ ನಿಂದನೆ ಕೇಸ್: ಹಿಜಾಬ್ಧಾರಿ ವಿದ್ಯಾರ್ಥಿನಿಯರಿಗೆ ರಘುಪತಿ ಭಟ್ ಎಚ್ಚರಿಕೆ
ಉಡುಪಿ, ಎ.22: ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆಯದೆ ಹೋಗುವ ಮೂಲಕ ನಾಟಕ ಮಾಡಿದ್ದಾರೆ. ಇನ್ನು ನಾವೇ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ. ನ್ಯಾಯಾಂಗ ನಿಂದನೆಯ ಕೇಸು ದಾಖಲಿಸುತ್ತೇವೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವರಿಗೆ ಗುರುವಾರ ಸಂಜೆಯವರೆಗೆ ಫೋನ್ ಮಾಡಿ ಹಾಲ್ ಟಿಕೆಟ್ ಪಡೆಯಲು ಹೇಳಿದ್ದೆವು. ಬೆಳಗಿನವರೆಗೂ ಹಾಲ್ ಟಿಕೆಟ್ ಪಡೆಯಲು ಬರಲಿಲ್ಲ. ಇಂದು ಬೆಳಗ್ಗೆ 9:30ಕ್ಕೆ ಕಾಲೇಜಿಗೆ ಬಂದಿದ್ದಾರೆ. ಹಿಜಾಬ್ ತೆಗೆದಿಟ್ಟು ಹೋದರೆ ಮಾತ್ರ ಹಾಲ್ ಟಿಕೆಟ್ ಕೊಡುವುದಾಗಿ ಪ್ರಾಂಶುಪಾಲರು ಹೇಳಿದ್ದರು. ಅದರಂತೆ ಅವರು ಹಿಜಾಬ್ ತೆಗೆದು ಹಾಲ್ ಟಿಕೆಟ್ ಪಡದುಕೊಂಡು ಹೋಗಿದ್ದಾರೆ ಎಂದರು.
ಆದರೆ ಅವರು ಪರೀಕ್ಷಾ ಕೇಂದ್ರಕ್ಕೆ ಹೋಗಿ ನಾಟಕ ಮಾಡಿದ್ದಾರೆ. ನಾಳೆ ಮತ್ತೆ ನಾಟಕ ಮಾಡಿದರೆ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲು ಸಂಬಂಧಪಟ್ಟ ಇಲಾಖೆಯವರಿಗೆ ಹೇಳಿದ್ದೇನೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆ ಮಾತನಾಡಿದ್ದೇನೆ. ನಾಳೆ ಮತ್ತೆ ನಾಟಕ ಮಾಡಿದರೆ ಸಹಿಸು ವುದಿಲ್ಲ. ಇವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ಮಕ್ಕಳ ಮೇಲೆ ಶಿಸ್ತು ಕ್ರಮ, ಕ್ರಿಮಿನಲ್ ಕೇಸ್ ಹಾಕಬೇಕು. ತರಗತಿ ಹಾಜರಾಗದ ಇವರು ಏನು ಪರೀಕ್ಷೆ ಬರೆಯುತ್ತಾರೆ? ಹಿಜಾಬ್ ಧರಿಸಲು ಬಿಟ್ಟರೂ ಪರೀಕ್ಷೆ ಬರೆಯುವುದಿಲ್ಲ. ನಮ್ಮ ಕಾಲೇಜಿನ ವಾತಾವರಣ ಕೆಡಿಸುವುದು ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದೇ ಇವರ ಉದ್ದೇಶ ಎಂದು ಅವರು ಆರೋಪಿಸಿದರು.
ಇವರಿಂದ ಬೇರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಪೊಲೀಸ್, ಮೀಡಿಯಾ ಎದುರು ಇತರ ಮಕ್ಕಳು ಗಾಬರಿಯಾಗಿದ್ದಾರೆ. ಈ ಮಕ್ಕಳ ಬಗ್ಗೆ ಯಾವುದೇ ಸಹಾನುಭೂತಿ ಇಲ್ಲ. ಮಾಧ್ಯಮದವರ ಗಮನಸೆಳೆಯಲು ಹೀಗೆ ಎಲ್ಲ ಮಾಡುತ್ತಿದ್ದಾರೆ. ಇದೊಂದು ಷಡ್ಯಂತ್ರ ಅನ್ನುವುದು ಸಾಬೀತಾಗಿದೆ. ಇವರು ಪುಂಡರು ದಾರಿಯಲ್ಲಿ ಬಿಟ್ಟವರು ಇವರಿಗೆ ಪರೀಕ್ಷೆ ಬೇಡ. ಈವರೆಗೂ ಹೆಣ್ಣು ಮಕ್ಕಳು ಮುಗ್ಧರು ಎಂದು ಭಾವಿಸಿದ್ದೇವು ಎಂದು ಅವರು ಟೀಕಿಸಿದರು.