ಮೋದಿ ಸರಕಾರದ ದೇಶಿ ಉತ್ಪಾದನೆ ನೀತಿ ಏನಾಯಿತು?
2016ರಲ್ಲಿ ಕಲ್ಲಿದ್ದಲು ಸಚಿವರಾಗಿದ್ದ ಪಿಯೂಶ್ ಗೋಯಲ್ ಪ್ರಮುಖ ವಿಷಯವೊಂದನ್ನು ಘೋಷಿಸಿದರು. ಭಾರತೀಯ ಕಲ್ಲಿದ್ದಲು ನಿಗಮ (ಸಿಐಎಲ್)ವು ಗಣನೀಯ ಪ್ರಮಾಣದಲ್ಲಿ ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಕಲ್ಲಿದ್ದಲು ಆಮದನ್ನು ನಿಲ್ಲಿಸುವ ಯೋಜನೆ ಯೊಂದನ್ನು ಮೋದಿ ಸರಕಾರ ರೂಪಿಸುತ್ತಿದೆ ಎಂದರು.
ಭಾರತವು ಜಗತ್ತಿನಲ್ಲೇ ನಾಲ್ಕನೇ ಅತಿದೊಡ್ಡ ಕಲ್ಲಿದ್ದಲು ಅದಿರು ನಿಕ್ಷೇಪ, ಅಂದರೆ 35,200 ಕೋಟಿ ಟನ್ ಅದಿರನ್ನು ಹೊಂದಿದೆ. ಮೋದಿ ಸರಕಾರವು 2016 ಮತ್ತು 2020ರ ನಡುವಿನ ಅವಧಿಯಲ್ಲಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸುವ ತನ್ನ ಯೋಜನೆಯನ್ನು ಗಂಭೀರವಾಗಿ ಕಾರ್ಯಗತ ಗೊಳಿಸಿದ್ದರೆ, ಭಾರತ ಇಂದು ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ನಿಭಾಯಿಸಲು ಕಲ್ಲಿದ್ದಲು ಕೊರತೆಯನ್ನು ಎದುರಿಸಬೇಕಾಗಿರಲಿಲ್ಲ.
ಕಲ್ಲಿದ್ದಲು ಕೊರತೆಯಿಂದಾಗಿ ಕೇಂದ್ರ ಸರಕಾರವು ಇತ್ತೀಚೆಗೆ ತುರ್ತು ವಿಧಿಯೊಂದಕ್ಕೆ ಚಾಲನೆ ನೀಡಬೇಕಾದ ಅನಿವಾರ್ಯತೆಗೆ ಒಳಗಾಯಿತು. ಈ ವಿಧಿಯ ಪ್ರಕಾರ, ಖಾಸಗಿ ಮತ್ತು ಸರಕಾರಿ ವಿದ್ಯುತ್ ಉತ್ಪಾದನಾ ಕಂಪೆನಿಗಳು ಬೇಸಿಗೆಯಲ್ಲಿನ ಅತ್ಯಧಿಕ ವಿದ್ಯುತ್ ಬೇಡಿಕೆಯನ್ನು ಈಡೇರಿಸುವುದಕ್ಕಾಗಿ ಸಿಐಎಲ್‌ನಿಂದ ಪಡೆದುಕೊಳ್ಳುವ ಕಲ್ಲಿದ್ದಲಿನ ಜೊತೆಗೆ ಶೇ. 30 ಆಮದು ಕಲ್ಲಿದ್ದಲನ್ನು ಬಳಸಬಹುದಾಗಿದೆ. ಹಲವು ರಾಜ್ಯ ಸರಕಾರಗಳು ಇದನ್ನು ಪ್ರತಿಭಟಿಸಿದವು. ಆಮದಿತ ಕಲ್ಲಿದ್ದಲಿನ ಬೆಲೆ ದೇಶಿ ಕಲ್ಲಿದ್ದಲಿನ ಬೆಲೆಗಿಂತ ಮೂರು ಪಟ್ಟು ಹೆಚ್ಚಾಗಿದೆ. ಕೇಂದ್ರ ಸರಕಾರವು ಈ ಹೊರೆಯನ್ನು ಉಪಾಯದಿಂದ ರಾಜ್ಯಗಳಿಗೆ ವರ್ಗಾಯಿಸುತ್ತಿದೆ ಎಂದು ಅವುಗಳು ಆರೋಪಿಸಿದವು. ಇಷ್ಟು ದುಬಾರಿ ಕಲ್ಲಿದ್ದಲನ್ನು ಖರೀದಿಸುವುದು ತನಗೆ ಸಾಧ್ಯವಿಲ್ಲ ಎಂದು ಬಿಜೆಪಿ ಸರಕಾರವೇ ಇರುವ ಉತ್ತರಪ್ರದೇಶವೂ ಹೇಳಿತು. ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ ಶೇ. 90 ಭಾಗವನ್ನು ರಾಜ್ಯದೊಳಗೇ ಪೂರೈಸಲಾಗುತ್ತದೆ ಹಾಗೂ ರಾಜ್ಯದ ಬಡ ಜನತೆಯು ಅಧಿಕ ಇಂಧನ ವೆಚ್ಚದಿಂದಾಗಿ ವಿದ್ಯುತ್ ದರದಲ್ಲಾಗುವ ದೊಡ್ಡ ಮಟ್ಟದ ಏರಿಕೆಯನ್ನು ತಡೆದುಕೊಳ್ಳಲಾರರು ಎಂದು ಅದು ಹೇಳಿತು. ಈ ವರ್ಷ ಜಾಗತಿಕ ಕಲ್ಲಿದ್ದಲು ಬೆಲೆ ಆಕಾಶವನ್ನು ತಲುಪಿದೆ ಹಾಗೂ ಮೋದಿ ಸರಕಾರ ನಿದ್ದೆ ಮಾಡುತ್ತಿದೆ.
ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಅನಿಲ್ ಸ್ವರೂಪ್ 2016ರ ಕೊನೆಯವರೆಗೂ ನೂತನ ಕಲ್ಲಿದ್ದಲು ನೀತಿಯ ಪ್ರಧಾನ ಶಿಲ್ಪಿಯಾಗಿದ್ದರು. ಭಾರತೀಯ ಕಲ್ಲಿದ್ದಲು ನಿಗಮ ಮತ್ತು ಖಾಸಗಿ ಕಲ್ಲಿದ್ದಲು ಉತ್ಪಾದಕರು 2020ರ ವೇಳೆಗೆ 100 ಕೋಟಿ ಟನ್ ಕಲ್ಲಿದ್ದಲು ಉತ್ಪಾದಿಸುವ ತನ್ನ ಯೋಜನೆಯನ್ನು ಸರಕಾರವು ಗಂಭೀರವಾಗಿ ಮುಂದುವರಿಸಿಕೊಂಡು ಹೋಗಿದ್ದರೆ ಇಂದು ಕಲ್ಲಿದ್ದಲು ಬಿಕ್ಕಟ್ಟೇ ಇರುತ್ತಿರಲಿಲ್ಲ ಎಂದು ಅನಿಲ್ ಸ್ವರೂಪ್ ಹೇಳುತ್ತಾರೆ. ಭಾರತೀಯ ಕಲ್ಲಿದ್ದಲು ನಿಗಮವೊಂದೇ ವರ್ಷಕ್ಕೆ ಸುಮಾರು 5 ಕೋಟಿ ಟನ್ ಹೆಚ್ಚುವರಿ ಕಲ್ಲಿದ್ದಲನ್ನು ಉತ್ಪಾದಿಸಿದ್ದರೂ ಇಂದಿನ ವಿದ್ಯುತ್ ಅಗತ್ಯವನ್ನು ಪೂರೈಸಲು ಸಾಕಾಗುತ್ತಿತ್ತು ಎಂದು ಸ್ವರೂಪ್ ಅಭಿಪ್ರಾಯಪಟ್ಟರು.
ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಭಾರತವು ಕಲ್ಲಿದ್ದಲು ಆಮದನ್ನು ನಿಲ್ಲಿಸುವುದು ಎಂಬುದಾಗಿ ಪಿಯೂಶ್ ಗೋಯಲ್ 2016 ಸೆಪ್ಟಂಬರ್‌ನಲ್ಲಿ ಘೋಷಿಸಿದಾಗ, ಸಿಐಎಲ್ ವರ್ಷಕ್ಕೆ 60 ಕೋಟಿ ಟನ್‌ಗಿಂತಲೂ ಕಡಿಮೆ ಕಲ್ಲಿದ್ದಲು ಉತ್ಪಾದಿಸುತ್ತಿತ್ತು. ಆ ನಂತರದ ಮೂರು ವರ್ಷಗಳಲ್ಲಿ ಕಲ್ಲಿದ್ದಲು ಉತ್ಪಾದನೆ ವಾರ್ಷಿಕ ಶೇ. 8ರಿಂದ 10ರಷ್ಟು ಹೆಚ್ಚಿದ್ದರೆ, ಸಿಐಎಲ್ 80 ಕೋಟಿ ಟನ್‌ಗಳ ವಾರ್ಷಿಕ ಉತ್ಪಾದನೆಯನ್ನು ಸುಲಭವಾಗಿ ಸಾಧಿಸುತ್ತಿತ್ತು ಎಂದು ಸ್ವರೂಪ್ ಹೇಳುತ್ತಾರೆ. ದುರದೃಷ್ಟವಶಾತ್, ಸಿಐಎಲ್‌ನ ಕಲ್ಲಿದ್ದಲು ಉತ್ಪಾದನೆಯು 2017 ಮತ್ತು 2020ರ ನಡುವಿನ ಹೆಚ್ಚಿನ ಅವಧಿಯಲ್ಲಿ ಸ್ಥಗಿತಗೊಂಡಿದೆ ಎಂದರು. 2022ನೇ ಹಣಕಾಸು ವರ್ಷದಲ್ಲಿ ಸಿಐಎಲ್ ಕೇವಲ 62.2 ಕೋಟಿ ಟನ್ ಕಲ್ಲಿದ್ದಲು ಉತ್ಪಾದಿಸಿದೆ.
ಪ್ರಸಕ್ತ ಭಾರತೀಯ ಕಲ್ಲಿದ್ದಲು ನಿಗಮದ ಕಲ್ಲಿದ್ದಲು ಪೂರೈಕೆಯಲ್ಲಿ ತೀವ್ರ ಕೊರತೆ ಎದುರಾಗಿದೆ ಹಾಗೂ ಮೂರು ಪಟ್ಟು ಹೆಚ್ಚು ಬೆಲೆ ತೆತ್ತು ಆಮದಿತ ಕಲ್ಲಿದ್ದಲು ಖರೀದಿಸಿ ಎಂಬುದಾಗಿ ಕೇಂದ್ರ ಸರಕಾರವು ರಾಜ್ಯಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ, 2020ರ ವೇಳೆಗೆ ಕಲ್ಲಿದ್ದಲು ಆಮದನ್ನು ನಿಲ್ಲಿಸುವ ಗೋಯಲ್‌ರ ಸುಸಜ್ಜಿತ ಯೋಜನೆ ಎಲ್ಲಿ ಎಡವಿತು ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಗಂಭೀರ ತನಿಖೆ ನಡೆಸಬೇಕು. ಆಡಳಿತದಲ್ಲಿ ಸ್ವಲ್ಪವಾದರೂ ಉತ್ತರದಾಯಿತ್ವ ಬೇಕಲ್ಲ.
ಇನ್ನೂ ಹೆಚ್ಚಿನ ಆಘಾತಕಾರಿ ವಿಷಯವೆಂದರೆ, 2016ರಲ್ಲಿ ಸಿಐಎಲ್ ಬಳಿ 30,000 ಕೋಟಿ ರೂಪಾಯಿಗೂ ಅಧಿಕ ನಗದು ಸಂಗ್ರಹವಿತ್ತು. ಸಿಐಎಲ್‌ಗೆ ಸೇರಿದ ಬೃಹತ್ ನಿಕ್ಷೇಪಗಳಿಂದ ಕಲ್ಲಿದ್ದಲು ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲು ಈ ಹಣವನ್ನು ಬಳಸಿಕೊಳ್ಳಬೇಕಾಗಿತ್ತು. ಆದರೆ ಹೀಗಾಗಲಿಲ್ಲ. ಬದಲಿಗೆ, ಸಿಐಎಲ್‌ನ ನಗದು ಸಂಗ್ರಹವನ್ನು ಸರಕಾರವು ಡಿವಿಡೆಂಡ್ ಆಗಿ ಪಡೆದುಕೊಂಡಿತು. ಬಹುಶಃ ಆ ಹಣವನ್ನು 2017 ಮತ್ತು 2020ರ ನಡುವಿನ ಅವಧಿಯಲ್ಲಿ ಕಂದಾಯ ಕುಸಿತದಿಂದಾಗಿ ಹೆಚ್ಚಿದ ವಿತ್ತೀಯ ಕೊರತೆಯನ್ನು ಸರಿದೂಗಿಸುವುದಕ್ಕಾಗಿ ಬಳಸಿಕೊಂಡಿತು.
ಉಕ್ರೇನ್ ಮೇಲೆ ರಶ್ಯ ದಾಳಿ ನಡೆಸಿದ ಬಳಿಕ ದೇಶದ ಇಂಧನ ಭದ್ರತೆಯು ತೀವ್ರವಾಗಿ ಪರೀಕ್ಷೆಗೊಳಪಟ್ಟಿತು. ದೇಶದ ಇಂಧನ ಭದ್ರತೆಯನ್ನು ಖಾತರಿಪಡಿಸಲು ಬಳಸಬೇಕಾಗಿದ್ದ ಹಣವನ್ನು ಇತರ ಉದ್ದೇಶಗಳಿಗಾಗಿ ಖರ್ಚು ಮಾಡಲಾಯಿತು. ಆಡಳಿತದ ಈ ಗಂಭೀರ ವೈಫಲ್ಯಕ್ಕೆ ಯಾರಾದರೂ ಉತ್ತರಿಸಬೇಕಾಗಿದೆ.
2016ರ ಯೋಜನೆಯನ್ವಯ, ಸಿಐಎಲ್ ಸುಮಾರು 80 ಕೋಟಿ ಟನ್ ಕಲ್ಲಿದ್ದಲನ್ನು ಉತ್ಪಾದಿಸಬೇಕಾಗಿತ್ತು ಹಾಗೂ ಇನ್ನೊಂದು 20 ಕೋಟಿ ಟನ್ ಕಲ್ಲಿದ್ದಲು ಖಾಸಗಿ ಕ್ಷೇತ್ರದಿಂದ ಬರಬೇಕಾಗಿತ್ತು. ಕಲ್ಲಿದ್ದಲು ನಿಕ್ಷೇಪಗಳನ್ನು ಹರಾಜು ಮೂಲಕ ಖಾಸಗಿಯವರಿಗೆ ನೀಡಲಾಗಿದೆ. ಖಾಸಗಿ ಕ್ಷೇತ್ರವೂ ಕಲ್ಲಿದ್ದಲು ಉತ್ಪಾದನೆಯಲ್ಲಿ ವಿಫಲವಾಯಿತು. ಯಾಕೆಂದರೆ, ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೆಲವು ವರ್ಷಗಳ ಕಾಲ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ಬೆಲೆ ಕಡಿಮೆಯಿತ್ತು. ಹಾಗಾಗಿ, ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವ ಮೂಲಕ ಎಲ್ಲರೂ ಖುಷಿ ಪಟ್ಟರು. ಈಗ ಒಮ್ಮೆಲೇ ಕಲ್ಲಿದ್ದಲು ಬೆಲೆಯಲ್ಲಿ ಶೇ. 200 ಹೆಚ್ಚಳವಾಗಿದೆ ಹಾಗೂ ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲು ಪಡೆಯಲು ಹಾಹಾಕಾರ ಉಂಟಾಗಿದೆ.
ದೇಶದಲ್ಲಿ ಕಲ್ಲಿದ್ದಲು ಸಂಗ್ರಹವನ್ನು ಸೃಷ್ಟಿಸುವ ಬದಲು, ಸರಕಾರವು ದುಬಾರಿ ಕಲ್ಲಿದ್ದಲನ್ನು ಆಮದು ಮಾಡುವಂತೆ ರಾಜ್ಯಗಳಿಗೆ ಸಲಹೆ ನೀಡುತ್ತಿದೆ. ಕಲ್ಲಿದ್ದಲು ಆಮದನ್ನು ಸಂಪೂರ್ಣವಾಗಿ ನಿಲ್ಲಿಸುವ ಮೋದಿ ಸರಕಾರದ 2016ರ ಯೋಜನೆಗೆ ಇದು ಹೇಗೆ ಹೊಂದುತ್ತದೆ? ನೀತಿಯ ಉದ್ದೇಶ ಮತ್ತು ವಾಸ್ತವಿಕ ಫಲಿತಾಂಶದ ನಡುವಿನ ಅಂತರದ ಬಗ್ಗೆ ಯೋಚಿಸಿ ಹೆಚ್ಚಿನ ಕಲ್ಲಿದ್ದಲು ಉತ್ಪಾದನೆ ಗುರಿ ಈಡೇರದಿರುವುದಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ. ಆದರೆ ಬಡಪಾಯಿ ಬಳಕೆದಾರರು ದುಬಾರಿ ಕಲ್ಲಿದ್ದಲು ಆಮದಿಗಾಗಿ ಹೆಚ್ಚು ಹಣ ಪಾವತಿಸಲು ಬೆವರಿಳಿಸುತ್ತಿದ್ದಾರೆ.
ಕೃಪೆ: thewire.in