ಟೆಂಡರ್, ಬಿಲ್ ಪಾವತಿ ಪ್ರಕ್ರಿಯೆಯಲ್ಲಿ ಅಕ್ರಮ | ಯಾವುದೇ ದೂರು ಬಂದಿಲ್ಲ: ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವರದಿ
ಕರ್ನಾಟಕ ನೀರಾವರಿ ನಿಗಮ, ಕೃಷ್ಣಭಾಗ್ಯ ಜಲನಿಗಮ, ಕಾವೇರಿ ಜಲನಿಗಮ, ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ವರದಿ ಸಲ್ಲಿಸಿದ್ದಾರೆ. ಇದನ್ನಾಧರಿಸಿ ರಾಕೇಶ್‌ಸಿಂಗ್ ಅವರು 2021ರ ಡಿಸೆಂಬರ್ 1ರಂದೇ ವರದಿ ಸಲ್ಲಿಸಿದ್ದಾರೆ. ನಾಲ್ಕೂ ನಿಗಮಗಳೂ ಕೆಪಿಡಬ್ಲ್ಯೂಡಿ ಕೋಡ್ ಮತ್ತು ಕೆಟಿಪಿಪಿ ಕಾಯ್ದೆ ಮತ್ತು ರಾಜ್ಯ ಸರಕಾರವು ಕಾಲಕಾಲಕ್ಕೆ ಹೊರಡಿಸಿರುವ ಆದೇಶ ಮತ್ತು ಸುತ್ತೋಲೆಗಳನ್ನು ಪಾಲಿಸುತ್ತಿವೆ ಎಂದು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಬೆಂಗಳೂರು: ಹತ್ತು ಕೋಟಿ ಅನುದಾನ ಮೀರಿದ ಎಲ್ಲ ಕಾಮಗಾರಿಗಳು, ಟೆಂಡರ್ ಪ್ರಕ್ರಿಯೆ ಅಥವಾ ಬಿಲ್ ಪಾವತಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಕುರಿತಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ತಮ್ಮ ಹಂತದಲ್ಲೇ ಕ್ಲೀನ್ ಚಿಟ್ ಕೊಟ್ಟುಕೊಂಡಿವೆ. ಅಲ್ಲದೆ ಶೇ.40ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ಕುರಿತು ಒಂದೇ ಒಂದು ದೂರು ಬಂದಿಲ್ಲ ಎಂದು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಜಲಸಂಪನ್ಮೂಲ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ವರದಿ ನೀಡಿದ್ದಾರೆ.
ಟೆಂಡರ್ ಪ್ರಕ್ರಿಯೆಯಲ್ಲಿ ಹಗರಣದ ಹಾಗೂ ಶೇ.40ರಷ್ಟು ಕಮಿಷನ್ ವಿಚಾರವಾಗಿ ಗುತ್ತಿಗೆದಾರರ ಸಂಘವು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ವಿಚಾರದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಜಲಸಂಪನ್ಮೂಲ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌ಗೆ ಸೂಚಿಸಿದ್ದರು.
ಈ ಪ್ರಕರಣವು ಪ್ರಧಾನಿ ಕಚೇರಿ ಮೆಟ್ಟಿಲೇರಿದ್ದರೂ ಗಂಭೀರವಾಗಿ ಪರಿಗಣಿಸದ ರಾಕೇಶ್‌ಸಿಂಗ್ ಅವರು ನಿಗಮಗಳಿಂದಲೇ ವರದಿ ಪಡೆದಿದ್ದಾರೆ. ಹೀಗಾಗಿ ನಿಗಮಗಳು ತಮ್ಮ ವ್ಯಾಪ್ತಿಯಲ್ಲಿ ಬಿಲ್ ಪಾವತಿ ಹಂತ, ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ತಮ್ಮ ಹಂತದಲ್ಲಿಯೇ ಕ್ಲೀನ್ ಚಿಟ್ ಕೊಟ್ಟುಕೊಂಡಿವೆ.
ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ರಾಕೇಶ್‌ಸಿಂಗ್ ಅವರು ತನಿಖೆ ನಡೆಸಿರುವುದು ಮತ್ತು ಈ ಸಂಬಂಧ ನಿಗಮಗಳೊಂದಿಗೆ ನಡೆಸಿರುವ ಪತ್ರ ವ್ಯವಹಾರಗಳು ಕುರಿತಂತೆ ‘the-file.in ’ ಆರ್‌ಟಿಐ ಅಡಿಯಲ್ಲಿ ದಾಖಲಾತಿಗಳನ್ನು ಪಡೆದುಕೊಂಡಿದೆ.
ಮುಖ್ಯಮಂತ್ರಿ ಅವರು ಅಧಿಕಾರ ವಹಿಸಿಕೊಂಡ ನಂತರ 10 ಕೋಟಿ ರೂ.ಗೂ ಮೀರಿದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ, ಬಿಲ್ ಪಾವತಿ, ಭೂ ಸ್ವಾಧೀನದ ಬಾಕಿ ಮೊತ್ತ, ಸಣ್ಣ ಗುತ್ತಿಗೆದಾರರಿಗೆ ಆದ್ಯತೆ ಮೇಲೆ ಹಣ ಪಾವತಿಸಲಾಗುತ್ತಿದೆ. ಯಾವುದೇ ಬಿಲ್‌ಗಳು ಪಾವತಿಗಾಗಿ ಬಾಕಿ ಉಳಿದಿಲ್ಲ. ಈ ಬಿಲ್‌ಗಳ ಪಾವತಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಸ್ವೀಕೃತವಾಗಿಲ್ಲ,’ಎಂದು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಲಾಗಿದೆ.
► ಕಾವೇರಿ ನೀರಾವರಿ ನಿಗಮದ ಉತ್ತರವೇನು: 2021ರ ಜುಲೈ 28ರಿಂದ ಇಲ್ಲಿಯವರೆಗೆ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ 10 ಕೋಟಿ ರೂ.ಮೀರಿದ ಯಾವುದೇ ಕಾಮಗಾರಿಯ ಟೆಂಡರ್‌ಅನ್ನು ಅನುಮೋದಿಸಿರುವುದಿಲ್ಲ. ಹಾಗೂ 10 ಕೋಟಿ ರೂ.ಮೀರಿದ ಬಿಲ್ ಪಾವತಿಯೂ ಸಹ ಮಾಡಿರುವುದಿಲ್ಲ ಎಂದು 2021ರ ನವೆಂಬರ್ 29ರಂದು ಮಾಹಿತಿ ಒದಗಿಸಿದೆ.
► ಕೃಷ್ಣಾ ಭಾಗ್ಯ ಜಲನಿಗಮದ ಉತ್ತರ ಹೀಗಿದೆ: ಹಾಲಿ ಮುಖ್ಯಮಂತ್ರಿ ಯವರು 2021ರ ಜುಲೈ 28ರಂದು ಅಧಿಕಾರ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೂ 10 ಕೋಟಿ ರೂ.ಮೀರಿದ ಯಾವುದೇ ಕಾಮಗಾರಿಗಳಿಗೆ ಟೆಂಡರ್‌ಗಳನ್ನು ಅನುಮೋದಿಸಿಲ್ಲ. ಈ ಸಂಬಂಧ ಈ ಕಚೇರಿಯಲ್ಲಿ ಯಾವುದೇ ದೂರುಗಳು ಸ್ವೀಕೃತವಾಗಿಲ್ಲ. ಈ ಅವಧಿಯಲ್ಲಿ ನಿಗಮವು ಬಿಲ್‌ಗಳನ್ನು ಶೇ.80ರಷ್ಟು ಕಾಮಗಾರಿಗಳಿಗೆ ಆದ್ಯತೆ ಮೇರೆಗೆ, ಸಣ್ಣ ಗುತ್ತಿಗೆದಾರರಿಗೆ ಹಿರಿತನದ ಆಧಾರದ ಮೇಲೆ ಪಾವತಿ ಮಾಡಲಾಗುತ್ತದೆ. ಮತ್ತು ಬಾಕಿ ಉಳಿದಿರುವ ಶೇ.20ರಷ್ಟು ಅನುದಾನವನ್ನು ಕಾಮಗಾರಿಯ ತುರ್ತು ಅವಶ್ಯಕತೆಗಳಿಗನುಗುಣವಾಗಿ ಹಾಗೂ ಕಾಮಗಾರಿಯ ಪ್ರಗತಿಯ ದೃಷ್ಟಿಯಿಂದ ಬಿಲ್‌ಗಳನ್ನು ಪಾವತಿ ಮಾಡಲಾಗಿದೆ.
10 ಕೋಟಿ ರೂ. ಹಾಗೂ ಅದರ ಮೇಲ್ಪಟ್ಟ ಎಸ್‌ಡಿಪಿ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಸಾಕಷ್ಟು ಅನುದಾನ ಲಭ್ಯತೆ ಇದ್ದು ಆರ್ಥಿಕ ಪ್ರಗತಿ ಸಾಧಿಸಬೇಕಾಗಿದ್ದರಿಂದ ಪಾವತಿಸಲಾಗಿದೆ. ಈ ಬಿಲ್ ಹಿರಿತನದ ಆಧಾರದ ಮೇಲೆ ಪಾವತಿಸಲಾಗಿದೆ. ಪ್ರಸ್ತುತ ಎಸ್‌ಡಿಪಿ ಅಡಿಯಲ್ಲಿ 32.37 ಕೋಟಿ ರೂ. ಅನುದಾನ ಲಭ್ಯತೆ ಇದ್ದು, ಯಾವುದೇ ಬಿಲ್‌ಗಳು ಪಾವತಿಗಾಗಿ ಬಾಕಿ ಉಳಿದಿಲ್ಲ. ಹಾಗೆಯೇ ಈ ಬಿಲ್ ಪಾವತಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಸ್ವೀಕೃತವಾಗಿಲ್ಲ ಎಂದು 2021ರ ನವೆಂಬರ್ 30ರಂದು ಬರೆದ ಪತ್ರದಲ್ಲಿ ವಿವರಿಸಿದೆ.
ಹಾಗೆಯೇ ಜೆಎನ್‌ಎಸ್ ಸುಪ್ರದ ಏಜೆನ್ಸಿ ನಿರ್ವಹಿಸುತ್ತಿರುವ ಕಾಮಗಾರಿ ಪ್ರಗತಿಯ ಹಿತದೃಷ್ಟಿಯಿಂದ ಮುಖ್ಯ ಅಭಿಯಂತರರ ಕೋರಿಕೆ ಮೇರೆಗೆ 34.13 ಕೋಟಿ ರೂ.ಗಳ ಪೈಕಿ ಭಾಗಶಃ ಬಿಲ್‌ಅನ್ನು ಮಾತ್ರ ಪಾವತಿಸಲಾಗಿದೆ. ಹಾಗೆಯೇ ಬಿಲ್ ಪಾವತಿ ಸಂಬಂಧ ಯಾವುದೇ ದೂರುಗಳು ಈ ಕಚೇರಿಯಲ್ಲಿ ಸ್ವೀಕೃತವಾಗಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ಒದಗಿಸಿದ್ದಾರೆ.
► ಕರ್ನಾಟಕ ನೀರಾವರಿ ನಿಗಮದ ವಿವರಣೆ: ಕೃಷ್ಣಾ ವ್ಯಾಪ್ತಿ, ವಾರಾಹಿ, ಸೌಪರ್ಣಿಕಾ ಯೋಜನೆ, ಕಾರಂಜಾ ಮತ್ತು ಗೋದಾವರಿ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಆದರೆ 2021ರ ಜುಲೈ 27ರಿಂದ ಇಲ್ಲಿಯವರೆಗೆ ಯಾವುದೇ ಕಾಮಗಾರಿಯನ್ನು ನಿಗಮವು ಅನುಮೋದಿಸಿಲ್ಲ. ನಿಗಮವು ಪ್ರತಿ ತಿಂಗಳೂ ಬಾಕಿ ಬಿಲ್‌ಗಳನ್ನು ಪಾವತಿಸುತ್ತಿದೆ. 2021ರ ಜುಲೈ 27ರಿಂದ ಇಲ್ಲಿಯವರೆಗೆ ಒಟ್ಟಾರೆ 38,850.08 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 2021ರ ಜುಲೈ 30ರಿಂದ ನವೆಂಬರ್ 8ರವರೆಗೆ ಕಾಮಗಾರಿಗಳಿಗಾಗಿ 11,211.12 ಲಕ್ಷ ರೂ., ಮತ್ತು 2021ರ ನವೆಂಬರ್ 20ರಂದು 17,214.23 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ವಿವರ ಒದಗಿಸಿದೆ.
ಇನ್ನುಳಿದ ವಿಶ್ವೇಶ್ವರಯ್ಯ ಜಲನಿಗಮ ಸಹ 10 ಕೋಟಿ ರೂ.ಗೂ ಮೀರಿದ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮತ್ತು ಬಾಕಿ ಬಿಲ್‌ಗಳ ಪಾವತಿ ಸಂಬಂಧ ಯಾವುದೇ ದೂರುಗಳು ಸಲ್ಲಿಕೆಯಾಗಿಲ್ಲ ಎಂದು ತಿಳಿಸಿರುವುದು ವ್ಯವಸ್ಥಾಪಕ ನಿರ್ದೇಶಕರು ಬರೆದಿರುವ ಪತ್ರಗಳಿಂದ ಗೊತ್ತಾಗಿದೆ.
ಗುತ್ತಿಗೆದಾರರ ಪತ್ರದಲ್ಲಿ ಇರುವ ಅಂಶವನ್ನು ಪರಿಶೀಲನೆ ನಡೆಸಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶಿಸಿದ್ದರು. ’ನಮ್ಮ ಸರಕಾರದ ಅವಧಿಯಲ್ಲಿ ಅಂತಿಮವಾಗಿರುವ ಟೆಂಡರ್ ಪ್ರಕ್ರಿಯೆಗಳ ಬಗ್ಗೆಯೂ ವಿಶೇಷವಾಗಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ. ಹಿಂದಿನ ಸಂಪುಟ ಸಭೆಯಲ್ಲಿ ಟೆಂಡರ್ ಅಂದಾಜು ಹಾಗೂ ಪರಿಶೀಲನೆ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎರಡು ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಕೂಡಲೇ ಕಾರ್ಯಗತಗೊಳಿಸಬೇಕು,’ ಎಂದು ಸೂಚಿಸಿದ್ದನ್ನು ಸ್ಮರಿಸಬಹುದು.