ಧರ್ಮಕಾರಣ ಮತ್ತು ಪಠ್ಯಪುಸ್ತಕ ರಾಜಕಾರಣ!
ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯ ಮತ್ತು ಧರ್ಮ ಯಾವಾಗಲೂ ಮೂಗು ತೂರಿಸುತ್ತಲೇ ಬಂದಿದೆ. ಇದನ್ನು ನಾವು ಪಠ್ಯಪುಸ್ತಕ ರಾಜಕಾರಣ ಅಥವಾ ಸಿಲಬಸ್ ರಾಜಕಾರಣವೆಂದು ಕರೆಯುತ್ತೇವೆ. ಸಾಮಾನ್ಯವಾಗಿ ಕೆಳ ಹಂತದ ಶಿಕ್ಷಣ ವ್ಯವಸ್ಥೆಯಿಂದ ವಿಶ್ವವಿದ್ಯಾನಿಲಯದ ಜ್ಞಾನಸೌಧದವರೆಗೂ ಈ ರಾಜಕಾರಣ ತಿಳಿದೇ ನಡೆಯುತ್ತದೆ. ಪಠ್ಯಪುಸ್ತಕ ಸಮಿತಿಗಳನ್ನು ರಚಿಸುವಾಗ ಸಾಮಾಜಿಕ ಕಳಕಳಿ, ಸಮಾನತೆ, ಬಂಧುತ್ವ, ಪ್ರೀತಿ, ತ್ಯಾಗಗಳ ಹಿನ್ನೆಲೆಯ ಅರಿವಿರುವ ವ್ಯಕ್ತಿಗಳನ್ನು ಮತ್ತು ಹೆಚ್ಚು ಅನುಭವವಿರುವ, ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಹಿರಿಯ ಜ್ಞಾನಿಗಳನ್ನು ಈ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿ, ಸಮಾನ ಮನಸ್ಕರನ್ನು ಸದಸ್ಯರನ್ನಾಗಿ ರೂಪಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಬೇಕು. ಇಲ್ಲಿ ಜಾತಿ ಮತ್ತು ಧರ್ಮದ ಕುಚೋದ್ಯ ಬುದ್ಧಿಯುಳ್ಳವರು ಇರದಂತೆ ನೋಡಿಕೊಳ್ಳಬೇಕು. ಆದರೆ ಅದು ನ್ಯಾಯಯುತವಾಗಿ ನಡೆಯುತ್ತಿಲ್ಲ. ‘ನಮ್ಮವನು’ ಎಂಬ ಕಾರಣಕ್ಕೆ ಅವನು ಬರೆದದ್ದನ್ನೇ ಪಠ್ಯಪುಸ್ತಕಕ್ಕೆ ತುರುಕುವ, ಅದನ್ನು ಮಕ್ಕಳಿಗೆ ಓದಿಸಿ ಪರೀಕ್ಷೆ ಬರೆಸುವ ಅನಿಷ್ಠ ಪದ್ಧತಿಗಳು ವಿಶ್ವವಿದ್ಯಾನಿಲಯದವರೆಗೂ ಆವರಿಸಿಕೊಂಡಿದೆ. ಕರ್ನಾಟಕದ ಪಠ್ಯಪುಸ್ತಕಗಳಲ್ಲಿ ನಡೆಯುತ್ತಿರುವ ಈಗಿನ ಧರ್ಮ ಮತ್ತು ರಾಜಕೀಯ ತಿಕ್ಕಾಟಗಳು ಶೋಭೆ ತರುವಂತಹದ್ದಲ್ಲ. ಅಲ್ಲಿ ಆಗುತ್ತಿರುವ ಯಡವಟ್ಟುಗಳಿಗೆ ನೇರವಾಗಿ ಸರಕಾರವೂ ಮತ್ತು ಶಿಕ್ಷಣ ಇಲಾಖೆಯೂ ಕಾರಣವಾಗುತ್ತದೆ. ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನು ಅವಹೇಳನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಒಳಗಾಗಿದ್ದವರನ್ನು ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣದ ಪಠ್ಯಪುಸ್ತಕಗಳ ಪುನರ್‌ರಚನೆಯ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿ, ಅವರು ಮಾಡುವುದೆಲ್ಲವನ್ನ್ನೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂತ್ರಿ ಸರಿಯೆಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅನನುಭವಿಗಳು ಮತ್ತು ಧರ್ಮದ ಏಕಮುಖಚಿಂತನೆಯ ವ್ಯಕ್ತಿಯನ್ನು ಆ ಸ್ಥಾನಕ್ಕೆ ಕರೆದು ತಂದು ಕೂರಿಸಿರುವುದು ನಿಜಕ್ಕೂ ಈ ರಾಜ್ಯದ ವಿದ್ಯಾರ್ಥಿಗಳಿಗೆ ಎಸಗಿದ ದ್ರೋಹ. ಮೈಸೂರಿನ ಹುಲಿ ಟಿಪ್ಪುವಿನ ಪಾಠವನ್ನು ಶಾಲಾ ಪಠ್ಯಕ್ರಮದಿಂದ ತೆಗೆಯಬೇಕು ಎನ್ನುವವರಿಗೆ ಟಿಪ್ಪುವಿರೋಧಿಯಲ್ಲ; ಟಿಪ್ಪುವಿನ ಧರ್ಮ ವಿರೋಧವಾಗಿದೆ. ಅವನು ಮುಸ್ಲಿಮ್ ಎಂಬ ಕಾರಣಕ್ಕೆ ಇಷ್ಟೆಲ್ಲ ವಿವಾದ ಮತ್ತು ವಿರೋಧಗಳನ್ನು ಸೃಷ್ಟಿ ಮಾಡಲಾಗಿದೆ. ಹಿಂದೂ ರಾಜರು ಯಾರನ್ನೂ ಕೊಲ್ಲದೆ ಸಾಮ್ರಾಜ್ಯ ವಿಸ್ತರಣೆ ಮಾಡದೇ ಆಡಳಿತ ನಡೆಸಿದರೇ?
ಬಿಜೆಪಿ ಮತ್ತು ಆರೆಸ್ಸೆಸ್ ಪೋಷಿತ ಪಠ್ಯಪುಸ್ತಕ ಸಮಿತಿಯ ಏಳು ಜನ ಸದಸ್ಯರಲ್ಲಿ ಆರು ಜನ ಬ್ರಾಹ್ಮಣರೇ ಇದ್ದಾರೆ. ಇವರು ರೂಪಿಸಿರುವ ಹೊಸ ಹತ್ತು ಪಠ್ಯಗಳಲ್ಲಿ ಒಂಭತ್ತು ಜನ ಬ್ರಾಹ್ಮಣ ಲೇಖಕರೇ ಇದ್ದಾರೆ. ಎಸ್.ಎಲ್.ಬೈರಪ್ಪ, ಕೆ.ಬಿ.ಹೆಡಗೆವಾರ್, ಗಜಾನನ ಶರ್ಮಾ, ಎನ್ ರಂಗನಾಥ ಶರ್ಮಾ, ಸುಶ್ರತ ದೊಡ್ಡೇರಿ, ಎಸ್.ವಿ. ಪರಮೇಶ್ವರ ಭಟ್ಟ, ಗಣೇಶ ಶತವದಾನಿ, ಬನ್ನಂಜೆ ಗೋವಿಂದಾಚಾರ್ಯ ಮತ್ತು ಶಿವಾನಂದ ಕಳವೆ. ಇವರಲ್ಲಿ ಮೂವರ ಬಗ್ಗೆ ನಮಗೆಲ್ಲ ಗೊತ್ತಿದೆ. ಉಳಿದವರು ಯಾರೆಂಬುದು, ಅವರ ಸಾಹಿತ್ಯದ ತಿರುಳೇನೆಂಬುದು ನಾಡಿನ ಶಿಕ್ಷಕರಿಗಾಗಲಿ, ವಿದ್ವಾಂಸರಿಗಾಗಲಿ ಗೊತ್ತಿಲ್ಲ. ಈ ಪಠ್ಯಪುಸ್ತಕ ಸಮಿತಿಗೆ ಇವರನ್ನು ಉಳಿದು ಮತ್ಯಾರೂ ದೊಡ್ಡ ಲೇಖಕರಾಗಿ ಅಥವಾ ಮಕ್ಕಳ ಮನಸ್ಸನ್ನು ಪ್ರಭಾವಿಸುವ ವ್ಯಕ್ತಿಗಳಾಗಿ ಕಾಣಲೇ ಇಲ್ಲವೇ ಎಂಬುದು ಆಶ್ಚರ್ಯ.
ಪಠ್ಯಪುಸ್ತಕ ಸಮಿತಿ ಮಾಡಿರುವ ಇನ್ನೊಂದು ದೊಡ್ಡ ಯಡವಟ್ಟು ಎಂದರೆ ಪಿ.ಲಂಕೇಶ್, ಅರವಿಂದ ಮಾಲಗತ್ತಿ, ಸಾರಾ ಅಬೂಬಕರ್, ಎಲ್. ಬಸವರಾಜ್, ಕೆ.ನೀಲಾ ಮತ್ತು ಬಿ.ಟಿ. ಲಲಿತಾ ನಾಯಕ್ ಇವರ ಬರಹಗಳನ್ನು ಕೈಬಿಟ್ಟಿರುವುದು. ಇದಕ್ಕೆ ಕಾರಣ ಇವರೆಲ್ಲ ಬ್ರಾಹ್ಮಣ ಧರ್ಮದಿಂದ ಹೊರತಾದವರು ಮತ್ತು ಸಮಾಜಮುಖಿ ಚಿಂತನೆಯನ್ನು ಮೂಡಿಸಿದವರು. ಪಿ.ಲಂಕೇಶ್ ಒಂದು ಕಾಲಘಟ್ಟವನ್ನೇ ಹೊಸ ಚಿಂತನೆಗೆ ಹಚ್ಚಿದವರು. ನಮಗೆ ಲಂಕೇಶ್ ಅಂದರೆ ಅವರ ಬರಹದ ಮೊನಚು ನ್ಯಾಯದ ಪರವಾಗಿ ಮತ್ತು ಅನ್ಯಾಯದ ಎದೆಗೆ ತಿವಿದಂತೆ ಕಾಣುತಿತ್ತು. ಇವರನ್ನೆಲ್ಲ ಪಠ್ಯಪುಸ್ತದಿಂದ ಆಚೆಗಿಟ್ಟು ಅದೇ ಮನುವಾದದ ಮಡಿಯನ್ನು ಪ್ರದರ್ಶನ ಮಾಡಲು ತೊಡಗಿದೆ. ಇದು ಮಕ್ಕಳ ಮನಸ್ಸನ್ನು ಮೈಲಿಗೆ ಮಾಡಲು ಹೊರಟಿರುವ ಸಮಿತಿಯಾಗಿದೆ.
ಪಠ್ಯಪುಸ್ತಕದಲ್ಲಿ ವೈವಿಧ್ಯತೆ ಮತ್ತು ಸಮಾನತೆಯ ಅಂಶಗಳನ್ನು ತಿಳಿಸುವ ಪ್ರಯತ್ನವಾಗಬೇಕು. ಆದರೆ ಧರ್ಮದ ನಿಲುವನ್ನು ರಾಜಕೀಯ ಪಕ್ಷದ ಚೇಷ್ಠೆಗಳನ್ನು ತುಂಬಿಸುವ ಕೆಲಸವಾದರೆ ಅದೊಂದು ಕ್ರೂರಮನಸ್ಥಿತಿಯ ಪ್ರತಿಬಿಂಬವಾಗುತ್ತದೆ. ಬ್ರಿಟಿಷರು ಮಾಡಿದ ಒಡೆದು ಆಳುವ ನೀತಿಯನ್ನು ಮೊದಲು ಬಿಡಬೇಕು. ಕಾಂಗ್ರೆಸಿಗರು ಈ ದೇಶವನ್ನು ಹಾಳು ಮಾಡಿದರು ಎನ್ನುವವರು ಸಾಮಾನ್ಯ ಜನರ ಬದುಕನ್ನು ನಿತ್ಯ ನರಕವಾಗಿಸುವ ಕಡೆ ಹೆಜ್ಜೆ ಇಟ್ಟದ್ದು ಯಾವ ಪುರುಷಾರ್ಥ?. ಇಂತಹ ಕೆಲಸ ಮಾಡುವ ಯಾವುದೇ ರಾಜಕೀಯ ಪಕ್ಷ ಅಥವಾ ಧರ್ಮವಾಗಲಿ ಅವೆಲ್ಲವೂ ಮನುಷ್ಯಪರವಾದ ಚಿಂತನೆಯಿಂದ ಹೊರತಾದವು ಎನ್ನಬೇಕಾಗುತ್ತದೆ.
ಲಿಂಗ ಸಮಾನತೆ-ಸಾಮಾಜಿಕ ನ್ಯಾಯವನ್ನು ಪಠ್ಯಪುಸ್ತಕದಲ್ಲಿ ಸೇರಿಸಬಾರದು ಎಂದು ಹೇಳಿರುವ ಸಂವಿಧಾನ ವಿರೋಧಿಗಳ ಮನಸ್ಸಿನಲ್ಲಿ ಮನುವಾದದ ಚಿಂತನೆಗಳು ಕೊಳೆತು ನಾರುತ್ತಿರುವಾಗ ಅದನ್ನು ಪಠ್ಯದಲ್ಲಿ ಸೇರಿಸಿ ಮಕ್ಕಳ ಮನಸ್ಸನ್ನು ಕೊಳೆಸುವ ಪ್ರಯತ್ನ ಮಾಡುತ್ತಿರುವುದು ವಿಷಾದಕರ ಸಂಗತಿ. ಇದೇ ಕಾರಣಕ್ಕೆ ಚಿಂತಕರು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಟ್ವಿಟರ್‌ಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಮನುವಾದಿಗಳೇ ನಿಮಗೆ ಹೆಡಗೆವಾರ್ ಅವರ ಭಾಷಣ ಕೇಳಬೇಕು, ಓದಬೇಕು ಎಂದರೆ ನಿಮ್ಮವರಿಗೆ, ನಿಮ್ಮ ಸಮುದಾಯಕ್ಕೆ ಓದಲು ಹೇಳಿ. ಅದನ್ನು ಬಿಟ್ಟು ಜ್ಞಾನದಾಹಿಗಳಾದ ಬಡಮಕ್ಕಳ ತಲೆಗೆ ತುರುಕುವ ಕಾರ್ಯ ಮಾಡಬೇಡಿ. ಸೂಲಿಬೆಲೆಯ ಸುಳ್ಳುಗಳು ನಿಮಗೆ ಹಿತವಾಗಿದ್ದರೆ ಅವರನ್ನು ನಿಮ್ಮ ಆಸ್ಥಾನ ವಿದೂಷಕರನ್ನಾಗಿ ಮಾಡಿಕೊಳ್ಳಿ. ಅವರ ತಿರುಚು ಭಾಷಣಗಳು, ಲೇಖನಗಳು ಜಗತ್ತಿಗೆ ಪರಿಚಯವಾಗಿವೆ. ಕಪ್ಪುಕಾಗೆಯನ್ನು ಬಿಳಿ ಕಾಗೆಯಾಗಿ ನಂಬಿಸುವ ಪ್ರಯತ್ನವನ್ನು ಕೈಬಿಡಿ. ಸಾಧ್ಯವಾದರೆ ನಿಮ್ಮ ಮನುವಾದಿ ಮನಸ್ಸಿನಿಂದ ಹೊರ ಬನ್ನಿ.