ವಿದ್ಯಾರ್ಥಿಗಳು ಸ್ಕೌಟ್ಸ್ ಗೈಡ್ಸ್ ತತ್ವಗಳನ್ನು ಮೈಗೂಡಿಸಿಕೊಳ್ಳಿ: ಪಿಜಿಆರ್ ಸಿಂಧ್ಯಾ

Update: 2022-05-27 15:06 GMT

ಉಡುಪಿ : ಭವ್ಯ ಭಾರತದ ಆಸ್ತಿಗಳಾದ ವಿದ್ಯಾರ್ಥಿಗಳಿಗೆ ದೇಶಪ್ರೇಮ, ಪ್ರಕೃತಿ ಪ್ರೇಮ, ಮತ್ತು ದಿಟ್ಟ ನಾಯಕತ್ವವನ್ನು ಮೂಡಿಸುವಲ್ಲಿ ಪ್ರತಿಯೊಬ್ಬ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸಹಕರಿಸಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ಸ್ಕೌಟ್ಸ್-ಗೈಡ್ಸ್ ತತ್ವಗಳನ್ನು ಮೈಗೂಡಿಸಿಕೊಳ್ಳಿ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಹೇಳಿದ್ದಾರೆ. 

ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಭಾರತ ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಜಿಲ್ಲೆಯ ಶೈಕ್ಷಣಿಕ ವಲಯದ ಬಿಇಒ, ಟಿಪಿಇಓ, ಬಿಆರ್‌ಪಿ ಮತ್ತು ಸಿಆರ್‌ಪಿಗಳಿಗೆ ಇತ್ತೀಚೆಗೆ ನಡೆದ ಒಂದು ದಿನದ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಭಾರತ ಜಗತ್ತಿಗೆ ಆದರ್ಶವಾಗಿ ಇತರ ದೇಶಗಳ ಕಷ್ಟದ ಸಂದರ್ಭಗಳಲ್ಲಿ  ಸ್ಪಂದಿಸಿ ಸೇವಾ ಮನೋಭಾವನೆ ಯನ್ನು ಪ್ರದರ್ಶಿಸಿದೆ. ಪರರಿಗೆ ಸಹಾಯ ಮಾಡುವ ಹೃದಯವಂತಿಕೆಯನ್ನು ಮೂಡಿಸುವ ಉದ್ದೇಶವನ್ನು ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಹೊಂದಿದೆ ಎಂದ ಅವರು, ಈ ಬಾರಿಯ ಎಸೆಸೆಲ್ಸಿ ಫಲಿತಾಂಶ ಉತ್ತಮ ವಾಗಿದ್ದು, ವಿಶೇಷವಾಗಿ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಅಪ್ರತಿಮ ಸಾಧನೆ ಮಾಡಿರುವುದು ತುಂಬಾ ಸಂತೋಷ ಎಂದರು. 

ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗೋವಿಂದ ಮಡಿವಾಳ ಮಾತನಾಡಿ, ಶೈಕ್ಷಣಿಕವಾಗಿ ಜ್ಞಾನವನ್ನು ಗಳಿಸುವ ವಿದ್ಯಾರ್ಥಿಗಳು ಉತ್ತಮ ನಾಯಕತ್ವ ಹಾಗೂ ದೇಶಸೇವೆ ಮನೋಭಾವನೆ ಯನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗಿ ಬಾಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ ಭಟ್, ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಜೆ ಪೈ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಅಶೋಕ್ ಕಾಮತ್, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮುಂದಿನಮನಿ, ಉಡುಪಿ ದೈಹಿಕ ಶಿಕ್ಷಣ ಅಧಿಕಾರಿ ರಘುನಾಥ್, ಉಡುಪಿ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಕೊಗ್ಗ ಗಾಣಿಗ, ಸಾವಿತ್ರಿ ಮನೋಹರ್, ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಎಡ್ವಿನ್ ಆಳ್ವ, ಸಮಾಜ ಕಲ್ಯಾಣ ಇಲಾಖೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಸ್ಕೌಟ್ ಆಯುಕ್ತ ಡಾ. ವಿಜಯೇಂದ್ರ ವಸಂತರಾವ್ ಸ್ವಾಗತಿಸಿದರು.  ಕಾರ್ಕಳ ಸ್ಥಳೀಯ ಸಂಸ್ಥೆ ಕಾರ್ಯ ದರ್ಶಿ ಗಣೇಶ್ ಜಾಲ್ಸೂರು ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News