ಉಮ್ರಾನ್ ಮಲಿಕ್ ಪ್ರದರ್ಶನಕ್ಕೆ ಮಾರು ಹೋದ ಕಾಂಗ್ರೆಸ್ ನಾಯಕ ಚಿದಂಬರಂ ಹೇಳಿದ್ದೇನು ಗೊತ್ತೇ?

Update: 2022-04-28 08:47 GMT

ಮುಂಬೈ: ಗುಜರಾತ್ ಟೈಟಾನ್ಸ್ ವಿರುದ್ಧ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್ ನ ವೇಗದ ಬೌಲರ್  ಉಮ್ರಾನ್ ಮಲಿಕ್ ಅದ್ಭುತ ಏಕವ್ಯಕ್ತಿ ಪ್ರದರ್ಶನವನ್ನು ನೀಡಿದರು.  ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪಡೆದ ಎಲ್ಲಾ ಐದು ವಿಕೆಟ್‌ಗಳು ಮಲಿಕ್ ಪಾಲಾದವು.

ಇದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮಲಿಕ್ ಅವರ ಮೊದಲ ಐದು ವಿಕೆಟ್ ಸಾಧನೆಯಾಗಿದೆ ಹಾಗೂ  ಅವರ ಪ್ರದರ್ಶನವು ಅವರನ್ನು ರಾಷ್ಟ್ರೀಯ ತಂಡಕ್ಕೆ ವಿಶೇಷವಾಗಿ ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ  ನಡೆಯಲಿರುವ ಟ್ವೆಂಟಿ-20  ವಿಶ್ವಕಪ್ ಗೆ ಸೇರಿಸಿಕೊಳ್ಳಬೇಕೆಂಬ ಕೂಗಿಗೆ ಬಲ ನೀಡಿದೆ.

ಮಲಿಕ್ ಅವರ ಬೌಲಿಂಗ್ ಗೆ ಮಾರುಹೋಗಿರುವ  ಹಿರಿಯ ಕಾಂಗ್ರೆಸ್ ನಾಯಕ ಹಾಗೂ  ಮಾಜಿ ಹಣಕಾಸು ಸಚಿವ ಪಿ.  ಚಿದಂಬರಂ, ಜಮ್ಮು-ಕಾಶ್ಮೀರದ ವೇಗಿಗೆ ಸರಿಯಾದ ತರಬೇತಿ ನೀಡಿ ಟೀಮ್ ಇಂಡಿಯಾಕ್ಕೆ ಸೇರಿಸಿಕೊಳ್ಳಬೇಕೆಂದು ಬಿಸಿಸಿಐಯನ್ನು ಆಗ್ರಹಿಸಿದ್ದಾರೆ.

"ಉಮ್ರಾನ್ ಮಲಿಕ್ ಚಂಡಮಾರುತ ತನ್ನ ಎದುರಿಗೆ ಬಂದ ಎಲ್ಲವನ್ನು ಕೊಚ್ಚಿಕೊಂಡು ಹೋಯಿತು. ಅವರ ಆಕ್ರಮಣ ಹಾಗೂ ವೇಗವನ್ನು ನೋಡುವುದೇ ಚೆಂದ. ಈ ಪ್ರದರ್ಶನವನ್ನು ನೋಡಿದ ಬಳಿಕ ಮಲಿಕ್  ಈ ಐಪಿಎಲ್  ಕಂಡ ಅತ್ಯುತ್ತಮ ಪ್ರತಿಭೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಬಿಸಿಸಿಐ ಅವರಿಗೆ ವಿಶೇಷ ತರಬೇತಿ ನೀಡಬೇಕು. ಆದಷ್ಟು ಬೇಗನೆ ಅವರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳಬೇಕೆಂದು'' ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

“ಮಲಿಕ್ ಭಾರತ ತಂಡಕ್ಕೆ ಅಗತ್ಯವಿದೆ. ಎಂತಹ ಅಸಾಧಾರಣ ಪ್ರತಿಭೆ. ಅವರು ದಣಿಯುವ ಮೊದಲು ಅವರಿಗೆ ಸೂಕ್ತ ತರಬೇತಿ ನೀಡಿ. ಅವರನ್ನು ಟೆಸ್ಟ್ ಪಂದ್ಯವನ್ನಾಡಲು ಇಂಗ್ಲೆಂಡ್ ಗೆ ಕರೆದೊಯ್ಯಬೇಕು. ಮಲಿಕ್ ಹಾಗೂ ಬುಮ್ರಾ ಅವರು ಜೊತೆಗಾಗಿ ಬೌಲಿಂಗ್ ಮಾಡುವುದು ಆಂಗ್ಲರಿಗೆ ಭಯ ಹುಟ್ಟಿಸುತ್ತದೆ’’ ಎಂದು ಕಾಂಗ್ರೆಸ್ ಇನ್ನೋರ್ವ ನಾಯಕ ಶಶಿ ತರೂರ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News