IPL-‌2022: 2 ಎಸೆತಗಳಿಗೆ 3 ರನ್‌ ಗಳ ಅಗತ್ಯವಿದ್ದ ವೇಳೆ ಪಂದ್ಯದ ಗತಿಯನ್ನೇ ಬದಲಾಯಿಸಿದ ʼಅದ್ಭುತ ಕ್ಯಾಚ್‌ʼ

Update: 2022-05-19 14:17 GMT
Photo:IPL

ಮುಂಬೈ: ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ 211 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ಬುಧವಾರ ರಿಂಕು ಸಿಂಗ್ ಅವರ ಕೆಲವು ಅದ್ಭುತ ಹೊಡೆತದಿಂದ ಗೆಲುವಿನ ಹೊಸ್ತಿಲಿಗೆ ತಲುಪಿತ್ತು.  ಸಿಂಗ್ ಅವರು ಕೇವಲ 14 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಗಳ ಸಹಿತ 40 ರನ್‌ಗಳನ್ನು ಸಿಡಿಸಿದರು. ಸಿಂಗ್ ಸಾಹಸದಿಂದಾಗಿ ಕೆಕೆಆರ್  ಗೆಲುವಿಗೆ ಇನಿಂಗ್ಸ್‌ನ ಕೊನೆಯ ಎರಡು ಎಸೆತಗಳಲ್ಲಿ ಕೇವಲ ಮೂರು ರನ್‌ಗಳ ಅಗತ್ಯವಿತ್ತು. ಲಕ್ನೊ ಸೋಲಿನತ್ತ ಮುಖ ಮಾಡಿತ್ತು.

ಮಾರ್ಕಸ್ ಸ್ಟೋನಿಸ್ ಅವರ ಬೌಲಿಂಗ್‌ನಲ್ಲಿ ಒಂದು ಅದ್ಭುತ  ಕ್ಯಾಚ್ ಪಡೆದ ಎವಿನ್ ಲೂಯಿಸ್  ಅವರು ಪಂದ್ಯಕ್ಕೆ ದೊಡ್ಡ ತಿರುವು ನೀಡಿದರು.

ಕೊನೆಯ ಓವರ್ ನಲ್ಲಿ ಗೆಲುವು ಸಾಧಿಸಿದ  ಲಕ್ನೊ  ಪ್ಲೇ-ಆಫ್‌ಗೆ ಅರ್ಹತೆ ಪಡೆದ ಎರಡನೇ ತಂಡ ಎನಿಸಿಕೊಂಡಿತು.

ಲೂಯಿಸ್ ತಮ್ಮ ಅದ್ಭುತ ಕ್ಯಾಚ್‌ನೊಂದಿಗೆ  ಪಂದ್ಯದ ಸ್ಟಾರ್ ಆಗಿ ಹೊರಹೊಮ್ಮಿದರು.

ಸ್ಟೋನಿಸ್ ಎಸೆದ  20ನೇ ಓವರ್‌ನ ಮೊದಲ ನಾಲ್ಕು ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ  ಒಂದು ಬೌಂಡರಿ ಸಿಡಿಯಲ್ಪಟ್ಟವು. ಸ್ಟೋನಿಸ್ ಅವರ   5ನೇ ಎಸೆತವನ್ನು ರಿಂಕು ಡ್ರೈವ್ ಮಾಡಲು ಹೋದರು.  ಆದರೆ ಚೆಂಡು ಕವರ್ ಕಡೆಗೆ ಹಾರಿಹೋದಾಗ ವಿಂಡೀಸ್ ಆಟಗಾರ ಲೂಯಿಸ್  ಪಾಯಿಂಟ್‌ನಿಂದ ಸುಮಾರು 30 ಗಜಗಳಷ್ಟು ಕೆಳಗೆ ಓಡಿ ಎಡಗೈಯಿಂದ ಚೆಂಡನ್ನು ಹಿಡಿಯಲು ಸಫಲರಾದರು.

"ಇದು ಆಟದ ಅತ್ಯಂತ ದೊಡ್ಡ ತಿರುವಾಗಿತ್ತು" ಎಂದು ಪಂದ್ಯದ ನಂತರ ಶತಕವೀರ ಕ್ವಿಂಟನ್ ಡಿ ಕಾಕ್ ಹೇಳಿದರು.

ಲೂಯಿಸ್ ಕ್ಯಾಚ್ ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಪ್ರಶಂಸೆ ವ್ಯಕ್ತವಾಯಿತು.

ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಆಟಗಾರ ರಿಯಾನ್ ಪರಾಗ್ ಟ್ವಿಟ್ಟರ್‌ನಲ್ಲಿ "ಕ್ಯಾಚ್‌ಗಳು ಪಂದ್ಯವನ್ನು ಗೆಲ್ಲಿಸಿಕೊಡುತ್ತದೆ" ಎಂಬ ಹಳೆಯ ಗಾದೆಯನ್ನು ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News