ಬಿಸಿಲಿನ ಬೇಗೆಯಲ್ಲಿ ಬೇಯುವ ಕಾರ್ಮಿಕರು!

Update: 2022-04-29 06:09 GMT

ಹಲವು ಮನೆಗಳಲ್ಲಿ ಕೆಲಸ ಮಾಡಿ ಮನೆಗೆ ಮರಳುವಾಗ ಅಧಿಕ ಬಿಸಿಲಿನ ಉರಿ ನಮ್ಮನ್ನು ಕಾಡುತ್ತದೆ. ಕಿಕ್ಕಿರಿದ ಬಸ್ಸುಗಳನ್ನು ಹಿಡಿಯಬೇಕು... ಅಲ್ಲೂ ಟ್ರಾಫಿಕ್ ಜಾಮ್‌ಗಳು. ನಾವು ಬಿಸಿಲಿನ ಧಗೆಗೆ ಬಸವಳಿಯುತ್ತೇವೆ. ಮನೆಗೆ ಬಂದ ಮೇಲೆ ಬಿಸಿ ಅಡುಗೆ ಕೋಣೆಯಲ್ಲಿ ರಾತ್ರಿಯ ಊಟವನ್ನು ಸಿದ್ಧಪಡಿಸಬೇಕು. ಬಳಿಕ ಸಣ್ಣ ಮತ್ತು ಬಿಸಿಯಾದ ಹಾಗೂ ಸರಿಯಾಗಿ ಗಾಳಿಯಾಡದ ಕೋಣೆಯಲ್ಲಿ ನಿದ್ದೆ ಮಾಡಬೇಕು.



ಹವಾಮಾನ ಬದಲಾವಣೆಯ ವ್ಯತಿರಿಕ್ತ ಪರಿಣಾಮಗಳು ಏಶ್ಯ ಮತ್ತು ಆಫ್ರಿಕದ ದೇಶಗಳಲ್ಲಿ ಹೆಚ್ಚಾಗಿ ಗೋಚರಿಸುತ್ತವೆ. ಯಾಕೆಂದರೆ ಈ ದೇಶಗಳ ಶ್ರಮಿಕ ವರ್ಗದ ಪೈಕಿ ಹೆಚ್ಚಿನವರು ಬಯಲಿನಲ್ಲಿ ಕೆಲಸ ಮಾಡುತ್ತಾರೆ. ಭಾರತದಂಥ ದೇಶದಲ್ಲಿ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದೆ ಮತ್ತು ಕಟ್ಟಡ ಕಾರ್ಮಿಕರಂಥ ಗಣನೀಯ ಪ್ರಮಾಣದ ನಗರ ಶ್ರಮಿಕರೂ ತಮ್ಮ ಹೆಚ್ಚಿನ ಕೆಲಸವನ್ನು ಬಿಸಿಲಿನಲ್ಲೇ ಮಾಡುತ್ತಾರೆ. ಹಾಗಾಗಿ, ಈ ಕೆಲಸಗಾರರು ಮತ್ತು ರೈತರ ಮೇಲೆ ಹೆಚ್ಚುತ್ತಿರುವ ಉಷ್ಣತೆ ಮತ್ತು ಉಷ್ಣ ಅಲೆಗಳು ಬೀರಬಹುದಾದ ಪರಿಣಾಮಗಳ ಬಗ್ಗೆ ಗಂಭೀರ ಕಳವಳಗಳು ವ್ಯಕ್ತವಾಗುತ್ತಿವೆ.

2015ರ ಬೇಸಿಗೆಯಲ್ಲಿ, ಭಾರತ ಮತ್ತು ನೆರೆಯ ಪಾಕಿಸ್ತಾನವನ್ನು ಉಷ್ಣ ಅಲೆಗಳು ಹೆಚ್ಚಾಗಿ ಕಾಡಿದ್ದವು. ತೀವ್ರ ಬಿಸಿಲಿನ ಝಳಕ್ಕೆ ಒಳಗಾಗಿ ಭಾರತದಲ್ಲಿ ಸುಮಾರು 2,500 ಮಂದಿ ಮತ್ತು ಪಾಕಿಸ್ತಾನದಲ್ಲಿ ಸುಮಾರು 1,100 ಮಂದಿ ಮೃತಪಟ್ಟರು. ಈ ಅಂಕಿಅಂಶಗಳೇ ಆಘಾತಕಾರಿಯಾಗಿವೆ. ಆದರೆ, ಈ ದೇಶಗಳಲ್ಲಿ ಬಿಸಿಲಲ್ಲಿ ಮಾಡುವ ಕೆಲಸದ ಸ್ಥಿತಿಗತಿಯ ಬಗ್ಗೆ ಅರಿವುಳ್ಳವರ ಪ್ರಕಾರ, ಈ ಅಂಕಿಸಂಖ್ಯೆಗಳು ಏನೇನೂ ಅಲ್ಲ. ಬಿಸಿಲಲ್ಲಿ ಕೆಲಸ ಮಾಡುವ ಕಡು ಬಡವರು ಅತಿಯಾದ ಉಷ್ಣತೆ, ದೇಹದಲ್ಲಿ ನೀರಿನ ಅಂಶದ ಕೊರತೆ ಮತ್ತು ಅದಕ್ಕೆ ಸಂಬಂಧಿಸಿದ ಅಡ್ಡ ಪರಿಣಾಮಗಳಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳ ಹೊರಗಡೆಯೇ ಸಾಯುತ್ತಾರೆ. ಇಂಥ ಸಾವುಗಳು ಅಧಿಕೃತ ದಾಖಲೆಗಳಿಗೆ ಸೇರ್ಪಡೆಯಾಗಿರುವ ಸಾಧ್ಯತೆಗಳಿಲ್ಲ.

ಒಂದು ಸುಡುವ ಮಧ್ಯಾಹ್ನ ನಾನು ಮಧ್ಯ ಭಾರತದ ಬುಂದೇಲ್‌ಖಂಡಕ್ಕೆ ಪ್ರಯಾಣಿಸಿದೆ. ಬುಂದೇಲ್‌ಖಂಡವು ಸುಡುವ ಬೇಸಿಗೆಗೆ ಪ್ರಸಿದ್ಧವಾಗಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕೆಲಸಗಳು ನಡೆಯುತ್ತಿರುವ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಮಾತನಾಡಿಸುತ್ತಾ ಸಾಗಿದೆ. ಅವರ ಪೈಕಿ ಕೆಲವರು ಈ ಬಿಸಿಲಲ್ಲಿ ಕೆಲಸ ಮಾಡುವಷ್ಟು ಚೈತನ್ಯವನ್ನೇ ಹೊಂದಿಲ್ಲದಂತೆ ಕಂಡುಬಂದರು. ಅವರು ಇನ್ನೇನು ಕುಸಿದು ಬೀಳಲಿದ್ದಾರೆ ಎಂಬಂತೆ ಕಂಡರು.

ಆದರೆ, ಬಹುತೇಕ ಇಷ್ಟೇ ಉಷ್ಣತೆ ಹೊಂದಿರುವ ಪಶ್ಚಿಮ ಭಾರತದ ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ನಾನು ಪ್ರಯಾಣಿಸುತ್ತಿದ್ದಾಗ, ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರು ಉತ್ತಮ ಸ್ಥಿತಿಯಲ್ಲಿದ್ದಂತೆ ಕಂಡುಬಂದರು. ಇದಕ್ಕೆ ಕಾರಣವೆಂದರೆ, ತಮ್ಮ ಕೆಲಸದ ಅವಧಿಯನ್ನು ಬದಲಾಯಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಅವರು ಬೆಳಗ್ಗೆ ಬೇಗನೆ ಕೆಲಸಕ್ಕೆ ಬರುತ್ತಿದ್ದರು ಮತ್ತು ಸೂರ್ಯ ಉಗ್ರಗೊಳ್ಳಲು ಆರಂಭಿಸುವಾಗ ಕೆಲಸ ಮುಗಿಸುತ್ತಿದ್ದರು. ಬಳಿಕ ಸಂಜೆ ಬಂದು ತಮ್ಮ ಕೆಲಸ ಮುಗಿಸಿ ಹೋಗುತ್ತಿದ್ದರು.

ಶತಕಗಳಿಂದ ಸುಡುವ ಬಿಸಿಲಿನೊಂದಿಗೆ ವ್ಯವಹರಿಸಲು ಗ್ರಾಮಸ್ಥರು ಹಲವು ವಿಧಾನಗಳನ್ನು ರೂಪಿಸಿಕೊಂಡಿದ್ದಾರೆ. ತಮ್ಮ ಹೊಲಗಳಲ್ಲಿ ವ್ಯವಸಾಯ ಮಾಡುವ ರೈತರು ಈ ವಿಧಾನಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದ್ದಾರೆ. ಹೊಲಗಳ ಧಣಿಗಳು ಅವರೇ ಆಗಿರುವುದರಿಂದ ತಮಗೆ ಬೇಕಾದ ಕೆಲಸದ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಅವರಿಗಿದೆ. ಆದರೆ, ಇದೇ ಮಾತನ್ನು ಭೂರಹಿತ ಕೃಷಿ ಕಾರ್ಮಿಕರ ಬಗ್ಗೆ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಚೌಕಾಶಿ ಮಾಡುವ ಹೆಚ್ಚಿನ ಸಾಮರ್ಥ್ಯ ಅವರಿಗಿಲ್ಲ. ತಮ್ಮ ಧಣಿಗಳು ನಿಗದಿಪಡಿಸಿದ ಕೆಲಸದ ಅವಧಿಯನ್ನು ಅವರು ಅನುಸರಿಸಲೇಬೇಕಾಗುತ್ತದೆ. ಅವರು ಅತ್ಯಂತ ಅಸಹಾಯಕರು. ಕೆಲಸ ಮಾಡುವ ಸ್ಥಳದಲ್ಲಿ ಶುದ್ಧ ಮತ್ತು ತಂಪಾದ ಕುಡಿಯುವ ನೀರು ಸಿಗುವ ಭರವಸೆಯೂ ಅವರಿಗಿಲ್ಲ. ಅವರು ಕೆಲಸ ಮಾಡುವ ಸ್ಥಳವು ಅವರು ವಾಸ ಮಾಡುವ ಗ್ರಾಮಕ್ಕಿಂತ ಸ್ವಲ್ಪ ದೂರದಲ್ಲಿರಬಹುದು.

ನೀರು ಮತ್ತು ಆಹಾರವಿಲ್ಲದೆ ಸುಡುವ ಬಿಸಿಲಿನಲ್ಲಿ ದೀರ್ಘ ಕಾಲ ಕೆಲಸ ಮಾಡುವುದು ಅತ್ಯಂತ ಅಪಾಯಕಾರಿಯಾಗಬಹುದು. ಲಕ್ಷಾಂತರ ಕಾರ್ಮಿಕರು ಪ್ರತಿ ನಿತ್ಯ ಈ ಸಂಕಟವನ್ನು ಎದುರಿಸುತ್ತಿದ್ದಾರೆ. ಉಷ್ಣತೆ ಹೆಚ್ಚಾಗುತ್ತಿರುವಂತೆಯೇ, ಅದನ್ನು ಎದುರಿಸಲು ಈವರೆಗೆ ಯಶಸ್ವಿಯಾಗಿದ್ದ ವಿಧಾನಗಳು ಈಗ ವಿಫಲವಾಗುತ್ತಿವೆ. ಇದು ತಮ್ಮ ಹೊಲಗಳಲ್ಲಿ ತಾವೇ ಕೆಲಸ ಮಾಡುವ ರೈತರಿಗೂ ಮನವರಿಕೆಯಾಗಿದೆ. ಹವಾಮಾನವು ಹಿಂದೆಂದಿಗಿಂತಲೂ ಹೆಚ್ಚು ಕಠೋರವಾಗಿದೆ. ಇದರಿಂದಾಗಿ ರೈತರ ಇಳುವರಿ ಮತ್ತು ಆದಾಯದಲ್ಲಿ ಖೋತಾವಾಗಿದೆ. ಇದರ ಪರಿಣಾಮವಾಗಿ ಸಣ್ಣ ರೈತರು ಕೂಡ ಭೂರಹಿತ ಕೃಷಿ ಕಾರ್ಮಿಕರಂತೆ ಕೆಲಸ ಹುಡುಕುತ್ತಾ ನಗರಗಳಿಗೆ ಪ್ರಯಾಣಿಸುತ್ತಿದ್ದಾರೆ.

ನಗರಗಳಲ್ಲಿ ಇಂಥ ಕಾರ್ಮಿಕರಿಗೆ ಹೆಚ್ಚಾಗಿ ಸಿಗುವುದು ಕಟ್ಟಡ ನಿರ್ಮಾಣ ಕೆಲಸ. ಇಲ್ಲಿ ಪುರುಷರಿಗೆ ಹೆಚ್ಚಾಗಿ ಬೇಡಿಕೆಯಿದೆ. ಮಹಿಳೆಯರೂ ಕೆಲಸ ಮಾಡುತ್ತಾರೆ. ಈ ಕಾರ್ಮಿಕರ ಪೈಕಿ ಹೆಚ್ಚಿನವರು ವಾಸಿಸುತ್ತಿರುವುದು ದಿಲ್ಲಿ ಹೊರವಲಯದ ಭಾವನಗರದಲ್ಲಿರುವ ಪುನರ್ವಸತಿ ಕಾಲನಿಗಳು ಮತ್ತು ಗುಡಿಸಲ ಕೇರಿಗಳಲ್ಲಿ. ಇತ್ತೀಚೆಗೆ ನಾನು ಅಲ್ಲಿಗೆ ಭೇಟಿ ನೀಡಿದಾಗ ಅವರು ಚಿಂತಿತರಾಗಿರುವುದನ್ನು ನೋಡಿದೆ. ಅವರ ಚಿಂತೆಗೆ ಕಾರಣವಾಗಿದ್ದು ಹೆಚ್ಚುತ್ತಿರುವ ಉಷ್ಣತೆ ಮಾತ್ರವಲ್ಲ, ಕಡಿಮೆಯಾಗುತ್ತಿರುವ ಕೆಲಸ ಮತ್ತು ಕಳಪೆ ಜೀವನ ಮಟ್ಟ.

''ಹೆಚ್ಚುತ್ತಿರುವ ಉಷ್ಣತೆ ಖಂಡಿತವಾಗಿಯೂ ಗಂಭೀರ ಸಮಸ್ಯೆ ಹೌದು. ನಮಗೆ ಸ್ಥಿರ ಆದಾಯ ಇದ್ದರೆ ನಾವು ಉತ್ತಮ ಆಹಾರವನ್ನಾದರೂ ಸೇವಿಸಬಹುದು. ಆದರೆ ಕಡಿಮೆ ಉದ್ಯೋಗಾವಕಾಶ ಮತ್ತು ಕಡಿಮೆ ಆದಾಯದಿಂದಾಗಿ ನಮ್ಮ ಪೌಷ್ಟಿಕತೆ ಮಟ್ಟವೂ ಕುಸಿದಿದೆ'' ಎಂಬುದಾಗಿ ಬುಂದೇಲ್‌ಖಂಡದ ವಲಸೆ ಕಾರ್ಮಿಕ ಜೈರಾಮ್ ಹೇಳುತ್ತಾರೆ.

ಸುಭಾಶ್ ಭಟ್ನಾಗರ್ ಓರ್ವ ಹಿರಿಯ ಸಾಮಾಜಿಕ ಕಾರ್ಯಕರ್ತ. ಅವರು ಕಟ್ಟಡ ನಿರ್ಮಾಣ ಕಾರ್ಮಿಕರ ಹಕ್ಕುಗಳು ಮತ್ತು ಸಾಮಾಜಿಕ ಭದ್ರತೆಗಾಗಿ ದಶಕಗಳ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿದ್ದಾರೆ. ''ಹವಾಮಾನ ಬದಲಾವಣೆಯು ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆಗಳನ್ನು ಹೆಚ್ಚಿಸಿರುವುದು ಖಂಡಿತ. ಅವರಿಗೆ ಒಂದು ಕಡೆಯಲ್ಲಿ ನೆರಳು, ಕುಡಿಯುವ ನೀರು ಮತ್ತು ಮಗುವಿಗೆ-ಆರೈಕೆ ಸೌಲಭ್ಯಗಳು ಬೇಕು ಹಾಗೂ ಇನ್ನೊಂದೆಡೆ, ಉತ್ತಮ ಸಾಮಾಜಿಕ ಭದ್ರತೆ ಬೇಕು'' ಎಂದು ಭಟ್ನಾಗರ್ ಹೇಳುತ್ತಾರೆ.

ಕಾರ್ಮಿಕ ಜೈರಾಮ್ ಹೇಳುತ್ತಾರೆ: ''ಮೊದಲು ನಾವು ನಗರಗಳಲ್ಲಿದ್ದಾಗ ನಮ್ಮ ಕೆಲಸದ ಸ್ಥಳಗಳ ಸಮೀಪದಲ್ಲೇ ವಾಸಿಸುತ್ತಿದ್ದೆವು. ಆಗ ನಮಗೆ ತುಂಬಾ ನಿತ್ರಾಣವಾದರೆ ಅಥವಾ ಕಾಯಿಲೆ ಬಿದ್ದರೆ ನಮ್ಮ ಮನೆಗಳಿಗೆ ಸುಲಭವಾಗಿ ಬರಬಹುದಾಗಿತ್ತು. ಈಗ ಕೊಳೆಗೇರಿಗಳ ನಿರ್ಮೂಲನೆ ಬಳಿಕ, ನಮ್ಮನ್ನು ಕೆಲಸದ ಸ್ಥಳಗಳಿಂದ ತುಂಬಾ ದೂರಕ್ಕೆ ಸಾಗಿಸಲಾಗಿದೆ. ಆದುದರಿಂದ ನಮಗೆ ಈಗ ಮನೆಗೆ ಬರಲು ಸಾಧ್ಯವಾಗುವುದಿಲ್ಲ''.

ಈ ಸಮಸ್ಯೆಯನ್ನು ಮನೆಗೆಲಸದ ಸಹಾಯಕರಾಗಿ ಕೆಲಸ ಮಾಡುವ ಮಹಿಳೆಯರು ಹೆಚ್ಚು ಅನುಭವಿಸುತ್ತಿದ್ದಾರೆ. ಕಮಲಾ ದೇವಿ ಹೇಳುತ್ತಾರೆ: ''ಹಲವು ಮನೆಗಳಲ್ಲಿ ಕೆಲಸ ಮಾಡಿ ಮನೆಗೆ ಮರಳುವಾಗ ಅಧಿಕ ಬಿಸಿಲಿನ ಉರಿ ನಮ್ಮನ್ನು ಕಾಡುತ್ತದೆ. ಕಿಕ್ಕಿರಿದ ಬಸ್ಸುಗಳನ್ನು ಹಿಡಿಯಬೇಕು... ಅಲ್ಲೂ ಟ್ರಾಫಿಕ್ ಜಾಮ್‌ಗಳು. ನಾವು ಬಿಸಿಲಿನ ಧಗೆಗೆ ಬಸವಳಿಯುತ್ತೇವೆ. ಮನೆಗೆ ಬಂದ ಮೇಲೆ ಬಿಸಿ ಅಡುಗೆ ಕೋಣೆಯಲ್ಲಿ ರಾತ್ರಿಯ ಊಟವನ್ನು ಸಿದ್ಧಪಡಿಸಬೇಕು. ಬಳಿಕ ಸಣ್ಣ ಮತ್ತು ಬಿಸಿಯಾದ ಹಾಗೂ ಸರಿಯಾಗಿ ಗಾಳಿಯಾಡದ ಕೋಣೆಯಲ್ಲಿ ನಿದ್ದೆ ಮಾಡಬೇಕು''.

Writer - ಭರತ್ ಡೋಗ್ರಾ

contributor

Editor - ಭರತ್ ಡೋಗ್ರಾ

contributor

Similar News