ಸಿಕ್ಕಿ ಬಿದ್ದ ಜಿಂಕೆಯ ಆಕ್ರಂದನ: ‘ಬಿಸಿಲಿನ ಷಡ್ಯಂತ್ರದ ವಿರುದ್ಧ’ ಕವನ ಸಂಕಲನ

Update: 2022-04-23 05:40 GMT

ತನ್ನ ರೂಪ, ಭಾಷೆ, ಲಯ ಮತ್ತು ಸ್ವರೂಪವನ್ನು ಒಳಗೊಂಡು ಒಂದು ಕಾಲಕ್ಕೆ ಇಡೀ ಕನ್ನಡ ಸಾಹಿತ್ಯ ಲೋಕ ನವ್ಯ ಸಾಹಿತ್ಯದಿಂದಾಗಿ ಜಡಗೊಂಡಿದ್ದ ಸಂದರ್ಭದಲ್ಲಿ ಮರಾಠಿ ದಲಿತ ಸಾಹಿತ್ಯವು ಕನ್ನಡ ಸಾಹಿತ್ಯ ಜಗತ್ತಿಗೆ ಸಂಜೀವಿನಿಯಂತೆ ಒದಗಿ ಹೊಸ ಅನುಭವ ಲೋಕ, ಹೊಸ ಸಾಹಿತ್ಯ, ಲಯ, ವಸ್ತು, ಆಶಯ, ಸ್ವರೂಪನ್ನು ತಂದುಕೊಟ್ಟಿದ್ದು ಇತಿಹಾಸ. ಹೀಗೆ ಎಂಬತ್ತರ ದಶಕದಿಂದಲೂ ಮರಾಠಿ ಸಾಹಿತ್ಯ ಸಂಬಂಧ ಕನ್ನಡದ ಅರಿವನ್ನು ವಿಸ್ತರಿಸುತ್ತಾ ಬಂದಿದೆ. ಈ ಅರಿವಿನ ವಿಸ್ತರಣೆಯಾಗಿ ಕಳೆದ ವಾರ ಉಡುಪಿಯಲ್ಲಿ ಬಿಡುಗಡೆಗೊಂಡ ಕವನ ಸಂಕಲನ ‘ಬಿಸಿಲಿನ ಷಡ್ಯಂತ್ರದ ವಿರುದ್ಧ’ವನ್ನು ನಾವು ನೋಡಬಹುದು.

 ‘ಬಿಸಿಲಿನ ಷಡ್ಯಂತ್ರದ ವಿರುದ್ಧ’ ಕವನ ಸಂಕಲನದ ಕವಿ ನಾಗರಾಜ್ ಮಂಜುಳೆ ಮೂಲತಃ ಮರಾಠಿ ಕವಿ, ಜನಪ್ರಿಯ ಸಿನೆಮಾ ನಿರ್ದೇಶಕರು. ಈ ಸಂಕಲನದ ಕವಿತೆಗಳನ್ನು ಮರಾಠಿಯಿಂದ ಕನ್ನಡಕ್ಕೆ ಸಂವರ್ತ ಸಾಹಿಲ್ ತಂದಿದ್ದಾರೆ. ಈ ಸಂಕಲನದಲ್ಲಿ ಒಟ್ಟು ಐವತ್ತೈದು ಕವಿತೆಗಳಿವೆ.

   ನಾಗರಾಜ್ ಮಂಜುಳೆ ಅವರ ಕವನ ಸಂಕಲನ ಬಿಸಿಲಿನ ಷಡ್ಯಂತ್ರದ ವಿರುದ್ಧ( ಕನ್ನಡಕ್ಕೆ - ಸಂವರ್ತ ಸಾಹಿಲ್) ಕವಿತೆಗಳನ್ನು ಓದುತ್ತಾ ಹೋದ ಹಾಗೆ ಅದು ಗಾಢಪ್ರೇಮಿಯೊಬ್ಬನ ಪ್ರೇಮದ ಗೂಡಿಗೆ ಸಿಡಿಲೊಂದು ಹೊಡೆದು ವಿಹ್ವಲನಾಗಿ ತನಗೆ ತಾನೆ ಹಾಡಿಕೊಳ್ಳುವ ಕಟುಮಧುರ ವಿಷಾದದ ಭಾವಗೀತೆಗಳಂತೆ ಕಾಣುತ್ತವೆ.

  

  ಹಾಗೆಯೇ ಕವಿಯೊಬ್ಬ/ ಕಲಾವಿದನೊಬ್ಬ ತನ್ನದೇ ಕಾವ್ಯದ/ ಕಲೆಯ ಲೋಕವೊಂದನ್ನು ಕಟ್ಟಲು ಬೇಕಾದ ಪರಿಕರಗಳನ್ನು, ಮ್ಯಾನಿಫೆಸ್ಟೊ ವನ್ನು ಜೋಡಿಸಿಕೊಳ್ಳುವ ಉಮೇದಿನಲ್ಲಿ ಇದ್ದಂತೆ ಕಾಣುತ್ತದೆ. ಮತ್ತೊಂದು: ಸತ್ಯಾತೀತ ಕಾಲದ ರಾಜಕೀಯ ಮತ್ತು ಸಾಮಾಜಿಕ ವಾತಾವರಣದಲ್ಲಿ ನಿಂತು ಈ ವಾತಾವರಣದ ದೌರ್ಜನ್ಯವನ್ನು, ಅಸಹಿಷ್ಣುತೆ ಯನ್ನು, ಎಲ್ಲ ಬಗೆಯ ಕ್ರೌರ್ಯಗಳನ್ನು, ಖಂಡಿಸುತ್ತಾ, ಧಿಕ್ಕರಿಸುತ್ತಲೇ, ವರ್ತಮಾನದಲ್ಲಿ ಇಲ್ಲದ ಇನ್ನೊಂದು ಸಮ ಸಮಾಜದ ಕನಸು - ನನಸಾಗಿಸುವ ಹೋರಾಟಗಾರನ ಮರ್ಮರ ದನಿಗಳಂತೆ ಕೇಳುತ್ತವೆ.

ಹೀಗೆ ಪ್ರೇಮಿ, ಕವಿ, ಕಲಾವಿದ, ಹೋರಾಟಗಾರ ಇವರೆಲ್ಲರ ವೈಫಲ್ಯ, ಆಘಾತ, ವಾಸ್ತವ, ಕನಸು, ಆದರ್ಶಗಳು ಬೇರೆ ಬೇರೆ ಎನಿಸದೆ ಕಡೆಗೆ ಒಂದೇ ಎನಿಸುವ ಅರ್ಥಪೂರ್ಣ ಸಾಧ್ಯತೆಯನ್ನು ಇಲ್ಲಿನ ಕವನಗಳು ಕಾಣಿಸುತ್ತವೆ.

 ‘‘ಉರಿ ಬಿಸಿಲಿನ ಕಳೆತೆಗೆಯುತ್ತಾ/ಬೆವರು ಸುರಿಸುವ ಹೆಂಗಸು/ತನ್ನ ಸೆರಗನ್ನು ಹರಿದ ರವಿಕೆಯ ಮೇಲೆಳೆದುಕೊಳ್ಳುವುದು/ ನನ್ನ ಕವಿತೆ

ಏದುಸಿರ ಬಿಡುತ್ತಾ/ಬಂಡೆ ಒಡೆಯುವ ಶ್ರಮಿಕ/ಒಂದು ಬಟ್ಟಲು ಗಂಜಿಗೆ/ಕನಸು/ನೆಂಜಿಕೊಂಡು ಉಣ್ಣುವುದು/ ನನ್ನ ಕವಿತೆ

ತನ್ನದೇ ಕನಸಿನ ಶವದ ಮೇಲೆ ನಿಂತು/ತನ್ನ ಕಯ್ಯರೆ/ಇತರರ ಕನಸಿನ ಮನೆ /ತಾಜಮಹಲ್ ಕಟ್ಟಿ/ಕೈಗಳನ್ನು ಕತ್ತರಿಸಿಕೊಂಡು/ಅನ್ಯಾಯಕ್ಕೊಳಗಾದ ದುಡಿಮೆ/ ನನ್ನ ಕವಿತೆ

ಪ್ರಶ್ನೆಯಾಗಿ ಜನ್ಮತಾಳಿ/ ಪ್ರಾಣಾಂತಕ ಪ್ರಶ್ನೆಯಾಗಿ/ ನಿರುಪಾಯವಾಗಿ ಬೀದಿಗೆ ಬಿದ್ದು/ ಮರ್ಯಾದಸ್ಥರತ್ತ ಬೊಟ್ಟು ಮಾಡುವ/ಬಹಿಷ್ಕೃತ ನನ್ನ ಕವಿತೆ ’’

 ಎನ್ನುವ ನಾಗರಾಜ ಮಂಜುಳೆಯವರ ಈ ಸಾಲುಗಳು ಅವರ ಕಾವ್ಯದ ಮ್ಯಾನಿಫೆಸ್ಟ್ ಅಷ್ಟೇ ಆಗಿರದೆ ವಾಸ್ತವ ಜಗತ್ತಿನ ಬಂಡೆ ಒಡೆಯುವವನ, ಹರಿದ ರವಿಕೆಗೆ ಸೆರಗ ಹೊದ್ದು ಕೊಳ್ಳುವವಳ, ಕಂಡೂ ಕಾಣದಂತೆ ಮೆಳ್ಳಗೆ ಇರುವ ಈ ಸಮಾಜಕ್ಕೆ ಕಾಣಿಸ ಬಯಸುವ ಮತ್ತು ಆ ಅನಾಥ ಲೋಕದ ಬದುಕು ಕಟ್ಟುವ ಛಲವನ್ನು ಕಾಣುತ್ತೇವೆ.

 ಇಲ್ಲಿನ ನಾಯಕನಿಗೆ ಕವಿತೆ, ಇಲ್ಲವೆ ಕಲೆಯೇ ಎಲ್ಲದರ ವಿರುದ್ಧದ ಆಯುಧವನ್ನಾಗಿ ಮಾಡಿಕೊಂಡು ಯುದ್ಧ ಮಾಡೆಂಬ ಹಂಬಲವಿಲ್ಲ. ಅದರ ಬದಲು ಕವಿತೆ, ಸಂಗೀತ, ಕಲೆಯ ಮೂಲಕ ಪ್ರಕ್ಷುಬ್ಧಗೊಂಡ ಮನಸ್ಸುಗಳನ್ನು ಸರಿದಾರಿಗೆ ಎಳೆಯುವೆ ಎನ್ನುತ್ತಾನೆ.

‘‘ಒಂದು ವೇಳೆ/ನನ್ನ ಕೈಯಲ್ಲಿ /ಲೇಖನಿ ಇಲ್ಲದೇ ಹೋಗಿದ್ದರೆ ಬಹುಶಃ / ಉಳಿ ಇರುತ್ತಿತ್ತು/ಇಲ್ಲ ಸಿತಾರ್, ಕೊಳಲು,/ಏನಿರುತ್ತಿತ್ತೋ ಏನೋ/ಏನಿರುತ್ತಿತ್ತೋ ಅದನ್ನು ಬಳಸಿ/ನನ್ನೊಳಗಿನ ಅತೀವ ಕೋಲಾಹಲವನ್ನು/ಅಗೆದು ಹೊರಹಾಕುತ್ತಿದ್ದೆ.’’

ಹೀಗೆ ಕವಿತೆ, ಕಲೆ ಪ್ರೀತಿಯ, ಶಾಂತಿಗೆ ಕಾರಣವಾಗಿದ್ದು.

ಮುಂದೆ ಈ ಕವಿತೆ, ಕಲೆ ಎನ್ನುವುದು ಇವತ್ತು ಅಸಹಾಯಕವಾಗುತ್ತಿರುವುದರ ಕುರಿತು ಹೀಗೆ ಆರ್ತತೆಯಿಂದ ನಾಯಕ ಹಾಡುತ್ತಾನೆ.

‘‘ಅದೆಲ್ಲಿಯ ತನಕ/ಒಳಗಿನ ಕೂಗನ್ನು/ ತುಟಿಯೊಳಗೆ ಒತ್ತಿಟ್ಟಿರಲಿ/ ಕವಿತೆಯ ಸೂಜಿ ಹಿಡಿದು ಅದೆಷ್ಟು ಹೊಲಿಗೆ ಹಾಕಲಿ/ ಸೂಜಿಗಣ್ಣಿನೊಳಕ್ಕೆ ಅದ್ಯಾರು ಆಕಾಶವನ್ನೇ ಪೋಣಿಸುತ್ತಾರೆ/ಹಾಕಿದ ಹೊಲಿಗೆಗಳಿಂದಲೇ/ ಕಿತ್ತು ಬರುತ್ತಿದೆ ಗಾಯ’’

ಕಡೆಗೆ ಆ ಕವಿ, ಕಲಾವಿದನನ್ನು ಇಲ್ಲಿನ ಐಡಿಯಾಲಜಿ ರಾಜಕಾರಣ ತಲುಪಿಸಿರುವುದರ ಕಡೆಗೆ ಹೀಗೆ ಗಮನ ಸೆಳೆಯುತ್ತಾನೆ.

 ‘‘ಆತ ನೀಲಿ ಶಾಹಿಯಿಂದ ಬರೆಯುತ್ತಿದ್ದಾಗ/ಕಲ್ಲು ಬಂಡೆಗಳು ಎದ್ದು ಕೂರುತ್ತಿದ್ದವು/ಪರ್ವತಗಳ ಎದೆ ನಡುಗುತ್ತಿದ್ದವು/ಆತನನ್ನು ಬರೆಯಲು/ ಬಿಡಬೇಕೋ ಬೇಡವೋ/ಎಂಬ ಚರ್ಚೆ ಆರಂಭವಾಯಿತು/ ಕೊನೆಗೆ ಆತನಿಗೆ/ಬದಲಿ ಶಾಹಿ/ನೀಡಲು ನಿರ್ಧರಿಸಲಾಯಿತು/ಆ ನಂತರ/ಆತ ಬರೆಯುತ್ತಾ ಹೋದಂತೆ/ ಆತನ ಅಕ್ಷರಗಳೇ ಬದಲಾದವು/ ಆತ ಬರೆದ/ ನನ್ನ ರಕ್ತದ ಬಣ್ಣ ಕೇಸರಿ’’

ಇಲ್ಲಿನ ಪ್ರೇಮಿಯ ಗಾಢ ಪ್ರೇಮದ, ಆ ಪ್ರೇಮ ವೈಫಲ್ಯದ ತೀವ್ರತೆಯನ್ನು ದಾಟಿಸುವ ‘ನಿನ್ನ ಬರುವಿಗೆ ಮುನ್ನ ಒಂದು ಪತ್ರ’, ‘ಹಿಂದೆ ಹಿಂದೆ ಬರುತ್ತಿದ್ದೆ’, ‘ಮಧ್ಯರಾತ್ರಿ’, ‘ಮೋಸ’, ‘ಅದೆಷ್ಟೋ ದಿನಗಳ ನಂತರ ಹೊರ ಬಿದ್ದವ’, ‘ಒಂದು ಮಳೆಯ ಕತೆ’ ಕವಿತೆಗಳು ಜೀವ ವಾಹಕಗಳಾಗಿವೆ.

ಬದುಕಿನ ಕ್ರೂರ ವಾಸ್ತವತೆಯನ್ನು ಯಾವುದೇ ಭಾವನೆಗಳಿಗೆ ತೊತ್ತಾಗಿಸದೆ ಹಾಗೆ ಸಹಜವಾಗಿ ಕಣ್ಣಮುಂದೆ ನಿಲ್ಲಿಸುವ ‘‘ಅರೆಸತ್ತ ಕೀಟದ ದೇಹ,/ಅದನ್ನು ಕ್ರೂರವಾಗಿ ಮುತ್ತಿಕೊಂಡ/ಹಸಿದ ಇರುವೆಗಳು/ಸಮನಾದ ನೋವಿನ ಮೂಲಕ/ಆ ನೋವು/ನನಗೆ ಅರ್ಥವಾಗುತ್ತದೆ.

ಇಲಾಜಿಲ್ಲದೆ ಅಮ್ಮನ ಕಂಗಳು/ನಂದಿ ಹೋಗುತ್ತಿವೆ/ಸೋಲರಿಯದ ಅಪ್ಪನೂ/ ಕುಸಿದಿದ್ದಾನೆ/ ಹಸಿವು/ ಅಕ್ಕ/ ವರದಕ್ಷಿಣೆ/ಪದವಿ/ಉದ್ಯೋಗ/ ಶಿಫಾರಸು/ಲಂಚ/ಈ ಎಲ್ಲ ಪ್ರಶ್ನೆಗಳು/ಹಸಿದ ಇರುವೆಯ ಸಂತೆ/ನಾನು ಅರೆಸತ್ತ ಕೀಟ ’’

ಈ ಸಾಲುಗಳು ಅತ್ಯುತ್ತಮ ದೃಶ್ಯ ಸಂಯೋಜನೆ. ಇಂತಹ ದೃಶ್ಯ ಸಂಯೋಜನೆಯನ್ನು ಅಸಲಿ ಕಲಾವಿದನಷ್ಟೆ ಕಾಣಿಸಬಲ್ಲ.

ಹೀಗೆ ಈ ಸಂಕಲನದ ಇನ್ನೂ ಕೆಲ ಕವಿತೆಗಳು ನಮ್ಮ ನೋಟವನ್ನು, ಪ್ರಜ್ಞೆಯನ್ನು ತಿರುವು ಮುರುವು ಮಾಡಿ ಸರಿದಿಕ್ಕಿನತ್ತ ತಿರು ತಿರುಗಿ ನೋಡುವಂತೆ ಮಾಡುತ್ತವೆ. ಉದಾಹರಣೆಗೆ...

ಜನಗಣತಿ

--------

ಜನಗಣತಿಗಾಗಿ/ಸ್ತ್ರೀ - ಪುರುಷ/ಎಂಬ ಎರಡು ವಿಭಾಗ/ಮಾಡಿಕೊಂಡ ಕಾಗದ ಹಿಡಿದು/ಊರೆಲ್ಲಾ ಸುತ್ತುತ್ತಿದ್ದಾಗ/ಹಳ್ಳಿಯ ಅಜ್ಞಾತ ತುತ್ತ ತುದಿಯಲ್ಲಿ/ಎದುರಾದದ್ದು/ನಾಲ್ಕು ಹಿಜಡಾಗಳ/ಒಂದು ಮನೆಯನ್ನು. ಕೆಲವು ಪ್ರಶ್ನೆಗಳು

--------------

ಕುಂಟನ ಉತ್ಸಾಹದಲ್ಲಿ /ಶ್ರೇಷ್ಠ ಓಟಗಾರನನ್ನು/ ಹಿಂದಿಕ್ಕಿ ಓಡಿರುವೆಯ?

 ಹಳ್ಳಿಯಲ್ಲಿ ಏಕಾಂಗಿಯಾಗಿ/ಸಾಯುತ್ತಿರುವ ತಂದೆಯ ಕಿವಿಗಳಲ್ಲಿ/ ಪೇಟೆಯಲ್ಲೆಲ್ಲೊ ಓಡಾಡುತ್ತಿರುವ/ ಮಗನ ಹೆಜ್ಜೆಯ ಸಪ್ಪಳ ಕೇಳಿರುವೆಯ?

ಉರುಳಿಸಲಾದ ಹೆಮ್ಮರ ನಿಂತಿದ್ದಲ್ಲಿಗೆ/ ಗೂಡು ಕಟ್ಟಿದ್ದ ಹಕ್ಕಿಯಂತೆ/ ಮತ್ತೆ ಹೋಗಿ ಬಂದಿರುವೆಯ?

ಪ್ರಶ್ನೆ ----

ಯಾರೋ ತಂದೆಯಾದ/ಸಿಹಿ ಸುದ್ದಿ ಕೇಳಿದ/ ಹಿಜಡಾ/ಕುಣಿಕುಣಿಯುತ್ತಾ/ಹೋಗುತ್ತಿ ರುವುದು ಎಲ್ಲಿಗೆ?/ಸೂರ್ಯೋದಯದ ವರ್ಣನೆ/ಕೇಳಿದ/ಹುಟ್ಟಾ ಕುರುಡ/ಕಂಡಿದ್ದು ಏನನ್ನು?

ಹೀಗೆ ನಮ್ಮನ್ನು ಅಚ್ಚರಿ, ಆಘಾತದ ಪ್ರಜ್ಞಾ ಪ್ರವಾಹದಲ್ಲಿ ಮುಳುಗಿಸಿ, ಹೊಸದೊಂದು ಎಚ್ಚರದ ದಂಡೆಗೆ ತರುವ ಇಂತಹ ಕವಿತೆಗಳು ಆಲೋಚನೆಯ ದೃಷ್ಟಿಯಿಂದ, ಕಾವ್ಯ ಸ್ವರೂಪ, ವಸ್ತುವಿನ ದೃಷ್ಟಿಯಿಂದಲೂ ಹೊಸತಾಗಿವೆ.

  

ಇಲ್ಲಿನ ‘ಹಸಿವು’, ’ನನ್ನ ಆಕಾಶ ಹುಚ್ಚೆದ್ದು ಕೆರಳಿದೆ’, ’ಬಿಸಿಲಿನ ಷಡ್ಯಂತ್ರದ ವಿರುದ್ಧ’, ’ಬದುಕಿ ಉಳಿದರೆ ನಾ’, ’ಒಂದು ಸ್ಥಗಿತದ ನಿರಾಕರಣೆಯ ಸಂದರ್ಭದಲ್ಲಿ’ ಕವಿತೆಗಳು ಪ್ರಸ್ತುತ ಸಂದರ್ಭದ ಧರ್ಮ, ರಾಜಕಾರಣ, ಸಾಮಾಜಿಕ ಅಸಮಾನತೆ ಮೊದಲಾದ ಇಷ್ಯೂಗಳಿಗೆ ಎದುರಾಗುತ್ತವೆ. ಒಟ್ಟಾರೆಯಾಗಿ ಇಲ್ಲಿನ ಕವಿತೆಗಳನ್ನು ಪ್ರಾಯ್ಡಾನ ಪರಿಕಲ್ಪನೆಗಳಾದ ‘ಇಡ್’, ‘ಸೂಪರ್ ಇಗೋ’ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ವಿವರಿಸಿಕೊಳ್ಳುವುದಾದರೆ ಒಂದು ಜನಾಂಗದ/ ವ್ಯಕ್ತಿಯ ನಿಗೂಢ ಅನುಭವವನ್ನು, ಅವೈಚಾರಿಕವಾದದ್ದನ್ನು ತನ್ನೊಡಲಿನೊಳಗೆ ತುಂಬಿಕೊಂಡು, ಅದರೊಂದಿಗೆ ಧರ್ಮ ರಾಜಕಾರಣ ಇತ್ಯಾದಿಗಳನ್ನೊಳ ಗೊಂಡು ಬೆರೆತು ‘ಸ್ವ’ ದ ಮೂಲಕ ಅಭಿವ್ಯಕ್ತಗೊಳ್ಳುವ ಇಡ್ ಸೂಪರ್ ಇಗೋ ಕಾವ್ಯವೆನ್ನಬಹುದು. ಇಲ್ಲವೇ ಕವಿಯಾದವನಿಗೆ/ಸಾಹಿತಿಯಾದವನಿಗೆ ಕಾವ್ಯ ಇಲ್ಲವೆ ಸಾಹಿತ್ಯ ಎನ್ನುವುದು ಚರಿತ್ರೆಯಲ್ಲಿ ಸಂಭವಿಸುತ್ತಿರುವ ಬದಲಾವಣೆಗಳು, ಬಿಕ್ಕಟ್ಟುಗಳು ಬರೀ ಬೀದಿಯಲ್ಲಿ ನಡೆಯುತ್ತಿರುವ ದೊಂಬಿಯಲ್ಲ. ಅದು ಮನೆಯೊಳಗೂ ನುಗ್ಗುವ ಮಾರಿ. ಅಷ್ಟೇ ಅಲ್ಲ, ಕವಿಯನ್ನು ಭಾವುಕವಾಗಿ, ಸಾಮಾಜಿಕವಾಗಿ ಅನಾಥನನ್ನಾಗಿ, ಭಿಕಾರಿಯನ್ನಾಗಿ ಮಾಡುವ ಮಾರಿ. ಈ ಮಾರಿಯಿಂದ ತಪ್ಪಿಸಿಕೊಳ್ಳಲು ಆತ ಪ್ರೇಮಕ್ಕೆ ಶರಣಾಗುತ್ತಾನೆ. ಪ್ರೇಮಿಯ ವ್ಯಕ್ತಿತ್ವ ಸುಂದರ ಕನಸಿನಂತೆ ಹಬ್ಬುತ್ತಾ ಹೋಗುತ್ತದೆ. ಚರಿತ್ರೆಯ ವಾಸ್ತವ ಮತ್ತು ಆತನ ಪ್ರೇಮದ ಕನಸುಗಳೆರಡೂ ಒಂದು ಮಟ್ಟದಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತ ಹೋಗುತ್ತದೆ. ಆದರೆ ಈ ಕನಸಿನೊಳಗೆ ಕೂಡ ವಾಸ್ತವ ಕಾಲಿಡುತ್ತದೆ. ಪ್ರೇಮಿಯ ವ್ಯಕ್ತಿತ್ವ ಕೂಡ ಇವನನ್ನು ಆಗಾಗ ಬೆಚ್ಚಿಸಿಬಿಡುತ್ತದೆ. ಪ್ರೇಮಿಯ ಜೊತೆಗೆ ಕನಸಿನ ಲೋಕದಲ್ಲಿ ಇರೋಣವೆಂದರೆ ಅಲ್ಲೂ ಅವನಿಗೆ ಅಸುರಕ್ಷತೆ ಕಾಡತೊಡಗುತ್ತದೆ. ಚರಿತ್ರೆಯ ತಿಕ್ಕಲುತನ, ಚಾಂಚಲ್ಯ, ವಿಕಟ ಅಟ್ಟಹಾಸ ಅಲ್ಲೂ ಮೆರೆಯತೊಡಗುತ್ತದೆ. ಹೀಗೆ ಚರಿತ್ರೆಯ ಮಾರಿ, ಕನಸಿನ ಪ್ರೇಮಿ ಒಬ್ಬರೊಳಗೊಬ್ಬರು ಬೆರೆತು ತೀವ್ರವಾಗಿ ಉರಿಯುತ್ತಾರೆ. ಆ ತೀವ್ರ ಉರಿಯ ಪರಿಣಾಮದಲ್ಲಿ ಅದ್ದಿದ ಆತನ ವ್ಯಕ್ತಿತ್ವದ ಸ್ಫೋಟ ಕಾವ್ಯವಾಗುತ್ತದೆ.

ಅಂತಹ ಸ್ಫೋಟ ಕಾವ್ಯವನ್ನು ಇಲ್ಲಿನ ಕವಿತೆಗಳು ಕೊಟ್ಟಿವೆ ಎನ್ನಬಹುದು.

ಉರ್ದು ಕವಿ ಮೀರ್ ತಖೀಮೀರ್ ‘‘ಪ್ರಳಯಲಯದ ಕವಿತೆಯೊಂದು

ಎಲ್ಲ ಕಡೆಗೆ ಹರಡಿದೆ./ನನ್ನ ಎಲ್ಲ ಕೃತಿಗಳಲ್ಲಿ ಪ್ರಳಯನಾದ ಮಿಡಿದಿದೆ’’  ಎನ್ನುತ್ತಾನೆ.

  ಇಂದು ಸಮಾಜದಲ್ಲಿ ನಡೆಯುತ್ತಿರುವ ಆಗು ಹೋಗುಗಳು, ಅಲ್ಲೋಲ- ಕಲ್ಲೋಲಗಳು ಕೇವಲ ಹೊರ ಜಗತ್ತಿಗೆ ಸಂಬಂಧಿಸಿದ್ದಷ್ಟೇ ಅಲ್ಲ ಅದು ಮನುಷ್ಯ ಸಂಬಂಧಗಳೊಳಗಿನ ವಿನಾಶವೂ ಹೌದು. ಹಾಗಾಗಿಯೆ ನನ್ನ ಮಾತು, ಅನುಭವ ಪ್ರಳಯನಾದ ಎನ್ನುತ್ತಾನೆ. ಅಂತಹ ಪ್ರಳಯನಾದದ ಕವಿತೆಗಳು ಇಲ್ಲಿಯವು.

ಪ್ರತಿಭೆ ದಟ್ಟವಾಗಿದ್ದರೆ ಸೂಕ್ಷ್ಮ ಸಾಮಾಜಿಕ ಅನುಭವಗಳು ತುಂಬಾ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂಬುದಕ್ಕೆ ‘ಬಿಸಿಲಿನ ಷಡ್ಯಂತ್ರದ ವಿರುದ್ಧ’ ಸಂಕಲನ ಸಾಕ್ಷಿ.

ಇಷ್ಟೆಲ್ಲಾ ವಿಶೇಷತೆಗಳು ಈ ಸಂಕಲನಕ್ಕಿದ್ದರೂ ಕವಿ ನಾಗರಾಜ್ ಮಂಜುಳೆಯವರ ಈ ಸಂಕಲನದಲ್ಲಿ ಸಣ್ಣ ಪುಟ್ಟ ಕಾವ್ಯದ ತಾಂತ್ರಿಕ ದೋಷಗಳಿವೆ. ಕೆಲವೊಮ್ಮೆ ಒಂದೇ ಮಾತಿನಲ್ಲಿ, ಸಾಲಿನಲ್ಲಿ ಹೇಳಬೇಕಾದ್ದನ್ನು ಅನಗತ್ಯವಾಗಿ ಪದಗಳ ದುಂದು ಮಾಡಿ, ಲಂಬಿಸಿ ಹೇಳಲು ಹೋಗುತ್ತಾರೆ. ಅದು ಕವಿತೆಯಲ್ಲಿ ಅನಗತ್ಯ, ಅನೌಚಿತ್ಯ ಕೂಡ. ಮತ್ತೆ ಪದ್ಯರೂಪಿ ಮಾತುಗಳನ್ನು ಗದ್ಯದಂತೆ ಬಳಸಿರುವುದು.

ಉದಾಹರಣೆಗೆ...

ಆ/ಕಾಣೆಯಾದವರ ಮನೆಯಲ್ಲಿ /ಜಾಹೀರಾತಿಗೆ ನೀಡಲು/ಇರುವುದೇ ಇಲ್ಲ/ಒಂದೇ ಒಂದು ಒಳ್ಳೆಯ ಭಾವಚಿತ್ರ/ಅಂಥವರೇ ಮತ್ತೆ ಮತ್ತೆ /ಕಾಣೆಯಾಗುತ್ತಾರೆ./ಅಂತ ಕವಿತೆಯನ್ನು ಮುಗಿಸಬಹುದಿತ್ತು.

ಆದರೆ ನಾಗರಾಜ್ ಮಂಜುಳೆಯವರು ಮೊದಲ ಪ್ಯಾರಾವನ್ನು ಮತ್ತೆ ಪುನಾರಾರ್ತಿಸಿ, ಕವಿತೆಯನ್ನು ಅನಗತ್ಯವಾಗಿ ಲಂಬಿಸುತ್ತಾರೆ.

 ಕಡೆಯದಾಗಿ: ‘ಬಿಸಿಲಿನ ಷಡ್ಯಂತ್ರದ ವಿರುದ’ ಕವನ ಸಂಕಲನದ ಕವಿತೆಗಳನ್ನು ಕನ್ನಡದ ಕವಿತೆಗಳು ಎನ್ನುವಂತೆ ಕನ್ನಡಿಸಿರುವ ಮತ್ತು ಕನ್ನಡದಲ್ಲಿ ಪ್ರಕಟವಾಗಿರುವುದಕ್ಕೂ ಕಾರಣರು ಸಂವರ್ತ ಸಾಹಿಲ್. ಅವರಿಗೆ ವಿಶೇಷ ಅಭಿನಂದನೆಗಳು. ಸಂವರ್ತ ಸಾಹಿಲ್ ಅವರು ಕನ್ನಡಕ್ಕೆ ತಂದಿರುವ ಈ ಸಂಕಲನದಲ್ಲಿನ ಬಹುದೊಡ್ಡ ಕೊರತೆ ಎಂದರೆ ಮೂಲ ಕವಿ ನಾಗರಾಜ ಮಂಜುಳೆ ಅವರ ಒಂದು ಪರಿಚಯ ಬರಹ ಕನ್ನಡ ಓದುಗರಿಗೆ ಕೊಡದಿರುವುದು.

Writer - ಎಚ್. ಎಸ್. ರೇಣುಕಾರಾಧ್ಯ

contributor

Editor - ಎಚ್. ಎಸ್. ರೇಣುಕಾರಾಧ್ಯ

contributor

Similar News