ಸರಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಶಿಕ್ಷಣ ಇಲಾಖಾಧಿಕಾರಿಗಳ ಸುತ್ತೋಲೆ: ಶಿಕ್ಷಣ ಸಚಿವರಿಂದ ಮೌನವೇ ಉತ್ತರ

Update: 2022-04-28 02:49 GMT

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಶೈಕ್ಷಣಿಕ ವಿಚಾರಗಳಿಗಿಂತಲೂ ಧಾರ್ಮಿಕ ವಿಚಾರಗಳಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದರೇ ಇತ್ತ ಇಲಾಖೆಯ ಅಧಿಕಾರಿಗಳು ಸರಕಾರ ಆದೇಶಕ್ಕೆ ವ್ಯತಿರಿಕ್ತವಾಗಿ ಸುತ್ತೋಲೆ ಹಾಗೂ ಜ್ಞಾಪನಗಳನ್ನು ಹೊರಡಿಸುತ್ತಿದ್ದಾರೆ. ಅಲ್ಲದೆ ಆಂಗ್ಲಭಾಷೆಯ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಲು ಅವಕಾಶ ಕಲ್ಪಿಸಿ ಸುತ್ತೋಲೆ ಹೊರಡಿಸುವ ಮೂಲಕ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯ ಕಲಿಕೆಯ ಜ್ಞಾನ ದೊರಕಬಾರದು ಎಂದು ಹೂಡಿರುವ ಸಂಚು ಇದೀಗ ಬಹಿರಂಗವಾಗಿದೆ.ಸರಕಾರಿ ಪ್ರೌಢಶಾಲೆಗಳಲ್ಲಿರುವ ಹೆಚ್ಚುವರಿ ಶಿಕ್ಷಕರನ್ನು ಮತ್ತು ಹೆಚ್ಚುವರಿ ಖಾಲಿ ಹುದ್ದೆಗಳನ್ನು ಸ್ಥಳಾಂತರಿಸುವ ಬಗ್ಗೆ 11 ವರ್ಷಗಳ ಹಿಂದೆಯೇ ಹೊರಡಿಸಿರುವ ಸರಕಾರಿ ಆದೇಶದಲ್ಲಿ ಹಲವು ನ್ಯೂನತೆಗಳಿದ್ದರೂ ಅದನ್ನೇ ಮಾದರಿಯನ್ನಾಗಿಸಿಕೊಂಡಿರುವ ಇಲಾಖೆಯು 2022ರ ಎಪ್ರಿಲ್ 13ರಂದು ಪರಿಷ್ಕೃತ ಜ್ಞಾಪನ ಪತ್ರವನ್ನು ಹೊರಡಿಸಿದೆ. ಇದು ಶೈಕ್ಷಣಿಕ ವಲಯದಲ್ಲಿ ವಿವಾದಕ್ಕೆ ದಾರಿಮಾಡಿಕೊಟ್ಟಿದೆ.

ಇದಕ್ಕೆ ಸಂಬಂಧಿಸಿದಂತೆ ಖಾರವಾಗಿ ಪ್ರತಿಕ್ರಿಯಿಸಿರುವ ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅವರು ’ಸರಕಾರಿ ಆದೇಶಕ್ಕೆ ವ್ಯತಿರಿಕ್ತವಾಗಿ ಸುತ್ತೋಲೆ ಹಾಗೂ ಜ್ಞಾಪನಗಳನ್ನು ಹೊರಡಿಸಲು ಅನುಷ್ಠಾನಾಧಿಕಾರಿಗಳಿಗೆ ಸರಕಾರವು ಪರವಾನಿಗೆ ನೀಡಿದೆಯೇ’ ಎಂದು ಸಚಿವ ಬಿ ಸಿ ನಾಗೇಶ್ ಅವರನ್ನು ಪ್ರಶ್ನಿಸಿ 2022ರ ಎಪ್ರಿಲ್ 25ರಂದು ಪತ್ರ ಬರೆದಿದ್ದಾರೆ. ಇದರ ಪ್ರತಿ ’the-file.in’ ಗೆ ಲಭ್ಯವಾಗಿದೆ.

ಸರಕಾರಿ ಆದೇಶದಲ್ಲೇನಿದೆ?

ಸರಕಾರಿ ಆದೇಶದನ್ವಯ ವಿದ್ಯಾರ್ಥಿಗಳ ಸಂಖ್ಯೆ 70ರವರೆಗೆ 1 ವಿಭಾಗ, 71ರಿಂದ 140 ಎರಡು ವಿಭಾಗ, 141ರಿಂದ 210ರವರೆಗೆ ಮೂರು ವಿಭಾಗ, 211ರಿಂದ 280ರವರೆಗೆ ನಾಲ್ಕು ವಿಭಾಗ ಹಾಗೂ 281ರಿಂದ 350ರವರೆಗೆ ಐದು ವಿಭಾಗಗಳೆಂದು ನಿರ್ಣಯಿಸಲಾಗಿದೆ. ಅದರಂತೆ 3ರಿಂದ 5 ವಿಭಾಗಗಳಲ್ಲಿರುವ ಪ್ರೌಢಶಾಲೆಗಳಲ್ಲಿ ಸಿಬ್ಬಂದಿ ಸ್ತರ ವಿನ್ಯಾಸದ ಪ್ರಕಾರ 7 ಶಿಕ್ಷಕರು ಅಂದರೆ ಪ್ರಥಮ ಭಾಷೆ -1, ಹಿಂದಿ -1, ಆಂಗ್ಲಭಾಷೆ-1, ಕಲಾ-1, ವಿಜ್ಞಾನ (ಪಿಸಿಎಂ)-1, ವಿಜ್ಞಾನ (ಸಿಬಿಝೆಡ್)-1 ಹಾಗೂ ದೈಹಿಕ ಶಿಕ್ಷಕರ ಹುದ್ದೆ-1 ಸೇರಿದಂತೆ ಮುಖ್ಯೋಪಾಧ್ಯಾಯರನ್ನೊಳಗೊಂಡು 7+1 ಬೋಧಕ ಹಾಗೂ 2 ಬೋಧಕೇತರ ಹುದ್ದೆಗಳಿರಬೇಕೆಂದು ಆದೇಶದಲ್ಲಿ ತಿಳಿಸಿದೆ.

ಆದರೆ ಈ ಆದೇಶದಲ್ಲಿ 1ರಿಂದ 3 ವಿಭಾಗದವರೆಗೆ ಇರಬೇಕಾದ ಸಿಬ್ಬಂದಿ ಸ್ತರವಿನ್ಯಾಸದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಂತರ 6 ಅಥವಾ ಅದಕ್ಕಿಂತ ಹೆಚ್ಚು ವಿಭಾಗಗಳಿದ್ದಲ್ಲಿ ಮುಖ್ಯ ಶಿಕ್ಷಕರನ್ನು ಹೊರತುಪಡಿಸಿ ಪ್ರತಿ ವಿಭಾಗಕ್ಕೆ 1:5ರಂತೆ ಲೆಕ್ಕಾಚಾರ ಮಾಡಿ ಅಗತ್ಯ ಶಿಕ್ಷಕರನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಪರಿಷ್ಕೃತ ಜ್ಞಾಪನ ಪತ್ರದಲ್ಲಿ 15 ವಿಭಾಗಗಳವರೆಗೆ ಸಿಬ್ಬಂದಿ ಸ್ತರ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದೆ ಎಂಬುದು ಬಸವರಾಜ ಹೊರಟ್ಟಿ ಅವರು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

  ಅಲ್ಲದೆ ಪ್ರೌಢಶಾಲೆಗಳಲ್ಲಿ ಒಂದಕ್ಕಿಂತ ಹೆಚ್ಚಿನ ವೃತ್ತಿ ಶಿಕ್ಷಕರುಗಳಲ್ಲಿ ಕಾರ್ಯಭಾರಕ್ಕನುಗುಣವಾಗಿ ಅಗತ್ಯವಿರುವ ಶಿಕ್ಷಕರನ್ನು ಉಳಿಸಿಕೊಂಡು ಉಳಿದ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಗುರುತಿಸಬೇಕು ಎಂಬ ಅಂಶವು ಸರಕಾರಿ ಆದೇಶದಲ್ಲಿ ಸ್ಪಷ್ಟವಾಗಿದೆ. ಆದರೆ 2022ರ ಎಪ್ರಿಲ್ 13ರಂದು ಹೊರಡಿಸಿರುವ ಅಧಿಕೃತ ಜ್ಞಾಪನ ಪತ್ರದ ಅನ್ವಯ ವಿಶೇಷ ಶಿಕ್ಷಕರ ಹುದ್ದೆಯನ್ನು 6 ವಿಭಾಗಗಳಲ್ಲಿ ಮಾತ್ರ ಉಳಿಸಿಕೊಳ್ಳಬೇಕೆಂದು ನಿಗದಿಪಡಿಸಲಾಗಿದೆ. ಇದು ಸರಕಾರಿ ಆದೇಶಕ್ಕೆ ವ್ಯತಿರಿಕ್ತವಾದ ಪರಿಷ್ಕೃತ ಜ್ಞಾಪನವೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

   ‘ರಾಜ್ಯದಲ್ಲಿ 6 ವಿಭಾಗಗಳನ್ನು ಹೊಂದಿದ ಎಷ್ಟು ಸರಕಾರಿ ಪ್ರೌಢಶಾಲೆಗಳಿವೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೇ ಅವೈಜ್ಞಾನಿಕ ಹಾಗೂ ಕಾರ್ಯಸಾಧುವಲ್ಲದ 2022ರ ಎಪ್ರಿಲ್ 14ರಂದು ಹೊರಡಿಸಿರುವ ಪರಿಷ್ಕೃತ ಜ್ಞಾಪನವನ್ನು ಹಿಂಪಡೆಯಬೇಕು. ಸರಕಾರಿಆದೇಶಕ್ಕೆ ವ್ಯತಿರಿಕ್ತವಾಗಿ ಸುತ್ತೋಲೆ ಹಾಗೂ ಜ್ಞಾಪನಗಳನ್ನು ಹೊರಡಿಸಲು ಅನುಷ್ಠಾನಾಧಿಕಾರಿಗಳಿಗೆ ಸರಕಾರ ಪರವಾನಿಗೆ ನೀಡಿದೆಯೇ ಎಂಬುದನ್ನು ಕೂಡಾ ಪರಿಶೀಲಿಸಬೇಕು,’ ಎಂದು ಬಸವರಾಜ ಹೊರಟ್ಟಿ ಅವರು ಸಚಿವ ನಾಗೇಶ್ ಅವರಿಗೆ ಬರೆದಿರುವ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

 ಅದೇ ರೀತಿ ‘ಸರಕಾರಿ’ಪ್ರೌಢಶಾಲೆಗಳ ಸ್ಥಾಪನೆ ಉದ್ದೇಶ ಗ್ರಾಮಾಂತರ ಮಕ್ಕಳಿಗೆ ಉಚಿತವಾಗಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ಕೈಗೆಟುಕಬೇಕು ಎಂಬ ಉದ್ದೇಶ ಸರಕಾರದ್ದು. ಅದರೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯ ಜ್ಞಾನ ಸಿಗಬಾರದೆಂಬ ಉದ್ದೇಶದಿಂದ ಆಂಗ್ಲಭಾಷೆಯ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಹೊರಟ್ಟಿ ಅವರು ಗಮನಸೆಳೆದಿರುವುದು ಪತ್ರದಿಂದ ತಿಳಿದು ಬಂದಿದೆ.

 ‘ಸರ್ವರಿಗೂ ಶಿಕ್ಷಣ ಸಿಗಬೇಕೆಂಬ ಸದಾಶಯದೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯವೆಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕಕ್ಕೆ ಈಗ ನಡೆಯುತ್ತಿರುವ ಪ್ರಕ್ರಿಯೆಯಿಂದ ಕಪ್ಪು ಚುಕ್ಕೆ ಬರುವುದು. ಕೂಡಲೇ 2022ರ ಎಪ್ರಿಲ್ 13ರಂದು ಹೊರಡಿಸಿರುವ ಸರಕಾರಿ ಆದೇಶವನ್ನು ರದ್ದುಗೊಳಿಸಿ 2022-23ನೇ ಶೈಕ್ಷಣಿಕ ಪರಿಸ್ಥಿತಿಗೆ ಅನುಗುಣವಾಗಿ ಸರಕಾರ ಆದೇಶ ಹಾಗೂ ಸುತ್ತೋಲೆಗಳನ್ನು ಹೊರಡಿಸಬೇಕು. ಅಲ್ಲಿಯವರೆಗೆ ಹೆಚ್ಚುವರಿ ಶಿಕ್ಷಕರ ಸ್ಥಳಾಂತರ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಆ ಮೂಲಕ ರಾಜ್ಯದಲ್ಲಿನ ಮಕ್ಕಳಿಗೆ ಅನ್ಯಾಯವಾಗುವುದನ್ನು ತಪ್ಪಿಸಲು ಇಂದೇ ಸೂಕ್ತ ನಿರ್ದೇಶನಗಳನ್ನು ಸಂಬಂಧಿಸಿದವರಿಗೆ ನೀಡಬೇಕು,’ ಎಂದು ಹೊರಟ್ಟಿ ಅವರು ಪತ್ರದಲ್ಲಿ ಕೋರಿದ್ದಾರೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News