ಸಿರಿವಂತರ ಕೋಟ್ಯಂತರ ರೂ. ಸಾಲ ಮನ್ನಾ, ಸಣ್ಣ ಮೊತ್ತದ ಸಾಲ ಮರುಪಾವತಿಸದ ರೈತರಿಗೆ ಬಂಧನದ ಬೆದರಿಕೆ
ಕೆಲವು ಪ್ರಭಾವಿ ಹಾಗೂ ರಾಜಕೀಯವಾಗಿ ಗ್ರಾಮಸ್ಥರೊಂದಿಗೆ ಒಳ್ಳೆಯ ನಂಟನ್ನು ಹೊಂದಿರುವ ಗ್ರಾಮಸ್ಥರು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಾರೆ. ಅವರು ಈ ಬ್ಯಾಂಕ್‌ಗಳ ಮೂಲಕ ಗ್ರಾಮಸ್ಥರಿಗೆ ಸುಲಭವಾಗಿ ಸಾಲ ಲಭ್ಯವಾಗುವಂತೆ ಮಾಡುತ್ತಾರೆ. ಆದರೆ ಇದಕ್ಕಾಗಿ ಅವರು ದೊಡ್ಡ ಮೊತ್ತದ ಕಮಿಶನ್ ಪಡೆಯುತ್ತಾರೆ. ಇದರ ಒಂದು ಪಾಲನ್ನು ಬ್ಯಾಂಕ್ ಅಧಿಕಾರಿಗಳಿಗೂ ವರ್ಗಾಯಿಸುತ್ತಾರೆ.
ತನ್ನ ಖಾತೆಯಲ್ಲಿ ಕೇವಲ 37 ಪೈಸೆ ಮರುಪಾವತಿಗೆ ಬಾಕಿಯಿರಿಸಿದ್ದನೆಂಬ ಕಾರಣಕ್ಕಾಗಿ ಆತನಿಗೆ ಸಾಲ ಬಾಕಿಯಿರಿಸಿಲ್ಲವೆಂಬ ಪ್ರಮಾಣಪತ್ರವನ್ನು ನೀಡದೆ ಇದ್ದುದಕ್ಕಾಗಿ ತೀರಾ ಇತ್ತೀಚೆಗೆ ಗುಜರಾತ್ ಹೈಕೋರ್ಟ್ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಅನ್ನು ತರಾಟೆಗೆ ತೆಗೆದುಕೊಂಡಿದೆ.
2020-21ನೇ ಹಣಕಾಸು ವರ್ಷದಲ್ಲಿ 34,402 ಕೋಟಿ ರೂ. ಮೊತ್ತದ ಸಾಲಗಳನ್ನು ಅದೇ ಬ್ಯಾಂಕ್ ಮನ್ನಾ ಮಾಡಿತ್ತು. ಈ ಪೈಕಿ ಬಹುತೇಕ ಸಾಲಗಳನ್ನು ಅತ್ಯಂತ ಶ್ರೀಮಂತರು ಹಾಗೂ ಬೃಹತ್ ಉದ್ಯಮ ಸಂಸ್ಥೆಗಳು ಪಡೆದುಕೊಂಡಿದ್ದವು.
ಆದಾಗ್ಯೂ ಅತ್ಯಂತ ಸಾಧಾರಣ ಮಟ್ಟದ ಜೀವನ ನಡೆಸುವವರು (ಬಹುತೇಕ ಬೀದಿ ವ್ಯಾಪಾರಿಗಳು) ಪಡೆದುಕೊಂಡಂತಹ ಬಹುತೇಕ ಸಣ್ಣ ಸಾಲಗಳನ್ನು ನಿಯ ಮಾನುಸಾರವಾಗಿ ಮರುಪಾವತಿಸಿದ್ದಾರೆ ಹಾಗೂ ಕ್ಲಪ್ತ ಸಮಯದಲ್ಲಿ ಸಾಲದ ಮರುವಸೂಲಿಯ ದಾಖಲೆಗಳು ಉತ್ತಮವಾಗಿವೆ ಎಂದು ಎಸ್‌ಬಿಐ ಇತ್ತೀಚೆಗೆ ನಡೆಸಿದ ಅಧ್ಯಯನ ವರದಿ ತಿಳಿಸಿದೆ. ಸಂಕಷ್ಟದ ಸಮಯದಲ್ಲಿ ಈ ಸಾಲಗಾರರು ಹಲವಾರು ಸಂಕಷ್ಟಗಳನ್ನು ಎದುರಿಸಿದ ಹೊರತಾಗಿಯೂ 'ಪಿಎಂ ಸ್ವನಿಧಿ' ಎಂಬ ಸರಕಾರಿ ಕಾರ್ಯಕ್ರಮದ ಅಡಿಯಲ್ಲಿ ಈ ಸಾಲ ವಸೂಲಾತಿ ನಡೆದಿತ್ತು.
ಪಂಜಾಬ್ ರಾಜ್ಯ ಸಹಕಾರಿ ಕೃಷಿ ಅಭಿವೃದ್ಧಿ ಬ್ಯಾಂಕ್‌ನಿಂದ ಪಡೆಯಲಾದ ಸಾಲವನ್ನು ಮರು ಪಾವತಿಸಿರದ ಸುಮಾರು 2 ಸಾವಿರ ರೈತರ ಹೆಸರಿನಲ್ಲಿ ಬಂಧನ ವಾರಂಟ್‌ಗಳನ್ನು ಇತ್ತೀಚೆಗೆ ಜಾರಿಗೊಳಿಸಿದ ಸಂದರ್ಭದಲ್ಲಿ ಪಂಜಾಬ್‌ನ ಹಳ್ಳಿಯಲ್ಲಿ ಭಯದ ವಾತಾವರಣ ನೆಲೆಸಿತ್ತು.
ಈ ರಾಜ್ಯದಲ್ಲಿ ರೈತ ಚಳವಳಿಯು ಅತ್ಯಂತ ಬಲಿಷ್ಠವಾಗಿರುವುದರಿಂದ ಈ ಸಾಲವಸೂಲಾತಿ ಪ್ರಕ್ರಿಯೆಗೆ ಪ್ರಬಲ ವಿರೋಧ ಎದುರಾಗಿತ್ತು. ಹೀಗಾಗಿ ನೂತನ ಚುನಾಯಿತ ಸರಕಾರವು ಬಂಧನ ವಾರಂಟ್‌ಗಳನ್ನು ಹಿಂದೆಗೆದುಕೊಂಡಿತ್ತು. ದೇಶದಲ್ಲಿ ರೈತ ಒಕ್ಕೂಟಗಳು ಬಲಿಷ್ಠವಾಗಿರುವಂತಹ ರಾಜ್ಯದಲ್ಲಿ ಸಣ್ಣ ಮಟ್ಟದ ಸಾಲ ಸುಸ್ತಿ ಮಾಡಿದ್ದಕ್ಕಾಗಿ ರೈತರನ್ನು ಬಂಧಿಸುವ ಸಾಧ್ಯತೆಯಿದೆಯೆಂಬುದನ್ನು ಈ ಘಟನೆಯು ಸಾಬೀತುಪಡಿಸಿದೆ.
ವಾಸ್ತವಿಕವಾಗಿ ಹೆಚ್ಚುತ್ತಿರುವ ಸಾಲಗಳ ಕುರಿತಾದ ಕಳವಳಗಳು ಹಲವಾರು ಪ್ರತಿಕೂಲಕರ ಅಂಶಗಳನ್ನುಂಟು ಮಾಡುತ್ತದೆ ಹಾಗೂ ರೈತರ ಆತ್ಮಹತ್ಯೆಗೆ ಅತ್ಯಂತ ಪ್ರಮುಖ ಕಾರಣವಾಗಿಬಿಟ್ಟಿದೆ. ತೀರಾ ಇತ್ತೀಚೆಗೆ ಪಂಜಾಬ್‌ನಲ್ಲಿ ರೈತರು ಪ್ರತಿಕೂಲ ಹವಾಮಾನದ ಕಾರಣ ಗೋಧಿಯ ಇಳುವರಿಯಲ್ಲಿ ಅತ್ಯಧಿಕ ಇಳಿಕೆಯಾಗಿರುವುದನ್ನು ಕಂಡಿದ್ದಾರೆ. ರೈತರಿಗೆ ನ್ಯಾಯ ದೊರಕಿಸುವ ಭರವಸೆಯೊಂದಿಗೆ ನೂತನ ಸರಕಾರವು ಅಧಿಕಾರಕ್ಕೇರಿರುವುದನ್ನು ಪರಿಗಣನೆಗೆ ತೆಗೆದುಕೊಂಡರೆ, ಸಣ್ಣ ಸಾಲಗಳನ್ನು ಮರುಪಾವತಿಸದೆ ಇದ್ದುದಕ್ಕಾಗಿ ಬಂಧನ ವಾರಂಟ್‌ಗಳನ್ನು ಜಾರಿಗೊಳಿಸಿರುವುದು ಅತ್ಯಂತ ಅಸಂವೇದನಕಾರಿ ನಿರ್ಧಾರವಾಗಿದೆ. ನೂತನ ಆಪ್ ಸರಕಾರವು ರಚನೆಯಾದಾಗಿನಿಂದ ಪಂಜಾಬ್‌ನಲ್ಲಿ 15 ಆತ್ಮಹತ್ಯೆಯ ಪ್ರಕರಣಗಳು ವರದಿಯಾಗಿವೆ.
ವಾಸ್ತವಿಕವಾಗಿ ರೈತರಿಗೆ ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗದೆ ಇರುವುದು ಈ ರೈತರ ಅತ್ಯಂತ ಮುಖ್ಯವಾದ ಚಿಂತೆಯ ವಿಷಯವಾಗಿದೆಯೆಂದು ಬುಂದೇಲ್‌ಖಂಡ್‌ನಿಂದ ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ಈ ಲೇಖಕನು ಹಲವಾರು ರೈತ ಕುಟುಂಬಗಳ ಜೊತೆ ನಡೆಸಿದ ಸಂಭಾಷಣೆಗಳ ಆಧಾರದಲ್ಲಿ ಅರಿತುಕೊಂಡಿದ್ದಾನೆ. ಕೆಲವು ಪ್ರಕರಣಗಳಲ್ಲಿ ಗ್ರಾಮೀಣ ಬ್ಯಾಂಕುಗಳು ಸೇರಿದಂತೆ ಬ್ಯಾಂಕುಗಳು ಸಾಲ ವಸೂಲಿಗಾಗಿ ಒರಟು ಭಾಷೆ ಬಳಸುವ ಬಲಿಷ್ಠ ದಢಿಯರನ್ನು ನೇಮಿಸಿಕೊಳ್ಳುತ್ತವೆ. ಆತ್ಮಾಭಿಮಾನವಿರುವ ರೈತರು ಇಂತಹ ಸನ್ನಿವೇಶಗಳಿಗೆ ಭಯಪಡುತ್ತಾರೆ. ಅವರಲ್ಲಿ ಕೆಲವರಂತೂ ತಮ್ಮ ಜೀವವನ್ನು ಕೊನೆಗೊಳಿಸುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದಾಗ್ಯೂ ಬಹುತೇಕ ಪ್ರಕರಣಗಳಲ್ಲಿ ಹವಾಮಾನ ಬದಲಾವಣೆಯ ಈ ಸಮಯದಲ್ಲಿ ತಮಗೆ ನಿಯಂತ್ರಿಸಲು ಸಾಧ್ಯವಿಲ್ಲದಂತಹ ಅತ್ಯಂತ ಅನಿಶ್ಚಿತ ಹಾಗೂ ಪ್ರತಿಕೂಲಕರವಾದ ಹವಾಮಾನ ಪರಿಸ್ಥಿತಿಯಿಂದಾಗಿ ಈ ರೈತರು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಹಾಗೂ ಸಾಲ ಮರುಪಾವತಿಸಲು ಅಸಾಧ್ಯವಾಗುತ್ತಿದೆ.
ಇದರ ಜೊತೆಗೆ ಸಾಲಗಳು ಅತ್ಯಂತ ದುಬಾರಿಯಾದ ಕೃಷಿ ತಂತ್ರಜ್ಞಾನದ ಭಾಗವಾಗಿ ಬಿಟ್ಟಿದ್ದು, ಅದನ್ನು ಅಧಿಕಾರಿಗಳು-ಬ್ಯಾಂಕುಗಳು-ಉದ್ಯಮಿಗಳ ನಂಟು ಬಲವಾಗಿ ಉತ್ತೇಜಿಸುತ್ತಿದೆ. ಇದರ ಪರಿಣಾಮವಾಗಿ ನಿಜಕ್ಕೂ ಟ್ರಾಕ್ಟರ್‌ಗಳ ಅವಶ್ಯಕತೆಯಿಲ್ಲದ ಸಣ್ಣಪುಟ್ಟ ರೈತರಿಗೆ ಅವುಗಳನ್ನು ಕೊಳ್ಳುವಂತೆ ಪ್ರೇರೇಪಿಸಲಾಗುತ್ತದೆ. ಇದರಿಂದಾಗಿ ಅವರು ಲಾಭದಾಯಕವಲ್ಲದ ಮತ್ತು ಅನಗತ್ಯ ವಾದ ಖರೀದಿಯನ್ನು ಮಾಡುವುದಕ್ಕೆ ಕಾರಣವಾಗುತ್ತದೆ.
ಕೆಲವು ಪ್ರಭಾವಿ ಹಾಗೂ ರಾಜಕೀಯವಾಗಿ ಗ್ರಾಮಸ್ಥರೊಂದಿಗೆ ಒಳ್ಳೆಯ ನಂಟನ್ನು ಹೊಂದಿರುವ ಗ್ರಾಮಸ್ಥರು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಾರೆ. ಅವರು ಈ ಬ್ಯಾಂಕ್‌ಗಳ ಮೂಲಕ ಗ್ರಾಮಸ್ಥರಿಗೆ ಸುಲಭವಾಗಿ ಸಾಲ ಲಭ್ಯವಾಗುವಂತೆ ಮಾಡುತ್ತಾರೆ. ಆದರೆ ಇದಕ್ಕಾಗಿ ಅವರು ದೊಡ್ಡ ಮೊತ್ತದ ಕಮಿಶನ್ ಪಡೆಯುತ್ತಾರೆ. ಇದರ ಒಂದು ಪಾಲನ್ನು ಬ್ಯಾಂಕ್ ಅಧಿಕಾರಿಗಳಿಗೂ ವರ್ಗಾಯಿಸುತ್ತಾರೆ. ಇನ್ನೊಂದು ಅನಪೇಕ್ಷಣೀಯ ಸಂಗತಿಯೆಂದರೆ ವಿವಿಧ ಸರಕಾರಿ ಕಾರ್ಯಕ್ರಮಗಳ ಅಡಿಯಲ್ಲಿ ರೈತರಿಗೆ ನಿರ್ದಿಷ್ಟ ಮೊತ್ತದ ಹಣವನ್ನು ನೀಡಲಾಗುತ್ತದೆ. ಈ ಹಣವನ್ನು ಬ್ಯಾಂಕು ಗಳು ರೈತರಿಗೆ ಮಾಹಿತಿ ನೀಡದೆಯೇ ಅವರ ಸಾಲದ ಖಾತೆಗೆ ಹೊಂದಿಸಿಕೊಳ್ಳುತ್ತವೆ.
ಈ ಎಲ್ಲಾ ಅಂಶಗಳಿಂದಾಗಿ ದೇಶದ ಬಹುತೇಕ ಭಾಗಗಳಲ್ಲಿ ಸಾಲದ ಸಮಸ್ಯೆಯು ರೈತರನ್ನು ಕಳವಳಕ್ಕೀಡು ಮಾಡುತ್ತದೆ. ಶ್ರೀಮಂತರು ಹಾಗೂ ಪ್ರಭಾವಿ ಸಾಲಗಾರರಿಗೆ ಹೋಲಿಸಿದಲ್ಲಿ ಸಣ್ಣಪುಟ್ಟ ಸಾಲಗಾರರ ಬಗ್ಗೆ ಬ್ಯಾಂಕುಗಳು ಕ್ಷಮಾಧೋರಣೆ ತಾಳುವುದು ತೀರಾ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ನಗದು ಅಮಾನ್ಯತೆ, ಜಿಎಸ್‌ಟಿ ಹಾಗೂ ಅಗತ್ಯಕ್ಕಿಂತ ಹೆಚ್ಚಿನ ಅವಧಿಗೆ ಹೇರಲಾದ ಲಾಕ್‌ಡೌನ್ ಸೇರಿದಂತೆ ಹಲವಾರು ಪ್ರತಿಕೂಲಕರ ನೀತಿಗಳಿಂದಾಗಿ ಸಣ್ಣಪುಟ್ಟ ಉದ್ಯಮಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಹೀಗಾಗಿ ಸಾಲಗಳನ್ನು ಮರುಪಾವತಿಸುವ ಅವರ ಸಾಮರ್ಥ್ಯದ ಮೇಲೂ ಪರಿಣಾಮವುಂಟಾಗಿದೆ. ಆದರೆ ಬ್ಯಾಂಕುಗಳು ಸಾಮಾನ್ಯವಾಗಿ ಅವರ ಅಹವಾಲುಗಳನ್ನು ಸಹಾನುಭೂತಿಯಿಂದ ಅಲಿಸುವುದಿಲ್ಲ.
ಇನ್ನೊಂದೆಡೆ ಬ್ಯಾಂಕುಗಳಲ್ಲಿ ಪ್ರಭಾವಿ ಹಾಗೂ ಶ್ರೀಮಂತ ಸಾಲಗಾರರಿಗೆ ಸಂಬಂಧಿಸಿದ ಕಾರ್ಯನಿರ್ವಹಿಸದ ಆಸ್ತಿಗಳು ಹಾಗೂ ಕೆಟ್ಟಸಾಲ (ಮರುಪಾವತಿಯಾಗದ)ಗಳ ಪ್ರಮಾಣವು ಹೆಚ್ಚುತ್ತಲೇ ಹೋಗುತ್ತಿದೆ. ಅವರಲ್ಲಿ ಕೆಲವರು ಸಾಲ ಪಡೆದ ಹಣವನ್ನು ಜಾಣ್ಮೆಯಿಂದ ನಿರ್ವಹಿಸುತ್ತಾ, ಐಶಾರಾಮಿ ಜೀವನವನ್ನು ಸಾಗಿಸುವ ಹವ್ಯಾಸವನ್ನು ಹೊಂದಿದ್ದಾರೆ.
2014-15ನೇ ಸಾಲಿನಲ್ಲಿ ಮೋದಿ ಸರಕಾರವು ಅಧಿಕಾರಕ್ಕೇರಿದ ಬಳಿಕ 10 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಬ್ಯಾಂಕು ಸಾಲಗಳನ್ನು ಮನ್ನಾ ಮಾಡಲಾಗಿದೆ. 2020-21ನೇ ಹಣಕಾಸು ವರ್ಷದಲ್ಲಿ 2 ಲಕ್ಷ ಕೋಟಿ ರೂ. ಮೊತ್ತದ ಸಾಲವನ್ನು ಮನ್ನಾಗೊಳಿಸಲಾಗಿದೆ. ಶ್ರೀಮಂತ ಹಾಗೂ ಪ್ರಭಾವಿ ಸಾಲಗಾರರಿಗೆ ಸಂಬಂಧಿಸಿ ಈ ಸಾಲವನ್ನು ಬಾಕಿಯಿರಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಸಾಲಮನ್ನಾದ ಮೊತ್ತವು ವಸೂಲಾದ ಸಾಲದ ಮೊತ್ತಕ್ಕಿಂತ ಎರಡು ಪಟ್ಟು ಅಧಿಕವಾಗಿದೆ. ಇಂತಹ ಶೇ.75ರಷ್ಟು ಸಾಲ ಮನ್ನಾಗಳು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸಂಬಂಧಿಸಿದ್ದಾಗಿವೆ.
ಇದಕ್ಕಿಂತಲೂ ಹೆಚ್ಚಾಗಿ ಹಲವಾರು ಪ್ರಕರಣಗಳಲ್ಲಿ ಬ್ಯಾಂಕುಗಳು ದೊಡ್ಡ ಮೊತ್ತದ ಸಾಲಗಳನ್ನು ಮನ್ನಾಗೊಳಿಸಲ್ಪಟ್ಟ ವ್ಯಕ್ತಿಗಳು ಹಾಗೂ ಉದ್ಯಮಸಂಸ್ಥೆಗಳ ಹೆಸರುಗಳು ಹಾಗೂ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇಂತಹ ಅಸ್ಪಷ್ಟತೆಯನ್ನು ಅತ್ಯಂತ ತುರ್ತಾಗಿ ಸರಿಪಡಿಸಬೇಕಾದ ಅಗತ್ಯವಿದೆ.
(ಕೃಪೆ: ಇನ್ ಇಂಡಿಯಾ)