ಪೀರ್ ಪಾಷಾ ಬಂಗಲೆಯನ್ನು ಅನುಭವ ಮಂಟಪ ಎನ್ನುವವರು ಮೂರ್ಖರು
ಬೆಂಗಳೂರು: ಬಸವಕಲ್ಯಾಣದಲ್ಲಿರುವ ಪೀರ್ ಪಾಷಾ ಬಂಗಲೆ ಅನ್ನು ಬಸವಣ್ಣನವರು ಸ್ಥಾಪಿಸಿದ ಮೂಲ ‘ಅನುಭವ ಮಂಟಪ’ ಎನ್ನುವವರು ಮೂರ್ಖರು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿಯೂ ಆದ ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಾನಂದ ಜಾಮದಾರ್ ಪ್ರತಿಪಾದಿಸಿದ್ದಾರೆ.
ಪೀರ್ ಪಾಷಾ ಬಂಗಲೆ ವಿವಾದ ಸಂಬಂಧ ರವಿವಾರ ‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಇತಿಹಾಸ, ಸಂಶೋಧನೆಯ ಕೊರತೆಯುಳ್ಳವರು ಪೀರ್ ಪಾಷಾ ಬಂಗಲೆಯನ್ನು ಅನುಭವ ಮಂಟಪ ಎಂದು ಸಾಬೀತು ಮಾಡಲು ಹೊರಟ್ಟಿದ್ದಾರೆ. ಜತೆಗೆ, ಕೆಲವರು ಮೆರವಣಿಗೆ ನಡೆಸಲು ಮುಂದಾಗಿರುವ ವಿಷಯ ಗೊತ್ತಾಗಿದ್ದು, ಇಂತಹವರನ್ನು ನಾನು ಮೂರ್ಖರು ಎಂದೇ ಉಲ್ಲೇಖಿಸುತ್ತೇನೆ ಎಂದು ಹೇಳಿದರು.
1710 ರಿಂದ 1950ರವರೆಗೆ ಪ್ರಥಮ ಹೈದರಾಬಾದಿನ ನಿಝಾಮ್ ಅಳಿಯನಿಗೆ ಕಸಬಾ ಕಲ್ಯಾಣಾಬಾದನ್ನು ನವಾಬಿಯನ್ನಾಗಿ ನೀಡಿದ್ದರಿಂದ ಅದೇ ವಂಶದವರು ಇತ್ತೀಚಿನವರೆಗೂ ಅಲ್ಲಿ ನವಾಬರಾಗಿದ್ದರು. ಮೊದಲನೆಯ ನವಾಬನು ಔರಂಗಜೇಬನ ಆತ್ಮೀಯನಾಗಿದ್ದರಿಂದ ಅವನಿಗೆ ‘ನಿಜಾಮ ಉಲ್ ಮುಲ್ಕ’ ಬಿರುದು ನೀಡಿ ಗೋಲ್ಕೊಂಡಕ್ಕೆ ಕಳುಹಿಸಲಾಗಿತ್ತು.
ಅದೇ ರೀತಿ, ಕೊನೆಯ ನವಾಬ ಖಮರುದ್ದೀನ್ ಅನ್ನು ಒಮ್ಮೆ ಭೇಟಿಯಾಗಿದ್ದರು. ಆನಂತರ, ಅವರ ಮನೆತನ, ಕುಟುಂಬ ಸದಸ್ಯರು ಮೃತಪಟ್ಟ ನಂತರ ಇದೇ ಪೀರ್ ಪಾಷಾ ಬಂಗಲೆಯಲ್ಲಿ ದಫನ್ ಮಾಡಲಾಗಿದೆ. ಮಾಹಿತಿಗಳ ಪ್ರಕಾರ ಇಲ್ಲಿ ಈ ಕುಟುಂಬಸ್ಥರ 100ರಷ್ಟು ಗೋರಿಗಳು ಇಲ್ಲೇ ಇವೆ ಎಂದು ಅವರು ವಿವರಿಸಿದರು. ಜತೆಗೆ, ಪೀರಪಾಷಾ ಬಂಗಲೆ ಹಿಂದೆ ಒಂದು ಹಿಂದೂ ದೇವಾಲಯ ಸಂಕೀರ್ಣವಾಗಿತ್ತು ಎನ್ನುವುದಕ್ಕೆ ಅಲ್ಲಿ ಈಗಲೂ ಅಳಿದುಳಿದ ದೇವಾಲಯಗಳ ಭಾಗಗಳಿಂದ ವೇದ್ಯವಾಗುತ್ತದೆ ಎಂದ ಅವರು, ಈ ಬಗ್ಗೆ ಸ್ಥಳೀಯ ಪಂಚ ಕಮಿಟಿ ಮತ್ತು ಮುಸ್ಲಿಮರ ನಡುವಿನ ವಿವಾದವು ನ್ಯಾಯಾಲಯದಲ್ಲಿ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದರು.
ಪ್ರಮುಖವಾಗಿ ಅನುಭವ ಮಂಟಪದ ಬಗ್ಗೆ ನೂರಾರು ಊಹಾಪೋಹಗಳಿವೆ. ಅವೆಲ್ಲವುಗಳನ್ನು ಒಂದೊಂದಾಗಿ ನಾನು ಎಂಟು ವರ್ಷದ ಅವಧಿಯಲ್ಲಿ ಬಸವ ಕಲ್ಯಾಣ ಅಭಿವೃದ್ಧಿಯ ಅಧಿಕಾರಿಯಾಗಿ ಕೂಲಂಕುಶವಾಗಿ ವಿಚಾರಣೆ ಮಾಡಿದ್ದೇನೆ. ಅದರ ಕುರಿತು ಸಾಕಷ್ಟು ವಿವರಗಳನ್ನು 1940ರಲ್ಲಿ ಉತ್ತಂಗಿ ಚನ್ನಪ್ಪ ಅವರ ಗ್ರಂಥ ಅನುಭವ ಮಂಟಪದ ಸತ್ಯಾಸತ್ಯತೆಯಲ್ಲಿ ನೋಡಬಹುದು ಎಂದು ಉಲ್ಲೇಖಿಸಿದರು.
ಇದರಲ್ಲಿ ಒಂದು ಮಾತು ಸತ್ಯವಾಗಿದ್ದು, ಪೀರಪಾಷಾ ಬಂಗಲೆಯಲ್ಲಿ ಅನುಭವ ಮಂಟಪವಿರಲಿಲ್ಲ. ಅದು ಹಿಂದೂ ಮತ್ತು ಜೈನ ದೇವಾಲಯಗಳ ಸಮುಚ್ಛಯ ಆಗಿತ್ತು ಎನ್ನುಬಹುದು.ಅದನ್ನು ಸ್ಮಶಾನವಾಗಿ ಮಾಡಿದ್ದು ನಿಜಾಮನ ಸಂಬಂಧಿಕರು ಎಂಬುದು ಅಷ್ಟೇ ಸತ್ಯ. ಬಸವ ಕಲ್ಯಾಣದ ಕೋಟೆಯೂ 1998ರವರೆಗೆ ಈ ನವಾಬನ ವಶದಲ್ಲಿತ್ತು. ಅವರು ಅಲ್ಲಿಯೇ ವಾಸವಾಗಿದ್ದರು. ಸತ್ಯವನ್ನು ಅರಿಯದ, ಸೂಕ್ತ ಮಾಹಿತಿಯನ್ನು ಸಂಗ್ರಹಿಸದೆ ಆ ಬಗ್ಗೆ ರಾಜಕೀಯ ತರಹದ ಅಭಿಯಾನ ನಡೆಸುವುದು ಎಷ್ಟು ಸರಿ ಎಂದು ಜಾಮದಾರ್ ಖಾರವಾಗಿ ಪ್ರಶ್ನೆ ಮಾಡಿದರು.